ಮೊದಲನೆಯ ವಾಚನ: ಯೆಜೆಕಿಯೇಲ 1:2-5,24-28
ಅದೇ ತಿಂಳಿನ ಐದನೆಯ ದಿನ, ಅಂದರೆ, ಯೆಹೋಯಾಖೀನನು ಸೆರೆಯಾದ ಐದನೆಯ ವರ್ಷ, ಬಾಬಿಲೋನಿಯಾ ದೇಶದ ಕೇಬಾರ್ ನದಿಯ ಹತ್ತಿರ, ಬೂಜಿಯ ಮಗ ಹಾಗೂ ಯಾಜಕನಾದ ಯೆಜೆಕಿಯೇಲ ಎಂಬ ನನಗೆ ಸರ್ವೇಶ್ವರಸ್ವಾಮಿಯ ವಾಣಿ ನೇರವಾಗಿ ಕೇಳಿಸಿತು; ಅವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ. ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿ ಬೆಳಗಿತು. ಅದರ ಮಧ್ಯದಿಂದ ನಾಲ್ಕು ಜೀವಿಗಳ ಆಕಾರಗಳು ಕಂಡುಬಂದವು. ಅವುಗಳ ರೂಪ ಮನುಷ್ಯರೂಪದಂತಿತ್ತು. ಅವು ಮುಂದುವರಿಯುವಾಗ ಅವುಗಳ ರೆಕ್ಕೆಗಳ ಶಬ್ದವು ಜಲಪ್ರವಾಹದ ಘೋಷದಂತೆ, ಸರ್ವಶಕ್ತನ ಧ್ವನಿಯಂತೆ, ಆರ್ಭಟಿಸುವ ಸೈನ್ಯದ ಕೋಲಾಹಲದಂತೆ ನನಗೆ ಕೇಳಿಸಿತು; ಅವು ನಿಂತಾಗ ರೆಕ್ಕೆಗಳನ್ನು ಮುದುರಿಕೊಳ್ಳುತ್ತಿದ್ದವು. ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲಿಂದ ಒಂದು ಧ್ವನಿ ನನ್ನ ಕಿವಿಗೆ ಬಿತ್ತು. ಅವುಗಳ ತಲೆಗಳ ಮೇಲ್ಗಡೆಯ ಗವಿಯಾಕೃತಿಯ ಮೇಲೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನಕಾರವು ಕಾಣಿಸಿತು; ಅದರ ಮೇಲೆ ನರನ ರೂಪವುಳ್ಳ ಒಬ್ಬಾತನು ಆಸೀನನಾಗಿದ್ದನು. ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆ; ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಕೆಳಗಡೆ ಬೆಂಕಿ ಉರಿಯುತ್ತದೋ ಎಂಬಂತಿರುವ ಮಹಾ ತೇಜಸ್ಸನ್ನು ನೋಡಿದೆ; ಪ್ರಕಾಶವು ಆತನನ್ನು ಆವರಿಸಿಕೊಂಡಿತ್ತು. ಮಳೆಗಾಲದಲ್ಲಿ ಮೇಘಮಂಡಲದೊಲಗೆ ಕಾಮನಬಿಲ್ಲು ಹೊಳೆಯುವಂತೆ ಆತನ ಸುತ್ತಲು ಪ್ರಕಾಶ ಹೊಳೆಯುತ್ತಿತ್ತು. ಹೀಗೆ ಸರ್ವೇಶ್ವರನ ಮಹಿಮಾದ್ಭುತ ದರ್ಶನವು ಆಯಿತು. ಇದನ್ನು ಕಂಡು ನಾನು ಅಡ್ಡಬಿದ್ದೆ.
ಕೀರ್ತನೆ: 148:1-2,11-14
ಶ್ಲೋಕ: ಹೊಗಳಲಿ ಎಲ್ಲರೂ ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು.
ಹೊಗಳಿರಿ ಸ್ವರ್ಗದಿಂದ ಪ್ರಭುವನು|
ವಂದಿಸಿ ಮಹೋನ್ನತದಲಿ ಆತನನು||
ಆತನ ಸಮಸ್ತ ದೂತರೇ, ಸ್ತುತಿಸಿ ಆತನನು|
ಆತನ ಎಲ್ಲಾ ಗಣಗಳೇ, ಹೊಗಳಿ ಆತನನು||
ಭೂರಾಜರು, ಎಲ್ಲ ಜನಾಂಗಗಳು|
ಅಧಿಕಾರಿಗಳು, ದೇಶಾಧಿಪತಿಗಳು||
ಯುವಕರೂ, ಯುವತಿಯರೂ ಮುದುಕರೂ ಮಕ್ಕಳೂ|
ಹೊಗಳಲಿ ಇವರೆಲ್ಲರೂ ಪ್ರಭುವಿನ ನಾಮವನು||
ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು|
ಆತನ ಮಹತ್ತಾದ ಏಕೈಕ ನಾಮವನು||
ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ|
ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ|
ತನ್ನ ಆಪ್ತ ಜನರಾದ ಇಸ್ರಯೇಲರಿಗೆ||
ಘೋಷಣೆ ಕೀರ್ತನೆ 119:27
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ | ನಿನ್ನ ಅದ್ಭುತ ಕಾರ್ಯಗಳ ನಾನು ಧ್ಯಾನಿಸುವೆನಯ್ಯಾ ||
ಶುಭಸಂದೇಶ: ಮತ್ತಾಯ 17:22-27
ಆ ಕಾಲದಲ್ಲಿ ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನ್ನು ಪುನರುತ್ಥಾನಗೊಳಿಸಲಾಗುವುದು, "ಎಂದರು. ಇದನ್ನು ಕೇಳಿ ಶಿಷ್ಯರು ತುಂಬ ವ್ಯಥೆಗೊಂಡರು. ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೆತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ? "ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ, " ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ? "ಎಂದು ಕೇಳಿದರು. "ಪರರಿಂದಲೇ, " ಎಂದು ಪೇತ್ರನು ಉತ್ತರಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ, ನಾವು ಇವರಿಗೆ ಅಡ್ಡಿಯಾಗಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು, "ಎಂದರು.
No comments:
Post a Comment