ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:13-21
ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು. ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು. ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು: ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು. ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು. ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು. ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.
ಕೀರ್ತನೆ: 118:1, 14-15, 16-18, 19-21
ಶ್ಲೋಕ: ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ
ಪ್ರಭುವೇ ನನಗೆ ಬಲವು,
ಧೈರ್ಯವು I
ಆತನಿಂದಲೇ ನನಗೆ ಉದ್ಧಾರವು II
ಜಯಘೋಷ,
ಹರ್ಷಸುನಾದ ಸಜ್ಜನರ ಬಿಡಾರದಿಂದ I
“ಪರಾಕ್ರಮ,
ಪ್ರದರ್ಶನ ಪ್ರಭುವಿನ ಬಲಗೈಯಿಂದ II
ವಿಜಯಸಾಧನ ಪ್ರಭುವಿನಾ ಬಲಗೈಯಿಂದ I
ಪರಾಕ್ರಮ,
ಪ್ರದರ್ಶನವೂ ಅದರಿಂದ” II
ಸಾಯೆನು,
ಜೀವದಿಂದಿರುವೆನು ನಾನು I
ಪ್ರಭುವಿನ ಕಾರ್ಯಗಳನು ಸಾರುವೆನು II
ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I
ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ I
ತೆರೆಯಿರಿ ಎನಗೆ ನೀತಿದ್ವಾರಗಳನು I
ಒಳನುಗ್ಗಿ ಹೊಗಳುವೆನು ಪ್ರಭುವನು II
ಇದುವೇ ದ್ವಾರ ಪ್ರಭುವಿನ ಮಂದಿರಕೆ I
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II
ಸದುತ್ತರ ಪಾಲಿಸಿದ ಪ್ರಭೂ,
ನಿನಗೆ ವಂದನೆ I
ಉದ್ಧಾರ ಮಾಡಿದೆ,
ನಿನಗೆ ಕೃತಜ್ಞತಾವಂದನೆ II
ಶುಭಸಂದೇಶ: ಮಾರ್ಕ 16:9-15
ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ. ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು. ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ. ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟ ಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು. ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ", ಎಂದರು.
No comments:
Post a Comment