ಮೊದಲನೇ ವಾಚನ: ಯೆಶಾಯ 7:10-14
ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:, "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೋ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು" ಎಂದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ" ಎಂದನು. ಆಗ ಯೆಶಾಯನು: "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.
ಕೀರ್ತನೆ: 24:1-2, 3-4, 5-6
ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾದಿರಾಜನು ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು
ಎರಡನೇ ವಾಚನ: ರೋಮನರಿಗೆ 1:1-7
ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್ ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತಯೇಸುವಿನ ದಾಸನೂ ಪ್ರೇಷಿತನಾಗಲು ಕರೆ ಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೆಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು. ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನಹೊಂದಿ ಇದನ್ನು ಖಚಿತಪಡಿಸಿದವರು. ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆಹೊಂದಿರುವ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ.
ಶುಭಸಂದೇಶ: ಮತ್ತಾಯ 1:18-24
ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮುಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭ ಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು "ಯೇಸು" ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವನು ಆತನೇ,", ಎಂದನು. "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು, "ಇಮ್ಮಾನುವೇಲ್" ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು. "ಇಮ್ಮಾನುವೇಲ್" ಎಂದರೆ "ದೇವರು ನಮ್ಮೊಡನೆ ಇದ್ದಾರೆ" ಎಂದು ಅರ್ಥ. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.
No comments:
Post a Comment