ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:42-47
ಭಕ್ತಾದಿಗಳು ಪ್ರೇಷಿತರ ಬೋಧನೆಯನ್ನು ಕೇಳುವುದರಲ್ಲಿ ನಿರತರಾಗಿದ್ದರು; ಅನ್ಯೋನ್ಯವಾಗಿ ಬಾಳುತ್ತಿದ್ದರು; ರೊಟ್ಟಿ ಮುರಿಯುವ ಸಹಭೋಜನದಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೂ ಪ್ರಾರ್ಥನಾಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಭಕ್ತರ ಸಭಾಜೀವನ ಪ್ರೇಷಿತರ ಮುಖಾಂತರ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ನಡೆಯುತ್ತಿದ್ದವು. ಇವನ್ನು ಕಂಡು ಜನರು ಭಯಭ್ರಾಂತರಾಗುತ್ತಿದ್ದರು. ಭಕ್ತವಿಶ್ವಾಸಿಗಳೆಲ್ಲರೂ ಅನ್ಯೋನ್ಯವಾಗಿ ಬಾಳುತ್ತಿದ್ದರು. ತಮ್ಮಲ್ಲಿದ್ದುದನ್ನು ಹುದುವಾಗಿ ಹಂಚಿಕೊಳ್ಳುತ್ತಿದ್ದರು. ತಮ್ಮ ತಮ್ಮ ಆಸ್ತಿಪಾಸ್ತಿಯನ್ನು ಮಾರಿ ಬಂದ ಹಣವನ್ನು ಅವರವರ ಅವಶ್ಯಕತೆಗೆ ತಕ್ಕಂತೆ ಎಲ್ಲರಿಗೂ ಹಂಚುತ್ತಿದ್ದರು. ದಿನಂಪ್ರತಿ ಅವರು ಒಮ್ಮನಸ್ಸಿನಿಂದ ದೇವಾಲಯದಲ್ಲಿ ಸಭೆ ಸೇರುತ್ತಿದ್ದರು. ತಮ್ಮ ಮನೆಗಳಲ್ಲಿ ರೊಟ್ಟಿಮುರಿಯುವ ಸಹಭೋಜನವನ್ನು ಏರ್ಪಡಿಸಿ ಸಂತೋಷದಿಂದಲೂ ಸಹೃದಯದಿಂದಲೂ ಭಾಗವಹಿಸುತ್ತಿದ್ದರು. ದೇವರನ್ನು ಸ್ತುತಿಸುತ್ತಾ ಸಕಲರಿಗೆ ಅಚ್ಚುಮೆಚ್ಚಾಗಿ ಬಾಳುತ್ತಿದ್ದರು. ಜೀವೋದ್ಧಾರವನ್ನು ಹೊಂದುತ್ತಿದ್ದವರನ್ನೆಲ್ಲಾ ಪ್ರಭು ಈ ಸಭೆಗೆ ದಿನೇದಿನೇ ಸೇರಿಸಿಕೊಳ್ಳುತ್ತಿದ್ದರು.
ಕೀರ್ತನೆ: 118:2-4, 13-15, 22-24
ಶ್ಲೋಕ: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ, ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ
ಸಾರಲಿ ಇಸ್ರಯೇಲಿನ ಜನತೆ I
‘ಆತನ ಪ್ರೀತಿ ಶಾಶ್ವತ’ ಎಂದೆ II
ಸಾರಲಿ ಆರೋನನ ವಂಶಲತೆ:
I
‘ಆತನ ಪ್ರೀತಿ ಶಾಶ್ವತ’ ಎಂದೆ II
ಸಾರಲಿ ಆತನ ಭಕ್ತರ ಪಂಥ I
ಆತನ ಪ್ರೀತಿ ಶಾಶ್ವತ ಅಂಥ II
ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I
ಆದರೆ ಪ್ರಭು ನೆರವು ನೀಡಿದನು ಎನಗೆ II
ಪ್ರಭುವೇ ನನಗೆ ಬಲವು,
ಧೈರ್ಯವು I
ಆತನಿಂದಲೇ ನನಗೆ ಉದ್ಧಾರವು II
ಜಯಘೋಷ,
ಹರ್ಷಸುನಾದ ಸಜ್ಜನರ ಬಿಡಾರದಿಂದ I
“ಪರಾಕ್ರಮ,
ಪ್ರದರ್ಶನ ಪ್ರಭುವಿನ ಬಲಗೈಯಿಂದ II
ಮನೆಕಟ್ಟುವವರು ಮೂಲೆಗೆಸೆದ ಕಲ್ಲು I
ಆಯಿತು ನೋಡು,
ಮುಖ್ಯವಾದ ಮೂಲೆಗಲ್ಲು II
ಪ್ರಭುವಿನಿಂದಲೆ ಆದ ಈ ಕಾರ್ಯ I
ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ!
II
ಪ್ರಭುವೇ ನಿಯೋಜಿಸಿದ ದಿನವಿದು I
ಹರ್ಷಿಸಿ ಆನಂದಿಸೋಣ ಇಂದು II
ಎರಡನೇ ವಾಚನ: 1 ಪೇತ್ರ 1:3-9
ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ! ಯೇಸುಕ್ರಿಸ್ತರನ್ನು ಮರಣದಿಂದ ಪುನರುತ್ಥಾನಗೊಳಿಸುವುದರ ಮೂಲಕ ದೇವರು ತಮ್ಮ ಅಪಾರ ಕರುಣೆಯಿಂದ ನಮಗೆ ಹೊಸ ಜನ್ಮವನ್ನು ಮತ್ತು ಜೀವಂತ ನಿರೀಕ್ಷೆಯನ್ನು ನೀಡಿದ್ದಾರೆ. ಹೀಗೆ ಅವರು, ತಮ್ಮ ಸ್ವಂತ ಜನರಿಗಾಗಿ ಸ್ವರ್ಗದಲ್ಲಿ ಕಾದಿರಿಸಿರುವ ಅಳಿಯದ, ಅಕ್ಷಯವಾದ, ಅನಂತವಾದ ಸಿರಿಸಂಪತ್ತಿಗೆ ನಿಮ್ಮನ್ನು ಬಾಧ್ಯರನ್ನಾಗಿ ಮಾಡಿದ್ದಾರೆ. ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗಲಿರುವ ಜೀವೋದ್ಧಾರವು ವಿಶ್ವಾಸಿಗಳಾದ ನಿಮಗೆ ಲಭಿಸುವಂತೆ ದೇವರು ತಮ್ಮ ಶಕ್ತಿಯಿಂದ ನಿಮ್ಮನ್ನು ಕಾಪಾಡುತ್ತಾರೆ. ಸದ್ಯಕ್ಕೆ ನೀವು ಕೊಂಚಕಾಲ ಹಲವಿಧವಾದ ಪರಿಶೋಧನೆಗಳ ನಿಮಿತ್ತ ದುಃಖವನ್ನು ಅನುಭವಿಸಬೇಕಾಗಿದ್ದರೂ ಪ್ರತ್ಯಕ್ಷವಾಗಲಿರುವ ಆ ಸಿರಿಸಂಪತ್ತನ್ನು ಜ್ಞಾಪಿಸಿಕೊಂಡು ಹರ್ಷಚಿತ್ತರಾಗಿರಿ. ಪರಿಶೋಧನೆಗಳು ಬಂದೊದಗುವುದು ನಿಮ್ಮ ವಿಶ್ವಾಸವನ್ನು ಪುಟವಿಡುವುದಕ್ಕಾಗಿಯೇ. ನಶಿಸಿ ಹೋಗುವ ಬಂಗಾರವೂ ಕೂಡ ಬೆಂಕಿಯಿಂದ ಪರಿಶೋಧಿತವಾಗುತ್ತದೆ. ಬಂಗಾರಕ್ಕಿಂತಲೂ ಬಹು ಅಮೂಲ್ಯವಾದ ನಿಮ್ಮ ವಿಶ್ವಾಸವು ಶೋಧಿತವಾಗಬೇಕು. ಆಗ ಮಾತ್ರ ಯೇಸುಕ್ರಿಸ್ತರು ಪ್ರತ್ಯಕ್ಷವಾಗುವ ದಿನದಂದು ನಿಮಗೆ ಪ್ರಶಂಸೆ, ಪ್ರತಿಷ್ಠೆ ಹಾಗೂ ಪ್ರತಿಭೆ ದೊರಕುತ್ತವೆ. ಕ್ರಿಸ್ತಯೇಸುವನ್ನು ನೀವು ನೋಡದಿದ್ದರೂ ಅವರನ್ನು ಪ್ರೀತಿಸುತ್ತೀರಿ. ನೀವೀಗ ಕಣ್ಣಾರೆ ಕಾಣದಿದ್ದರೂ ಅವರನ್ನು ವಿಶ್ವಾಸಿಸುತ್ತೀರಿ. ಇದರ ಅಂತಿಮ ಫಲವಾಗಿ ಜೀವೋದ್ಧಾರವನ್ನು ಪಡೆಯುತ್ತೀರಿ. ಈ ಕಾರಣದಿಂದ ಅವರ್ಣನೀಯವಾದ ಮಹದಾನಂದದಿಂದ ನಲಿಯುತ್ತೀರಿ.
ಶುಭಸಂದೇಶ: ಯೊವಾನ್ನ 20:19-31
ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು. ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು; ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸುಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು, ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು. ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು. ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು; ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು. ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು. ಯೇಸು ಅವನಿಗೆ “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು. ಯೇಸು ತಮ್ಮ ಶಿಷ್ಯರ ಕಣ್ಮುಂದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನು ಈ ಪುಸ್ತಕದಲ್ಲಿ ಬರೆದಿಲ್ಲ. ಇಲ್ಲಿ ಬರೆದವುಗಳ ಉದ್ದೇಶ ಇಷ್ಟೇ: ಯೇಸು, ದೇವರಪುತ್ರ ಹಾಗು ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜ್ಜೀವವನ್ನು ಪಡೆಯಬೇಕು.
No comments:
Post a Comment