ಮೊದಲನೇ ವಾಚನ: 2 ತಿಮೊಥೇಯನಿಗೆ 3:10-17
ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ. ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು. ಕ್ರಿಸ್ತಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ. ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ. ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು. ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರಗ್ರಂಥದಿಂದಲೇ. ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ. ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.
ಶ್ಲೋಕ: ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ
ಕೀರ್ತನೆ: 119:157,160, 161, 165, 166, 168
ದ್ವೇಷಿಸಿದರು, ಹಿಂಸಿಸಿದರು, ಹಲವರು ನನ್ನನು Iಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು II
ಸತ್ಯವೇ ನಿನ್ನ ವಾಕ್ಯದ ಸಾರಾಂಶ Iನಿನ್ನಯ ನೀತಿವಿಧಿಗಳೆಲ್ಲವೂ ಅನಿಶ II ಪೀಡಿಸುತಿಹರು ನಿಷ್ಕಾರಣವಾಗಿ ರಾಜರುಗಳು Iನಿನ್ನ ವಾಕ್ಯದ ಭೀತಿ ಇಹುದು ನನ್ನ ಹೃದಯದೊಳು II ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ Iವಿಘ್ನಕರವಾದುದೇನೂ ಇರದು ಅಂಥವರಿಗೆ II ರಕ್ಷಣೆಯನು ಪ್ರಭು, ನಿರೀಕ್ಷಿಸುತ್ತಿರುವೆ Iನಿನ್ನ ಆಜ್ಞೆಗಳನು ನಾನು ಕೈಗೊಂಡಿರುವೆ II ಅನುಸರಿಸಿದೆ ನಿನ್ನ ನೇಮನಿಯಮಗಳನೆಲ್ಲ Iನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ II
ಶುಭಸಂದೇಶ: ಮಾರ್ಕ 12:35-37
ಬಳಿಕ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಉಪದೇಶಮಾಡುತ್ತಾ ಈ ಪ್ರಶ್ನೆ ಎತ್ತಿದರು: “ಅಭಿಷಿಕ್ತನಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳು ‘ದಾವೀದನ ಪುತ್ರ’ ಎಂದು ಕರೆಯುತ್ತಾರಲ್ಲಾ! ಅದು ಹೇಗಾದೀತು? ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿಗೆ ಹಾಕುವತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,’ ಎಂದು ದಾವೀದನೇ ಪವಿತ್ರಾತ್ಮಪ್ರೇರಣೆಯಿಂದ ಹೇಳಿದ್ದಾನಲ್ಲಾ! ದಾವೀದನೇ, ಕ್ರಿಸ್ತನನ್ನು ‘ನನ್ನ ಪ್ರಭು’ ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನಾಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.
No comments:
Post a Comment