ಮೊದಲನೇ ವಾಚನ: ಸಿರಾಖ 3:2-6, 12-14
ಸರ್ವೇಶ್ವರ ಮಕ್ಕಳಿಗಿಂತ ಮಿಗಿಲಾಗಿ ತಂದೆಗೆ ಗೌರವ ನೀಡಿದ್ದಾರೆ; ಗಂಡುಮಕ್ಕಳ ಮೇಲೆ ತಾಯಿಗೆ ಅಧಿಕಾರವನ್ನು ಅನುಗ್ರಹಿಸಿದ್ದಾರೆ. ತಂದೆಯನ್ನು ಸನ್ಮಾನಿಸುವವನು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿದವನಂತೆ; ತಾಯಿಯನ್ನು ಗೌರವಿಸುವವನು, ನಿಧಿ ಶೇಖರಿಸಿಟ್ಟುಕೊಂಡವನಂತೆ. ತಂದೆಯನ್ನು ಗೌರವಿಸುವವನಿಗೆ ತನ್ನ ಸ್ವಂತ ಮಕ್ಕಳಿಂದ ಆಗುವುದು ಸಂತೋಷ; ಅವನು ಪ್ರಾರ್ಥನೆ ಮಾಡುವಾಗಲೆಲ್ಲ ದೊರಕುವುದವನಿಗೆ ಪ್ರತ್ಯುತ್ತರ. ತಂದೆಯನ್ನು ಗೌರವಿಸುವವನು ಬದುಕುವನು ಬಹುಕಾಲ, ಸರ್ವೇಶ್ವರನಿಗೆ ವಿಧೇಯನಾಗಿರುವವನು ತಾಯಿಗೆ ಬರಮಾಡುವನು ಸಮಾಧಾನ. ಮಗನೇ, ನಿನ್ನ ಮುಪ್ಪಿನ ತಂದೆಗೆ ಸಹಾಯಕನಾಗಿರು, ಅವನು ಬದುಕಿರುವವರೆಗೆ ಅವನ ಮನಸ್ಸನ್ನು ನೋಯಿಸದಿರು. ತಾಳ್ಮೆಯಿಂದಿರು ಅವನ ಬುದ್ಧಿ ಮಂಕಾದಾಗ, ಅವನನ್ನು ಹೀನೈಸಬೇಡ ನೀನು ಬಲವಂತನಾಗಿರುವಾಗ, ತಂದೆಗೆ ಮಾಡಿದ ಉಪಶಮನ ಅಳಿದು ಹೋಗದು; ಬದಲಿಗೆ, ನಿನ್ನ ಪಾಪಕ್ಕೆ ಪ್ರಾಯಶ್ಚಿತವಾಗಿ ಪರಿಣಮಿಸುವುದು.
ಕೀರ್ತನೆ: 128: 1-2, 3, 4-5
ಶ್ಲೋಕ: ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು,
ಆತನ ಮಾರ್ಗಗಳಲೇ ನಡೆಯುವವನು
ಧನ್ಯನು, ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು
ಧನ್ಯನು, ಆತನ ಮಾರ್ಗದಲ್ಲೇ ನಡೆಯುವವನು
ನಿನ್ನ ಕೈ ಕೆಸರಾದರೆ ಬಾಯಿ ಮೊಸರಾಗುವುದು
ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು
ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ
ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲ್ಲಿ ಓಲಿವ್ ಸಸಿಗಳಂತೆ
ಹೊಂದುವನು ಅಂತಹ ಆಶೀರ್ವಾದವನ್ನು
ಪ್ರಭುವಿನಲ್ಲಿ ಭಯ ಭಕ್ತಿಯುಳ್ಳವನು
ಸಿಯೋನಿನಲ್ಲಿರುವ ಪ್ರಭು ನಿನ್ನನ್ನು ಆಶೀರ್ವದಿಸಲಿ
ಜೆರುಸಲೇಮಿನ ಏಳ್ಗೆಯನ್ನು ಕಾಣು ಇಡೀ ಜೀವಮಾನದಲ್ಲಿ
ಎರಡನೇ ವಾಚನ: ಕೊಲೊಸ್ಸೆಯರಿಗೆ 3:12-21
ನೀವು ದೇವರಿಂದ ಆಯ್ಕೆಯಾದವರು. ದೇವರಿಗೆ ಪ್ರಿಯವಾದವರು. ದೇವರ ಸ್ವಂತ ಜನರು. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳೇ ನಿಮ್ಮ ಆಭರಣಗಳಾಗಿರಲಿ, ಒಬ್ಬರನ್ನೊಬ್ಬರು ಸೈರಿಸಿಕೊಳ್ಳಿ. ಒಬ್ಬನ ಮೇಲೆ ತಪ್ಪು ಹೊರಿಸಲು ಕಾರಣವಿದ್ದರೂ ಕ್ಷಮಿಸಿಬಿಡಿ. ಪ್ರಭು ಯೇಸು ನಿಮ್ಮನ್ನು ಕ್ಷಮಿಸಿದಂತೆ ನೀವೂ ಇತರರನ್ನು ಕ್ಷಮಿಸಿರಿ. ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯೇ ಸಮಸ್ತವನ್ನು ಸಂಪೂರ್ಣಗೊಳಿಸುವ ಬಂಧನ. ನಿಮ್ಮ ಹೃನ್ಮನಗಳು ಕ್ರಿಸ್ತಯೇಸುವಿನ ಶಾಂತಿ ಸಮಾಧಾನದಿಂದ ತುಂಬಿರಲಿ. ನೀವು ಒಂದೇ ಶರೀರವಾಗಿ ಬಾಳಲು ಕರೆಯಲ್ಪಟ್ಟಿದ್ದೀರಿ; ಕೃತಜ್ಞತೆ ಉಳ್ಳವರಾಗಿ ಜೀವಿಸಿರಿ. ಕ್ರಿಸ್ತಯೇಸುವಿನ ವಾಕ್ಯ ನಿಮ್ಮಲ್ಲಿ ನೆಲೆಸಿ ಸಮೃದ್ಧಿಯಾಗಿ. ಬೆಳೆಯಲಿ. ಜ್ಞಾನಸಂಪನ್ನರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿರಿ ಹಾಗೂ ಬುದ್ಧಿಹೇಳಿಕೊಳ್ಳಿರಿ. ಕೃತಜ್ಞತೆಯುಳ್ಳವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಭಕ್ತಿಗೀತೆಗಳಿಂದಲೂ ಹೃದಯಾಂತರಾಳದಿಂದ ದೇವರಿಗೆ ಹಾಡಿರಿ. ನುಡಿಯಲ್ಲಾಗಲೀ ನಡೆಯಲ್ಲಾಗಲೀ ನೀವು ಏನು ಮಾಡಿದರೂ ಯೇಸುಸ್ವಾಮಿಯ ಹೆಸರಿನಲ್ಲಿಯೇ ಮಾಡಿರಿ. ಅವರ ಮುಖಾಂತರವೇ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ಮಹಿಳೆಯರೇ, ನಿಮ್ಮ ನಿಮ್ಮ ಪತಿಯರಿಗೆ ಪ್ರಭು ಮೆಚ್ಚುವಂತೆ ತಗ್ಗಿ ನಡೆದುಕೊಳ್ಳಿರಿ. ಪುರುಷರೇ, ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಅವರೊಡನೆ ಕಠಿಣವಾಗಿ ವರ್ತಿಸದಿರಿ. ಮಕ್ಕಳೇ, ಎಲ್ಲದರಲ್ಲೂ ನಿಮ್ಮ ತಂದೆತಾಯಿಗಳ ಮಾತು ಕೇಳಿರಿ. ಹೀಗೆ ಮಾಡಿದರೆ ಪ್ರಭುವಿಗೆ ಮೆಚ್ಚುಗೆಯಾಗುತ್ತದೆ. ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆರಳಿಸಿ ಮನಕುಗ್ಗಿಸದಿರಿ.
ಶುಭಸಂದೇಶ: ಮತ್ತಾಯ 2:13-15, 19-23
ಜ್ಯೋತಿಷಿಗಳು ಹೊರಟು ಹೋದ ಮೇಲೆ ದೇವ ದೂತನು ಜೋಸೆಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, "ಏಳು, ಹೆರೋದನು ಮಗುವನ್ನು ಕೊಂದುಹಾಕಲು ಹವಣಿಸುತ್ತಿದ್ದಾನೆ. ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟ್ ದೇಶಕ್ಕೆ ಓಡಿಹೋಗು. ನಾನು ಪನಃ ಹೇಳುವ ತನಕ ಅಲ್ಲೇ ಇರು." ಎಂದನು. ಅದರಂತೆ ಜೋಸೆಫನು ಕೂಡಲೇ ಎದ್ದು ಮಗುವನ್ನೂ ತಾಯಿಯನ್ನೂ ರಾತ್ರೋರಾತ್ರಿಯಲ್ಲೇ ಕರೆದುಕೊಂಡು ಈಜಿಪ್ಟಿಗೆ ತೆರಳಿದನು. ಹೆರೋದನು ಸಾಯುವ ತನಕ ಅಲ್ಲೇ ಇದ್ದನು. ಹೆರೋದನು ಸತ್ತುಹೋದನಂತರ ಈಜಿಪ್ಟಿನಲ್ಲಿದ್ದ ಜೋಸೆಫನಿಗೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು ಇಸ್ರಯೇಲ್ ದೇಶಕ್ಕೆ ಹಿಂದಿರುಗು; ಮಗುವನ್ನು ಕೊಲ್ಲಬೇಕೆಂದಿದ್ದವರು ಸತ್ತುಹೋದರು," ಎಂದು ತಿಳಿಸಿದನು. ಜೋಸೆಫನು ಎದ್ದು ತಾಯಿಯನ್ನೂ ಮಗುವನ್ನೂ ಕರೆದುಕೊಂಡು ಇಸ್ರಯೇಲ್ ದೇಶಕ್ಕೆ ಬಂದನು. ಆದರೆ ಹೆರೋದನ ಮಗ ಆರ್ಖೆಲಾಯನು ತಂದೆಯ ಬದಲಿಗೆ ಜುದೇಯ ಪ್ರಾಂತ್ಯವನ್ನು ಆಳುತ್ತಿದ್ದಾನೆಂದು ಕೇಳಿ ಜೋಸೆಫನು ಅಲ್ಲಿಗೆ ಹೋಗಲು ಅಂಜಿದನು. ಕನಸಿನಲ್ಲಿ ತಾನು ಪಡೆದ ಆದೇಶದ ಪ್ರಕಾರ ಗಲಿಲೇಯ ಪ್ರಾಂತ್ಯಕ್ಕೆ ತೆರಳಿದನು. ಅಲ್ಲಿರುವ ನಜರೇತ್ ಊರನ್ನು ಸೇರಿ ವಾಸಮಾಡಿದನು. ಹೀಗೆ, "ಆತನನ್ನು ನಜರೇತಿನವನೆಂದು ಕರೆಯುವರು" ಎಂಬ ಪ್ರವಚನ ನೆರವೇರಿತು.
No comments:
Post a Comment