ಮೊದಲನೇ ವಾಚನ: 1 ಅರಸುಗಳು 2:1-4, 10-12
ದಾವೀದನ ಮರಣ ಸಮಯ ಸಮೀಪಿಸಿದಾಗ ಅವನು ತನ್ನ ಮಗ ಸೊಲೊಮೋನನಿಗೆ ಹೀಗೆಂದು ಆಜ್ಞಾಪಿಸಿದನು: “ಜಗದ ಜನರೆಲ್ಲರು ಹೋಗುವ ದಾರಿಯನ್ನು ನಾನು ಈಗ ಹಿಡಿಯಬೇಕು; ನೀನು ಧೈರ್ಯದಿಂದಿರು. ನಿನ್ನ ಸಾಮರ್ಥ್ಯವನ್ನು ತೋರಿಸು. ನಿನ್ನ ದೇವರಾದ ಸರ್ವೇಶ್ವರಸ್ವಾಮಿಯ ಕಟ್ಟಳೆಯನ್ನು ಕೈಗೊಂಡು ಅವರ ಮಾರ್ಗದಲ್ಲೇ ನಡೆದುಕೋ; ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಅವರ ಆಜ್ಞಾ ನಿಯಮ-ವಿಧಿ ನಿರ್ಣಯಗಳನ್ನು ಪಾಲಿಸು. ಹೀಗೆ ಮಾಡುವುದಾದರೆ ನೀನು ಏನು ಮಾಡಿದರೂ ಎಲ್ಲಿಗೆ ಹೋದರೂ ಕೃತಾರ್ಥನಾಗುವೆ. ಇದಲ್ಲದೆ ಸರ್ವೇಶ್ವರ, ‘ನಿನ್ನ ಸಂತಾನದವರು ಪೂರ್ಣ ಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನಗೆ ನಂಬಿಗಸ್ಥರಾಗಿ ನಡೆದುಕೊಳ್ಳುವುದರಲ್ಲಿ ಜಾಗರೂಕರಾಗಿದ್ದರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು,’ ಎಂದು ನನಗೆ ಮಾಡಿದ ವಾಗ್ದಾನವನ್ನು ಅವರು ಸ್ಥಿರಪಡಿಸುವರು. ಅನಂತರ ದಾವೀದನು ಮರಣ ಹೊಂದಿ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು. ದಾವೀದನು ಇಸ್ರಯೇಲರನ್ನು ಆಳಿದ್ದು ನಾಲ್ವತ್ತು ವರ್ಷ: ಹೆಬ್ರೋನಿನಲ್ಲಿ ಏಳು ವರ್ಷ, ಜೆರುಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳಿದನು. ಸೊಲೊಮೋನನು ತನ್ನ ತಂದೆ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯ ಸಮೃದ್ಧಿಯಾಗಿ ಬೆಳೆಯಿತು.
1.ಪೂ.ಕಾ.ಇ.: 29:10-12
ಶ್ಲೋಕ: ಸರ್ವಾಧಿಕಾರ ಬಲಪರಾಕ್ರಮ ಇರುವುದು ಪ್ರಭು ನಿಮ್ಮ ಕೈಯಲ್ಲೆ
ಶುಭಸಂದೇಶ: ಮಾರ್ಕ 6:7-13
ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವ ಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆ ಮಾಡಿದರು. ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿ ಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು. ಶಿಷ್ಯರು ಹೊರಟು ಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು. ದೆವ್ವ ಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲ ಲೇಪನ ಮಾಡಿ ಅನೇಕ ರೋಗಿಗಳನ್ನು ಗುಣ ಪಡಿಸಿದರು.
No comments:
Post a Comment