ಮೊದಲನೇ ವಾಚನ: 1 ಅರಸುಗಳು 8:22-23, 27-30
ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ನಿಂತು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು: “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಭೂಲೋಕದಲ್ಲೂ ಪರಲೋಕದಲ್ಲೂ ನಿಮಗೆ ಸಮಾನರಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿಮಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಭಕ್ತರ ಬಗ್ಗೆ ನಿಮ್ಮ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿಸುವವರು ನೀವು. “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ, ಉನ್ನತೋನ್ನತ ಆದ ಆಕಾಶವೂ, ನಿಮ್ಮ ವಾಸಕ್ಕೆ ಸಾಲದು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು? ಆದರೂ ನನ್ನ ದೇವರೇ, ಸರ್ವೇಶ್ವರಾ, ನಿಮ್ಮ ದಾಸನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡಿ; ಈ ದಿನ ನಿಮ್ಮನ್ನು ಪ್ರಾರ್ಥಿಸುತ್ತಿರುವ ನಿಮ್ಮ ದಾಸನ ಮೊರೆಯನ್ನು ಆಲಿಸಿರಿ. ಈ ಸ್ಥಳವನ್ನು ಕುರಿತು ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವರೇ, ನಿಮ್ಮ ಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿಮ್ಮ ದಾಸನು ನಿಮ್ಮನ್ನು ಪ್ರಾರ್ಥಿಸುವಾಗಲೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸಿರಿ. ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.
ಕೀರ್ತನೆ: 84:3, 4, 5, 10, 11
ಶ್ಲೋಕ: ಪ್ರಭೂ, ನಿನ್ನ ನಿವಾಸಗಳೆನಿತೋ ಸುಂದರ
ಹಂಬಲಿಸಿ ಸೊರಗಿಹೋಗಿದೆ ಎನ್ನ ಮನ|
ಕಾಣಬೇಕೆಂದು ಪ್ರಭುವಿನ ಪ್ರಾಂಗಣ||
ಪ್ರಭು ದೇವಾ, ಎನ್ನರಸ, ಸ್ವರ್ಗಸೇನಾಧೀಶ್ವರ|
ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯಹತ್ತಿರ|
ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ||
ನಿನ್ನ ಮಂದಿರದಲಿ ವಾಸಿಸುವವರು ಧನ್ಯರು|
ನಿರಂತರವು ನಿನ್ನ ಗುಣಗಾನ ಮಾಡುವರವರು||
ನಿನ್ನ ಮಂದಿರದಲಿ ಕಳೆದ ದಿನವೊಂದು|
ತಿಳಿವೆನು ಸಾವಿರ ದಿನಕೂ
ಮೇಲೆಂದು||
ದುರುಳರ ಬಿಡಾರದಲಿ ನಾ ವಾಸಮಾಡುವುದರ ಬದಲು|
ನಿನ್ನಾಲಯದ ದ್ವಾರಪಾಲಕನಾಗಿರುವುದೆ ಮೇಲು||
ಘೋಷಣೆ ಕೀರ್ತನೆ148:13,14
ಅಲ್ಲೆಲೂಯ, ಅಲ್ಲೆಲೂಯ!
ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು |
ಖ್ಯಾತಿ ತಂದಿಹನು ತನ್ನ ಭಕ್ತಾಧಿಗಳಿಗೆ ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕ 7:1-13
ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, “ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟ ಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ‘ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’ “ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ. ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ! ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ. ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ‘ನನ್ನಿಂದ ನಿಮಗೆ ಸಲ್ಲತಕ್ಕದ್ದು “ಕೊರ್ಬಾನ್” (ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು, ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ. “ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು.
No comments:
Post a Comment