ಮೊದಲನೆಯ ವಾಚನ: ಪೌಲನು ಥೆಸಲೋನಿಯರಿಗೆ ಬರೆದ ಮೊದಲನೆಯ ಪತ್ರ 4:13-18
ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ. ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದೆ ಇತರರಂತೆ ಮೃತರಿಗಾಗಿ ನೀವು ದುಃಖಿಸಬಾರದು. ಯೇಸು ಸತ್ತು ಪುನರುತ್ಥಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ ? ಹಾಗೆಯೇ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣ ಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ. ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಿಗಿಂತಲೂ ಮುಂದಿನವರಾಗುವುದಿಲ್ಲ. ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದು ಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದು ಬರುತ್ತಾರೆ. ಆಮೇಲೆ, ಇನ್ನೂ ಬದುಕಿರುವ ನಾವು ಎದ್ಧುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪಭುವಿನೊಂದಿಗೆ ಇರುತ್ತೇವೆ. ಆದ್ದರಿಂದ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.
ಕೀರ್ತನೆ 96:1, 3, 4-5, 11-13
ಶ್ಲೋಕ: ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ.
ಹೊಸ ಗೀತೆಯನು ಹಾಡಿರಿ ಪ್ರಭುವಿಗೆ
ವಿಶ್ವವೆಲ್ಲವು ಹಾಡಲಿ ಆತನಿಗೆ
ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ
ಆತನದ್ಭುತಕಾರ್ಯಗಳನು ಸಕಲ ಜನಾಂಗಗಳಿಗೆ
ಏಕೆನೆ ಮಹಾತ್ಮನು ಪ್ರಭು, ಬಲು ಸ್ತುತ್ಯರ್ಹನು
ಸಕಲ ದೇವರುಗಳಿಗಿಂತಲೂ ಘನ ಗಂಭೀರನು
ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ
ಪ್ರಭುವಿನಿಂದಲೇ ಉಂಟಾಯಿತು ಆಕಾಶಮಂಡಲವೆಲ್ಲ
ಹರ್ಷಿಸಲಿ ಆಕಾಶವು, ಸಂತೋಷಿಸಲಿ ಎಂದು ಭೂಲೋಕವು
ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು
ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು
ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು
ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ
ಜಗಕೂ ಜನತೆಗೂ ತೀರ್ಪಿಡುವನು ನೀತಿನಿಯಮಾನುಸಾರವಾಗಿ
ಶುಭಸಂದೇಶ: ಲೂಕ 4:16-30
ಆ ಕಾಲದಲ್ಲಿ ಯೇಸು ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದುನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: "ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ, ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಿಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, " ನೀವು ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು, " ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. " ಇವನು ಜೋಸೆಫನ ಮಗನಲ್ಲವೇ? " ಎಂದು ಮಾತನಾಡಿಕೊಂಡರು. ಅನಂತರ ಯೇಸು ಅವರಿಗೆ, " 'ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ ' ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ, ಅಲ್ಲದೆ, ' ಕಪೆರ್ನವುಮಿನಲ್ಲಿ ನೀನು ಎಂತೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ, ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು, ' ಎಂದೂ ಹೇಳುವಿರಿ. ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯಾಗಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ, " ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರ ಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದುಹೋದರು.
No comments:
Post a Comment