ಮೊದಲನೇ ವಾಚನ: ಪ್ರಕಟನಾ ಗ್ರಂಥ 21:9-14
ದೇವದೂತರುಗಳಲ್ಲಿ ಒಬ್ಬನು ಬಂದು, ನನ್ನೊಡನೆ ಮಾತಾನಾಡಿ ಇಂತೆಂದನು: "ಇಲ್ಲಿಗೆ ಬಾ, ಯಜ್ಞದ ಕುರಿಮರಿಗೆ ಸತಿಯಾಗಲಿರುವ ಮದುವಣಗಿತ್ತಿಯನ್ನು ನಿನಗೆ ತೋರಿಸುತ್ತೇನೆ," ಎಂದನು. ಆಗ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೊಯ್ದನು. ಅಲ್ಲಿ ನನಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು; ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು; ಸ್ವಚ್ಛವಾದ ಸ್ಪಟಿಕದಂತೆ ಶುಭ್ರವಾಗಿತ್ತು. ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು. ಪೂರ್ವ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು. ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು.
ಕೀರ್ತನೆ:145:10-11, 12-13, 17-18
ಶ್ಲೋಕ: ಪ್ರಭೂ, ಭಕ್ತಸಮೂಹವು ಪ್ರಸಿದ್ಧಪಡಿಸುವುದು ನಿನ್ನ ರಾಜ್ಯದ ಮಹತ್ವವನು
ಕೊಂಡಾಡುವುದು ನಿನ್ನನು ಭಕ್ತ ಸಮೂಹವು
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನ್ನು
ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
ಶಾಶ್ವತವಾದುದು ನಿನ್ನ ರಾಜ್ಯವು
ಇರುವುದೆಂದಿಗು ನಿನ್ನ ಆಳ್ವಿಕೆಯು
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
ಶಾಶ್ವತವಾದುದು ನಿನ್ನ ರಾಜ್ಯವು
ಇರುವುದೆಂದಿಗು ನಿನ್ನ ಆಳ್ವಿಕೆಯು
ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು
ಎಲ್ಲರ ಕೋರಿಕೆಗಳನು ಈಡೇರಿಸುವವನು
ಪ್ರಭುವಿನ ಮಾರ್ಗ ಧರ್ಮಸಮ್ಮತ
ಆತನ ಕಾರ್ಯವೆಲ್ಲ ಪುನೀತ
ಎಲ್ಲರ ಕೋರಿಕೆಗಳನು ಈಡೇರಿಸುವವನು
ಪ್ರಭುವಿನ ಮಾರ್ಗ ಧರ್ಮಸಮ್ಮತ
ಆತನ ಕಾರ್ಯವೆಲ್ಲ ಪುನೀತ
ಶುಭಸಂದೇಶ: ಯೊವಾನ್ನ 1:45-51
ಫಿಲಿಪನು ನತಾನಿಯೇಲನನ್ನು ಕಂಡು, "ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು," ಎಂದು ಹೇಳಿದನು. ಅದಕ್ಕೆ ನತಾನಿಯೇಲನು, "ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದುಂಟೆ?" ಎಂದು ಕೇಳಲು, "ಬಂದು ನೀನೇ ನೋಡು," ಎಂದು ಫಿಲಿಪ್ಪನು ಉತ್ತರಕೊಟ್ಟನು. ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, "ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ," ಎಂದು ನುಡಿದರು. ನತಾನಿಯೇಲನು, "ನನ್ನ ಪರಿಚಯ ನಿಮಗೆ ಹೇಗಾಯಿತು?" ಎಂದು ಕೇಳಲು ಯೇಸು, "ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ," ಎಂದು ಉತ್ತರಕೊಟ್ಟರು. ಅದಕ್ಕೆ ನತಾನಿಯೇಲನು "ಗುರುದೇವಾ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ," ಎಂದನು. ಆಗ ಯೇಸು, "ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೇ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ," ಎಂದು ನುಡಿದರು. ತಮ್ಮ ಮಾತನ್ನು ಮುಂದುವರಿಸುತ್ತಾ, "ನಾನೂ ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ಥರ್ಗವು ತೆರೆದಿರುವುದನ್ನು ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ," ಎಂದು ಹೇಳಿದರು.
No comments:
Post a Comment