ಸಂತ ಲೂಕ ಬರೆದ ಶುಭ ಸಂದೇಶದಿಂದ ವಾಚನ - 3:15-16, 21-22
ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು.
"ಈ ಯೊವಾನ್ನನೇ ಎಲ್ಲರು ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಢಾರಕ ಆಗಿರಬಹುದೇ?" ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. ಅದಕ್ಕೆ ಉತ್ತರವಾಗಿ ಯೊವಾನ್ನನು" ನಾನು ನಿಮಗೆ ನೀರಿನಿಂದ ಸ್ನಾನ ದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದ ರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ. ಅವರು ನಿಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು." ಎಂದು ನುಡಿದರು.
ಜನರೆಲ್ಲರು ಸ್ನಾನದೀಕ್ಷೆ ಪಡೆದು ಪ್ರಾರ್ಥಿಸುತ್ತಿರಲು,ಆಕಾಶವು ತೆರೆಯಿತು.ಆಗ ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು.ಅಲ್ಲದೆ,"ನೀನೇ ನನ್ನ ಪುತ್ರ, ನನಗೆ ಪರಮ ಪ್ರಿಯನು; ನನ್ನ ಮೆಚ್ಚುಗೆಗೆ ಪಾತ್ರನು," ಎಂಬ ದೈವ ವಾಣಿ ಕೇಳಿಸಿತು.
ಚಿಂತನೆ :
ಇಂದು ಧರ್ಮಸಭೆ ಪ್ರಭು ಯೇಸುವಿನ ದೀಕ್ಷಾಸ್ನಾನದ ಮಹೋತ್ಸವವನ್ನು ಆಚರಿಸುತ್ತದೆ. ಇಂದಿನ ಮೊದಲನೇ ವಾಚನದಲ್ಲಿ ಯೆಶಾಯ ಪ್ರವಾದಿಯು ದೇವರಿಗೆ ಅಭಿಮುಖರಾಗಿರಿ, ಆತನಿಗಾಗಿ ಹಾದಿಯನ್ನು ಸಿದ್ದಪಡಿಸಿಕೊಳ್ಳಿ, ಮತ್ತು ತೀತನಿಗೆ ಬರೆದ ಪತ್ರದಲ್ಲಿ, ದೇವರು ತೋರಿದ ಪ್ರೀತಿ ಮತ್ತು ಕರುಣೆಯಿಂದಾಗಿ ನಾವೆಲ್ಲರೂ ರಕ್ಷಣೆ ಪಡೆದಿದ್ದೇವೆ ಎಂಬ ಸಂದೇಶವನ್ನು ನೀಡುತ್ತಿವೆ. ಲೂಕನ ಶುಭಸಂದೇಶದಿಂದ ಆಲಿಸಿದ ಇಂದಿನ ಮೂರನೇ ವಾಚನವು ನಮ್ಮ ಗಮನವನ್ನು ಪ್ರಭು ಯೇಸುವಿನ ದೀಕ್ಷಾಸ್ನಾನದ ಕಡೆಗೆ ಹರಿಸುತ್ತಿದೆ. ಪಾಪರಹಿತ ಯೇಸುವಿಗೆ ಸ್ನಾನಿಕ ಯೊವಾನ್ನನು ನೀಡುವ ದೀಕ್ಷಾಸ್ನಾನದ ಅವಶ್ಯಕತೆ ಇದೆಯೇ? ಯೇಸು ಪಡೆಯುವ ದೀಕ್ಷಾಸ್ನಾನವು ಒಂದು ವಿಧಿಯಾಚರಣೆಗಾಗಿ ಅಲ್ಲ, ಪಾಪಗಳ ಕ್ಷಮೆಗಾಗಿಯೂ ಅಲ್ಲ. ಯೇಸು ಸ್ನಾನದೀಕ್ಷೆ ಪಡೆದುದುದರ ಮೂಲ ಉದ್ದೇಶವೇ ಬೇರೆಯಾಗಿತ್ತು. ಜೆರುಸಲೇಮಿನ ಪ್ರಾರ್ಥನಾ ಮಂದಿರದಲ್ಲಿ ಯೆಶಾಯ ಪ್ರವಾದಿಯ ಗ್ರಂಥದಿಂದ ಅವರು ಓದಿದ ವಾಚನದಲ್ಲಿ ಅವರು ಭುವಿಗಿಳಿದು ಬಂದುದರ ಮೂಲ ಉದ್ದೇಶವು ಸ್ಪಷ್ಟವಾಗಿ ವ್ಯಕ್ತವಾಗಿದೆ.“ದೇವರಾತ್ಮವು ನನ್ನಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂದರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ದಬ್ಬಾಳಿಕೆಗೀಡಾದವರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.” (ಲೂಕ 4:18-19). ಯೇಸು ಸಾಮಾನ್ಯ ಜನರೊಂದಿಗೆ ಜೋರ್ದಾನ್ ನದಿಯಲ್ಲಿ ದೀಕ್ಷಾಸ್ನಾನವನ್ನು ಸ್ವೀಕರಿಸಿ ಬಡವರೊಡನೆ, ದೀನದಲಿರೊಡನೆ, ದಿಕ್ಕಿಲ್ಲದವರೊಡನೆ ಗುರುತಿಸಿಕೊಂಡು, ತಾನು ಧರೆಗಿಳಿದು ಬಂದ ಉದ್ದೇಶವನ್ನು ಸ್ಪಷ್ಟವಾಗಿ ನಮಗೆ ಮನದಟ್ಟು ಮಾಡುತ್ತಿದ್ದಾರೆ.
No comments:
Post a Comment