ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.12.2019 - ದೇವರೇ, ನೀವೇ ಬಂದು ನಮ್ಮನ್ನು ಕಾಪಾಡಿ!

ಮೊದಲನೇ ವಾಚನ: ಯೆಶಾಯ 35:1-6, 10

ಆನಂದಿಸಲಿ ಅರಣ್ಯವೂ ಮರುಭೂಮಿಯೂ, ಹೂಗಳಂತೆ ಅರಳಿ ಹರ್ಷಿಸಲಿ ಒಣ ನೆಲವು. ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು; ಹೌದು, ಸಂತಸ ಸಂಗೀತ ಹಾಡುವಷ್ಟು, ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು, ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು; ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು. ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ, ನಡುಗುವ ಕಾಲುಗಳನ್ನು ದೃಢಗೊಳಿಸಿರಿ. ಚಂಚಲ ಹೃದಯರಿಗೆ ಹೀಗೆಂದು ಹೇಳಿ: "ಭಯಪಡಬೇಡಿ, ಎದೆಗುಂದಬೇಡಿ, ಬರುವನು ಆ ದೇವನು ಮುಯ್ಯಿತೀರಿಸಲು, ಬರುವನು ಆ ದೇವನು ಪ್ರತಿಕಾರವೆಸಗಲು; ತಾನೇ ಬರುವನು ನಿಮ್ಮನ್ನು ರಕ್ಷಿಸಲು," ಕುರುಡರ ಕಣ್ಣು ಕಾಣುವುದಾಗ, ಕಿವುಡರ ಕಿವಿ ತೆರೆಯುವುದಾಗ, ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ. ಒರತೆಗಳು ಒಡೆಯುವುವು ಅರಣ್ಯದಲಿ, ನದಿಗಳು ಹುಟ್ಟಿ ಹರಿಯುವುವು ಒಣನೆಲದಲಿ. ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು, ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ,  ಸಿಗುವುದವರಿಗೆ ಹರ್ಷಾನಂದದ ಸವಿ, ತೊಲಗುವುದು ದುಃಖದುಗುಡದ ಕಹಿ.

ಕೀರ್ತನೆ: 146:6b-7, 8-9a, 9bc-10

ಶ್ಲೋಕ: ದೇವರೇ, ನೀವೇ ಬಂದು ನಮ್ಮನ್ನು ಕಾಪಾಡಿ!

1.  ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೇ |
    ದೊರಕಿಸುವನು ನ್ಯಾಯ ದಲಿತರಿಗೆ ||
    ಒದಗಿಸುವನು ಆಹಾರ ಹಸಿದವರಿಗೆ |
    ನೀಡುವನು ಬಿಡುಗಡೆ ಬಂಧಿತರಿಗೆ ||

2.  ಕಣ್ಣನ್ನೀಯುವನು ಪ್ರಭು ಕುರುಡರಿಗೆ |
    ಉದ್ದಾರಕನಾ ಪ್ರಭು ಕುಗ್ಗಿದವರಿಗೆ ||
    ರಕ್ಷಿಸುವನು ಪ್ರಭು ಪರದೇಶಿಗಳನು |
    ಆದರಿಸುವನು ಅನಾಥರನು, ವಿಧವೆಯರನು ||

3.  ಆತನ ಬಲವಿರುವುದು ಸಾಧು ಸಜ್ಜನರಿಗೆ |
    ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು ||
    ಪ್ರಭುವೇ ಅರಸನು ಸದಾ ಕಾಲಕು |
    ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು ||

ಎರಡನೇ ವಾಚನ: ಯಕೋಬ 5:7-10


ಸಹೋದರರೇ, ಪ್ರಭು ಪುನರಾಗಮಿಸುವವರೆಗೆ ತಾಳ್ಮೆಯಿಂದ ಇರಿ. ರೈತನನ್ನು ಗಮನಿಸಿರಿ ತನ್ನ ಹೊಲದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸುವ ಅವನು ಮುಂಗಾರು ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾದಿರುತ್ತಾನೆ.  ಹಾಗೆಯೇ, ನೀವೂ ಸಹ ತಾಳ್ಮೆಯಿಂದಿರಿ, ದೃಢಚಿತ್ತರಾಗಿರಿ. ಪ್ರಭುವಿನ ಪುನರಾಗಮನ ಸನ್ನಿಹಿತವಾಗಿದೆ. ಸಹೋದರರೇ, ದಂಡನಾತೀರ್ಪಿಗೆ ಗುರಿಯಾಗದಂತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಾಧೀಶನು ಬಾಗಿಲ ಬಳಿಯಲ್ಲೇ ನಿಂತಿದ್ದಾನೆ. ಸಹೋದರರೇ, ಸಂಕಷ್ಟಗಳನ್ನು ತಾಳ್ಮೆಯಿಂದ ಸಹಿಸಿದ್ದಕ್ಕೆ ನಿದರ್ಶನ ಬೇಕೇ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ.

ಶುಭಸಂದೇಶ: ಮತ್ತಾಯ 11:2-11

ಯೇಸುಸ್ವಾಮಿಯ ಕಾರ್ಯಕಲಾಪಗಳ ಸುದ್ದಿ, ಸೆರೆಯಲ್ಲಿದ್ದ ಸ್ನಾನಿಕ ಯೊವಾನ್ನನ ಕಿವಿಗೆ ಬಿದ್ದಿತು. ಆತನು ತನ್ನ ಶಿಷ್ಯರಲ್ಲಿ ಕೆಲವರನ್ನು ಅವರ ಬಳಿಗೆ ಕಳುಹಿಸಿದನು. ಇವರು ಬಂದು, "ಯೊವಾನ್ನನು ತಿಳಿಯಪಡಿಸಿದ ಪ್ರಕಾರ ಬರಬೇಕಾದವರು ನೀವೋ? ಅಥವಾ ಬೇರೊಬ್ಬನನ್ನು ನಾವು ಎದುರು ನೋಡಬೇಕೋ?" ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, "ನೀವು ಕೇಳುವುದನ್ನೂ ಕಾಣುವುದನ್ನೂ ಯೊವಾನ್ನನಿಗೆ ಹೋಗಿ  ತಿಳಿಸಿರಿ. ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಟರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು!" ಎಂದು ಹೇಳಿ ಕಳುಹಿಸಿದರು. ಬಂದಿದ್ದ ಶಿಷ್ಯರು ಹೊರಟುಹೋದಾಗ, ಯೇಸುಸ್ವಾಮಿ ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಮಾತನಾಡಿದರು: "ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೆ? ಇಲ್ಲವಾದರೆ, ಏಕೆ ಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿದ್ದ ವ್ಯಕ್ತಿಯನ್ನು ನೋಡಲು ಹೋದಿರೇನು?  ಅಂತಹ ಉಡುಗೆ ತೊಡುಗೆ ಧರಿಸುವವರು ಅರಮನೆಗಳಲ್ಲಿ ಇರುತ್ತಾರಷ್ಟೆ. ಹಾಗಾದರೆ ಯಾವ ಉದ್ದೇಶದಿಂದ ಹೋದಿರಿ? ಪ್ರವಾದಿಯನ್ನು ನೋಡಲೆಂದೋ? ಹೌದು ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ ಎಂಬುದು ನಿಜ. "ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು" ಎಂದು ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಿರುವುದು ಈ ಯೊವಾನ್ನನನ್ನು ಕುರಿತೇ. ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗ ಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ.

No comments:

Post a Comment