ಮೊದಲನೇ ವಾಚನ: ಯೆಶಾಯ 11:1-10
ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು. ನೆಲಸುವುದಾತನ ಮೇಲೆ ಜ್ಞಾನ ವಿವೇಕದಾಯಕ ಆತ್ಮ: ಶಕ್ಕಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಆಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ ಸರ್ವೇಶ್ವರನ ಭಯಭಕ್ತಿ ಆತನಿಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ; ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡ ಬಗ್ಗರಿಗೆ ತೀರ್ಪಿಡುವನು ನ್ಯಾಯ ನೀತಿಯಿಂದ; ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ; ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ; ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ. ಬಾಳುವುವು ತೋಳ ಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ; ಮೊಲೆಯುಣ್ಣುವುವು ಕರು ಕೇಸರಿಗಳು ಒಟ್ಟಿಗೆ, ನಡೆಸುವುದವುಗಳನು ಚಿಕ್ಕ ಮಗು ಮೇಯಿಸುವುದಕ್ಕೆ. ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ, ಮಲಗುವುವು ಅವುಗಳ ಮರಿಗಳು ಜೊತೆಗೆ; ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ. ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ, ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನ ಬಿಲದ ಒಳಗೆ, ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ, ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ ಧರೆಯಮೇಲೆ. ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.
ಕೀರ್ತನೆ: 72:1-2, 7-8, 12-13, 17
ಶ್ಲೋಕ: ಬೆಳೆಯಲಿ ಆತನ ಪಾಲನೆಯಲಿ ನ್ನಾಯನೀತಿ, ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ
ಶುಭಸಂದೇಶ: ಲೂಕ 10:21-24
ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, "ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು," ಎಂದು ಹೇಳಿದರು. ಆನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, "ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ," ಎಂದರು.
No comments:
Post a Comment