ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.08.21 - "ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,"

ಮೊದಲನೇ ವಾಚನ: ನ್ಯಾಯಸ್ಥಾಪಕರು 11:29-39


ಆಗ ಸರ್ವೇಶ್ವರನ ಆತ್ಮ ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ್ಯ, ಮನಸ್ಸೆಯ ನಾಡು, ಇವುಗಳಲ್ಲಿ ಸಂಚರಿಸಿ ಮತ್ತೆ ಗಿಲ್ಯಾದಿನ ಮಿಚ್ಛೆಗೆ ಬಂದು ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು. ಇದಲ್ಲದೆ ಅವನು ಸರ್ವೇಶ್ವರಸ್ವಾಮಿಗೆ, "ತಾವು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವುದಾದರೆ ನಾನು ಸುರಕ್ಷಿತವಾಗಿ ಹಿಂದಿರುಗುವಾಗ ನನ್ನ ಮನೆಯ ಬಾಗಿಲಿನಿಂದ ನನ್ನನ್ನು ಎದುರುಗೊಳ್ಳಲು ಮೊದಲು ಬರುವಂಥ ಪ್ರಾಣಿ ತಮಗೆ ಮೀಸಲು" ಎಂದೂ "ಅದನ್ನು ತಮಗೆ ದಹನಬಲಿದಾನ ಮಾಡುವೆನು" ಎಂದೂ ಹರಕೆಮಾಡಿದನು. ಯೆಪ್ತಾಹನು ನದಿಯನ್ನು ದಾಟಿ ಅಮ್ಮೋನಿಯರಿಗೆ ವಿರುದ್ಧ ಯುದ್ಧಕ್ಕೆ ಹೋಗಲು ಅವರನ್ನು ಸರ್ವೇಶ್ವರ ಅವನ ಕೈಗೆ ಒಪ್ಪಿಸಿದರು. ಅವನು ಅವರನ್ನು ಸೋಲಿಸಿ ಆರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳು ಮಾಡಿದನು. ಹೀಗೆ ದೊಡ್ಡ ಜಯವಾಗಿ, ಅಮ್ಮೋನಿಯರು ಇಸ್ರಯೇಲರಿಗೆ ಶರಣಾದರು. ಯೆಪ್ತಾಹನು ಮಿಚ್ಛೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿ ಬಡಿಯುತ್ತಾ ನಾಟ್ಯವಾಡುತ್ತಾ ಅವನನ್ನು ಎದುರುಗೊಳ್ಳುವುದಕ್ಕಾಗಿ ಬಂದಳು. ಆಕೆ ಅವನ ಒಬ್ಬಳೇ ಮಗಳು. ಆಕೆಯ ಹೊರತು ಅವನಿಗೆ ಬೇರೆ ಗಂಡುಹೆಣ್ಣು ಮಕ್ಕಳೇ ಇರಲಿಲ್ಲ. ಆಕೆಯನ್ನು ಕಾಣುತ್ತಲೆ ಅವನು ದುಃಖತಾಳಲು ಆಗದೆ ಬಟ್ಟೆಯನ್ನು ಹರಿದುಕೊಂಡು, "ಅಯ್ಯೋ ನನ್ನ ಮಗಳೇ, ನೀನು ನನ್ನನ್ನು ಎಂಥಾ ಯಾತನೆಗೆ ಈಡುಮಾಡಿದೆ; ನನಗೆ ಮಹಾ ಸಂಕಟವನ್ನುಂಟುಮಾಡಿದೆ!  ನಾನು ಬಾಯಾರೆ ಸರ್ವೇಶ್ವರನಿಗೆ ಹರಕೆಮಾಡಿದ್ದೇನೆ; ಅದನ್ನು ಹಿಂದೆಗೆಯಲಾಗದು," ಎಂದು ಕೂಗಿಕೊಂಡನು. ಆಕೆ ಅವನಿಗೆ, "ಅಪ್ಪಾ, ನೀನು ಬಾಯಾರೆ ಸರ್ವೇಶ್ವರನಿಗೆ ಹರಕೆ ಮಾಡಿದ ಮೇಲೆ ಅವರು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿ ತೀರಿಸಿದ್ದಾರೆ. ಆದ್ದರಿಂದನಿನ್ನ ಬಾಯಿಂದ ಬಂದುದ್ದನ್ನೇ ನೆರವೇರಿಸು," ಎಂದಳು. ಆಕೆ ಪುನಃ ತನ್ನ ತಂದೆಗೆ, "ನನ್ನ ಬಿನ್ನಹವನ್ನು ಆಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಗುಡ್ಡ ಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗಾಗಿ ಗೋಳಾಡುವೆನು," ಎಂದಳು. ಅವನು, "ಎರಡು ತಿಂಗಳ ತನಕ ಹೋಗಿ ಬಾ," ಎಂದು ಹೇಳಿ ಕಳುಹಿಸಿದನು. ಆಕೆ ಸಖಿಯರ ಸಹಿತ ಗುಡ್ಡ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗಾಗಿ ಗೋಳಾಡಿದಳು. ಎರಡು ತಿಂಗಳು ಕಳೆದ ನಂತರ ಆಕೆ ಮರಳಿ ತಂದೆಯ ಹತ್ತಿರ ಬಂದಳು. ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆ ಕನ್ಯೆಯಾಗಿಯೇ ಸತ್ತಳು.

ಕೀರ್ತನೆ: 40:5, 7-8, 8-9, 10
ಶ್ಲೋಕ: ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ

ಶುಭಸಂದೇಶ: ಮತ್ತಾಯ 22:1-14

ಯೇಸುಸ್ವಾಮಿ ಯಾಜಕರು ಫರಿಸಾಯರನ್ನುದ್ದೇಶಿಸಿ ಈ ಸಾಮತಿಯನ್ನು ಹೇಳಿದರು: ಸ್ವರ್ಗಸಾಮ್ರಾಜ್ಯ ಇಂತಿದೆ; ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ ಪುನಃ ಬೇರೆ ಸೇವಕರನ್ನು ಅಟ್ಟಿದ. "ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ" ಎಂದು ಅಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ. ಆದರೂ ಅಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟು ಹೋದ. ಉಳಿದವರು, ಕರೆಯಲು ಬಂದ ಆಳುಗಳನ್ನೇ ನಂದಿಸಿ, ಬಡಿದು,  ಕೊಂದುಹಾಕಿದರು. ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. ಆನಂತರ ತನ್ನ ಸೇವಕರಿಗೆ, "ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ" ಎಂದ. ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ, "ಏನಯ್ಯಾ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?" ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. ಆಗ ರಾಜನು ಪರಿಚಾರಕರಿಗೆ, "ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ," ಎಂದು ಹೇಳಿದ. ಹೀಗೆ ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ," ಎಂದರು ಸ್ವಾಮಿ.

No comments:

Post a Comment