ಮೊದಲನೇ ವಾಚನ: ಯೆಶಾಯ 11:1-10
ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು. ನೆಲಸುವುದಾತನ ಮೇಲೆ ಜ್ಞಾನವಿವೇಕದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ ಸರ್ವೇಶ್ವರನ ಭಯಭಕ್ತಿ ಆತನಿಗೆ ಪರಿಮಳದಂತೆ ತೀರ್ಪಿಡನಾತ ಕಣ್ಣಿಗೆ ತೋಚಿದಂತೆ, ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯ ನೀತಿಯಿಂದ; ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ; ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ; ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸದ್ಧರ್ಮವೇ. ಆತನಿಗೆ ನಡುಕಟ್ಟು, ಪ್ರಾಮಾಣಿಕತೆಯೇ ಸೊಂಟ-ಪಟ್ಟಿ. ಬಾಳುವುವು ತೋಳ ಕುರಿಮರಿಗಳು ಒಂದಿಗೆ, ಮಲಗುವುವು ಮೇಕೆ ಚಿರತೆಗಳು ಜೊತೆಗೆ; ಮೊಲೆಯುಣ್ಣುವುವು ಕರು ಕೇಸರಿಗಳು ಒಟ್ಟಿಗೆ, ನಡೆಸುವುದವುಗಳನು ಚಿಕ್ಕ ಮಗು ಮೇಯಿಸುವುದಕೆ ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ, ಮಲಗುವುವು ಅವುಗಳ ಮರಿಗಳು ಜೊತೆಗೆ; ಎತ್ತಿನ ಹುಲ್ಲು ಮೇವಾಗುವುದು ಸಿಂಹಕ್ಕೆ. ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ, ಕೈ ಹಾಕುವುದು ಮೊಲೆ ಬಿಟ್ಟ ಮಗು ಹಾವಿನ ಬಿಲದ ಒಳಗೆ, ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ ಧರೆಯ ಮೇಲೆ. ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವ ಜನಾಂಗಗಳಿಗೆ ಧ್ಯಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.
ಕೀರ್ತನೆ:1-2, 7-8, 12-13, 17
ಶ್ಲೋಕ: ಬೆಳೆಯಲಿ ಆತನ ಪಾಲನೆಯಲಿ ನ್ಯಾಯ ನೀತಿ ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ
1. ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ |
ಕಲಿಸು ನಿನ್ನ ನೀತಿಯನು ರಾಜಕುವರನಿಗೆ ||
ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ |
ಪರಿಪಾಲಿಸಲಿ ದೀನ ದಲಿತರನು ನ್ಯಾಯದಿಂದ ||
2. ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ |
ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ ||
ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ |
ಮಹಾನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ ||
3. ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು |
ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು ||
ದೀನದರಿದ್ರರಿಗೆ ದಯೆಯ ತೋರುವನು |
ದಲಿತರ ಪ್ರಾಣವನು ಕಾಪಾಡುವನು ||
4. ಶಾಶ್ವತವಾಗಲಿ ಶ್ರೀನಾಮ ಆತನಿಗೆ |
ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ ||
ಆತನಾಶೀರ್ವಾದ ಕೋರಲಿ ಸರ್ವರು ತಮಗೆ |
ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ ||
ಎರಡನೇ ವಾಚನ: ರೋಮನರಿಗೆ 15:4-9
ಸಹೋದರರೇ, ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವುದೆಲ್ಲವೂ ನಮ್ಮ ಉಪದೇಶಕ್ಕಾಗಿಯೇ ಬರೆಯಲಾಗಿದೆ. ಪವಿತ್ರ ಗ್ರಂಥ ಪಠಣದಿಂದ ದೊರಕುವ ಸ್ಥೈರಣೆ ಮತ್ತು ಉತ್ತೇಜನದಿಂದಾಗಿ ನಾವು ನಿರೀಕ್ಷೆಯುಳ್ಳವರಾಗಬೇಕೆಂದೇ ಇವೆಲ್ಲಾ ಬರೆಯಲಾಗಿದೆ. ಆ ಸ್ಥೈರಣೆ ಮತ್ತು ಉತ್ತೇಜನದ ಮೂಲವಾಗಿರುವ ದೇವರು, ನೀವೆಲ್ಲರು ಕ್ರಿಸ್ತ ಯೇಸುವನ್ನು ಅನುಸರಿಸುತ್ತಾ ಒಮ್ಮನಸ್ಸಿನಿಂದ ಬಾಳುವಂತೆ ಮಾಡಲಿ. ಹೀಗೆ ಒಮ್ಮನಸ್ಸಿನಿಂದಲೂ ಒಕ್ಕೊರಲಿನಿಂದಲೂ ನಮ್ಮ ಪ್ರಭು ಯೇಸುಕ್ರಿಸ್ತರತಂದೆಯಾದ ದೇವರನ್ನು ಕೊಂಡಾಡುವಂತಾಗಲಿ. ಕ್ರಿಸ್ತ ಯೇಸು ನಿಮ್ಮನ್ನು ಅಂಗೀಕರಿಸಿದಂತೆ ದೇವರ ಮಹಿಮೆಗಾಗಿ ನೀವು ಸಹ ಒಬ್ಬರನ್ನು ಒಬ್ಬರು ಅಂಗೀಕರಿಸಿರಿ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುವಂತೆ ಮತ್ತು ದೇವರು ತೋರಿದ ಕರುಣೆಗಾಗಿ ಅವರನ್ನು ಯೆಹೂದ್ಯರಲ್ಲದವರು ಸಹ ಸ್ತುತಿಸಲು ಸಾಧ್ಯವಾಗುವಂತೆ ಕ್ರಿಸ್ತ ಯೇಸು ಯೇಹೂದ್ಯರಿಗೆ ಅಧೀನರಾದರು. ಇದಕ್ಕೆ ಸಾದೃಶ್ಯವಾಗಿ ಪವಿತ್ರ ಗ್ರಂಥದಲ್ಲಿ ಹೀಗೆಂದು ಹೇಳಲಾಗಿದೆ: "ಈ ಕಾರಣದಿಂದ ನಾನು ಯೆಹೂದ್ಯರಲ್ಲದವರ ನಡುವೆ ನಿಮ್ಮನ್ನು ಕೊಂಡಾಡುವೆನು, ನಿಮ್ಮ ನಾಮವನ್ನು ಸಂಕೀರ್ತಿಸುವೆನು."
ಶುಭಸಂದೇಶ: ಮತ್ತಾಯ 3:1-12

Price the lord
ReplyDelete