ಮೊದಲನೇ ವಾಚನ: ರೂತ 2:1-3, 8-11; 4:13-17
ನವೊಮಿಗೆ ಬೋವಜ ಎಂಬ ನೆಂಟನು ಇದ್ದನು. ಅವನು ಐಶ್ವರ್ಯವಂತ ಮತ್ತು ಒಬ್ಬ ಗಣ್ಯ ವ್ಯಕ್ತಿ; ನವೊಮಿಯ ಪತಿ ಎಲಿಮೆಲೆಕನ ಕುಟುಂಬಕ್ಕೆ ಸೇರಿದವನು. ರೂತಳು ನವೊಮಿಗೆ: “ನಾನು ಹೊಲಗಳಿಗೆ ಹೋಗಿ ತೆನೆಗಳನ್ನು ಆಯ್ದುಕೊಂಡು ಬರಲೇ? ಇದಕ್ಕೆ ಯಾರಾದರು ನನಗೆ ನೆರವಾಗಬಹುದು,” ಎಂದು ಕೇಳಿದಳು. ನವೊಮಿ, “ಹೋಗಿ ಬಾ, ಮಗಳೇ,” ಎಂದು ಅಪ್ಪಣೆಕೊಟ್ಟಳು. ರೂತಳು ಕೊಯ್ಯುವವರ ಹಿಂದೆ ಹೋಗುತ್ತಾ ಅಲ್ಲಲ್ಲಿ ಬಿದ್ದ ತೆನೆಗಳನ್ನು ಆಯ್ದುಕೊಳ್ಳುತ್ತಿದ್ದಳು. ಸುದೈವದಿಂದ ಅದು ಎಲಿಮೆಲೆಕನ ನೆಂಟನಾದ ಬೋವಜನ ಹೊಲವಾಗಿತ್ತು. ತದನಂತರ ಬೋವಜನು ರೂತಳಿಗೆ, “ನೋಡಮ್ಮಾ, ಈ ಹೊಲವನ್ನು ಬಿಟ್ಟು ಮತ್ತೆ ಎಲ್ಲಿಯೂ ತೆನೆ ಆಯಲು ಹೋಗಬೇಕಾಗಿಲ್ಲ, ನನ್ನ ಹೆಣ್ಣಾಳುಗಳ ಜೊತೆಯಲ್ಲಿಯೇ ಇರು. ಅವರು ಎಲ್ಲಿ ಪೈರು ಕೊಯ್ಯುತ್ತಾರೋ ಅವರ ಹಿಂದೆ ಹೋಗಿ ತೆನೆಗಳನ್ನು ಆರಿಸಿಕೊ. ನಿನಗೆ ಯಾರೂ ತೊಂದರೆ ಕೊಡಬಾರದೆಂದು ನನ್ನ ಆಳುಗಳಿಗೆ ಆಜ್ಞಾಪಿಸಿದ್ದೇನೆ. ನಿನಗೆ ಬಾಯಾರಿಕೆಯಾದರೆ ಹೋಗಿ ನನ್ನ ಆಳುಗಳು ತುಂಬಿಸಿರುವ ನೀರಿನ ಬಾನೆಗಳಿಂದ ಕುಡಿ,” ಎಂದನು. ಆಗ ರೂತಳು ಅವನಿಗೆ ಸಾಷ್ಟಾಂಗವೆರಗಿ ನಮಸ್ಕರಿಸಿ, “ಒಡೆಯಾ, ನನ್ನ ಮೇಲೆ ಏಕೆ ಇಷ್ಟು ಕನಿಕರ? ಪರದೇಶಿಯಾದ ನನಗೆ ತಾವಿಷ್ಟು ದಯೆತೋರಿಸುವುದೇಕೆ?” ಎಂದಳು. ಅದಕ್ಕೆ ಬೋವಜನು, “ನಿನ್ನ ಪತಿ ತೀರಿಹೋದಂದಿನಿಂದ ನೀನು ಅತ್ತೆಗಾಗಿ ಮಾಡಿದ್ದ ಎಲ್ಲವನ್ನೂ ಕುರಿತು ಕೇಳಿದ್ದೇನೆ. ನೀನು ಹೇಗೆ ನಿನ್ನ ತಂದೆತಾಯಿಗಳನ್ನು ಮತ್ತು ಸ್ವಂತನಾಡನ್ನು ಬಿಟ್ಟು, ಅಪರಿಚಿತರಾದ ಜನರ ಮಧ್ಯೆ ವಾಸಿಸಲು ಬಂದಿರುವೆ ಎಂಬುದು ಸಹ ನನಗೆ ತಿಳಿದಿದೆ.
ಬೋವಜನು ರೂತಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋದನು. ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ಆಕೆ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು. ಊರಿನ ಮಹಿಳೆಯರು ನವೊಮಿಗೆ: “ಸರ್ವೇಶ್ವರ ಸ್ವಾಮಿಗೆ ಸ್ತುತಿ ಸ್ತೋತ್ರ! ನಿನಗೊಬ್ಬ ವಂಶೋದ್ಧಾರಕನನ್ನು ಅನುಗ್ರಹಿಸಿದ ಇಸ್ರಯೇಲ್ ನಾಡಿನಲ್ಲಿ ಆ ಮಗು ಪ್ರಖ್ಯಾತನಾಗಲಿ! ಅವನು ನಿನಗೆ ನವಚೈತನ್ಯವನ್ನು ಕೊಟ್ಟು ವೃದ್ಧಾಪ್ಯದಲ್ಲಿ ನಿನಗೆ ಸಂರಕ್ಷಣೆಯನ್ನು ನೀಡುವನು. ಸಪ್ತ ಕುವರರಿಗಿಂತ ನಿನಗೆ ಮೆಚ್ಚುಗೆ ಆದ ನಿನ್ನ ಪ್ರಿಯ ಸೊಸೆ ಆ ಮಗುವನ್ನು ನಿನಗೆ ಕೊಟ್ಟಿದ್ದಾಳೆ!” ಎಂದು ಹರಸಿದರು. ನವೊಮಿ ಆ ಮಗುವನ್ನು ಎತ್ತಿಕೊಂಡು ತನ್ನ ಮಡಿಲಲ್ಲಿಟ್ಟುಕೊಂಡು ಸಾಕಿ ಸಲಹಿದಳು. ನೆರೆಹೊರೆಯ ಮಹಿಳೆಯರು, “ನವೊಮಿಗೆ ಕುಲಪುತ್ರನೊಬ್ಬನು ಹುಟ್ಟಿದ್ದಾನೆ!” ಎಂದು ಹೇಳಿ ಆ ಮಗುವಿಗೆ “ಓಬೇದ್” ಎಂದು ಹೆಸರಿಟ್ಟರು. ಇವನೇ ಜೆಸ್ಸೆಯ ತಂದೆ, ದಾವೀದನ ತಾತ.
ಶ್ಲೋಕ: ಹೊಂದುವನು ಆಶೀರ್ವಾದವನು ಪ್ರಭುವಿನಲಿ ಭಯಭಕ್ತಿಯುಳ್ಳವನು.
ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು
ಧನ್ಯನು, ಆತನ ಮಾರ್ಗಗಳಲೇ ನಡೆಯುವವನು
ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು
ಧನ್ಯನಾಗುವೆ ನೀನು, ನಿನಗೆ ಶುಭವಾಗುವುದು
ಇರುವಳು ನಿನ್ನ ಪತ್ನಿ ಮನೆಯಲಿ ಫಲಭರಿತ ದ್ರಾಕ್ಷಲತೆಯಂತೆ
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ
ಓಲಿವ್ ಸಸಿಗಳಂತೆ ಹೊಂದುವನು ಅಂತಹ ಆಶೀರ್ವಾದವನು
ಪ್ರಭುವಿನಲಿ ಭಯಭಕ್ತಿಯುಳ್ಳವನು
ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಿಸಲಿ
ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ
ನಮ್ಮ ನಾಡು ನೀಡುವುದು ಬೆಳೆಯನು
ನಡೆವುದು ಪ್ರಭುವಿನ ಮುಂದೆ ನೀತಿ
ಮಾಡುವುದು ಆತನ ಹೆಜ್ಜೆಗೆ ಹಾದಿ
ಶುಭಸಂದೇಶ: ಮತ್ತಾಯ 23:1-12
ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು: “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ. ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದಮಾಡಿಕೊಳ್ಳುತ್ತಾರೆ. ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ. ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.
No comments:
Post a Comment