ಸಂತ ಯೊವಾನ್ನನು ಬರೆದ ಶುಭ ಸಂದೇಶದಿಂದ ವಾಚನ - 1: 19-28
"ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ"
ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳುಹಿಸಿದರು. ಇವರು “ನೀನು ಯಾರು?” ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ,”ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ,” ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ “ನೀನು ಎಲೀಯನೋ?” ಎಂದು ಕೇಳಲು ‘ಅಲ್ಲ’ ಎಂದನು. “ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?” ಅವರು ಮತ್ತೆ ಕೇಳಲು , ಅದೂ ಅಲ್ಲ,” ಎಂದು ಮರುನುಡಿದನು. “ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು.ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನು ಕುರಿತು ನೀನು ಏನು ಹೇಳುತ್ತಿ?” ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು,”ಫ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂಬ ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು”,ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.
ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು,”ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ? ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು “ನಾನು ನಿಮಗೆ ನೀರಿನಿಂದ ಸ್ನಾನ ದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,” ಎಂದನು. ಯೊವಾನ್ನನು ಸ್ನಾನ ದೀಕ್ಷೆ ಕೊಡುತ್ತಿದ್ದ ಜೋರ್ಡಾನ್ ನದಿಯ ಆಚೆ ದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನೆಡೆಯಿತು.
No comments:
Post a Comment