09.04.22 - "ಇಡೀ ರಾಷ್ಟ್ರವೇ ನಿರ್ನಾಮವಾಗುವುದಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತ"

ಮೊದಲನೇ ವಾಚನ: ಯೆಜೆಕಿಯೇಲ 37:21-28

ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು: "ನರಪುತ್ರನೇ, ಇದನ್ನೂ ಅವರಿಗೆ ನುಡಿ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ ಇಸ್ರಯೇಲರ ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು;  ಭಿನ್ನ ರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳುವರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದು ದೇವ ದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು. ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವರು. ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊಂದಿಗೆ ಶಾಂತಿ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿ ಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು, ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ಮೀಸಲು ಮಾಡಿಕೊಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು.

ಯೆರೆಮೀಯ: 31:10, 11, 12, 13
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ, ಅವರನ್ನು ಕೂಡಿಸಿ ಕಾಪಾಡುವೆನೆಂದು ಪ್ರಕಟಿಸಿರಿ

ಶುಭಸಂದೇಶ: ಯೊವಾನ್ನ 11:45-57

ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು. ಮುಖ್ಯ ಯಾಜಕರೂ ಫರಿಸಾಯರೂ "ನ್ಯಾಯಸಭೆ"ಯನ್ನು ಕರೆದರು. "ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕ ಕಾರ್ಯಗಳನ್ನು ಮಾಡುತ್ತಾನಲ್ಲಾ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನು ನೆಲಸಮ ಮಾಡುವರು," ಎಂದು ವಾದಿಸಿದರು. ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು, "ಇಡೀ ರಾಷ್ಟ್ರವೇ ನಿರ್ನಾಮವಾಗುವುದಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ," ಎಂದು ನುಡಿದನು. ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರದಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣ ತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ ಚದುರಿ ಹೋಗಿದ್ದ ದೇವ ಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ. ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು. ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಾಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ಧೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು. ಯೇಸುವನ್ನು ನೋಡಬೇಕೆಂಬ ಆಶೆ ಅವರಿಗಿತ್ತು. "ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?" ಎಂದು ಮಹಾದೇವಾಲಯದಲ್ಲಿ ತಮ್ಮ ತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯ ಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

ಮನಸಿಗೊಂದಿಷ್ಟು :  ಯೇಸುವಿನ ಇರುವಿಕೆ ಬೋಧನೆ, ಸಾಧನೆ  ಎಲ್ಲವೂ ಆ ಯಾಜಕರು, ಫರಿಸಾಯರಿಗೆ ಇರಿಸುಮುರಿಸು ತಂದಿಟ್ಟಿತು . ಅವರ ಅಧಿಕಾರ , ಸೌಕರ್ಯ, ಚಿಂತನೆಗಳಿಗೆ ಅಡಚಣೆ ಎಂಬಂತೆ ಅವರಿಗೆ ತೋರಿತು. ನಮ್ಮ ಜೀವನದಲ್ಲೂ ಯೇಸುವಿನ ಆದರ್ಶ, ಆಶಯಗಳು ನಮ್ಮ ಪಾಪಮಯ ಜೀವನ , ನಮ್ಮ ಲೌಕಿಕತೆಯೊಂದಿಗೆ ಸಂಘರ್ಷಕ್ಕೆ  ದಾರಿ ಮಾಡಿಕೊಡುತ್ತದೆ. ಅಲ್ಲಿ ಗೆಲ್ಲಬೇಕಾದುದು ಯೇಸುವೇ. ಆ ಫರಿಸಾಯರಂತೆ ನಾವೂ ಯೇಸುವನ್ನು ದೂರ ಮಾಡಲು ಪ್ರಯತ್ನಿಸದಿರೋಣ.

ಪ್ರಶ್ನೆ : ನಮ್ಮ ಬಾಳಿನಲ್ಲಿ ಯೇಸುವೋ? ನಮ್ಮದೇ ಲೌಕೀಕ ದಾರಿಯೋ?

08.04.22 - ಹಲವರಿಗೆ ಯೇಸುವಿನ್ನಲ್ಲಿ ವಿಶ್ವಾಸ ಹುಟ್ಟಿತು

ಮೊದಲನೇ ವಾಚನ: ಯೆರೆಮೀಯ  20:10-13

ಸುತ್ತಮುತ್ತಲು ದಿಗಿಲೆಂದರೆ ದಿಗಿಲು! 'ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವು ಹೇಳುವೆವು' ಎಂದು ಗುಸುಗುಟ್ಟುತ್ತಿರುವರು ಬಹು ಜನರು. "ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವು" ಎನ್ನುತ್ತಿರುವ ನನ್ನಾಪ್ತ ಮಿತ್ರರೆಲ್ಲರು. "ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿ ತೀರಿಸಿಕೊಳ್ಳುವೆವು.' ಎಂದುಕೊಳ್ಳುತ್ತಿದ್ದರು. ತಮ್ಮ ತಮ್ಮೊಳಗೆ. ಆದರೆ ನನ್ನ ಸಂಗಡ ಇರುವವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅಪಮಾನಕ್ಕೆ ಗುರಿಯಾಗುವರು ಎಂದಿಗೂ ಮರಿಯಲಾಗದಂತೆ. ಸರ್ವಶಕ್ತರಾದ ಸರ್ವೇಶ್ವರ, ನೀವು ಸತ್ಪುರುಷರನ್ನು ಪರಿಶೋಧಿಸುವವರು ಅಂತರಿಂದ್ರೀಯಗಳನ್ನೂ ಅಂತರಾಳವನ್ನೂ ವಿಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ. ಸರ್ವೇಶ್ವರನನ್ನು ಸ್ತುತಿಸಿರಿ. ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವನ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.

ಕೀರ್ತನೆ: 18:2-3, 3-4, 5-6, 7
ಶ್ಲೋಕ: ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ ನನ್ನ  ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.

ಶುಭಸಂದೇಶ: ಯೊವಾನ್ನ 10:31-42


ಆಗ ಯೆಹೂದ್ಯರು ಯೆಸುವಿನತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು. ಅದಕ್ಕೆ ಯೇಸು, "ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?" ಎಂದರು. ಅದಕ್ಕೆ ಯೆಹೂದ್ಯರು, "ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೇ," ಎಂದು ಉತ್ತರಕೊಟ್ಟರು. ಆಗ ಯೇಸು, " ನೀವು ದೇವರುಗಳು" ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ? ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ. ಇಂತಿರುವಲ್ಲಿ, ಪಿತನೇ ಪ್ರತಿಷ್ಠಸಿ ಕಳುಹಿಸಿಕೊಟ್ಟವನಾದ ನಾನು, "ದೇವರ ಪುತ್ರನಾಗಿದ್ದೇನೆ" ಎಂದು ಹೇಳಿಕೊಂಡದ್ದಕ್ಕೆ, "ಇವನು ದೇವದೂಷಣೆ ಮಾಡಿದ್ದಾನೆ" ಎನ್ನುತ್ತೀರಲ್ಲಾ? ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ. ನಾನು ಹಾಗೆ ಮಾಡಿದ್ದೇ ಆದರೆ,  ನನ್ನನ್ನು ನಂಬದೆ ಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು. ಹಾಗೂ ಮನದಟ್ಟಾಗುವುದು," ಎಂದರು. ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು. ಬಳಿಕ ಯೇಸುಸ್ವಾಮಿ ಜೋರ್ಡಾನ್ ನದಿಯನ್ನು ದಾಟಿ ಯೊವಾನ್ನನು ಮೊತ್ತ ಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು.  ಹಲವರು ಅವರ ಬಳಿಗೆ ಬರತೊಡಗಿದರು. "ಯೊವಾನ್ನನು ಒಂದು ಸೂಚಕ ಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ" ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ಹಲವರಿಗೆ ಯೇಸುವಿನ್ನಲ್ಲಿ ವಿಶ್ವಾಸ ಹುಟ್ಟಿತು.

07.04.22 - "ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು"

ಮೊದಲನೇ ವಾಚನ: ಆದಿಕಾಂಡ 17:3-9


ಅಬ್ರಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ದೇವರು ಅವನಿಗೆ, "ನಾನು ನಿನಗೆ ವಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಪ್ರಗಳಿಗೆ ಮೂಲಪುರುಷನಾಗುವೆ. ಇನ್ನ ಮುಂದೆ ನಿನಗೆ "ಅಬ್ರಾಮ" ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಪ್ರಗಳಿಗೆ  ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ "ಅಬ್ರಹಾಮ" ಎಂಬ ಹೆಸರಿರುವುದು. ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಪ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ರೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರ ಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ. ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ." ಇದಲ್ಲದೆ ದೇವರು ಅಬ್ರಾಹಾಮನಿಗೆ ಹೀಗೆಂದು ಹೇಳಿದರು: "ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರೂ ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು."

ಕೀರ್ತನೆ: 105:4-5, 6-7, 8-9 
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಶುಭಸಂದೇಶ: 8:51-59

ಯೇಸುಸ್ವಾಮಿ ಯೆಹೂದ್ಯರಿಗೆ: "ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯ ಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ," ಎಂದರು. "ನೀನು ದೆವ್ವ ಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, "ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು," ಎಂದು ಹೇಳುತ್ತಿರುವೆ; ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಟನೋ? ಆತನೂ ಸಾವಿಗೀಡಾದನು, ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?" ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. ಯೇಸು ಪ್ರತ್ಯುತ್ತರವಾಗಿ, "ನನ್ನ ಘನತೆ ಗೌರವವನ್ನು ನಾನೇ ಸಾರ ಹೋರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆ ಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ "ಅವರು ನಮ್ಮ ದೇವರು ಎಂದು ನೀವು ಹೇಳಿಕೊಳ್ಳುತ್ತೀರಿ. ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ" ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ.  ಅವರ ಮಾತನ್ನು ನಾನು ಪಾಲಿಸುತ್ತೇನೆ. ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವೆನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು," ಎಂದು ಉತ್ತರಕೊಟ್ಟರು. ಯೆಹೂದ್ಯರು, "ನಿನಗಿನ್ನೂ ಐವತ್ತು ವರ್ಷವಾಗಿಲ್ಲ;. ನೀನು ಅಬ್ರಹಾಮನನ್ನು ನೋಡಿದ್ದೀಯಾ?" ಎಂದರು. ಯೇಸು ಅವರಿಗೆ, ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ," ಎಂದು ಮರುನುಡಿದರು. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟು ಹೋದರು.

ಮನಸಿಗೊಂದಿಷ್ಟು  : ಯಹೂದ್ಯರು ಇಲ್ಲಿ ಯೇಸುವಿನ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ದೇವರೇ ಅವರೊಡನಿದ್ದರೂ , ಪ್ರವಾದಿಗಳ, ಧರ್ಮಶಾಸ್ತ್ರಗಳ  ಬಗ್ಗೆ ಆಳವಾದ ಜ್ಞಾನವಿದ್ದರೂ ಅವರ ಮನಸುಗಳು ಕಲ್ಲಾಗಿದ್ದವು, ಮುಚ್ಚಿಹೋಗಿದ್ದವು. ನಾವೂ ಸಹಾ ಅದೇ ಅಪಾಯವನ್ನು ಎದುರಿಸುತ್ತಿದ್ದೇವೆ . ಕ್ರಿಸ್ತ ಸದಾ ನಮ್ಮ ಜೊತೆ ಇರಲು ಬಯಸಿದರೂ ನಾವು ದೂರ ದೂರ ಸಾಗುತ್ತೇವೆ. "ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು" ಎಂದು ದೇವರು ಅಬ್ರಹಾಮನಿಗೆ ಹೇಳಿದ ಮಾತು ನಮ್ಮನ್ನು ಸದಾ ಎಚ್ಚರಿಸುತ್ತಿರಲಿ 

ಪ್ರಶ್ನೆ : ಕ್ರಿಸ್ತನೇ ದೇವರು ಎಂಬ ಅನುಮಾನವಿಲ್ಲದ ವಿಶ್ವಾಸ ನಮ್ಮಲ್ಲಿದೆಯೇ?

06.04.22 - "ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು"

ಮೊದಲನೇ ವಾಚನ: ದಾನಿಯೇಲ 3:14-20, 24-25, 28

ನೆಬೂಕದ್ನಚ್ಚರನು ಉಗ್ರ ಕೋಪಗೊಂಡು ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎಂಬುವರನ್ನು ಹಿಡಿದುತರಲು ಆಜ್ಞಾಪಿಸಿದನು. ನಂತರ ಅವನು ಅವರಿಗೆ, "ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎಂಬುವರೇ. ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆ ಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ? ಈಗಲಾದರೂ ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ಧಾನೆ?" ಎಂದು ಹೇಳಿದನು. ಇದನ್ನು ಕೇಳಿದ ಶದ್ರಕ್, ಮೇಶಕ್, ಮತ್ತು ಅಬೇದ್ನೆಗೋ ಎಂಬುವರು ರಾಜನಿಗೆ: "ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ. ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ  ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು. ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆ ಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ ಎಂದು ಉತ್ತರಕೊಟ್ಟರು. ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್, ಮತ್ತುಅಬೇದ್ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, "ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?" ಎಂದು ಕೇಳಿದನು. ಅವರು ರಾಜನಿಗೆ, ಹೌದು ಪ್ರಭೂ, ಅದು ಸತ್ಯ," ಎಂದು ಉತ್ತರಕೊಟ್ಟರು. ಅದಕ್ಕೆ ಅವನು, "ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ಧಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ. ನಾಲ್ಕನೆಯವನು ರೂಪ ದೇವಪುತ್ರನ ರೂಪದಂತಿದೆ!" ಎಂದು ಹೇಳಿದನು. ನಂತರ ನೆಬೂಕದ್ನೆಚ್ಚರನು, "ಶದ್ರಕ್, ಮೇಶಕ್ ಹಾಗು ಆಬೇದ್ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟು ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು!" ಎಂದು ಹೇಳಿದನು.

ಅಜರ್ಯನ ಗೀತೆ: 1:29-34
ಶ್ಲೋಕ: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು

ಶುಭಸಂದೇಶ: ಯೊವಾನ್ನ 8:31-42


ಯೇಸುಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ಧ ಯೆಹೂದ್ಯರಿಗೆ ಹೀಗೆಂದರು: "ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. ನೀವು ಸತ್ಯವನ್ನು ಅರಿತುಕೊಳ್ಳುವಿರಿ. ಸತ್ಯವು ನಿಮಗೆ ಸ್ವಾತಂತ್ಯ್ರ ನೀಡುವುದು." ಅದಕ್ಕೆ ಯೆಹೂದ್ಯರು, ನಾವು ಅಬ್ರಹಾಮನ ವಂಶಜರು: ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದ ಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. ಪುತ್ರನು ನಿಮಗೆ ಸ್ವಾತಂತ್ಯ್ರ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು. ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡಿದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ ಎಂದರು. ಆಗ ಆ ಯೆಹೂದ್ಯರು, "ಅಬ್ರಹಾಮನೇ ನಮ್ಮ ತಂದೆ," ಎಂದು ಮರುನುಡಿದರು. . ಯೇಸು, "ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದೀರಿ. ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲ್ಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ  ಮಾಡಲಿಲ. ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ," ಎಂದರು. ಅದಕ್ಕೆ ಅವರು, "ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ," ಎಂದು ಪ್ರತಿಭಟಿಸಿದರು. ಯೇಸು, ಅವರಿಗೆ, "ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ.

ಮನಸಿಗೊಂದಿಷ್ಟು :  "ನಮಗೆ ದೇವರ ಮಾತಿಗಿಂತ ನಮ್ಮ ನೆರೆಹೊರೆಯವರ ಮಾತುಗಳೇ ಗಟ್ಟಿಯಾಗಿ ಕೇಳುತ್ತದೆ" ಎನ್ನುತ್ತಾರೆ ಚಿಂತಕರೊಬ್ಬರು. "ಎಷ್ಟೋ ಬಾರಿ ನಾವು ಬೇಕಾಗಿ ಪಾಪಗಳನ್ನು ಮಾಡುವುದಿಲ್ಲ, ಬದಲ್ಲಗಿ ಅಸಹಾಯಕರಾಗಿ ನಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಮಣಿದು ಪಾಪಕ್ಕೆ ಸೋಲುತ್ತೇವೆ" ಎಂಬುದು ಮತ್ತೊಂದು ವಾಕ್ಯ. "ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು" ಎನ್ನುವ ಯೇಸುವಿನ ವಾಕ್ಯಕ್ಕೆ ಶರಣಾಗುವ.

ಪ್ರಶ್ನೆ : ಯೇಸುವಿನ ಶಿಷ್ಯರಾಗುವತ್ತ ನಮ್ಮ ಪ್ರಯತ್ನವೆಷ್ಟು?

05.04.22 - 'ಇರುವಾತನೇ ನಾನು'

ಮೊದಲನೇ ವಾಚನ: ಸಂಖ್ಯಾಕಾಂಡ 21:4-9


ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು.ಈ ಮಾರ್ಗದ ಆಯಾಸದಿಂದ ಅವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತನಾಡ ತೊಡಗಿದರು: "ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಅಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಅಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ," ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, "ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿರಿ," ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, "ನೀನು ಕಂಚಿನಿಂದ ವಿಷ ಸರ್ಪದ ಆಕಾರವನ್ನು ಮಾಡಿಸಿ, ಧ್ವಜ ಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿಯೊಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು," ಎಂದು ಆಜ್ಞಾಪಿಸಿದರು. ಅಂತೆಯೆ ಮೋಶೆ ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜ ಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.

ಕೀರ್ತನೆ: 102:2-3, 16-18, 19-21
ಶ್ಲೋಕ: ಕಿವಿಗೊಡು ಪ್ರಭೂ, ನನ್ನ ಪ್ರಾರ್ಥನೆಗೆ ನನ್ನ ಕೂಗು ಸೇರಲಿ ನಿನ್ನ ಬಳಿಗೆ

ಶುಭಸಂದೇಶ: ಯೊವಾನ್ನ 8:21-30

ಯೇಸುಸ್ವಾಮಿ ಯೆಹೂದ್ಯರಿಗೆ "ನಾನು ಹೊರಟು ಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ," ಎಂದರು. ಅದಕ್ಕೆ ಯೆಹೂದ್ಯರು, "ತಾನು ಹೋಗುವಲ್ಲಿಗೆ ನಮ್ಮಿಂದ ಬರಲಾಗದಂತೆ! ಹಾಗಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು ಇವನ ಇಂಗಿತವೆ?" ಎಂದು ಮಾತನಾಡಿಕೊಂಡರು. "ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮಂತೆ ನಾನು ಇಹಲೋಕದವನಲ್ಲ, ನಿಮ್ಮ ಪಾಪಗಳಲ್ಲೇ ನೀವು ಸಾಯುವಿರಿ," ಎಂದು ಯೇಸು ಅವರಿಗೆ ಹೇಳಿದರು. ಅವರು, "ನೀನು ಯಾರು?" ಎಂದು ಪ್ರಶ್ನಿಸಿದರು. ಯೇಸು, "ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ," ಎಂದು ಹೇಳಿದರು. ಯೇಸುಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆಂದು ಅವರು ಅರಿತುಕೊಳ್ಳಲಿಲ್ಲ. ಎಂದೇ ಯೇಸು ಮತ್ತೆ ಇಂತೆಂದರು: "ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, 'ಇರುವಾತನೇ ನಾನು' ಎಂದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಭೋಧಿಸಿದಂತೆ ನಾನು ಮಾತನಾಡುತ್ತೇನೆಂದೂ ನಿಮಗೆ ಆಗ ಅರಿವಾಗುವುದು. ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ  ಮಾಡುವುದರಿಂದ ಆತನು ನನ್ನನ್ನು ಏಕಾಂಗಿಯಾಗಿ ಬಿಟ್ಟಿಲ್ಲ." ಯೇಸುಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ  ಹುಟ್ಟಿತು.

ಮನಸಿಗೊಂದಿಷ್ಟು :  "ಮಾನವನನ್ನು ಸೃಷ್ಟಿ ಮಾಡಿದ ಉದ್ದೇಶದಂತೆ ಅವನು ಉಳಿಯಲಿಲ್ಲ" ಎನ್ನುತ್ತಾರೆ ಚಿಂತಕರೊಬ್ಬರು. ತಮ್ಮ ಪ್ರತಿರೂಪದಂತಿರಲಿ ಎಂದು ನಮ್ಮನ್ನು ಸೃಷ್ಟಿ ಮಾಡಿದ ದೇವರನ್ನು ನಾವು ನಿರಾಸೆಗೊಳಿಸುತ್ತಲೇ ಬಂದಿದ್ದೇವೆ ಆದರೂ ದೇವರು ತಮ್ಮ ಆಸೆ, ತಮ್ಮ ಒಳ್ಳೆಯತನ ಬಿಟ್ಟಿಲ್ಲ. ನಮ್ಮನ್ನು ಸರಿ ಮಾಡಲು ಯೇಸುವನ್ನೇ ಕಳುಹಿಸಿದ್ದಾರೆ. ಯೇಸುವಿನ ಮಾರ್ಗದಲ್ಲಿ ನಡೆಯುವ ಜವಾಬ್ದಾರಿ ನಮ್ಮದು

ಪ್ರಶ್ನೆ :  ದೇವರ ಪ್ರತಿರೂಪ ನಮ್ಮಲೆಷ್ಟು?  

04.04.22 - "ನಾನೇ ಜಗಜ್ಯೋತಿ"

ಮೊದಲನೇ ವಾಚನ: ಸುಸನ್ನಳ ಗ್ರಂಥ 1:41-62 

ಅವರು ಜನರ ಹಿರಿಯರ ಮಾತ್ರವಲ್ಲ ನ್ಯಾಯಾಧೀಶರೂ ಆಗಿದ್ದರಿಂದ ಕೂಡಿದ್ದ ಸಭಿಕರು ಅವರ ಮಾತನ್ನು ನಂಬಿ ಆಕೆಗೆ ಮರಣದಂಡನೆಯನ್ನು ವಿಧಿಸಿದರು. ಆಗ ಸುಸನ್ನಳು ಗಟ್ಟಿಯಾಗಿ ಕೂಗಿ, "ನಿತ್ಯರಾದ ದೇವರೇ, ನೀವು ಎಲ್ಲ ಗುಟ್ಟನ್ನು ತಿಳಿದವರು. ಎಲ್ಲ ವಿಷಯಗಳನ್ನು, ಅವು ಹುಟ್ಟುವ ಮೊದಲೇ ಅರಿತವರೂ ಆಗಿದ್ದೀರಿ. ಇವರು ನನ್ನ ವಿರುದ್ಧ ಸುಳ್ಳುಸಾಕ್ಷಿ ಹೇಳಿದ್ದಾರೆಂಬುದು ನಿಮಗೆ ಗೊತ್ತಿದೆ. ಇವರು ನನ್ನ ವಿರುದ್ದ ಹೊಟ್ಟೆಕಿಚ್ಚಿನಿಂದ ಹೇಳಿದ ಕಾರ್ಯಗಳನ್ನು ನಾನು ಮಾಡಿದ್ದೇ ಇಲ್ಲ. ಆದರೂ ಈಗ ನಾನು ಸಾಯಲೇಬೇಕು," ಎಂದು ಮೊರೆಯಿಟ್ಟಳು. ಸರ್ವೇಶ್ವರಸ್ವಾಮಿ ಆಕೆಯ ಮೊರೆಯನ್ನು ಆಲಿಸಿದರು. ಜನರು ಅವಳನ್ನು ಕೊಲ್ಲುವುದಕ್ಕೆ ಸಾಗಿಸಿಕೊಂಡು ಹೋಗುತ್ತಿರುವಾಗ ದೇವರು ದಾನಿಯೇಲನೆಂಬ ಯುವಕನಲ್ಲಿದ್ದ ಪವಿತ್ರಾತ್ಮನನ್ನು ಚೇತನಗೊಳಿಸಿದರು. ದಾನಿಯೇಲನು, "ಈ ಮಹಿಳೆಯ ರಕ್ತಪಾತಕ್ಕೆ ನಾನು ಹೊಣೆ ಅಲ್ಲ," ಎಂದು ಕೂಗಿ ಹೇಳಿದನು. ಜನರೆಲ್ಲರು ಅವನ ಕಡೆಗೆ ತಿರುಗಿಕೊಂಡು, "ನೀನು ಆಡಿದ ಮಾತಿನ ಮರ್ಮವೇನು?" ಎಂದು ವಿಚಾರಿಸಿದರು. ಅವನು ಅವರ ಮಧ್ಯೆ ನಿಂತು, "ಇಸ್ರಯೇಲಿನ ಕುಲಪುತ್ರರೇ, ನೀವು ಇಷ್ಟು ಬುದ್ಧಿಹೀನರೋ?  ಪರಿಕ್ಷೆಮಾಡದೆ, ಸತ್ಯವನ್ನು ಅರಿತುಕೊಳ್ಳದೆ, ಇಸ್ರಯೇಲಿನ ಕುಲಪುತ್ರಿಯೊಬ್ಬಳಿಗೆ ದಂಡನೆ ವಿಧಿಸಿದಿರೋ? ನ್ಯಾಯಸ್ಥಾನಕ್ಕೆ ಮರಳಿ ಬನ್ನಿ, ಏಕೆಂದರೆ ಇವಳ ಮೇಲೆ ಸುಳ್ಳುಸಾಕ್ಷಿ ಹೇಳಲಾಗಿದೆ," ಎಂದು ಹೇಳಿದನು. ಜನರೆಲ್ಲರು ಕೂಡಲೆ ಹಿಂದಿರುಗಿ ಬಂದರು. ಜನನಾಯಕರು ದಾನಿಯೇಲನಿಗೆ, "ಬಾ, ನಮ್ಮ ನಡುವೆ ಕುಳಿತುಕೊಂಡು ಆ ವಿಷಯವನ್ನು ನಮಗೆ ವಿವರಿಸು. ಹಿರಿಯರಿಗೆ ಕೊಟ್ಟಂಥ ಗೌರವವನ್ನು ದೇವರು  ನಿನಗೆ ಕೊಟ್ಟಂತಿದೆ!" ಎಂದರು. ಆಗ ದಾನಿಯೇಲನು, "ಇವರಿಬ್ಬರನ್ನು ಬೇರ್ಪಡಿಸಿ ದೂರದೂರದಲ್ಲಿ ಇಡಿ. ನಾನು  ಇವರನ್ನು ಪರೀಕ್ಷಿಸುತ್ತೇನೆ. ಎಂದನು ಅಂತೆಯೇ ಅವರನ್ನು ಬೇರ್ಪಡಿಸಲಾಯಿತು. ಆಮೇಲೆ ಅವರಿಬ್ಬರಲ್ಲಿ ಒಬ್ಬನನ್ನು ಕರೆದು ಅವನಿಗೆ, "ಕೆಟ್ಟತನದಲ್ಲೆ ಬೆಳೆದು ಮುಪ್ಪಾಗಿರುವವನೇ, ನೀನು ಹಿಂದೆ ಮಾಡಿದ ಪಾಪಗಳು ಇಂದು ಬಯಲಿಗೆ ಬಂದಿವೆ. "ನಿರಪರಾಧಿಗೂ ನೀತಿವಂತನಿಗೂ ಮರಣದಂಡನೆ ವಿಧಿಸಲೇಕೂಡದು" ಎಂದು ಸರ್ವೇಶ್ವರಸ್ವಾಮಿ ಹೇಳಿದ್ದರೂ ಅನ್ಯಾಯವಾದ ತೀರ್ಪುಕೊಟ್ಟು, ನರಪರಾಧಿಯನ್ನು ದಂಡಿಸಿ, ಅಪರಾಧಿಗಳನ್ನು ಬಿಡುಗಡೆಮಾಡುತ್ತಾ ಬಂದಿರುವೆ. ಈಗ ಹೇಳು, ಇವಳನ್ನು ನೀನು ನೋಡಿದ್ದೇ ಆದರೆ, ಇವರು ಯಾವ ಗಿಡದ ಅಡಿಯಲ್ಲಿ ಕೂಡಿದ್ದರು, ನನಗೆ ತಿಳಿಸು," ಎಂದನು. ಅದಕ್ಕೆ ಅವನು "ಬಗಿನಿ ಮರದ ಅಡಿಯಲ್ಲಿ," ಎಂದು ಉತ್ತರವಿತ್ತನು ಅದಕ್ಕೆ ದಾನಿಯೇಲನು, "ನಿನ್ನ ಪ್ರಾಣಕ್ಕೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ದೇವದೂತನು ಈಗಲೆ ದೇವರಿಂದ ತೀರ್ಮಾನ ಪಡೆದು ನಿನ್ನನ್ನು ಬಗೆದುಹಾಕಿ, ಎರಡು ತುಂಡಾಗಿ ಮಾಡಲಿದ್ದಾನೆ," ಎಂದು ಹೇಳಿ ಅವನನ್ನು ಪಕ್ಕಕ್ಕೆ ಸರಿಸಿದನು. ಬಳಿಕ ಎರಡನೆಯವನನ್ನು‌ಕರೆತರಲು ಆಜ್ಞಾಪಿಸಿದನು. ಅವನನ್ನು ನೋಡಿ, "ಯೆಹೂದ ವಂಶಕ್ಕೆ ಅಯೋಗ್ಯವಾದ ಎಲೈ ಕಾನಾನ್ ವಂಶಜನೇ, ಸೌಂದರ್ಯವು ನಿನ್ನನ್ನು ಮೋಸಗೊಳಿಸಿತು ಕಾಮವು ನಿನ್ನ ಮನಸ್ಸನ್ನು ಕೆಡಿಸಿತು. ಇಸ್ರಯೇಲಿನ ಕುಲಪುತ್ರಿಯರೊಂದಿಗೆ ನೀವು ಇದೇ ರೀತಿ ವರ್ತಿಸುತ್ತಾ ಬಂದಿರಿ. ಅವರು ಅಂಜಿಕೆಯಿಂದ ನಿಮಗೆ ವಶವಾಗುತ್ತಿದ್ದರು. ಆದರೆ ಜುದೇಯದ ಈ ಕುಲಪುತ್ರಿ ಮಾತ್ರ ನಿಮ್ಮ ಅಧರ್ಮಕ್ಕೆ ಇಂಬುಕೊಡಲಿಲ್ಲ. ಈಗ ಹೇಳು, ಯಾವ ಮರದ ಕೆಳಗೆ ಇವರು ಕೂಡಿದ್ದನ್ನು ನೀನು ಕಂಡುಹಿಡಿದೆ?" ಎಂದನು. ಅವನು, "ಕಡವಾಲ ಮರದ ಕೆಳಗೆ' ಎಂದು ಉತ್ತರಕೊಟ್ಟ. ಆಗ ದಾನಿಯೇಲನು, "ನೀನು ಸಹ ನಿನ್ನ ಕುತ್ತಿಗೆಗೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ನಿನ್ನನ್ನು ಕಡಿದು ಎರಡು ಹೋಳಾಗಿ ಮಾಡಿ ನಿಮ್ಮಿಬ್ಬರನ್ನೂ ನಾಶಮಾಡಲು ದೇವದೂತನು ಕೈಯಲ್ಲಿ ಕತ್ತಿಹಿಡಿದು ಕಾದಿದ್ಧಾನೆ," ಎಂದು ನುಡಿದನು. ಕೂಡಿದ್ದ ಸಭಿಕರೆಲ್ಲರು ಆಗ ಗಟ್ಟಿಯಾಗಿ ಕೂಗುತ್ತಾ, ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸಿ ಕಾಪಾಡುವ ದೇವರನ್ನು ಕೊಂಡಾಡಿದರು. ಅಲ್ಲದೆ, ದಾನಿಯೇಲನು ಆ ಇಬ್ಬರು ಹಿರಿಯರನ್ನು ಸುಳ್ಳು ಸಾಕ್ಷಿಗಳೆಂದು ತೋರಿಸಿಕೊಟ್ಟ ಕಾರಣ, ಸಭಿಕರು ಅವರ ವಿರುದ್ಧ ಎದ್ದು ನಿಂತು ಪ್ರತಿಭಟಿಸಿದರು. ಹೊಟ್ಟೆಕಿಚ್ಚಿನಿಂದ ನೆರೆಯವರ ಮೇಲೆ ಏನು ದಂಡನೆ ತೆರಬೇಕೆಂದಿದ್ದರೋ ಅದನ್ನೇ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಮೇಲೆ ತಂದು, ಅವರನ್ನು ಕೊಲ್ಲಿಸಿದರು. ಹೀಗೆ ನಿರ್ದೋಷಿಯ ರಕ್ತ, ಅಂದು ಸುರಕ್ಷಿತವಾಯಿತು.

ಕೀರ್ತನೆ: 23:1-3, 3-4, 5, 6 
ಶ್ಲೋಕ: ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು ಕಾಣನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ 

ಶುಭಸಂದೇಶ: ಯೊವಾನ್ನ 8:12-20 

ಯೇಸುಸ್ವಾಮಿ ಜನರನ್ನು ಕಂಡು ಹೀಗೆಂದರು: "ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ." ಅದಕ್ಕೆ ಫರಿಸಾಯರು, "ಈಗ ನೀನು ನಿನ್ನ ಪರವಾಗಿಯೇ ಸಾಕ್ಷಿ ನೀಡುತ್ತಿರುವೆ, ಅಂಥ ಸಾಕ್ಷಿಗೆ ಬೆಲೆಯಿಲ್ಲ," ಎಂದರು. ಅದಕ್ಕೆ ಯೇಸು, "ನಾನೇ ನನ್ನ ಪರವಾಗಿ ಸಾಕ್ಷಿ ನೀಡಿದರೂ ನನ್ನ ಸಾಕ್ಷಿಗೆ ಬೆಲೆಯುಂಟು. ಏಕೆಂದರೆ, ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ, ಎಂದು ನನಗೆ ತಿಳಿದಿದೆ. ನಿಮಗಾದರೋ ನಾನು ಬಂದುದು ಎಲ್ಲಿಂದ, ಹೋಗುವುದು ಎಲ್ಲಿಗೆ' ಎಂದು ತಿಳಿಯದು. ನೀವು ತೀರ್ಪು ಕೊಡುವುದು ಲೋಕದ ದೃಷ್ಟಿಯಿಂದ. ನಾನಾದರೋ ಯಾರ ಬಗ್ಗೆಯೂ ತೀರ್ಪು ಕೊಡಲು ಹೋಗುವುದಿಲ್ಲ. ನಾನು ತೀರ್ಪು ಕೊಟ್ಟರೂ ಅದು ಯಥಾರ್ಥವಾದುದು. ಕಾರಣ, ತೀರ್ಪು ಕೊಡುವವನು ನಾನೊಬ್ಬನೇ ಅಲ್ಲ; ನನ್ನನ್ನು ಕಳುಹಿಸಿದ ಪಿತ ಸಹ ನನ್ನೊಡನೆ ಇದ್ದಾರೆ. ಇಬ್ಬರ ಸಾಕ್ಷ್ಯ ಒಂದೇ ಆಗಿದ್ದರೆ ಅದು ಸತ್ಯವೆಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ. ನಾನು ನನ್ನ ಪರವಾಗಿ ಸಾಕ್ಷಿ ಹೇಳುತ್ತೇನೆ; ನನ್ನನ್ನು ಕಳುಹಿಸಿದ ಪಿತ ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತಾರೆ," ಎಂದು ನುಡಿದರು.  ಅದಕ್ಕೆ ಅವರು, "ನಿನ್ನ ಪಿತನೆಲ್ಲಿ?" ಎಂದು ಕೇಳಿದರು. ಯೇಸು, "ನೀವು ನನ್ನನ್ನು ಅರಿತಿಲ್ಲ, ನನ್ನ ಪಿತನನ್ನೂ ಅರಿತಿಲ್ಲ. ನೀವು ನನ್ನನ್ನು ಅರಿತಿದ್ದರೆ, ನನ್ನ ಪಿತನನ್ನೂ ಅರಿಯುತ್ತಿದ್ಧಿರಿ," ಎಂದರು. ಮಹಾದೇವಾಲಯದೊಳಗೆ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಕೋಣೆಯಲ್ಲಿ ಯೇಸು ಮಾತಾಡುತ್ತಾ ಹೇಳಿದ ಮಾತುಗಳಿವು. ಅವರ ಗಳಿಗೆ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ.

ಮನಸಿಗೊಂದಿಷ್ಟು : ಜೀವನದ ಎಷ್ಟೋ ಸಮಸ್ಯೆಗಳಿಗೆ ಮಾನವ ಮಿತಿಯ ಜ್ಞಾನದಿಂದ ಉತ್ತರವಿಲ್ಲ.  ಆದರಿಂದಲೇ ಕತ್ತಲಲ್ಲಿರುವವನಿಗೆ ಬೆಳಕು ಅಗತ್ಯ. ಆ ಅಗತ್ಯ ಬೆಳಕು ನಾನೇ ಎನ್ನುತ್ತಾರೆ ಯೇಸು. ಆ ಬೆಳಕನ್ನು ಅರಿಯುತ್ತಾ, ಅದರಲ್ಲೇ ನಡೆಯುವ ಮನಸು ನಮ್ಮದಾದಾಗ ನಾವು ಎಡವುವುದಿಲ್ಲ. ಎಡವಿದರೂ ಎದ್ದು ನಡೆಯಲು ಬೇಕಾದ ದಾರಿ ಪ್ರಕಾಶಮಾನ. ಬೆಳಕತ್ತ ಸಾಗೋಣ, ಕತ್ತಲು ಬೆನ್ನ ಹಿಂದಿರುತ್ತದೆ.

ಪ್ರಶ್ನೆ : ನಾವು ಬೆಳಕತ್ತ ಮುಖ ಮಾಡಿದ್ದೇವೆಯೇ ಅಥವಾ ಬೆನ್ನು ತೋರಿಸುತ್ತಿದ್ದೇವೆಯೇ?

03.04.22 - "ಇನ್ನು ಮೇಲೆ ಪಾಪ ಮಾಡಬೇಡ,"

ಮೊದಲನೇ ವಾಚನ: ಯೆಶಾಯ 43:16-21



ಸಮುದ್ರದ ಮಧ್ಯೆ ದಾರಿ ಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗ- ಬೇರ್ಪಡಿಸಿದವನಾರೋ, ಅಶ್ವರಥಭಟಸೈನ್ಯಗಳನ್ನು ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿ ಕರಗಿ ಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ: "ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ. ಪುರಾತನ ಕಾರ್ಯಗಳ ನೆನಪಿಸಿಕೊಳ್ಳಬೇಕಾಗಿಲ್ಲ. ಇಗೋ, ನೂತನ ಕಾರ್ಯವನು ನಾನೆಸಗುವೆ, ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೆ? ಮಾರ್ಗವನ್ನು ಏರ್ಪಡಿಸಿರುವೆ ಮರಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ. ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನ್ನು. ಏಕೆನೆ ಕೊಡುವೆ ನೀರನ್ನು ಮರುಭೂಮಿಯಲಿ, ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ. ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನ್ನು."

ಕೀರ್ತನೆ: 126:1-2, 2-3, 4-5, 6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದರು ಖಚಿತ ಎಂತಲೇ ನಾವಾನಂದಭರಿತರಾಗುವುದು ಉಚಿತ

ಎರಡನೇ ವಾಚನ: ಫಿಲಿಪ್ಪಿಯರಿಗೆ 3:8-14

ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ. ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ,  ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ. ಯೇಸುಸ್ವಾಮಿಯನ್ನು ಅರಿಯಬೇಕು; ಅವರ ಪುನರುತ್ದಾನದ ಪ್ರಭಾವವನ್ನು ಅನುಭವಿಸಬೇಕು; ಅವರ ಯಾತನೆಗಳಲ್ಲಿ ಪಾಲುಗೊಳ್ಳಬೇಕು; ಅವರ ಮರಣದಲ್ಲಿ ಅವರಂತೆಯೇ ಆಗಬೇಕು - ಇದೇ ನನ್ನ ಹೆಬ್ಬಯಕೆ. ಹೀಗೆ ನಾನೂ ಸಹ ಮೃತ್ಯುಂಜಯನಾಗುತ್ತೇನೆ ಎಂಬುದೇ ನನ್ನ ನಂಬಿಕೆ - ನಿರೀಕ್ಷೆ. ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ. ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ಸಹೋದರರೇ, ಆ ಗುರಿಯನ್ನು ತಲುಪಿದ್ದೇನೆಂದು ನಾನೆಂದೂ  ಹೇಳಿಕೊಂಡಿಲ್ಲ. ಆದರೆ ಇದು ನಿಜ. ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳ ಮೇಲೆ  ಕಣ್ಣಿಟ್ಟು ನಾನು ಓಡುತ್ತಿದ್ದೇನೆ. ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ.

ಶುಭಸಂದೇಶ: ಯೊವಾನ್ನ 8:1-11

ಯೇಸುಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಭೋಧಿಸತೊಡಗಿದರು. ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. ಅವಳನ್ನು ಎಲ್ಲರ ಮಂದೆ ನಿಲ್ಲಿಸಿ, "ಭೋಧಕರೇ, ಈ ಹೆಂಗಸು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?" ಎಂದು ಪ್ರಶ್ನಿಸಿದರು. ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ಧೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನೆನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆ ಹಾಕುತ್ತಲೇ ಇದ್ದರು.

ಆಗ ಯೇಸು ನೆಟ್ಟಗೆ ಕುಳಿತು, "ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ" ಎಂದು ಹೇಳಿ, ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. ಆಗ ಯೇಸು ತಲೆಯೆತ್ತಿ, "ತಾಯೀ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ  ಶಿಕ್ಷೆ ವಿಧಿಸಲಿಲ್ಲವೇ?" ಎಂದು ಕೇಳಿದರು. ಅವಳು "ಇಲ್ಲ, ಸ್ವಾಮೀ," ಎಂದಳು. ಯೇಸು ಅವಳಿಗೆ, "ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ," ಎಂದರು.

ಮನಸಿಗೊಂದಿಷ್ಟು : "ಇನ್ನು ಮೇಲೆ ಪಾಪ ಮಾಡಬೇಡ" ಎಂಬ ಯೇಸುವಿನ ಆ ಕೊನೆ ವಾಕ್ಯ, ಅವರಿಗೆ ಜನರ ಮೇಲೆ ಅದೂ ಪಾಪಿಗಳ ಮೇಲೆ ಇದ್ದ ಆತ್ಮವಿಶ್ವಾಸವನ್ನು ತೋರುತ್ತದೆ. "ಇನ್ನು ಮೇಲೆ" ಎಂಬುದರಲ್ಲೇ  ಹಿಂದಿನದರ ಬಗೆಗಿನ ಕ್ಷಮೆ, ಮುಂದಿನದರ ಬಗೆಗಿನ ಭರವಸೆಯನ್ನು ತೋರುತ್ತದೆ. ನಮ್ಮ ಪಾಪಗಳು, ತಪ್ಪುಗಳು ನಮ್ಮನ್ನು ಕೊರೆಯುತ್ತಿದ್ದರೆ, ಯೇಸುವಿನ ಈ ವಾಕ್ಯ ನಮಗೆ ಸಾಂತ್ವನ ನೀಡಬೇಕು, ಮುಂದಿನ ದಾರಿ ತೋರಬೇಕು. ಆದರೆ ಪಶ್ಚಾತ್ತಾಪದ ಮನಸು ನಮ್ಮದಾಗಬೇಕಷ್ಟೇ.

ಪ್ರಶ್ನೆ:  ನಮ್ಮದೇ ತಪ್ಪುಗಳಿದ್ದರೂ ಮತ್ತೊಬ್ಬರನ್ನು ಅದೆಷ್ಟು ಬಾರಿ ದೂಷಿಸಿದ್ದೇವಲ್ಲವೇ?

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...