ಮೊದಲನೇ ವಾಚನ: ಧರ್ಮೋಪದೇಶಕಾಂಡ 10:12-22
"ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡಬೇಕು; ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು. ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ. ಇಗೋ ಕೇಳಿ; ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ. ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು. ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು. ಸರ್ವೇಶ್ವರಾಧಿ ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರವೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ. ಲಂಚ ತೆಗೆದುಕೊಳ್ಳುವವರಲ್ಲ. ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯದೊರಕಿಸುತ್ತಾರೆ; ಪರದೇಶಿಗಳಾದವರಿಗೆ ಪ್ರೀತಿಯಿಂದ ಅನ್ನವಸ್ತ್ರಗಳನ್ನು ನೀಡುತ್ತಾರೆ. ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆ ಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅಲರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ. ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ, ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಂಸಖ್ಯರಾಗುವಂತೆ ಮಾಡಿದ್ದಾರೆ.
ಕೀರ್ತನೆ: 147:12-13, 14-15, 19-20
ಶ್ಲೋಕ: ಜೆರುಸಲೇಮೇ,, ಕೀರ್ತಿಸು ಪ್ರಭುವನು
ಶುಭಸಂದೇಶ: ಮತ್ತಾಯ 17:22-27
ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನು ಪುನರುತ್ದಾನಗೊಳಿಸಲಾಗುವುದು," ಎಂದರು. ಅದನ್ನು ಕೇಳಿ ಶಿಷ್ಯರು ತುಂಬಾ ವ್ಯಥೆಗೊಂಡರು. ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?" ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ," ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ?" ಎಂದು ಕೇಳಿದರು. "ಪರರಿಂದಲೇ," ಎಂದು ಪೇತ್ರನು ಉತ್ತರಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ, ನಾವೂ ಇವರಿಗೆ ಅಡ್ಡಿಯಾಡಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳ ಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು," ಎಂದರು.
No comments:
Post a Comment