ಮೊದಲನೇ ವಾಚನ: ಯೆಶಾಯ 40:1-11
ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ: ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕ್ಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ" ಇಗೋ, ಈ ವಾಣಿಯನ್ನು. ಕೇಳಿ: "ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧ ಮಾಡಿ ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗ ಮಾಡಿ ಅಡವಿಯಲ್ಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನ್ನು. ನೆಲಸಮ ಮಾಡಬೇಕು ದಿಬ್ಬ ದಿಣ್ಣೆಗಳನ್ನು. ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನ್ನು. ಗೋಚರವಾಗುವುದಾಗ ಸರ್ವೇಶ್ವರಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ." ಆ ವಾಣಿ ಮತ್ತೆ ಕೇಳಿಸಿತು: "ಗಟ್ಟಿಯಾಗಿ ಕೂಗು" ಎಂದಿತು. ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು: "ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ. ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು, ಒಣಗಿ ಹೋಗುವುದಾ ಹುಲ್ಲು, ಬಾಡಿ ಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು." ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು "ಇಗೋ, ನಿಮ್ಮ ದೇವರು" ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.
ಕೀರ್ತನೆ: 96:1-2, 3, 10, 11-12, 13
ಶ್ಲೋಕ: ಇಗೋ, ಸರ್ವೇಶ್ವರಸ್ವಾಮಿ ಬರುತಿಹನು ಶೂರನಂತೆ
ಶುಭಸಂದೇಶ: ಮತ್ತಾಯ 18:12-14
"ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ, ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ," ಎಂದರು ಯೇಸುಸ್ವಾಮಿ.
No comments:
Post a Comment