ಮೊದಲನೆಯ ವಾಚನ: 1 ಅರಸರುಗಳ 3:4-13
ಒಮ್ಮೆ ಆರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ, ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿಯ ಪೀಠದ ಮೇಲೆ ಸಹಸ್ರ ಬಲಿಗಳನ್ನು ಸಮರ್ಪಿಸಿದಾಗ, ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡರು; " ನಿನಗೆ ಯಾವ ವರ ಬೇಕು ಕೇಳಿಕೋ, " ಎಂದು ಹೇಳಿದರು. ಸೊಲೋಮೋನನು, "ನಿಮಗೆ ಪ್ರಮಾಣಿಕನಾಗಿ ನೀತಿಯಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣಗೊಳಿಸಿದ್ದೀರಿ. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾ ಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ, " ಎಂದು ಬೇಡಿಕೊಂಡನು. ಸೊಲೋಮೋನನು ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, " ದೀರ್ಘಾಯುಷ್ಯನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳುವಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ, "ಎಂದರು.
ಕೀರ್ತನೆ: 119: 9-10, 11-12,13-14
ಶ್ಲೋಕ: ನಿನ್ನ ಆಜ್ಞೆಗಳನು ಕಲಿಸು ಎನಗೆ |
ನಡತೆಯಲಿ ಶುದ್ದವಿರಲು ಯುವಜನಕೆ ಹೇಗೆ ಸಾಧ್ಯ|
ನಿನ್ನಯ ವಾಕ್ಯಾನುಸರಣೆಯಿಂದಲೇ ಅವರಿಗದು ಸಾಧ್ಯ||
ತುಂಬು ಹೃದಯದಿಂದ ಹಂಬಲಿಸುತ್ತಿರುವೆನಯ್ಯಾ|
ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ||
ನಿನಗೆ ವಿರುದ್ಧ ನಾ ಪಾಪಮಾಡದಂತೆ|
ನಿನ್ನ ನುಡಿಯನು ನನ್ನೆದೆಯಲ್ಲಿರಿಸಿದೆ||
ಸ್ತುತಿ ಸಲ್ಲಲಿ ಪ್ರಭೂ, ನಿನಗೆ|
ನಿನ್ನ ಆಜ್ಞೆಗಳನು ಕಲಿಸು ಎನಗೆ||
ಬಂದುವು ಆ ವಿಧಿಗಳು ನಿನ್ನ ಬಾಯಿಂದ|
ವರ್ಣಿಸುವೆನು ಅವನ್ನು ನನ್ನ ಬಾಯಿಂದ||
ಸಿರಿಸಂಪತಿಗಿಂತ ಮಿಗಿಲಾಗಿ|
ಆನಂದಿಪೆ ನಿನ್ನ ಮಾರ್ಗಿಯಾಗಿ||
ಘೋಷಣೆ: ಕೀರ್ತನೆ 119:105
ಅಲ್ಲೆಲೂಯ, ಅಲ್ಲೆಲೂಯ!
ನಿನ್ನ ವಾಕ್ಯ ನನಗೆ ದಾರಿದೀಪ | ನನ್ನ ಕಾಲಿನ ನಡೆಗೆ ಕೈದೀಪ ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕ 6:30-34
ಆ ಕಾಲದಲ್ಲಿ ಪ್ರೇಷಿತರು ಯೇಸುವಿನ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದ್ದರು. ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, "ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ, "ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.
No comments:
Post a Comment