10.02.2020 - ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.

ಮೊದಲನೇ ವಾಚನ: 1 ಅರಸುಗಳು 8:1-7, 9-13

ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ದಾವೀದನಗರವಾದ ಸಿಯೋನಿನಿಂದ ದೇವಾಲಯಕ್ಕೆ ತರುವುದಕ್ಕಾಗಿ, ಇಸ್ರಯೇಲರ ಹಿರಿಯರು, ಕುಲಗಳ ನಾಯಕರು, ಇವರೇ ಮೊದಲಾದ ಎಲ್ಲ ಇಸ್ರಯೇಲ್ ಪ್ರಮುಖ ವ್ಯಕ್ತಿಗಳು ಜೆರುಸಲೇಮಿಗೆ, ತನ್ನ ಆಸ್ಥಾನಕ್ಕೆ, ಬರಬೇಕೆಂದು ಅರಸ ಸೊಲೊಮೋನನು ಆಜ್ಞಾಪಿಸಿದನು. ಅಂತೆಯೇ ಆ ಇಸ್ರಯೇಲರೆಲ್ಲರು ಏಳನೆಯ ತಿಂಗಳಾದ ಆಶ್ವಯುಜ ಮಾಸದಲ್ಲಿ ಜಾತ್ರೆಯಾಗಿ ಅರಸ ಸೊಲೊಮೋನನ ಬಳಿಗೆ ಕೂಡಿಬಂದರು. ಇಸ್ರಯೇಲರ ಹಿರಿಯರೆಲ್ಲರು ಹೀಗೆ ಕೂಡಿ ಬಂದಿರಲು ಯಾಜಕರು ಸರ್ವೇಶ್ವರನ ಮಂಜೂಷವನ್ನು ಹೊತ್ತುಕೊಂಡರು. ಉಳಿದ ಯಾಜಕರೂ ಲೇವಿಯರೂ ದೇವದರ್ಶನದ ಗುಡಾರ ಹಾಗು ಅದರಲ್ಲಿದ್ದ ಪವಿತ್ರ ವಸ್ತುಗಳನ್ನು ಹೊತ್ತರು. ಅರಸ ಸೊಲೊಮೋನನು ಹಾಗು ಅಲ್ಲಿ ಕೂಡಿ ಬಂದಿದ್ದ ಎಲ್ಲ ಇಸ್ರಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಬಲಿದಾನ ಮಾಡಿದರು. ಯಾಜಕರು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸುವ ಗರ್ಭಗುಡಿಯಲ್ಲಿ, ಕೆರೂಬಿಗಳ ರೆಕ್ಕೆಗಳ ಕೆಳಗೆ, ಅದಕ್ಕೆ ನೇಮಕವಾದ ಸ್ಥಳದಲ್ಲಿಟ್ಟರು. ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವು ಹಾಗು ಅದರ ಕೋಲುಗಳು ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು. ಮಂಜೂಷದಲ್ಲಿ ಎರಡು ಶಿಲಾಶಾಸನಗಳನ್ನು ಬಿಟ್ಟರೆ, ಬೇರೇನೂ ಇರಲಿಲ್ಲ. ಸರ್ವೇಶ್ವರ ಈಜಿಪ್ಟಿನಿಂದ ಬಂದ ಇಸ್ರಯೇಲರೊಡನೆ ಹೋರೇಬ್ ಬೆಟ್ಟದ ಬಳಿ ಒಡಂಬಡಿಕೆ ಮಾಡಿಕೊಂಡಮೇಲೆ, ಮೋಶೆ ಆ ಶಾಸನಗಳನ್ನು ಅದರಲ್ಲಿ ಇಟ್ಟಿದ್ದನು. ಯಾಜಕರು ಆ ಪರಿಶುದ್ಧ ಸ್ಥಳದಿಂದ ಹೊರಗೆ ಬಂದಕೂಡಲೆ ಮೇಘವು ಸರ್ವೇಶ್ವರನ ಆಲಯವನ್ನು ತುಂಬಿಕೊಂಡಿತು. ಸರ್ವೇಶ್ವರನ ತೇಜಸ್ವಿನಿಂದ ವ್ಯಾಪ್ತವಾಗಿದ್ದ ಆ ಮೇಘವು ಆಲಯವನ್ನು ಆವರಿಸಿಕೊಂಡಿದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾಗಲಿಲ್ಲ. ಆಗ ಸೊಲೊಮೋನನು ಹೀಗೆಂದು ಪ್ರಾರ್ಥಿಸಿದನು: “ಹೇ ಸರ್ವೇಶ್ವರ, ರವಿಯನು ಆಗಸದಲ್ಲಿ ಸ್ಥಿರವಿರಿಸಿದ ನೀವು ಆರಿಸಿಕೊಂಡಿರಿ, ಕರಿಮೋಡದಲಿ ವಾಸಿಸಲು ನಾ ನಿರ್ಮಿಸಿರುವ ಈ ಭವ್ಯ ಮಂದಿರ ನಿಮಗಾಗಲಿ ಶಾಶ್ವತವಾದ ನಿವಾಸ.”

ಕೀರ್ತನೆ: 132:6-7, 8-10

ಶ್ಲೋಕ: ಪ್ರಭೂ, ನಿನ್ನ ವಾಸಸ್ಥಾನವನು ಬಂದು ಸೇರು ಬೇಗನೆ.

ಶುಭಸಂದೇಶ: ಮಾರ್ಕ 6:53-56


ಅವರೆಲ್ಲರು ಸರೋವರವನ್ನು ದಾಟಿ ಗೆನಸರೇತ್ ಊರಿನ ದಡ ಸೇರಿದರು. ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು. ಯೇಸು ಹಳ್ಳಿಗಳಿಗಾಗಲಿ ಪಟ್ಟಣಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ ಸಂತೆಬೀದಿ ಚೌಕಗಳಿಗೆ ಕರೆ ತರುತ್ತಿದ್ದರು. ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.

09.02.2020 - "ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು"

ಮೊದಲನೇ ವಾಚನ: ಯೆಶಾಯ 58:7-10

ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ? “ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು.

ಕೀರ್ತನೆ: 112:4-5, 6-7, 8-9

ಶ್ಲೋಕ: ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು.

ಎರಡನೇ ವಾಚನ: 1 ಕೊರಿಂಥಿಯರಿಗೆ 2:1-5

ಸಹೋದರರೇ, ದೇವರ ಸತ್ಯಾರ್ಥವನ್ನು ಸಾರಲು ನಿಮ್ಮಲ್ಲಿಗೆ ನಾನು ಬಂದಾಗ ವಾಕ್ಚಾತುರ್ಯವನ್ನಾಗಲಿ, ಜ್ಞಾನಾಡಂಬರವನ್ನಾಗಲಿ ಪ್ರದರ್ಶಿಸುತ್ತಾ ಬರಲಿಲ್ಲ. ನಾನು ನಿಮ್ಮೊಡನೆ ಇದ್ದಾಗ, ಯೇಸುಕ್ರಿಸ್ತರನ್ನು, ಅದೂ ಶಿಲುಬೆಗೇರಿಸಲಾದ ಯೇಸುವನ್ನು ಹೊರತು ಬೇರೆ ಯಾವುದನ್ನೂ ಅರಿಯಲು ಆಶಿಸಲಿಲ್ಲ. ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ. ನನ್ನ ಬೋಧನೆ ಹಾಗೂ ಮಾತುಕತೆ ಕೇವಲ ಬುದ್ಧಿವಂತಿಕೆಯಿಂದಾಗಲಿ ಮಾತಿನ ಚಮತ್ಕಾರದಿಂದಾಗಲಿ ಕೂಡಿರಲಿಲ್ಲ; ಅದಕ್ಕೆ ಬದಲಾಗಿ ದೇವರ ಆತ್ಮವನ್ನು, ಅವರ ಶಕ್ತಿಯನ್ನು ಸಮರ್ಥಿಸುತ್ತಿದ್ದವು. ಅಂತೆಯೇ ನಿಮ್ಮ ವಿಶ್ವಾಸವು ಮನುಷ್ಯ ಜ್ಞಾನವನ್ನು ಆಧರಿಸದೆ, ದೇವರ ಶಕ್ತಿಯನ್ನು ಆಧರಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.

ಶುಭಸಂದೇಶ: ಮತ್ತಾಯ 5:13-16

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಇಂತೆಂದರು: "ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ." "ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."

08.02.2020 - ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು

ಮೊದಲನೇ ವಾಚನ: 1 ಅರಸುಗಳು 3:4-13

ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ, ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರ ಬಲಿಗಳನ್ನು ಸಮರ್ಪಿಸಿದಾಗ, ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥ ಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣ ಗೊಳಿಸಿದ್ದೀರಿ. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾ ಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ." ಎಂದರು.

ಕೀರ್ತನೆ: 119:9, 10, 11, 12, 13, 14

ಶ್ಲೋಕ: ನಿನ್ನ ಆಜ್ಞೆಗಳನು ಕಲಿಸು ಎನಗೆ

ಶುಭಸಂದೇಶ: ಮಾರ್ಕ 6:30-34


ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟ ಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, “ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.

07.02.2020 - "ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ"

ಮೊದಲನೇ ವಾಚನ: ಸಿರಾಖನು 47:2-11

ಶಾಂತಿ ಬಲಿಪಶುವಿನಿಂದ ಕೊಬ್ಬನ್ನು ಬೇರ್ಪಡಿಸುವಂತೆ ಇಸ್ರಯೇಲರಿಂದ ಮೀಸಲಾದವನು ದಾವೀದನೆ. ಸಿಂಹಗಳನ್ನು ಆಡಿಸಿದನಿವನು ಆಡುಮರಿಗಳಂತೆ ಕರಡಿಗಳೊಂದಿಗೆ ಆಡಿದನು ಕುರಿಮರಿಗಳೊಂದಿಗೆ ಆಡುವಂತೆ. ಈತನೇ ಅಲ್ಲವೆ ತಾರುಣ್ಯದಲಿ ಕವಣೆಕಲ್ಲನು ಕೈಗೆತ್ತಿಕೊಂಡವನು? ಬಲಾಢ್ಯನೂ ಜಂಬಕೋರನೂ ಆದ ಗೊಲ್ಯಾತನನ್ನು ಸಂಹರಿಸಿ ನೆಲಕ್ಕುರುಳಿಸಿದವನು? ಈ ಪರಿ ತನ್ನ ಜನಾಂಗದ ಅವಮಾನವನ್ನು ಹೋಗಲಾಡಿಸಿದವನು? ಇವನು ಮೊರೆಯಿಡಲು ಮಹೋನ್ನತ ಸರ್ವೇಶ್ವರನಿಗೆ ಶಕ್ತಿ ನೀಡಿದನಾತ ಇವನ ಭುಜಬಲಕ್ಕೆ ಯುದ್ಧವೀರನಾದ ಆ ವ್ಯಕ್ತಿಯನ್ನು ಸಂಹರಿಸುವುದಕ್ಕೆ ತನ್ನ ಜನಾಂಗದವರ ಕೀರ್ತಿಪತಾಕೆಯನು ಮೇಲೆತ್ತುವುದಕ್ಕೆ. ಎಂತಲೇ ಜನರು ಗೌರವಿಸಿದರವನನು ‘ಹತ್ತು ಸಾವಿರಗಟ್ಟಲೆ’ ಕೊಂದುದಕ್ಕಾಗಿ ಹೊಗಳಿದರವನನ್ನು ಸರ್ವೇಶ್ವರನ ಆಶೀರ್ವಾದಗಳಿಗಾಗಿ ಮಹಿಮೆಯ ಮುಕುಟ ಕೊಡಲಾಯಿತವನಿಗೆ ಅದಕ್ಕಾಗಿ. ನಾಶಗೊಳಿಸಿದನು ಸುತ್ತಲೂ ಇದ್ದ ಶತ್ರುಗಳನ್ನು ಸೋಲಿಸಿದನು ತನ್ನ ವಿರೋಧಿಗಳಾದ ಫಿಲಿಷ್ಟಿಯರನ್ನು ಮುರಿದು ಪುಡಿಪುಡಿಮಾಡಿದನು ಅವರ ಕಳಸಕೊಂಬನ್ನು ಹಾಗೆಯೇ ಇರುವುದದು ಇಂದಿನವರೆಗು. ಪರಿಶುದ್ಧನು, ಮಹೋನ್ನತನು ಆದಾತನಿಗೆ ಸಲ್ಲಿಸಿದನು ಧನ್ಯವಾದ ತನ್ನ ಎಲ್ಲ ಕಾರ್ಯಗಳಲ್ಲೂ ಗಂಭೀರ ವಚನಗಳಿಂದ. ಆತನನ್ನು ಕೀರ್ತಿಸಿ ಹಾಡಿದನು ಪೂರ್ಣಹೃದಯದಿಂದ, ತನ್ನ ಸೃಷ್ಟಿಕರ್ತನನ್ನು ಪ್ರೀತಿವಾತ್ಸಲ್ಯದಿಂದ. ಇದಲ್ಲದೆ ಗಾಯಕರನ್ನಿರಿಸಿದನು ಬಲಿಪೀಠದ ಮುಂದೆ ಮಧುರ ಗೀತವನ್ನು ಹಾಡಿ ವಂದಿಸುವಂತೆ. ವಿಜೃಂಭಣೆಯನ್ನು ತಂದನು ಉತ್ಸವಗಳಿಗೆ ಉತ್ಸವಕಾಲಗಳಿಗಿತ್ತನು ಪೂರ್ಣವಾದ ಕ್ರಮಬದ್ಧತೆ. ಏರ್ಪಡಿಸಿದನು ಆ ಸಂದರ್ಭಗಳಲ್ಲಿ ಸರ್ವೇಶ್ವರನ ಶ್ರೀನಾಮವನ್ನು ಕೀರ್ತಿಸುವಂತೆ ಪವಿತ್ರಾಲಯದಲ್ಲಿ ಬೆಳಗಿನಿಂದ ಆ ಧ್ವನಿ ಕೇಳಿಬರುವಂತೆ. ಸರ್ವೇಶ್ವರ ಪರಿಹರಿಸಿದನು ಇವನ ಪಾಪವನ್ನು ಶಾಶ್ವತವಾಗಿಸಿದನು ಅವನ ಕೀರ್ತಿ ಪತಾಕೆಯನ್ನು. ಒಡಂಬಡಿಕೆಮಾಡಿ ಶಾಶ್ವತಗೊಳಿಸಿದನು ಅರಸೊತ್ತಿಗೆಯನ್ನು ದಯಪಾಲಿಸಿದನವನಿಗೆ ಇಸ್ರಯೇಲರಲ್ಲಿ ಮಹಿಮಾ ಸಿಂಹಾಸನವನ್ನು.

ಕೀರ್ತನೆ: 18:31, 47, 50, 51

ಶ್ಲೋಕ: ನನ್ನ ಉದ್ಧಾರಕನಾದ ಸರ್ವೇಶ್ವರನಿಗೆ ಸ್ತುತಿಸ್ತೊತ್ರವು

ಶುಭಸಂದೇಶ: ಮಾರ್ಕ 6:14-29

ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು. ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು. ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು. ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದನು. ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನು ಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. 

06.02.2020 - “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,”

ಮೊದಲನೇ ವಾಚನ: 1 ಅರಸುಗಳು 2:1-4, 10-12

ದಾವೀದನ ಮರಣ ಸಮಯ ಸಮೀಪಿಸಿದಾಗ ಅವನು ತನ್ನ ಮಗ ಸೊಲೊಮೋನನಿಗೆ ಹೀಗೆಂದು ಆಜ್ಞಾಪಿಸಿದನು: “ಜಗದ ಜನರೆಲ್ಲರು ಹೋಗುವ ದಾರಿಯನ್ನು ನಾನು ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು. ನಿನ್ನ ಸಾಮರ್ಥ್ಯವನ್ನು ತೋರಿಸು. ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಅವರ ಆಜ್ಞಾ ನಿಯಮ-ವಿಧಿ ನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ ಎಲ್ಲಿಗೆ ಹೋದರೂ ಕೃತಾರ್ಥನಾಗುವೆ. ಇದಲ್ಲದೆ ಸರ್ವೇಶ್ವರ, ‘ನಿನ್ನ ಸಂತಾನದವರು ಪೂರ್ಣ ಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನಗೆ ನಂಬಿಗಸ್ಥರಾಗಿ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿದ್ದರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು,’ ಎಂದು ನನಗೆ ಮಾಡಿದ ವಾಗ್ದಾನವನ್ನು ಅವರು ಸ್ಥಿರಪಡಿಸುವರು. ಅನಂತರ ದಾವೀದನು ಮರಣ ಹೊಂದಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು. ದಾವೀದನು ಇಸ್ರಯೇಲರನ್ನು ಆಳಿದ್ದು ನಾಲ್ವತ್ತು ವರ್ಷ: ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು. ಸೊಲೊಮೋನನು ತನ್ನ ತಂದೆ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯ ಸಮೃದ್ಧಿಯಾಗಿ ಬೆಳೆಯಿತು.

1.ಪೂ.ಕಾ.ಇ.: 29:10-12
ಶ್ಲೋಕ: ಸರ್ವಾಧಿಕಾರ ಬಲಪರಾಕ್ರಮ ಇರುವುದು ಪ್ರಭು ನಿಮ್ಮ ಕೈಯಲ್ಲೆ

ಶುಭಸಂದೇಶ: ಮಾರ್ಕ 6:7-13


ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವ ಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆ ಮಾಡಿದರು. ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿ ಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು. ಶಿಷ್ಯರು ಹೊರಟು ಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು. ದೆವ್ವ ಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲ ಲೇಪನ ಮಾಡಿ ಅನೇಕ ರೋಗಿಗಳನ್ನು ಗುಣ ಪಡಿಸಿದರು.

05.02.2020

ಮೊದಲನೇ ವಾಚನ: 2 ಸಮುವೇಲ 24:2, 9-17

ಅರಸನು ತನ್ನ ಹತ್ತಿರದಲ್ಲಿದ್ದ ಸೇನಾಪತಿಯಾದ ಯೋವಾಬನಿಗೆ, “ಜನಸಂಖ್ಯೆ ಗೊತ್ತಾಗುವ ಹಾಗೆ ನೀನು ದಾನ್ ಊರಿನಿಂದ ಬೇರ್ಷೆಬದವರೆಗೆ ಸಂಚರಿಸಿ ಇಸ್ರಯೇಲ್ ಕುಲಗಳ ಎಲ್ಲ ಜನರನ್ನು ಲೆಕ್ಕಮಾಡಿಕೊಂಡು ಬಾ,” ಎಂದು ಆಜ್ಞಾಪಿಸಿದನು. ಯೋವಾಬನು ಅರಸನಿಗೆ ಒಪ್ಪಿಸಿದ ಜನಗಣತಿಯ ಅಂಕೆಸಂಖ್ಯೆಗಳಲ್ಲಿ ಇಸ್ರಯೇಲರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಎಂಟು ಲಕ್ಷ ಹಾಗು ಯೆಹೂದ್ಯರಲ್ಲಿ ಐದು ಲಕ್ಷ ಇದ್ದರು. ಜನರ ಎಣಿಕೆ ಮಾಡಿಸಿದನಂತರ ದಾವೀದನನ್ನು ಮನಸ್ಸಾಕ್ಷಿ ಕಾಡತೊಡಗಿತು. ಆದುದರಿಂದ ಅವನು, “ಸರ್ವೇಶ್ವರಾ, ನಾನು ಬುದ್ಧಿಹೀನ ಕಾರ್ಯವನ್ನು ಮಡಿ ಪಾಪಿಯಾದೆ; ದಯವಿಟ್ಟು ನಿಮ್ಮ ದಾಸನ ಅಪರಾಧವನ್ನು ಕ್ಷಮಿಸಿ,” ಎಂದು ಪ್ರಾರ್ಥಿಸಿದನು. ಅವನು ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಅವನ ದರ್ಶಿಯಾದ ಗಾದ್‍ಪ್ರವಾದಿಗೆ ಸರ್ವೇಶ್ವರ ದರ್ಶನವಿತ್ತು, “ನೀನು ದಾವೀದನ ಹತ್ತಿರ ಹೋಗಿ ಅವನಿಗೆ, ‘ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವುದನ್ನು ನಿನ್ನ ಮೇಲೆ ಬರಮಾಡಬೇಕೋ ಅದನ್ನು ಆರಿಸಿಕೋ,’ ಎಂದು ಸರ್ವೇಶ್ವರ ನುಡಿಯುತ್ತಾರೆ ಎಂದು ಹೇಳು,” ಎಂದು ಆಜ್ಞಾಪಿಸಿದರು. ಆಗ ಗಾದನು ದಾವೀದನ ಬಳಿಗೆ ಬಂದು, “ನಿಮ್ಮ ನಾಡಿನಲ್ಲಿ ಏಳು ವರ್ಷಗಳ ಬರಗಾಲ ಉಂಟಾಗಬೇಕೋ, ಇಲ್ಲವೇ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳ ತನಕ ನಿನ್ನನ್ನು ಓಡಿಸಿ ಬಿಡಬೇಕೋ, ಇಲ್ಲವೆ ನಿನ್ನ ನಾಡಿನಲ್ಲಿ ಮೂರು ದಿನಗಳವೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದನು. ಅದಕ್ಕೆ ದಾವೀದನು, “ನಾನು ಬಲು ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದೇನೆ. ಸರ್ವೇಶ್ವರನ ಕೈಯಲ್ಲೆ ಬೀಳುತ್ತೇನೆ; ಅವರು ಕೃಪಾಪೂರ್ಣರು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆ,” ಎಂದು ಹೇಳಿ ವ್ಯಾಧಿಯನ್ನು ಆಯ್ದುಕೊಂಡನು. ಆಗ ಸರ್ವೇಶ್ವರ ಇಸ್ರಯೇಲರ ಮೇಲೆ ವ್ಯಾಧಿಯನ್ನು ಬರಮಾಡಿದರು. ಅದು ಹೊತ್ತಾರೆಯಿಂದ ನೇಮಕವಾದ ಹೊತ್ತಿನವರೆಗೂ ಇತ್ತು. ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿದ್ದ ಇಸ್ರಯೇಲರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು. ದೇವದೂತನು ಜೆರುಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಸರ್ವೇಶ್ವರ ಆ ಕೇಡಿನ ವಿಷಯದಲ್ಲಿ ನೊಂದುಕೊಂಡು, ಸಂಹಾರಕ ದೂತನಿಗೆ, “ಈಗ ಸಾಕು, ನಿನ್ನ ಕೈಯನ್ನು ಹಿಂತೆಗೆ,” ಎಂದು ಆಜ್ಞಾಪಿಸಿದರು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು. ದಾವೀದನು ಜನಸಂಹಾರಕ ದೂತನನ್ನು ಕಂಡಾಗ ಸರ್ವೇಶ್ವರನಿಗೆ, “ಮೂರ್ಖತನದಿಂದ ಪಾಪಮಾಡಿದವನು ನಾನು; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ನಿಮ್ಮ ಕೈ ನನ್ನನ್ನೂ ನನ್ನ ಮನೆಯವರನ್ನೂ ಶಿಕ್ಷಿಸಲಿ,” ಎಂದು ಬೇಡಿಕೊಂಡನು.

ಕೀರ್ತನೆ: 32:1-2, 5 6-7
ಶ್ಲೋಕ: ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ

ಶುಭಸಂದೇಶ: ಮಾರ್ಕ 6:1-6

ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. ಆಗ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,” ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು. 

04.02.2020

ಮೊದಲನೇ ವಾಚನ: 2 ಸಮುವೇಲ 18:9-10, 14, 24-25, 30-19:3

ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಅದು ಹೇಗೆಂದರೆ, ಅವನು ಹತ್ತಿದ್ದ ಹೇಸರಗತ್ತೆ ಒಂದು ದೊಡ್ಡ ಓಕ್‍ಮರದ ಕೆಳಗೆ ಹಾದುಹೋಗುವಾಗ ಅವನ ತಲೆ ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಆ ಹೇಸರಗತ್ತೆ ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯೆ ನೇತಾಡಬೇಕಾಯಿತು. ಇದನ್ನು ನೋಡಿದ ಒಬ್ಬ ವ್ಯಕ್ತಿ ಯೋವಾಬನಿಗೆ, “ನೋಡಿ, ಆ ಓಕ್‍ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆ,” ಎಂದು ಹೇಳಿದನು. ಆಗ ಯೋವಾಬನು, “ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ,” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು. ದಾವೀದನು ಎರಡು ಬಾಗಿಲುಗಳ ಮಧ್ಯೆ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಾಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ವ್ಯಕ್ತಿಯನ್ನು ಕಂಡನು. ಅವನು ಕೂಡಲೆ ದಾವೀದನಿಗೆ ತಿಳಿಸಿದನು. ದಾವೀದನು, “ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು,” ಎಂದನು. ಆ ವ್ಯಕ್ತಿ ಬರಬರುತ್ತಾ ಸಮೀಪವಾದನು. ಆಗ ಅರಸನು, “ನೀನು ಇತ್ತ ನಿಲ್ಲು,” ಎಂದು ಆಜ್ಞಾಪಿಸಿದನು; ಅವನು ಅಂತೆಯೇ ನಿಂತನು. ಅಷ್ಟರಲ್ಲಿ ಆ ಕೂಷ್ಯನೂ ಬಂದು, “ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ; ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ,” ಎಂದನು. ಅರಸನು ಅವನನ್ನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೆಯೋ?” ಎಂದು ಕೇಳಿದನು. ಅವನು, “ನನ್ನ ಒಡೆಯರಾದ ಅರಸರ ಶತ್ರುಗಳಿಗೂ, ಅವರಿಗೆ ಕೇಡು ಮಾಡುವುದಕ್ಕೆ ನಿಂತವರೆಲ್ಲರಿಗೂ ಆ ಯುವಕನಿಗಾದ ಗತಿಯೇ ಆಗಲಿ!” ಎಂದು ಉತ್ತರಕೊಟ್ಟನು. ಇದನ್ನು ಕೇಳಿದ್ದೇ ಅರಸನ ಎದೆಯೊಡೆಯಿತು. ಅವನು, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು! ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಕೂಗಿ ಗೋಳಿಡುತ್ತಾ ಹೆಬ್ಬಾಗಿಲಿನ ಮೇಲಿದ್ದ ಕೋಣೆಗೆ ಹೋದನು. ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ಸಮಾಚಾರ ಯೋವಾಬನಿಗೆ ಮುಟ್ಟಿತು. ಅರಸನು ಮಗನಿಗಾಗಿ ಪ್ರಲಾಪಿಸುತ್ತಿದ್ದಾನೆಂಬುದು ಎಲ್ಲ ಜನರಿಗೂ ಗೊತ್ತಾಗಿ ಅವರ ಜಯಘೋಷ ಗೋಳಾಟವಾಗಿ ಮಾರ್ಪಟ್ಟಿತು. ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.

ಕೀರ್ತನೆ: 86:1-2, 3-4, 5-6
ಶ್ಲೋಕ: ಹೇ ಪ್ರಭೂ, ನೀಡೆನಗೆ ಸದುತ್ತರವನು

ಶುಭಸಂದೇಶ: ಮಾರ್ಕ 5:21-43

 ಯೇಸುಸ್ವಾಮಿ ದೋಣಿಯನ್ನೇರಿ ಸರೋವರದ ಈಚೆದಡಕ್ಕೆ ಮರಳಿದರು. ತೀರವನ್ನು ಸೇರಿದೊಡನೆ ಜನರು ದೊಡ್ಡಗುಂಪಾಗಿ ಅವರ ಸುತ್ತಲೂ ನೆರೆದರು. ಪ್ರಾರ್ಥನಾಮಂದಿರದ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನ ಹೆಸರು ಯಾಯೀರ. ಅವನು ಯೇಸುವನ್ನು ನೋಡಿದೊಡನೆ ಅವರ ಪಾದಕ್ಕೆರಗಿ, “ನನ್ನ ಪುಟ್ಟ ಮಗಳು ಮರಣಾವಸ್ಥೆಯಲ್ಲಿದ್ದಾಳೆ; ತಾವು ಬಂದು ತಮ್ಮ ಹಸ್ತವನ್ನು ಅವಳ ಮೇಲಿಟ್ಟು, ಅವಳು ಗುಣಹೊಂದಿ ಬದುಕುವಂತೆ ಅನುಗ್ರಹಿಸಬೇಕು,” ಎಂದು ಬಹಳವಾಗಿ ವಿನಂತಿಸಿದನು. ಯೇಸು ಅವನ ಜೊತೆಯಲ್ಲಿ ಹೊರಟರು. ದೊಡ್ಡ ಜನಸ್ತೋಮವು ಯೇಸುವನ್ನು ಮುತ್ತಿಕೊಂಡು ಅವರ ಜೊತೆಯಲ್ಲೇ ಹೊರಟಿತು. ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿದ್ದಳು. ಅನೇಕ ವೈದ್ಯರಿಂದ ಚಿಕಿತ್ಸೆ ಪಡೆದಿದ್ದರೂ ಕೈಯಲ್ಲಿದ್ದ ಹಣವನ್ನೆಲ್ಲಾ ವ್ಯಯ ಮಾಡಿದ್ದರೂ ಅವಳ ರೋಗ ಮಾತ್ರ ಉಲ್ಬಣ ಆಗುತ್ತಿತ್ತೇ ಹೊರತು ಸ್ವಲ್ಪವೂ ಗುಣಮುಖ ಆಗುತ್ತಿರಲಿಲ್ಲ. ಯೇಸುವಿನ ವಿಷಯವಾಗಿ ಜನರು ಹೇಳುತ್ತಿದ್ದುದನ್ನು ಆಕೆ ಕೇಳಿ, ಜನರ ಗುಂಪಿನಲ್ಲಿ ಸೇರಿ, ಯೇಸುವನ್ನು ಹಿಂಬಾಲಿಸಿದಳು. “ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು” ಎಂದುಕೊಂಡು ಯೇಸುವಿನ ಉಡುಪನ್ನು ಮುಟ್ಟಿದಳು. ಅದನ್ನು ಮುಟ್ಟಿದಾಕ್ಷಣ ಅವಳ ರಕ್ತಸ್ರಾವ ನಿಂತುಹೋಯಿತು. ಕಾಡುತ್ತಿದ್ದ ವ್ಯಾಧಿಯಿಂದ ತಾನು ಗುಣಹೊಂದಿದ್ದೇನೆಂದು ಆಕೆಗೆ ಅರಿವಾಯಿತು. ಇತ್ತ ಯೇಸು, ರೋಗವನ್ನು ಗುಣಪಡಿಸುವ ಶಕ್ತಿ ತಮ್ಮಿಂದ ಹೊರಹೊಮ್ಮಿದ್ದನ್ನು ತಕ್ಷಣ ತಿಳಿದು, ಸುತ್ತಲಿದ್ದ ಜನರತ್ತ ತಮ್ಮ ದೃಷ್ಟಿಯನ್ನು ಹರಿಸಿ, “ನನ್ನ ಉಡುಪನ್ನು ಮುಟ್ಟಿದವರಾರು?” ಎಂದು ಪ್ರಶ್ನಿಸಿದರು. ಅದಕ್ಕೆ ಶಿಷ್ಯರು, “ತಮ್ಮ ಸುತ್ತಲೂ ಜನರು ಮುತ್ತಿಕೊಂಡಿರುವುದು ತಮಗೆ ತಿಳಿದೇ ಇದೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು?’ ಎಂದು ಕೇಳುತ್ತೀರಲ್ಲಾ” ಎಂದರು. ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರೆಂದು ಗುರುತಿಸಲು ಸುತ್ತಲೂ ನೋಡುತ್ತಿದ್ದರು. ತನ್ನಲ್ಲಿ ಸಂಭವಿಸಿದ್ದನ್ನು ಅರಿತಿದ್ದ ಆ ಮಹಿಳೆ ಭಯದಿಂದ ನಡುಗುತ್ತಾ ಮುಂದೆ ಬಂದು ಯೇಸುವಿನ ಪಾದಕ್ಕೆ ಎರಗಿ, ಅವರಿಗೆ ನಡೆದ ಸಂಗತಿಯನ್ನು ತಿಳಿಸಿದಳು. ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು, ವ್ಯಾಧಿಮುಕ್ತಳಾಗಿ ಆರೋಗ್ಯದಿಂದಿರು,” ಎಂದು ಅನುಗ್ರಹಿಸಿದರು. ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ ಯಾಯಿರನ ಮನೆಯಿಂದ ಕೆಲವರು ಬಂದು ಅವನಿಗೆ, “ನಿಮ್ಮ ಮಗಳು ತೀರಿಹೋದಳು; ಇನ್ನೇಕೆ ಗುರುವಿಗೆ ತೊಂದರೆ ಕೊಡುತ್ತೀರಿ?” ಎಂದರು. ಅವರು ಹೇಳಿದ ಮಾತುಗಳನ್ನು ಯೇಸು ಕೇಳಿಯೂ ಅವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಯಾಯಿರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸ ಒಂದಿದ್ದರೆ ಸಾಕು,” ಎಂದರು. ಅನಂತರ ಪೇತ್ರ, ಯಕೋಬ ಹಾಗೂ ಅವನ ಸೋದರ ಯೊವಾನ್ನ, ಇವರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಯಾಯಿರನ ಮನೆಯನ್ನು ತಲುಪಿದರು. ಅಲ್ಲಿ ಜನರ ಗೋಳಾಟ, ಗೊಂದಲದ ದೃಶ್ಯ ಅವರ ಕಣ್ಣಿಗೆ ಬಿತ್ತು. ಯೇಸು ಮನೆಯೊಳಕ್ಕೆ ಹೋಗಿ, “ಏತಕ್ಕೆ ಇಷ್ಟೆಲ್ಲಾ ಗಲಭೆ, ಗೋಳಾಟ? ಬಾಲಕಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಇದನ್ನು ಕೇಳಿದ ಜನರು, ಯೇಸುವನ್ನು ಪರಿಹಾಸ್ಯ ಮಾಡಿದರು. ಆದರೆ ಯೇಸು ಎಲ್ಲರನ್ನೂ ಹೊರಗೆ ಕಳುಹಿಸಿ ಬಾಲಕಿಯ ತಂದೆತಾಯಿಯನ್ನು ಮತ್ತು ತಮ್ಮೊಂದಿಗಿದ್ದ ಮೂವರು ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಬಾಲಕಿಯನ್ನು ಮಲಗಿಸಿದ್ದ ಕೊಠಡಿಯನ್ನು ಪ್ರವೇಶಿಸಿದರು. ಆಕೆಯ ಕೈಯನ್ನು ಹಿಡಿದು, “ತಲಿಥಾಕೂಮ್” ಎಂದರು. (‘ಮಗಳೇ, ನಿನಗೆ ಹೇಳುತ್ತೇನೆ, ಎದ್ದೇಳು’ ಎಂಬುದು ಆ ಮಾತಿನ ಅರ್ಥ) ಅವಳು ತಟ್ಟನೆ ಎದ್ದು ನಡೆದಾಡತೊಡಗಿದಳು. ಅಲ್ಲಿದ್ದವರೆಲ್ಲರೂ ಆಶ್ಚರ್ಯ ಭರಿತರಾದರು. ಅವಳಿಗೆ ಹನ್ನೆರಡು ವರ್ಷ ವಯಸ್ಸು ಆಗಿತ್ತು. ಈ ವಿಷಯವನ್ನು ಬೇರೆ ಯಾರಿಗೂ ತಿಳಿಸಬಾರದೆಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಬಾಲಕಿಗೆ ತಿನ್ನಲು ಏನಾದರೂ ಕೊಡುವಂತೆ ತಿಳಿಸಿದರು.

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...