ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.06.2020 - "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು"

ಮೊದಲನೇ ವಾಚನ ವಿಮೋಚನಕಾಂಡ 34:4-6, 8-9

ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು. ಆಗ ಸರ್ವೇಶ್ವರ ಸ್ವಾಮಿ ಮೇಘಾವೃತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: ಸರ್ವೇಶ್ವರನು; ಸರ್ವೇಶ್ವರನು ಕರುಣಾಮಯನು, ದಯಾಳು ದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ತನು, ಕೂಡಲೇ ಮೋಶೆ ನೆಲದಮೇಲೆ ಅಡ್ಡಬಿದ್ದು ನಮಸ್ಕರಿಸಿ, ಸ್ವಾಮಿ, ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.

ಕೀರ್ತನೆ: 1:29-34

ಶ್ಲೋಕ: ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು

ಎರಡನೇ ವಾಚನ: 2 ಕೊರಿಂಥಿಯರಿಗೆ 13:11-13

ಸಹೋದರರೇ, ಸಂತೋಷದಿಂದಿರಿ, ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿ ಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ. ನಮ್ಮ ಪ್ರಭು ಯೇಸುಕ್ರಿಸ್ತರ ವರಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

ಶುಭಸಂದೇಶ: ಯೊವಾನ್ನ 3:16-18


ಯೇಸು ನಿಕೋದೇಮನಿಗೆ ಎಂತೆಂದರು: "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ.

No comments:

Post a Comment