ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 2: 1-11
ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು.
ಮಾರನೆಯ ದಿನ ಗಲಿಲೇಯದ ಕಾನ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುಸ್ವಾಮಿಯ ತಾಯಿ ಅಲ್ಲಿಗೆ ಬಂದಿದ್ದರು. ಯೇಸುವಿಗೂ ಅವರ ಶಿಷ್ಯರಿಗೂ ಆ ಮದುವೆ ಆಮಂತ್ರಣವಿತ್ತು. ಆ ಸಂದರ್ಭದಲ್ಲಿ ದ್ರಾಕ್ಷಾರಸ ಸಾಲದೆ ಹೋಯಿತು. ಆಗ ಯೇಸುವಿನ ತಾಯಿ,” ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ಹೇಳಿದರು. ಅದಕ್ಕೆ ಯೇಸು, “ಅಮಾ, ಇದನ್ನು ನನಗೇಕೆ ಹೇಳುತ್ತೀ? ನನ್ನ ಗಳಿಗೆ ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟರು.. ತಾಯಿ ಸೇವಕರಿಗೆ,” ಆತ ಹೇಳಿದಂತೆ ಮಾಡಿ,” ಎಂದು ತಿಳಿಸಿದರು. ಯೆಹೂದ್ಯರ ಶುದ್ಧಾಚಾರ ಪದ್ಧತಿಯಂತೆ ಆರು ಕಲ್ಲಿನ ಬಾನೆಗಳನ್ನು ಅಲ್ಲಿ ಇಟ್ಟಿದ್ದರು.. ಅವು ಒಂದೊಂದು ಎರಡು ಮೂರು ಕೊಡ ನೀರು ಹಿಡಿಯುವಷ್ಟು ದೊಡ್ಡದಾಗಿದ್ದವು. ಯೇಸುಸ್ವಾಮಿ ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದು ಹೇಳಿದರು. ಅವರ ಕಂಠದವರೆಗೆ ತುಂಬಿದರು. ಯೇಸು, “ಈಗ ತೋಡಿಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿ,” ಎಂದು ಹೇಳಲು ಅವರು ಹಾಗೆ ಮಾಡಿದರು. ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರಿನ ರುಚಿ ನೋಡಿದರು. ಅದು ಎಲ್ಲಿಂದ ಬಂದಿತೆಂಬುದು ಅವನಿಗೆ ತಿಳಿದಿರಲಿಲ್ಲ. ನೀರನ್ನು ತೋಡಿಕೊಂಡು ಬಂದ ಸೇವಕರಿಗೆ ಮಾತ್ರ ತಿಳಿದಿತ್ತು. ಆದುದರಿಂದ ಅವನು ಮದುಮಗನನ್ನು ಕರೆದು, “ಜನರೆಲ್ಲರು ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಹಂಚುತ್ತಾರೆ; ಅತಿಥಿಗಳು ಯೆಥೇಚ್ಚವಾಗಿ ಕುಡಿದಾದ ಮೇಲೆ ಸಾಧಾರಣ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದುದನ್ನು ಈವರೆಗೂ ಇಟ್ಟಿದ್ದೀಯಲ್ಲಾ!” ಎಂದು ಹೇಳಿದನು.
ಯೇಸು ಮಾಡಿದ ಮೊದಲನೆಯ ಸೂಚಕಕಾರ್ಯ ಇದು. ಇದನ್ನು ಗಲಿಲೇಯ ನಾಡಿನ ಕಾನ ಊರಿನಲ್ಲಿ ಮಾಡಿ ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಅವರ ಶಿಷ್ಯರಿಗೂ ಅವರಲ್ಲಿ ವಿಶ್ವಾಸ ಮೂಡಿತು. ಇದಾದ ಮೇಲೆ ಯೇಸು, ಅವರ ತಾಯಿ, ಸಹೋದರರು ಮತ್ತು ಶಿಷ್ಯರು ಕಫರ್ನವುಮಿಗೆ ಹೋಗಿ ಅಲ್ಲಿ ಕೆಲವು ದಿನ ತಂಗಿದ್ದರು.
No comments:
Post a Comment