ಮೊದಲನೇ ವಾಚನ: ಯೆಶಾಯ 55:10-11
ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ: ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.
ಕೀರ್ತನೆ: 34:4-5, 5-7, 16-17, 18-19
ಶ್ಲೋಕ: ಸಜ್ಜನನಿಗೊದುವ ಸಂಕಟಗಳು ವಿಪರೀತ, ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ
ಘನಪಡಿಸೋಣ ಆತನ ಶ್ರೀ ನಾಮವನು||
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು|
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು||
2. ಆತನತ್ತ ತಿರುಗಿದ ಮುಖ ಅರಳುವುದು|
ಲಜ್ಜೆಯಿಂದೆಂದಿಗು ಕುಂದಿ ಹೋಗದು||
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು|
ಸರ್ವಾಪತ್ತಿನಿಂದವನು ಮುಕ್ತಗೊಂಡನು||
3. ದುರ್ಜನರಿಗಾದರೋ ಪ್ರಭು ವಿಮುಖನು|
ಅವರ ಹೆಸರನು ಧರೆಯಿಂದ ಅಳಿಸುವನು||
ಸಜ್ಜನರನು ಪ್ರಭು ಕಟಾಕ್ಷಿಸುವನು|
ಅವರ ಮೊರೆಗಾತ ಕಿವಿಗೊಡುವನು||
4. ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ|
ನೆರವೀವನವರ ಕಷ್ಟ ನಿವಾರಣೆಗೆ||
ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ|
ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ||
ಶುಭಸಂದೇಶ: ಮತ್ತಾಯ 6:7-15
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ: "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ. "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."
ಮನಸ್ಸಿಗೊಂದಿಷ್ಟು : ಪರಲೋಕ ಪ್ರಾರ್ಥನೆಯ ಮೊದಲ ಭಾಗವು ದೇವರಿಗೆ ಸ್ತೋತ್ರ ಸಲ್ಲಿಸುತ್ತಾ ಅವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡರೆ, ಎರಡನೆಯ ಭಾಗವು ಅವಶ್ಯಕತೆಗಳತ್ತ ಗಮನ ಹರಿಸುತ್ತದೆ. ದೇವರಿಗೆ ಸಲ್ಲಬೇಕಾದ ಎಲ್ಲ ಸ್ತುತಿ ಗೌರವಗಳು ಸಂದರೆ ನಮ್ಮ ಬಾಳು ಸುಂದರವಾಗಿ, ನಮ್ಮ ಅವಶ್ಯಕತೆಗಳು ದೇವರ ಅನುಗ್ರಹದಿಂದ ನೆರವೇರುತ್ತದೆ. ಕ್ಷಮೆ ನಾವು ಕೊಟ್ಟಂತೆ ನಮಗೆ ದೊರಕುತ್ತದೆ.
ಪ್ರಶ್ನೆ : ಪರಲೋಕ ಪ್ರಾರ್ಥನೆ ನಮ್ಮ ಬಾಳಿಗೆಷ್ಟು ಪ್ರಸ್ತುತ?
ಪ್ರಭುವೇ,
ನೀವೇ ಕಲಿಸಿಕೊಟ್ಟ ಈ ಪ್ರಾರ್ಥನೆ
ಆಗಲಿ ನನ್ನ ಅನುದಿನದ ನಿವೇದನೆ
ನನ್ನೀ ಹೃದಯದಲ್ಲಿ ನಿಮ್ಮ ಚಿತ್ತ
ನೆರವೇರುತ್ತ ಸಾಗುತ್ತಿರಲಿ ನಿಮ್ಮತ್ತ
-ಚಿತ್ತ
No comments:
Post a Comment