10.06.2020 - “ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ"

ಮೊದಲನೇ ವಾಚನ: 1 ಅರಸುಗಳು  18:20-39


ಅಹಾಬನು ಇಸ್ರಯೇಲರನ್ನೂ ಎಲ್ಲಾ ಪ್ರವಾದಿಗಳನ್ನೂ ಅಲ್ಲಿಗೆ ಕರೆಯಿಸಿದನು. ಎಲೀಯನು ಜನರೆಲ್ಲರ ಬಳಿಗೆ ಹೋಗಿ, “ನೀವು ಎಷ್ಟರವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಸರ್ವೇಶ್ವರಸ್ವಾಮಿ ನಿಮಗೆ ದೇವರಾಗಿದ್ದರೆ ಅವರನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ,” ಎಂದು ಹೇಳಿದನು. ಜನರು ಇದಕ್ಕೆ ಏನೂ ಉತ್ತರಕೊಡದೆ ಸುಮ್ಮನಿರುವುದನ್ನು ಕಂಡು, ಅವನು ಮತ್ತೆ ಅವರಿಗೆ, “ಸರ್ವೇಶ್ವರನ ಪ್ರವಾದಿಗಳಲ್ಲಿ ನಾನೊಬ್ಬನೇ ಉಳಿದಿದ್ದೇನೆ; ಬಾಳನ ಪ್ರವಾದಿಗಳಲ್ಲಿ ನಾನೂರೈವತ್ತುಮಂದಿ ಇದ್ದಾರೆ. ಅವರು ಎರಡು ಹೋರಿಗಳನ್ನು ನಮ್ಮ ಬಳಿಗೆ ತರಲಿ; ಅವುಗಳಲ್ಲೊಂದನ್ನು ಆರಿಸಿಕೊಂಡು, ಕಡಿದು ತುಂಡುಮಾಡಿ ಕಟ್ಟಿಗೆಯ ಮೇಲಿಡಲಿ; ಆದರೆ ಬೆಂಕಿ ಹೊತ್ತಿಸಬಾರದು. ನಾನೂ ಇನ್ನೊಂದು ಹೋರಿಯನ್ನು ಹಾಗೆಯೇ ಕಡಿದು ಬೆಂಕಿ ಹೊತ್ತಿಸದೆ ಕಟ್ಟಿಗೆಯ ಮೇಲಿಡುವೆನು. ನೀವು ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ. ಅನಂತರ ನಾನು ಸರ್ವೇಶ್ವರನ ಹೆಸರು ಹೇಳಿ ಪ್ರಾರ್ಥಿಸುವೆನು. ಅವರಿಬ್ಬರಲ್ಲಿ ಯಾರು ಆಲಿಸಿ ಬೆಂಕಿಯನ್ನು ಕಳುಹಿಸುವನೋ ಅವನೇ ದೇವರೆಂದು ನಿಶ್ಚಯಿಸೋಣ,” ಎಂದನು. ಜನರೆಲ್ಲರು, “ಸರಿ, ನೀನು ಹೇಳಿದಂತೆಯೇ ಆಗಲಿ,” ಎಂದು ಉತ್ತರಕೊಟ್ಟರು. ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ನೀವು ಹೆಚ್ಚುಮಂದಿ ಇರುವುದರಿಂದ ಮೊದಲು ನೀವೇ ಒಂದು ಹೋರಿಯನ್ನು ಆರಿಸಿಕೊಂಡು, ಅದನ್ನು ಸಿದ್ಧಪಡಿಸಿ, ನಿಮ್ಮ ದೇವರ ಹೆಸರು ಹೇಳಿ ಪ್ರಾರ್ಥಿಸಿರಿ; ಆದರೆ ಬೆಂಕಿಯನ್ನು ಹೊತ್ತಿಸಕೂಡದು,” ಎಂದನು. ಅಂತೆಯೇ ತರಲಾದ ಹೋರಿಗಳಲ್ಲಿ ಒಂದನ್ನು ಅವರು ತೆಗೆದುಕೊಂಡು ಸಿದ್ಧಪಡಿಸಿದರು. ತಮ್ಮ ದೇವರಾದ ಬಾಳನ ಹೆಸರು ಹೇಳಿ, “ಬಾಳನೇ, ನಮಗೆ ಕಿವಿಗೊಡು,” ಎಂದು ಹೊತ್ತಾರೆಯಿಂದ ಮಧ್ಯಾಹ್ನದವರೆಗೆ ಕೂಗಿದರು. ಆದರೆ ಯಾವ ವಾಣಿಯೂ ಕೇಳಿಸಲಿಲ್ಲ; ಅವರು ಪೀಠದ ಸುತ್ತಲೂ ಕುಣಿದಾಡಿದರು. ಆದರೂ ಯಾರೂ ಉತ್ತರಕೊಡಲಿಲ್ಲ. ಮಧ್ಯಾಹ್ನವಾದನಂತರ ಎಲೀಯನು ಅವರನ್ನು ಪರಿಹಾಸ್ಯ ಮಾಡಿದನು: “ಗಟ್ಟಿಯಾಗಿ ಕೂಗಿರಿ; ಅವನು ದೇವರಲ್ಲವೆ? ಈಗ ಒಂದು ವೇಳೆ ಅವನು ಧ್ಯಾನದಲ್ಲಿ ಇರಬಹುದು; ಇಲ್ಲವೇ, ಯಾವುದೋ ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಇರಬೇಕು; ಇಲ್ಲದಿದ್ದರೆ, ನಿದ್ರೆಮಾಡುತ್ತಿರಬೇಕು; ಎಚ್ಚರವಾಗಲಿ,” ಎಂದು ಹೇಳಿದನು. ಅವರು ಗಟ್ಟಿಯಾಗಿ ಕೂಗಿ ತಮ್ಮ ಪದ್ಧತಿಯ ಪ್ರಕಾರ ಈಟಿಕತ್ತಿಗಳಿಂದ ರಕ್ತಸೋರುವಷ್ಟು ಗಾಯಮಾಡಿಕೊಂಡರು. ಮಧ್ಯಾಹ್ನದಿಂದ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಪರವಶರಾಗಿ ಕೂಗುತ್ತಿದ್ದರು. ಆದರೂ ಯಾವ ವಾಣಿಯೂ ಕೇಳಿಸಲಿಲ್ಲ; ಯಾವನೂ ಅವರಿಗೆ ಉತ್ತರಕೊಡಲಿಲ್ಲ; ಅವರನ್ನು ಯಾವನೂ ಲಕ್ಷಿಸಲೂ ಇಲ್ಲ. ಅನಂತರ ಎಲೀಯನು ಜನರೆಲ್ಲರನ್ನು ಹತ್ತಿರಕ್ಕೆ ಕರೆದನು; ಅವರು ಬಂದರು. ಹಾಳಾಗಿದ್ದ ಅಲ್ಲಿನ ಸರ್ವೇಶ್ವರನ ಪೀಠವನ್ನು ದುರಸ್ತು ಮಾಡಿಸಿದನು. ಸರ್ವೇಶ್ವರನಿಂದ ‘ಇಸ್ರಯೇಲ್’ ಎಂಬ ಹೆಸರು ಹೊಂದಿದ ಯಕೋಬನ ಮಕ್ಕಳಿಂದ ಉತ್ಪತ್ತಿಯಾದ ಕುಲಗಳ ಸಂಖ್ಯೆಗೆ ಸರಿಯಾಗಿ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು, ಸರ್ವೇಶ್ವರನ ಹೆಸರಿಗಾಗಿ ಒಂದು ಪೀಠವನ್ನು ಕಟ್ಟಿಸಿದನು. ಅದರ ಸುತ್ತಲೂ ಇಪ್ಪತ್ತು ಸೇರು ಬೀಜವರೀ ನೆಲವನ್ನು ಅಗಿಸಿ ಕಾಲುವೆ ಮಾಡಿಸಿದನು. ಕಟ್ಟಿಗೆಯನ್ನು ಪೀಠದ ಮೇಲೆ ಪೇರಿಸಿ, ಹೋರಿಯನ್ನು ವಧಿಸಿ ತುಂಡುಮಾಡಿ, ಅದರ ಮೇಲೆ ಇಟ್ಟನು. ಅನಂತರ ಜನರಿಗೆ, “ನಾಲ್ಕು ಕೊಡ ನೀರು ತಂದು ಬಲಿಮಾಂಸದ ಮೇಲೆಯೂ ಕಟ್ಟಿಗೆಯ ಮೇಲೆಯೂ ಹೊಯ್ಯಿರಿ,” ಎಂದು ಆಜ್ಞಾಪಿಸಿದನು. ಅವರು ಅಂತೆಯೇ ತೆಗೆದುಕೊಂಡು ಬಂದರು. “ಇನ್ನೊಂದು ಸಾರಿ ತನ್ನಿ,” ಎಂದು ಹೇಳಿದನು. ಅವರು ಇನ್ನೊಮ್ಮೆ ತಂದರು. ಅವನು ಮೂರನೆಯ ಸಾರಿ ಅದೇ ಪ್ರಕಾರ ಆಜ್ಞಾಪಿಸಲು ಅವರು ಮತ್ತೊಮ್ಮೆ ತಂದು ಸುರಿದರು. ನೀರು ವೇದಿಯ ಸುತ್ತಲೂ ಹರಿಯಿತು. ಇದಲ್ಲದೆ, ಅವನು ಕಾಲುವೆಯನ್ನೂ ನೀರಿನಿಂದ ತುಂಬಿಸಿದನು. ಸಂಧ್ಯಾನೈವೇದ್ಯದ ಹೊತ್ತಿಗೆ, ಪ್ರವಾದಿ ಎಲೀಯನು ಪೀಠದ ಹತ್ತಿರ ಬಂದು, “ಅಬ್ರಹಾಮ್, ಇಸಾಕ್, ಇಸ್ರಯೇಲರ ದೇವರೇ, ಸರ್ವೇಶ್ವರಾ, ನೀವೊಬ್ಬರೇ ಇಸ್ರಯೇಲರ ದೇವರಾಗಿರುತ್ತೀರಿ ಎಂಬುದನ್ನು, ನಾನು ನಿನ್ನ ದಾಸನಾಗಿರುತ್ತೇನೆಂಬುದನ್ನು ಹಾಗು ಇದನ್ನೆಲ್ಲಾ ನಿಮ್ಮ ಅಪ್ಪಣೆಯ ಮೇರೆಗೆ ಮಾಡಿದೆನೆಂಬುದನ್ನು ಈ ದಿನ ತೋರಿಸಿಕೊಡಿ. ನಮಗೆ ಕಿವಿಗೊಡಿ; ಸರ್ವೇಶ್ವರಾ ನಮಗೆ ಕಿವಿಗೊಡಿ; ಸರ್ವೇಶ್ವರನಾದ ನೀವೊಬ್ಬರೇ ದೇವರು ಹಾಗು ಈ ಜನರ ಮನಸ್ಸನ್ನು ನಿಮ್ಮಕಡೆಗೆ ತಿರುಗಿಸಿಕೊಳ್ಳುವವರು ಆಗಿರುತ್ತೀರಿ ಎಂಬುದನ್ನು ಇವರಿಗೆ ತಿಳಿಯಪಡಿಸಿ,” ಎಂದು ಪ್ರಾರ್ಥಿಸಿದನು. ಕೂಡಲೆ ಸರ್ವೇಶ್ವರನ ಕಡೆಯಿಂದ ಬೆಂಕಿ ಇಳಿದುಬಂದು ಬಲಿಮಾಂಸವನ್ನೂ ಕಟ್ಟಿಗೆ ಕಲ್ಲುಮಣ್ಣುಗಳನ್ನೂ ದಹಿಸಿಬಿಟ್ಟಿತು. ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರೆಲ್ಲರೂ ಅದನ್ನು ಕಂಡು ಬೋರಲಬಿದ್ದರು; “ಸರ್ವೇಶ್ವರನೇ ದೇವರು, ಸರ್ವೇಶ್ವರನೇ ದೇವರು,” ಎಂದು ಕೂಗಿದರು

ಕೀರ್ತನೆ: 4:2-3, 4-5, 7-8

ಶ್ಲೋಕ: ನೀಡು ದೇವಾ, ರಕ್ಷಣೆಯನು, ನಾ ನಿನಗೆ ಶರಣಾಗತನು

ಶುಭಸಂದೇಶ: ಮತ್ತಾಯ 5:17-19

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು."

09.06.2020 - ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."

ಮೊದಲನೇ ವಾಚನ: 1 ಅರಸುಗಳು  17:7-16


ಕೆಲವು ದಿವಸಗಳಾದ ನಂತರ ನಾಡಿನಲ್ಲಿ ಮಳೆಯಿಲ್ಲದ್ದರಿಂದ ಹಳ್ಳವು ಬತ್ತಿ ಹೋಯಿತು. ಆಗ ಸರ್ವೇಶ್ವರ ಅವನಿಗೆ: “ನೀನು ಇಲ್ಲಿಂದ ಸಿದೋನ್ಯರ ಸರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಿಸು. ನಿನ್ನನ್ನು ಪೋಷಿಸಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು. ಅವನು ಅಲ್ಲಿಂದ ಹೊರಟು ಸರೆಪ್ತಾದ ಊರು ಬಾಗಿಲಿನ ಸಮೀಪಕ್ಕೆ ಬಂದನು. ಸೌದೆ ಕೂಡಿಸುತ್ತಿದ್ದ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕರೆದು, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ,” ಎಂದು ಹೇಳಿದನು. ಆಕೆ ಹೋಗುತ್ತಿರುವಾಗ ಮತ್ತೆ ಆಕೆಯನ್ನು ಕರೆದು, “ನೀನು ಬರುವಾಗ ನನಗೆ ಒಂದು ತುಂಡು ರೊಟ್ಟಿಯನ್ನು ಸಹ ತೆಗೆದುಕೊಂಡು ಬಾ,” ಎಂದನು. ಆಕೆ, “ನಿನ್ನ ದೇವರಾದ ಸರ್ವೇಶ್ವರನಾಣೆ, ನನ್ನ ಹತ್ತಿರ ರೊಟ್ಟಿಯಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆ, ಇವುಗಳ ಹೊರತು ಬೇರೇನೂ ಇಲ್ಲ. ಈಗ ಸೌದೆ ಆಯ್ದುಕೊಂಡು ಹೋಗಿ ನನಗೂ ನನ್ನ ಮಗನಿಗೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ,” ಎಂದು ಉತ್ತರ ಕೊಟ್ಟಳು. ಆಗ ಎಲೀಯನು, “ಹೆದರಬೇಡ, ನೀನು ಹೇಳಿದಂತೆ ಮಾಡು; ಆದರೆ ಮೊದಲು ಅದರಿಂದ ನನಗೆ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಯೇಲ್ ದೇವರಾದ ಸರ್ವೇಶ್ವರ ನಿನಗೆ, “ನಾನು ನಾಡಿಗೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ, ಕುಡಿಕೆಯಲ್ಲಿರುವ ಎಣ್ಣೆ ಮುಗಿದುಹೋಗುವುದಿಲ್ಲ,” ಎಂದು ಹೇಳುತ್ತಾರೆ ಎಂದನು. ಆಕೆ ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು. ಸರ್ವೇಶ್ವರ ಎಲೀಯನ ಮುಖಾಂತರ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಕುಡಿಕೆಯಲ್ಲಿದ್ದ ಎಣ್ಣೆ ಮುಗಿದು ಹೋಗಲಿಲ್ಲ

ಕೀರ್ತನೆ: 4:2-3, 4-5, 7-8


ಶ್ಲೋಕ: ಬೆಳಗಿಸಲಿ ನಮ್ಮನು, ಓ ಪ್ರಭೂ, ನಿನ್ನ ಮೊಗದ ಘನತೆ


ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ ಘನತೆಯ? I
ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ ಅರಸುವೆ ಹುಸಿಯ? II
ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು ತಿಳಿದುಕೊ I
ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು ಅರಿತುಕೊ II

ಕೋಪಗೊಂಡರೂ ದೂರವಿರು ಪಾಪದಿಂದ I
ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ II
ಅರ್ಪಿಸಿರಿ ಯೋಗ್ಯ ಬಲಿಗಳನೆ I
ಇಡಿರಿ ಭರವಸೆ ಪ್ರಭುವಿನಲೆ II

ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು I
ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು II
ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ I
ಪ್ರಭು ನೀ ಕಾಯುವೆ ಎನ್ನ ಸುರಕ್ಷಿತನಾಗಿ II

ಶುಭಸಂದೇಶ: ಮತ್ತಾಯ 5:13-16 



ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ.” “ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."

08.06.2020 - “ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು"

ಮೊದಲನೇ ವಾಚನ: 1 ಅರಸುಗಳು 17:1-6

ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ,” ಎಂದನು. ಸರ್ವೇಶ್ವರಸ್ವಾಮಿ ಎಲೀಯನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗು; ಜೋರ್ಡನ್ ನದಿಯ ಆಚೆಯಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ. ಆ ಹಳ್ಳದ ನೀರು ನಿನಗೆ ಪಾನವಾಗಿರುವುದು; ನಿನಗೆ ಆಹಾರ ತಂದುಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದರು. ಸರ್ವೇಶ್ವರನ ಅಪ್ಪಣೆಯಂತೆ ಜೋರ್ಡನಿನ ಪೂರ್ವಕ್ಕಿರುವ ಕೆರೀತ್ ಹಳ್ಳದಲ್ಲಿ ಅವನು ವಾಸಿಸಿದನು. ಕಾಗೆಗಳು ಅವನಿಗೆ ಬೆಳಿಗ್ಗೆ ಹಾಗು ಸಂಜೆ ರೊಟ್ಟಿ, ಮಾಂಸ, ಇವುಗಳನ್ನು ತಿನ್ನಲು ತಂದುಕೊಡುತ್ತಿದ್ದವು. ಹಳ್ಳದ ನೀರು ಅವನಿಗೆ ಪಾನವಾಗಿತ್ತು. 

ಕೀರ್ತನೆ: 121:1-2, 3-4, 5-6, 7-8

ಶ್ಲೋಕ: ನನಗೆ ಒತ್ತಾಸೆ ಪ್ರಭುವಿನಿಂದ, ಭೂಮ್ಯಾಕಾಶ ಸೃಜಿಸಿದವನಿಂದ

ಶುಭಸಂದೇಶ: ಮತ್ತಾಯ 5:1-12

ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು. ಆಗ ಯೇಸು ಇಂತೆಂದು ಪ್ರಬೋಧಿಸಿದರು. “ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.” “ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು. ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು, ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು.”

07.06.2020 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

ಮೊದಲನೇ ವಾಚನ ವಿಮೋಚನಕಾಂಡ 34:4-6, 8-9

ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು. ಆಗ ಸರ್ವೇಶ್ವರ ಸ್ವಾಮಿ ಮೇಘಾವೃತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳು ದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು, ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ, ಸ್ವಾಮಿ, ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.

ಕೀರ್ತನೆ: 1:29-34

ಶ್ಲೋಕ: ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು

ಎರಡನೇ ವಾಚನ: 2 ಕೊರಿಂಥಿಯರಿಗೆ 13:11-13

ಸಹೋದರರೇ, ಸಂತೋಷದಿಂದಿರಿ, ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿ ಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ. ನಮ್ಮ ಪ್ರಭು ಯೇಸುಕ್ರಿಸ್ತರ ವರಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

ಶುಭಸಂದೇಶ: ಯೊವಾನ್ನ 3:16-18


ಯೇಸು ನಿಕೋದೇಮನಿಗೆ ಎಂತೆಂದರು: "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ.

06.06.2020 - ಈಕೆಯಾದರೋ ತನ್ನ ಕಡು ಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು

ಮೊದಲನೇ ವಾಚನ: 2 ತಿಮೊಥೇಯನಿಗೆ 4:1-8

ದೇವರ ಸಮಕ್ಷಮದಲ್ಲಿ, ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರ್ಪನ್ನು ಕೊಡಲು ಬರುವ ಕ್ರಿಸ್ತಯೇಸುವಿನ ಸಮಕ್ಷಮದಲ್ಲಿ, ನಾನು ಅವರ ಪ್ರತ್ಯಕ್ಷತೆಯನ್ನೂ ಸಾಮ್ರಾಜ್ಯವನ್ನೂ ಮುಂದಿಟ್ಟು ನಿನಗೆ ಆಜ್ಞಾಪಿಸುವುದೇನೆಂದರೆ: ನೀನು ದೇವರ ವಾಕ್ಯವನ್ನು ಆಸಕ್ತಿಯಿಂದ ಕಾಲ ಅಕಾಲಗಳನ್ನು ಲೆಕ್ಕಿಸದೆ ಬೋಧಿಸು. ಸತ್ಯವನ್ನು ಮನಗಾಣಿಸು; ತಪ್ಪನ್ನು ತಿದ್ದು; ಒಳ್ಳೆಯದನ್ನು ಪ್ರೋತ್ಸಾಹಿಸು’ ತಾಳ್ಮೆಯನ್ನು ಕಳೆದುಕೊಳ್ಳದೆ ಉಪದೇಶಮಾಡು. ಜನರು ಸದ್ಬೋಧನೆಯನ್ನು ಸಹಿಸದೆ, ಸ್ವೇಚ್ಛಾಚಾರಿಗಳಾಗುವ ಕಾಲವು ಬರುತ್ತದೆ. ತಮ್ಮ ದುರಿಚ್ಛೆಗಳಿಗೆ ಅನುಗುಣವಾಗಿ ಬೋಧಿಸುವವರಿಗೆ ಕಾತರದಿಂದ ಕಿವಿಗೊಡಲು ಕೂಡಿಕೊಳ್ಳುತ್ತಾರೆ. ಸತ್ಯಕ್ಕೆಕಿವಿಗೊಡದೆ ಕಟ್ಟುಕತೆಗಳನ್ನು ಕೇಳಲು ಅಲೆದಾಡುತ್ತಾರೆ. ಆದರೆ, ನೀನು ಎಲ್ಲ ಸನ್ನಿವೇಶಗಳಲ್ಲೂ ಸ್ಥಿರಚಿತ್ತದಿಂದಿರು. ಕಷ್ಟವನ್ನು ಸಹಿಸಿಕೋ. ಶುಭಸಂದೇಶವನ್ನು ನಿಷ್ಠೆಯಿಂದ ಸಾರು. ನಿನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸು. ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು. 

ಕೀರ್ತನೆ: 71-89, 14-15, 16-17, 22

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಶುಭಸಂದೇಶ: ಮಾರ್ಕ 12:38-44


ಜನಸಮೂಹವು ಸಂತಸಚಿತ್ತದಿಂದ ಯೇಸುಸ್ವಾಮಿಯ ಮಾತುಗಳನ್ನು ಆಲಿಸುತ್ತಿತ್ತು. ಯೇಸು ತಮ್ಮ ಉಪದೇಶವನ್ನು ಮುಂದುವರಿಸುತ್ತಾ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣ ಸಮಾರಂಭಗಳಲ್ಲಿ ಶ್ರೇಷ್ಠಸ್ಥಾನಗಳನ್ನೂ ಅಪೇಕ್ಷಿಸುತ್ತಾರೆ. ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು,” ಎಂದರು. ಯೇಸುಸ್ವಾಮಿ ದೇವಾಲಯದಲ್ಲಿ ಕಾಣಿಕೆಪೆಟ್ಟಿಗೆಗಳಿಗೆ ಎದುರಾಗಿ ಕುಳಿತಿದ್ದರು. ಜನರು ಅದರಲ್ಲಿ ಹಣಹಾಕುವ ರೀತಿ ಅವರ ಕಣ್ಣಿಗೆ ಬಿತ್ತು. ಧನವಂತರನೇಕರು ಹೆಚ್ಚು ಹೆಚ್ಚು ಹಣವನ್ನು ಹಾಕುತ್ತಿದ್ದರು. ಅಷ್ಟರಲ್ಲಿ ಬಡ ವಿಧವೆ ಒಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಆಗ ಯೇಸು ತಮ್ಮ ಶಿಷ್ಯರನ್ನು ಕರೆದು, “ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ; ಇವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು. ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು; ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು,” ಎಂದರು.

05.06.2020 - ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು

ಮೊದಲನೇ ವಾಚನ: 2 ತಿಮೊಥೇಯನಿಗೆ 3:10-17

ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ. ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು. ಕ್ರಿಸ್ತಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ. ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ. ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು. ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ. ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ. ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

ಶ್ಲೋಕ: ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ

ಕೀರ್ತನೆ: 119:157,160, 161, 165, 166, 168

    ದ್ವೇಷಿಸಿದರುಹಿಂಸಿಸಿದರುಹಲವರು ನನ್ನನು Iಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು II
ಸತ್ಯವೇ ನಿನ್ನ ವಾಕ್ಯದ ಸಾರಾಂಶ Iನಿನ್ನಯ ನೀತಿವಿಧಿಗಳೆಲ್ಲವೂ ಅನಿಶ II ಪೀಡಿಸುತಿಹರು ನಿಷ್ಕಾರಣವಾಗಿ ರಾಜರುಗಳು Iನಿನ್ನ ವಾಕ್ಯದ ಭೀತಿ ಇಹುದು ನನ್ನ ಹೃದಯದೊಳು II ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ Iವಿಘ್ನಕರವಾದುದೇನೂ ಇರದು ಅಂಥವರಿಗೆ II ರಕ್ಷಣೆಯನು ಪ್ರಭುನಿರೀಕ್ಷಿಸುತ್ತಿರುವೆ Iನಿನ್ನ ಆಜ್ಞೆಗಳನು ನಾನು ಕೈಗೊಂಡಿರುವೆ II ಅನುಸರಿಸಿದೆ ನಿನ್ನ ನೇಮನಿಯಮಗಳನೆಲ್ಲ Iನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ II

ಶುಭಸಂದೇಶ: ಮಾರ್ಕ 12:35-37


ಬಳಿಕ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಉಪದೇಶಮಾಡುತ್ತಾ ಈ ಪ್ರಶ್ನೆ ಎತ್ತಿದರು: “ಅಭಿಷಿಕ್ತನಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳು ‘ದಾವೀದನ ಪುತ್ರ’ ಎಂದು ಕರೆಯುತ್ತಾರಲ್ಲಾ! ಅದು ಹೇಗಾದೀತು? ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿಗೆ ಹಾಕುವತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,’ ಎಂದು ದಾವೀದನೇ  ವಿತ್ರಾತ್ಮಪ್ರೇರಣೆಯಿಂದ ಹೇಳಿದ್ದಾನಲ್ಲಾ! ದಾವೀದನೇ, ಕ್ರಿಸ್ತನನ್ನು ‘ನನ್ನ ಪ್ರಭು’ ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನಾಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.

04.06.2020 - ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು

ಮೊದಲನೇ ವಾಚನ: 2 ತಿಮೊಥೇಯನಿಗೆ 2:8-15


ಕ್ರಿಸ್ತಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ: ನಾವು ಆತನೊಡನೆ ಸತ್ತಿದ್ದರೆ,  ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ. ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ. ಈ ವಿಷಯಗಳನ್ನು ನಿನ್ನ ಸಭೆಯವರಿಗೆ ಜ್ಞಾಪಕಪಡಿಸು. ವ್ಯರ್ಥವಾದ ವಾಗ್ವಾದಗಳನ್ನು ನಿಲ್ಲಿಸಬೇಕೆಂದು ಅವರನ್ನು ದೇವರ ಮುಂದೆ ಖಂಡಿತವಾಗಿ ಎಚ್ಚರಿಸು. ಇಂಥ ವಾಗ್ವಾದಗಳಿಂದ ಕೇಳುವವರಿಗೆ ಕೇಡಾಗುವುದೇ ಹೊರತು ಒಳಿತೇನೂ ಆಗದು. ನೀನಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ ಬಾಳಲು ಪ್ರಯತ್ನಪಡು.

ಕೀರ್ತನೆ: 25:4-5, 8-9, 10, 14

ಶ್ಲೋಕ: ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು

ಶುಭಸಂದೇಶ: ಮಾರ್ಕ 12:28-34

ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ," ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗಳ್ಳಲಿಲ್ಲ. 

10.09.2026 - ಗುರುವಾರ IIಇಂದಿನ ಬೈಬಲ್ ವಾಚನಗಳುIIಆದುದರಿಂದ ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ಅವನಿಗೆ ಒಳಿತನ್ನೇ ಮಾಡಿರಿ. ಪ್ರತಿಯಾಗಿ ಪಡೆಯುವ ಆಶೆಯಿಡದೆ ಸಾಲಕೊಡಿ

  ಮೊದಲನೇ ವಾಚನ: 1 ಕೊರಿಂಥಿಯರಿಗೆ 8:1-7, 11-13 ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ...