ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ - 4 :35-41
“ಶಾಂತವಾಗಿರು ಮೊರೆಯಬೇಡ,
ಆ ದಿನ ಸಾಯಂಕಾಲ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ಸರೋವರದ ಆಚೆದಡಕ್ಕೆ ಹೋಗೋಣ,” ಎಂದರು. ಆಗ ಶಿಷ್ಯರು ಜನರ ಗುಂಪನ್ನು ಬಿಟ್ಟು ದೋಣಿಯಲ್ಲಿ ಕುಳಿತಿದ್ದ ಯೇಸುವನ್ನು ಹಾಗೆಯೇ ತಮ್ಮ ಜೊತೆಯಲ್ಲಿ ಕರದುಕೊಂಡು ಹೊರಟರು. ಆ ದೋಣಿಯ ಸಂಗಡ ಬೇರೆ ದೋಣಿಗಳೂ ಇದ್ದವು. ಸ್ವಲ್ಪ ಮುಂದೆ ಹೋಗುವಷ್ಟರಲ್ಲೇ ದೊಡ್ಡ ಬಿರುಗಾಳಿ ಎದ್ದಿತು. ಅಲೆಗಳು ದೋಣಿಗೆ ಅಪ್ಪಳಿಸತೊಡಗಿದವು. ದೋಣಿಯೊಳಗೆ ನೀರು ನುಗ್ಗಿ ಅದು ತುಂಬಿ ಹೋಗುವುದರಲ್ಲಿತ್ತು. ಯೇಸುವಾದರೋ ದೋಣಿಯ ಹಿಂಭಾಗದಲ್ಲಿ ದಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದರು. ಶಿಷ್ಯರು ಅವರನ್ನು ಎಬ್ಬಿಸಿ, “ಗುರುವೇ, ನಾವು ಸಾಯುತ್ತಿದ್ದೇವೆ, ತಮಗೆ ಚಿಂತೆಯೇ ಇಲ್ಲವೇ?” ಎಂದರು. ಆಗ ಯೇಸು ಎಚ್ಚೆತ್ತು, ಬಿರುಗಾಳಿಯನ್ನು ಗದರಿಸಿದರು. ಸರೊವರಕ್ಕೆ, “ಶಾಂತವಾಗಿರು ಮೊರೆಯಬೇಡ,” ಎಂದು ಆಜ್ಞಾಪಿಸಿದರು. ತಕ್ಷಣ ಬಿರುಗಾಳಿ ನಿಂತಿತು. ವಾತಾವರಣ ಪ್ರಶಾಂತವಾಯಿತು. ಅನಂತರ ತಮ್ಮ ಶಿಷ್ಯರಿಗೆ, “ಏಕೆ ಇಷ್ಟು ಭಯ? ಇನ್ನೂ ನಿಮಗೆ ವಿಶ್ವಾಸವಿಲ್ಲವೇ?” ಎಂದರು. ಶಿಷ್ಯರಾದರೋ ಭಯಭ್ರಾಂತರಾಗಿ “ಗಾಳಿಯೂ ಸರೋವರವೂ ಇವರು ಹೇಳುವಂತೆ ಕೇಳಬೇಕಾದರೆ ಇವರು ಯಾರಿರಬಹುದು?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
No comments:
Post a Comment