ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.08.24 - "ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,”

ಮೊದಲನೇ ವಾಚನ: 2 ಕೊರಿಂಥಿಯರಿಗೆ 9:6-10

ಸಹೋದರರೇ ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.  ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.

ಕೀರ್ತನೆ                       112:1-2, 5-9

ಶ್ಲೋಕ:   ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ.

1.  ಪ್ರಭುವಿನಲಿ  ಭಯಭಕ್ತಿಯುಳ್ಳವನು  ಧನ್ಯನು|
ಆತನಾಜ್ಞೆಗಳಲಿ  ಹಿಗ್ಗುವವನು  ಭಾಗ್ಯನು||
ಬಲಿಷ್ಠವಾಗುವುದು  ಜಗದೊಳು  ಅವನ  ಸಂತಾನ|
ಸಜ್ಜನರ  ಸಂತತಿ  ಪಡೆವುದು  ಆಶೀರ್ವಚನ||

ಶ್ಲೋಕ

2.  ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ|
ನ್ಯಾಯದಿಂದ  ವ್ಯವಹರಿಸುವಂಥಾ  ಮನುಜನು  ಭಾಗ್ಯವಂತ||
ಅಚಲನಾಗಿರುವನು  ನೀತಿವಂತನು|
ಮರೆಯಲಾರರು  ಎಂದಿಗೂ  ಆತನನು||

ಶ್ಲೋಕ

3.  ಅಶುಭವಾರ್ತೆಯ  ಭಯಭೀತಿ  ಯಾವುದೂ  ಅವನಿಗಿಲ್ಲ|
ಪ್ರಭುವಿನಲಿ  ಭರವಸೆಯಿಟ್ಟ  ಆ  ಭನವು  ಅಸ್ಥಿರವಲ್ಲ||
ದೃಢವಿದೆ  ಅವನ  ಮನ,  ಎದೆಗುಂದನವನು|
ಕಾಣುವನು  ದುರಳರಿಗಾಗುವ  ದಂಡನೆಯನು||

ಶ್ಲೋಕ

4.  ಉದಾರತೆಯಿಂದ  ಕೊಡುವನು  ಬಡವರಿಗೆ|
ಫಲಿಸುವುದು  ಅವನಾ  ನೀತಿ  ಸದಾಕಾಲಕೆ|
ಮಹಿಮೆತರುವ  ಕೋಡು  ಮೂಡುವುದು  ಅವನಿಗೆ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ನಾನೇ  ಜಗಜ್ಯೋತಿ,  ನನ್ನನ್ನು  ಹಿಂಬಾಲಿಸುವವನು  ಕತ್ತಲಲ್ಲಿ  ನಡೆಯುವುದಿಲ್ಲ,  ಜೀವದಾಯಕ  ಜ್ಯೋತಿ  ಅವನಲ್ಲಿರುತ್ತದೆ,,
ಅಲ್ಲೆಲೂಯ!

ಶ್ಲೋಕ: ದಯೆತೋರಿ ಧನಸಹಾಯ ಮಡುವವನು ಭಾಗ್ಯವಂತ

ಶುಭಸಂದೇಶ: ಯೊವಾನ್ನ 12:24-26


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.  ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,” ಎಂದರು.

ಪೂಜಾರ್ಪಣೆ 



ಸಂತ ಸ್ಮರಣೆ - ಸಂತ ಲಾರೆನ್ಸ್ 

3ನೇ ಶತಮಾನದ ಸಂತ ಲಾರೆನ್ಸ್ ಬಡವರ ಸೇವೆಗಾಗಿ ನೇಮಿಸಲ್ಪಟ್ಟ 7 ಉಪಯಾಜಕರಲ್ಲಿ ಒಬ್ಬರಾಗಿದ್ದರು. ಕ್ರೈಸ್ತರ ಮೇಲೆ ಭೀಕರ ಚಿತ್ರಹಿಂಸೆ ಪ್ರಾರಂಭವಾದಾಗ ಜಗದ್ಗುರು ಸಂತ ಸಿಕ್ಸ್ ತಸ್ ಮತ್ತು ನಾಲ್ವರು ಉಪಯಾಜರು ಮರಣದಂಡನೆಗೆ ಒಳಗಾಗುತ್ತಾರೆ. ಮರಣದಂಡನೆಗೆ ಅವರು ನಡೆಯುತ್ತಿರುವಾಗ ಲಾರೆನ್ಸ್ ಎದುರು ಬಂದು "ತಂದೆಯೇ, ನಿಮ್ಮ ಉಪಾಸಕನನ್ನು ಬಿಟ್ಟು, ನೀವೆಲ್ಲಿಗೆ ಹೋಗುತ್ತಿದ್ದೀರಿ?" ಎಂದು ಕೇಳಿದಾಗ, ಜಗದ್ಗುರು ಸಿಕ್ಸ್ ತಸ್ "ನಿನ್ನ ಬಿಟ್ಟು ಹೋಗುತ್ತಿಲ್ಲ ಮಗು, ಇನ್ನೂ ಮೂರು ದಿನಗಳಲ್ಲಿ ನೀನು ನನ್ನನ್ನು ಹಿಂಬಾಲಿಸುವೆ" ಎಂದರು.

 ಈ ಮೂರು ದಿನಗಳು ಲಾರೆನ್ಸರ ಬದುಕಿನ ಶ್ರೇಷ್ಠ ದಿನಗಳಾದವು. ರೋಮ್ ಸೈನ್ಯದ ದಂಡನಾಯಕ ಕ್ರೈಸ್ತ ದೇವಾಲಯಗಳಲ್ಲಿ ಬಹಳಷ್ಟು ಚಿನ್ನ-ಬೆಳ್ಳಿ ಅಪಾರವಾದ ಸಂಪತ್ತು ಇರುವುದೆಂದು ತಿಳಿದು ಸಂತ ಲಾರೆನ್ಸಾ ರನ್ನು ಕರೆದು, ನೀವು ಚಿನ್ನದ ಬಟ್ಟಲುಗಳಲ್ಲಿ ಪೂಜೆ ಅರ್ಪಿಸುತ್ತಿರಂತೆ, ರಕ್ತವನ್ನು ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುತ್ತಿರಂತೆ, ಪೂಜೆಯಲ್ಲಿ ಚಿನ್ನದ ಮೇಣದಬತ್ತಿಯ ಸ್ತಂಭಗಳನ್ನು ಇಡುತ್ತಿದ್ದಂತೆ, ನಿಮ್ಮ ಧರ್ಮದ ಸಿದ್ಧಾಂತವೇ ಹೇಳುತ್ತದೆ: 'ಸೀಜರನಿಗೆ ಸೇರಿದ್ದನ್ನು ಸೀಜರನಿಗೆ ಒಪ್ಪಿಸಿ' ಎಂದು. ನಿಮ್ಮ ದೇವರು ಭೂಮಿಗೆ ಬಂದಾಗ ಇದನ್ನೆಲ್ಲಾ ತರಲಿಲ್ಲ. ದೇವರ ವಾಕ್ಯವನ್ನು ಮಾತ್ರ ತಂದ. ಆದ್ದರಿಂದ ಎಲ್ಲವನ್ನೂ ನನಗೆ ತಂದು ಒಪ್ಪಿಸು"  ಎನ್ನುತ್ತಾನೆ.

 ಮೂರು ದಿನಗಳ ಕಾಲಾವಕಾಶ ಕೇಳಿದ ಸಂತ ಲಾರೆನ್ಸ್ ತನ್ನ ವಶದಲ್ಲಿದ್ದ ಎಲ್ಲಾ ಹಣವನ್ನು ಬಡಬಗ್ಗರಿಗೆ ಹಂಚುತ್ತಾರೆ. ಇದು ಸಾಲದು ಎಂಬಂತೆ ಚಿನ್ನದ ಪೂಜಾಪಾತ್ರೆಗಳನ್ನು ಮಾರಿ ಬಡವರಿಗೆ ಹಂಚುತ್ತಾರೆ. ಮೂರು ದಿನಗಳ ನಂತರ ಕುರುಡರು, ಕುಂಟರು, ಅಂಗವಿಕಲರು, ನಿರ್ಗತಿಕರು ಮತ್ತು ಬಡವರನ್ನು ಒಟ್ಟಿಗೆ ನಿಲ್ಲಿಸಿ ದಂಡನಾಯಕನ ಆಗಮನಕ್ಕೆ ಕಾಯುತ್ತಾರೆ. ದಂಡನಾಯಕ ಬಂದಾಗ ಎದುರಿಗಿದ್ದವರನ್ನು ತೋರಿಸಿ "ಇಗೋ ನಮ್ಮ ಚರ್ಚಿನ ಆಸ್ತಿ" ಎನ್ನುತ್ತಾರೆ. ಕೋಪೋದ್ರಿಕ್ತನಾದ ದಂಡನಾಯಕ ಅವರಿಗೆ ಮರಣದಂಡನೆ ವಿಧಿಸುತ್ತಾನೆ. ಅದು ಸಾಧಾರಣ ಮರಣ ದಂಡನೆ ಅಲ್ಲ. ದೊಡ್ಡ ಬಾಣಲೆಯ ಉರಿಯುವ ಕೆಂಡಗಳ ಮೇಲೆ ಲಾರೆನ್ಸ್ ನನ್ನು ಮಲಗಿಸಿ ಜೀವ ತೆಗೆಯುವುದು. ಹೀಗೆ ಸ್ವಲ್ಪ ಸ್ವಲ್ಪವೇ ಬೆಂದು ಸಾಯುವ ಗಳಿಗೆಯಲ್ಲಿ ಲಾರೆನ್ಸ್ ಹೇಳಿದರಂತೆ: "Assum est; Versa, et Manduca". ಅಂದರೆ "ಚೆನ್ನಾಗಿ ಬಂದಿದೆ, ಒಮ್ಮೆ ತಿರುಗಿಸಿ ನಂತರ ತಿನ್ನಿ". ಸಂತ ಅಂಬ್ರೋಸ್ ಈ ಘಟನೆಯನ್ನು ದಾಖಲಿಸಿದ್ದಾರೆ.

 ಸಂತ ಲಾರೆನ್ಸರ ಬಗೆಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಜಗದ್ಗುರು ಸಂತ ಸಿಕ್ಸ್ ತುಸ್ ನಂತರ ರೋಮ್ ಚಕ್ರವರ್ತಿ ವಲೇರಿಯನ್ 258 ರಲ್ಲಿ ಲಾರೆನ್ಸ್ ಮತ್ತು ಇತರ ಇಬ್ಬರು ಉಪನ್ಯಾಸಕರನ್ನು ಮರಣದಂಡನೆಗೆ ಗುರಿಮಾಡಿದ್ದಷ್ಟೇ ಇತಿಹಾಸದಿಂದ ನಾವು ತಿಳಿದಿರುವುದು. ಸಂತ ಡಮಸಸ್, ಅಂಬ್ರೋಸ್ ಮತ್ತು ಅಗಸ್ಟಿನ್ ರು ತಮ್ಮ ಬರಹಗಳಲ್ಲಿ ಸಂತ ಲಾರೆನ್ಸರ ಬಗ್ಗೆ ಸಾಕಷ್ಟು ವಿವರಗಳನ್ನು ಉಲ್ಲೇಖಿಸುತ್ತಾರೆ.

ಸಂತ ಲಾರೆನ್ಸರ ಸಮಾಧಿಯ ಮೇಲೆ ಕಟ್ಟಲಾದ ದೇವಾಲಯ ರೋಮ್ನ ಏಳು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿತ್ತು. ಇಂದಿಗೂ ರೋಮ್ ನಗರಕ್ಕೆ ಹೋಗುವ ಭಕ್ತಾದಿಗಳಿಗೆ ಇದೊಂದು ಪುಣ್ಯಕ್ಷೇತ್ರವಾಗಿದೆ.


No comments:

Post a Comment