ಮೊದಲನೆಯ ವಾಚನ: ಸಂಖ್ಯಾಕಾಂಡ 20:1-13
ಇಸ್ರಯೇಲ್ ಸಮಾಜದವರು ಮೊದಲನೆಯ ತಿಂಗಳಲ್ಲಿ ' ಚಿನ್ ' ಎಂಬ ಮರುಭೂಮಿಗೆ ಬಂದು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಜನರಿಗೆ ನೀರು ಇಲ್ಲದೆ ಹೋಯಿತು. ಅವರು ಮೋಶೆ ಮತ್ತು ಆರೋನರ ವಿರುದ್ಧ ಸಭೆಸೇರಿ ಮೋಶೆಯ ಸಂಗಡ ವಾದಿಸತೊಡಗಿದರು: "ಸರ್ವೇಶ್ವರನ ಸನ್ನಿಧಿಯಲ್ಲಿ ನಮ್ಮ ಬಂಧುಬಳಗದವರು ಸತ್ತಂತೆ ನಾವೂ ಸತ್ತು ಹೋಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ! ನೀವು ಸರ್ವೇಶ್ವರನ ಪ್ರಜೆಯಾದ ನಮ್ಮನ್ನು ಈ ಮರಳುಗಾಡಿಗೆ ಕರೆದುಕೊಂಡು ಬಂದುದೇಕೆ ? ನಾವೂ ನಮ್ಮ ಜಾನುವಾರಗಳೂ ಇಲ್ಲಿ ಸಾಯಬೇಕೆಂದೋ ? ಈಜಿಪ್ಟ್ ದೇಶದಿಂದ ನಮ್ಮನ್ನು ಬರಮಾಡಿದ್ದು ಈ ಕೀಳು ಸ್ಥಳಕ್ಕೆ ಸೇರಿಸಲಿಕ್ಕೋ ? ಈ ನೆಲದಲ್ಲಿ ದವಸಧಾನ್ಯ ಬೆಳೆಯುವಂತಿಲ್ಲ, ಅಂಜೂರವಿಲ್ಲ, ದ್ರಾಕ್ಷಿಯಿಲ್ಲ, ದಾಳಿಂಬೆಯಿಲ್ಲ, ಕುಡಿಯುವುದಕ್ಕೆ ನೀರು ಕೂಡ ಇಲ್ಲ, " ಎಂದು ದೂರಿದರು. ಮೋಶೆ ಮತ್ತು ಆರೋನರು ಆ ಜನಸಂದಣಿಯನ್ನು ಬಿಟ್ಟು ದೇವದರ್ಶನದ ಗುಡಾರದ ಬಾಗಿಲ ಬಳಿಗೆ ಬಂದು ಸಾಷ್ಟಾಂಗವೆರಗಿದರು. ಆಗ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು. ಆಗ ಸರ್ವೇಶ್ವರ ಮೋಶೆಗೆ, " ನೀನು ಆ ಕೋಲನ್ನು ಕೈಗೆ ತೆಗೆದುಕೋ. ನೀನು ಮತ್ತು ನಿನ್ನ ಸಹೋದರ ಆರೋನನು ಜನಸಮೂಹದವರನ್ನು ಸಭೆ ಸೇರಿಸಿರಿ. ಅವರೆಲ್ಲರ ಎದುರಿನಲ್ಲೇ ನೀರು ಕೊಡಬೇಕೆಂದು ಆ ಕಡಿದಾದ ಬಂಡೆಗೆ ಆಜ್ಞೆಮಾಡು. ಅದರಿಂದ ನೀರು ಹೊರಟುಬರುವುದು. ಅದನ್ನು ಜನಸಮೂಹದವರಿಗೂ ಅವರ ಜಾನುವಾರುಗಳಿಗೂ ಕುಡಿಯಲು ಕೊಡಬಹುದು, " ಎಂದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ಮೋಶೆ ಆ ಕೋಲನ್ನು ಅವರ ಸನ್ನಿಧಿಯಿಂದ ತೆಗೆದುಕೊಂಡನು. ಆರೋನನ ಜೊತೆಯಲ್ಲಿ ಜನಸಮೂಹದವರ ಬಳಿಗೆ ಹೋಗಿ ಕಡಿದಾದ ಆ ಬಂಡೆಗೆದುರಾಗಿ ಅವರನ್ನು ಸಭೆಸೇರಿಸಿದನು. ಅವರನ್ನು ಸಂಬೋಧಿಸುತ್ತಾ, " ದಂಗೆಕಾರರೇ ಕೇಳಿ: ಈ ಬಂಡೆಯಿಂದ ನಿಮಗೆ ನಾವು ನೀರನ್ನು ಬರಮಾಡಬೇಕೋ, " ಎಂದು ಹೇಳಿ ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡುಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನಸಮೂಹದವರೂ ಅವರ ಜಾನುವಾರುಗಳೂ ಕುಡಿದರು. ಬಳಿಕ ಸರ್ವೇಶ್ವರ ಮೋಶೆ ಮತ್ತು ಆರೋನರಿಗೆ, ನೀವು ನನ್ನನ್ನು ನಂಬದೇಹೋದಿರಿ. ಇಸ್ರಯೇಲರ ಮುಂದೆ ನನ್ನ ಗೌರವವನ್ನು ಕಾಪಾಡದೆಹೋದಿರಿ. ಆದುದರಿಂದ ಈ ಸಮಾಜದವರನ್ನು ನಾನು ವಾಗ್ದಾನಮಾಡಿದ ನಾಡಿಗೆ ನೀವು ಕರೆದುಕೊಂಡು ಹೋಗಕೂಡದು, " ಎಂದು ಹೇಳಿದರು. ಇಸ್ರಯೇಲರು ಅಲ್ಲಿ ಸರ್ವೇಶ್ವರನ ಸಂಗಡ ವಾದಮಾಡಿದ್ದರಿಂದ ಆ ನೀರಿನ ಪ್ರವಾಹಕ್ಕೆ ' ಮೆರಿಬಾ ' ಎಂದು ಹೆಸರಾಯಿತು. ಅಲ್ಲಿ ಸರ್ವೇಶ್ವರ ತಮ್ಮ ಪರಮ ಪಾವನತೆಯನ್ನು ವ್ಯಕ್ತಪಡಿಸಿದರು.
ಕೀರ್ತನೆ 95:1-2, 6-9
ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ.
ಬನ್ನಿ ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ
ಆತನ ಸನ್ನಿಧಿ ಸೇರೋಣ ಕೃತಾಜ್ಞತಾಸ್ತುತಿಯೊಂದಿಗೆ
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ
ಬನ್ನಿ ಆರಾಧಿಸೋಣ ಬನ್ನಿ ಬಾಗಿ ವಂದಿಸೋಣ
ನಮ್ಮನ್ನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ
ಆತನೆಮ್ಮ ದೇವರು, ನಾವು ಆತನ ಕೈಮಂದೆ
ಆತನಿಂದಲೇ ಪಾಲನೆ ಪೋಷಣೆ ಪಡೆದ ಜನತೆ
ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ
ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ
ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ
ನೋಡಿದರಾದರೂ ನನ್ನ ಮಹತ್ಕಾರ್ಯಗಳನು
ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನ್ನು
ಶುಭಸಂದೇಶ: ಮತ್ತಾಯ 16:13-23
ಆ ಕಾಲದಲ್ಲಿ ಯೇಸು ಫಿಲಿಪ್ಪನ ಸೆಜರೇಯ ಪ್ರಾಂತ್ಯಕ್ಕೆ ಬಂದಾಗ ' ಜನರು ಮನುಷ್ಯಪುತ್ರನನ್ನು ಯಾರೆಂದು ಹೇಳುತ್ತಾರೆ ?' ಎಂದು ತಮ್ಮ ಶಿಷ್ಯರನ್ನು ಕೇಳಲು ಅವರು ಪ್ರತ್ಯುತ್ತರವಾಗಿ, " 'ಸ್ನಾನಿಕ ಯೊವಾನ್ನ' ಎಂದು ಕೆಲವರು ಹೇಳುತ್ತಾರೆ, ಮತ್ತೆ ಕೆಲವರು, ' ಎಲೀಯನು' ಎನ್ನುತ್ತಾರೆ, ' ಯೆರೆಮೀಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು, ' ಎಂಬುದು ಇನ್ನೂ ಕೆಲವರ ಅಭಿಪ್ರಾಯ, " ಎಂದು ಉತ್ತರಕೊಟ್ಟರು. ಆಗ ಯೇಸು, " ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ? " ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, ಅಭಿಷಿಕ್ತರಾದ ಲೋಕೋದ್ಧಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ, "ಎಂದನು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: " ಯೋನ್ನನ ಮಗ ಸಿಮೋನನೇ, ನೀನು ಧನ್ಯ ! ಈ ವಿಷಯವನ್ನು ನಿನಗೆ ಶ್ರುತಪಡಿಸಿದ್ದು ನರಮಾನವ ಶಕ್ತಿಯಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ. ನಾನು ನಿನಗೆ ಹೇಳುತ್ತೇನೆ, ಕೇಳು: " ನಿನ್ನ ಹೆಸರು ಪೇತ್ರ, ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು. ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು. " ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ಅಭಿಷಿಕ್ತರಾದ ಲೋಕೋದ್ಧಾರಕ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು. ಯೇಸು ತಮ್ಮ ಶಿಷ್ಯರಿಗೆ, " ನಾನು ಜೆರುಸಲೇಮಿಗೆ ಹೋಗಬೇಕಾಗಿದೆ, ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ " ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು. ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, " ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ, " ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, " ಸೈತಾನನೇ, ತೊಲಗಿಲ್ಲಿಂದ, ನೀನು ನನಗೆ ಅಡೆತಡೆ, ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು ದೇವರದಲ್ಲ, " ಎಂದರು.
No comments:
Post a Comment