ಮೊದಲನೇ ವಾಚನ: 1 ಅರಸುಗಳು 17:1-6
ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ,” ಎಂದನು. ಸರ್ವೇಶ್ವರಸ್ವಾಮಿ ಎಲೀಯನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗು; ಜೋರ್ಡನ್ ನದಿಯ ಆಚೆಯಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ. ಆ ಹಳ್ಳದ ನೀರು ನಿನಗೆ ಪಾನವಾಗಿರುವುದು; ನಿನಗೆ ಆಹಾರ ತಂದುಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದರು. ಸರ್ವೇಶ್ವರನ ಅಪ್ಪಣೆಯಂತೆ ಜೋರ್ಡನಿನ ಪೂರ್ವಕ್ಕಿರುವ ಕೆರೀತ್ ಹಳ್ಳದಲ್ಲಿ ಅವನು ವಾಸಿಸಿದನು. ಕಾಗೆಗಳು ಅವನಿಗೆ ಬೆಳಿಗ್ಗೆ ಹಾಗು ಸಂಜೆ ರೊಟ್ಟಿ, ಮಾಂಸ, ಇವುಗಳನ್ನು ತಿನ್ನಲು ತಂದುಕೊಡುತ್ತಿದ್ದವು. ಹಳ್ಳದ ನೀರು ಅವನಿಗೆ ಪಾನವಾಗಿತ್ತು.
ಕೀರ್ತನೆ: 121:1-2, 3-4, 5-6, 7-8
ಶ್ಲೋಕ: ನನಗೆ ಒತ್ತಾಸೆ ಪ್ರಭುವಿನಿಂದ, ಭೂಮ್ಯಾಕಾಶ ಸೃಜಿಸಿದವನಿಂದ
ಶುಭಸಂದೇಶ: ಮತ್ತಾಯ 5:1-12
ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು. ಆಗ ಯೇಸು ಇಂತೆಂದು ಪ್ರಬೋಧಿಸಿದರು. “ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು. ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.” “ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು. ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು, ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು.”
No comments:
Post a Comment