ಮೊದಲನೇ ವಾಚನ: ಯೆಶಾಯ 42:1-7

ಕೀರ್ತನೆ: 27:1, 2, 3, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ
ನನಗೆ ಬೆಳಕು ನನಗೆ ರಕ್ಷೆ ಪ್ರಭುವೆ |
ನಾನಾರಿಗೂ ಅಳುಕೆನು ||
ನನ್ನ ಬಾಳಿಗಾಧಾರ ಪ್ರಭುವೆ |
ನಾನಾರಿಗೂ ಅಂಜೆನು ||
ಕೇಡು ಮಾಡಬಂದರೆನಗೆ ಕೊಲೆಕಡುಕರು |
ಎಡವಿಬಿದ್ದರು, ತಾವೇ ಅಳಿದುಹೋದರು ||
ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು |
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು ||
ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು |
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು ||
ಪ್ರಭುವನು ಎದುರುನೋಡುತ್ತಿರು ಮನವೇ
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ ||
ಶುಭಸಂದೇಶ: ಯೊವಾನ್ನ 12:1-11
ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ. ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, “ಈ ಸುಗಂಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?” ಎಂದನು. ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,” ಎಂದರು. ಲಾಸರನ ಕೊಲೆಗೆ ಹಂಚಿಕೆ ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು. ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು. ಜೆರುಸಲೇಮಿಗೆ ರಾಜಪ್ರವೇಶ ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.
ಮನಸ್ಸಿಗೊಂದಿಷ್ಟು : ಸುಮಾರು 300 ದಿನಗಳ ಅಥವಾ ೯ ತಿಂಗಳ ದಿನಗೂಲಿಯಷ್ಟು ಭಾರಿ ಬೆಲೆಯ ಸುಗಂಧ ದ್ರವ್ಯವನ್ನು ಮರಿಯಳು ಯೇಸುವಿಗಾಗಿ ವ್ಯಯಿಸುತ್ತಾಳೆ. ಯಹೂದ್ಯ ಸಂಪ್ರದಾಯದಲ್ಲಿ ಒಬ್ಬ ಮಹಿಳೆ ಕೂದಲನ್ನು ಕಟ್ಟದೆ ಬಿಡಬಾರದು ಎಂಬುದನ್ನೂ ಲೆಕ್ಕಿಸದೆ ತನ್ನ ಕೂದಲಿನಿಂದ ಯೇಸುವಿನ ಪಾದವನ್ನು ಒರೆಸಿ ಯೇಸುವಿಗಿಂತ ಶ್ರೇಷ್ಠವಾದುದು ಮತ್ತೇನಿಲ್ಲ ಎಂಬ ಸಂದೇಶವನ್ನು ಲೋಕಕ್ಕೆ ನೀಡುತ್ತಾಳೆ. ಈ ಲೋಕದ ಸರ್ವವೂ ಅದೆಷ್ಟೇ ಮೌಲ್ಯದ್ದಾಗಿದ್ದರೂ, ಸಂಪ್ರದಾಯದ ಹಿನ್ನಲೆಯದ್ದಾಗಿದ್ದರೂ ಯೇಸುವಿನ ಮುಂದೆ ಗೌಣ್ಯವಾಗಬೇಕು ಎಂಬ ಸಂದೇಶ ನಮ್ಮ ಹೃದಯದಲ್ಲಿ ಆ ಸುಗಂಧ ದ್ರವ್ಯದ ಪರಿಮಳದಂತೆ ಹರಡಿ, ವ್ಯಾಪಿಸಿ ಉಳಿದುಕೊಳ್ಳಲಿ.
ಪ್ರಶ್ನೆ : ಯೇಸುವಿಗೆ ನಮ್ಮ ಜೀವನದಲ್ಲಿ ನಾವು ಕೊಟ್ಟಿರುವ ಮೌಲ್ಯವೆಷ್ಟು?
No comments:
Post a Comment