07.09.2019 - "ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,"

ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:21-23

ಸಹೋದರರೇ, ಹಿಂದೆ ನೀವು ಆಚಾರವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದೀರಿ. ಈಗಲಾದರೋ ಯೇಸುಕ್ರಿಸ್ತರ ದೈಹಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ. ಇನ್ನು ನೀವು ವಿಶ್ವಾಸದಲ್ಲಿ ದೃಡವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ  ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವ ಸೃಷ್ಟಿಗೂ ಸಾರಲಾಗುತ್ತಿದೆ.

ಕೀರ್ತನೆ: 54:3-4, 6, 8  

ಶ್ಲೋಕ: ನನಗಿದೋ ದೇವನೇ ಸಹಾಯಕನು

ಶುಭಸಂದೇಶ: ಲೂಕ 6:1-5

ಒಂದು ಸಬ್ಬತ್ ದಿನ ಯೇಸುಸ್ವಾಮಿ, ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾಂಭಿಸಿದರು.  ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, "ಸಬ್ಬತ್ ದಿನದಲ್ಲಿ ನಿಷಿದ್ದವಾದುದನ್ನು ನೀವು ಮಾಡುವುದೇಕೆ?" ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, "ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ," ಎಂದು ಉತ್ತರಕೊಟ್ಟರು.

06.09.0219 - "ಹಳೇ ಮದ್ಯ ಕುಡಿದವನಿಗೆ ಹೊಸದು ರುಚಿಸುವುದಿಲ್ಲ"

ಮೊದಲನೇ ವಾಚನ: ಕೊಲೊಸ್ಸೆಯರಿಗೆ1:15-20 



ಸಹೋದರರೇ, ಅದೃಶ್ಯದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಅಧಿಪತ್ಯವಾಗಿರಲಿ, ಆದುದೆಲ್ಲವೂ ಆತನಲಿ, ಆತನಿಂದ, ಆತನಿಗಾಗಿ ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲ್ಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ, ತನ್ನ ಸರ್ವ ಸಂಪೂರ್ಣತೆಯನು, ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ ನಡೆದಿದೆ ದೇವನೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.

ಕೀರ್ತನೆ: 100:1-2, 3, 4-5
ಶ್ಲೋಕ: ಹಾಡುತ, ಪಾಡುತ, ಬನ್ನಿ ಪ್ರಭುವಿನ ಸನ್ನಿಧಿಗೆ

ಶುಭಸಂದೇಶ: ಲೂಕ 5:33-39


ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, "ಯೊವಾನ್ನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆ ಮಾಡುತ್ತಾರೆ. ನಿನ್ನ ಶಿಷ್ಯರಾದರೋ ತಿಂದು ಕುಡಿಯುವುದರಲ್ಲಿಯೇ ಇದ್ದಾರೆ," ಎಂದು ಅವರನ್ನು ಮೋದಲಿಸಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿರುವಾಗ ಮದುವೆಯ ಅತಿಥಿಗಳನ್ನು ಉಪವಾಸವಿರಿಸಲಾದೀತೆ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು. ಆ ದಿನಗಳು ಬಂದಾಗ ಅವರು ಉಪವಾಸಮಾಡುವರು," ಎಂದು ಉತ್ತರಕೊಟ್ಟರು. ಮತ್ತೆ ಅವರಿಗೆ ಯೇಸು ಈ ಸಾಮತಿಯನ್ನು ಹೇಳಿದರು: "ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ, ಹಾಗೆ ಮಾಡಿದ್ದೇ ಆದರೆ ಹೊಸದೂ ಹರಕಲಾಗಿ, ಹಳೆಯದೂ ಹೊಸ ತೇಪೆಗೆ ಹೊಂದಿಕೆಯಾಗದೆ ಹೋಗುತ್ತದೆ, ಅಂತೆಯೇ, ಹಳೆಯ ಬುದ್ದಲಿಗಳೂ ಹಾಳಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು. ಹಳೇ ಮದ್ಯ ಕುಡಿದವನಿಗೆ ಹೊಸದು ರುಚಿಸುವುದಿಲ್ಲ. ಅವನು ಹಳೆಯದೇ ಶ್ರೇಷ್ಠವೆನ್ನುತ್ತಾನೆ," ಎಂದರು.

05.09.2019 - "ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,"

ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:9-14


ಸಹೋದರರೇ, ಹೀಗಿರುವುದರಿಂದ ಈ ವಿಷಯವನ್ನು ನಾವು ಕೇಳಿದ ದಿನದಿಂದಲೂ ನಿಮಗಾಗಿ ಸದಾ ಪ್ರಾರ್ಥಿಸುತ್ತಲೇ ಇದ್ದೇವೆ. ನೀವು ಪರಿಪೂರ್ಣ ವಿವೇಕದಿಂದಲೂ ಆಧ್ಯಾತ್ಮಿಕ ಜ್ಞಾನದಿಂದಲೂ ದೇವರ ಚಿತ್ತವನ್ನು ಸಂಪೂರ್ಣವಾಗಿ ಅರಿಯಬೇಕೆಂಬುದೇ ನಮ್ಮ ಕೋರಿಕೆ. ಆಗ ಎಲ್ಲ ವಿಷಯಗಳಲ್ಲಿಯೂ ಪ್ರಭು ಯೇಸು ಮೆಚ್ಚುವ ರೀತಿಯಲ್ಲಿ ನೀವು ಜೀವಿಸುವಿರಿ.  ನಾನಾ ತರಹದ ಸತ್ಕಾರ್ಯಗಳನ್ನು ಕೈಗೊಳ್ಳುವಿರಿ. ಸತ್ಫಲವನ್ನೀಯುವ ದೈವಜ್ಞಾನದಲ್ಲಿ ವೃದ್ಧಿಹೊಂದುವಿರಿ. ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಿಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮೋಚನೆ ಲಭಿಸಿದೆ.

ಕೀರ್ತನೆ: 98:2-3, 3-4, 5-6

ಶ್ಲೋಕ: ಪ್ರಕಟಿಸಿಹನಾ ಪ್ರಭು ಮುಕ್ತಿವಿಧಾನವನು

ಶುಭಸಂದೇಶ: ಲೂಕ 5:1-11


ಒಮ್ಮೆ ಯೇಸುಸ್ವಾಮಿ ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. ಬೋಧನೆ ಮುಗಿದದ್ದೇ ಸಿಮೋನನಿಗೆ, "ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಹಿಸಿ, ಮೀನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ," ಎಂದರು. ಅದಕ್ಕೆ ಸಿಮೋನನು "ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆಕೊಟ್ಟು ಬಲೆಗಳನ್ನು ಹಾಕುತ್ತೇವೆ," ಎಂದನು. ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದು ಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಬಿಸಿದವು. ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, "ಸ್ವಾಮೀ, ನಾನು ಪಾಪಾತ್ಮ; ನನ್ನಿಂದ ದೂರವಿರಿ!" ಎಂದನು. ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, "ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ," ಎಂದರು. ಆ ಬೆಸ್ತರು ದೋಣಿಯನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನೂ ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.

04.09.2019 - "ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ"

ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:1-8

ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗೂ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಸಹೋದರರಿಗೆ ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾದ ಪೌಲನು ಮತ್ತು ಸಹೋದರ ತಿಮೊಥೇಯನು ಬರೆಯುವ ಪತ್ರ. ನಮ್ಮ ತಂದೆಯಾದ ದೇವರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮ್ಮಲ್ಲಿರಲಿ. ನೀವು ಪ್ರಭು ಯೇಸುಕ್ರಿಸ್ತರಲ್ಲಿ ಇಟ್ಟಿರುವ ವಿಶ್ವಾಸ ಹಾಗು ದೇವಜನರಲ್ಲಿ ನೀವು ಇರಿಸಿರುವ ಪ್ರೀತಿ ಇವುಗಳ ಬಗ್ಗೆ ನಾವು ಕೇಳಿದ್ದೇವೆ. ಇದಕ್ಕಾಗಿ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಲ್ಲಿ ಪ್ರಾರ್ಥಿಸುವಾಗಲೆಲ್ಲ ನಿಮಗಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಸತ್ಯ ವಾಕ್ಯದ, ಅಂದರೆ ಶುಭಸಂದೇಶದ ಮೂಲಕ ನೀವು ಕೇಳಿ ತಿಳಿದಂಥ ಹಾಗೂ ನಿರೀಕ್ಷಿಸುವಂಥ ಸೌಭಾಗ್ಯವನ್ನು ನೀವು ತಿಳಿದ ದಿನದಿಂದಲೂ ನಿಮ್ಮಲ್ಲಿ ಶುಭಸಂದೇಶವು ಹೇಗೆ ಫಲಭರಿತವಾಗುತ್ತಿದೆಯೋ ಹಾಗೆ ಈ ಶುಭಸಂದೇಶವು ಜಗತ್ತಿನ ಎಲ್ಲೆಡೆಯೂ ಹಬ್ಬಿ ಹರಡುತ್ತಲಿದೆ. ಈ ಶುಭಸಂದೇಶವನ್ನು ಕ್ರಿಸ್ತ ಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ. ಪವಿತ್ರಾತ್ಮ ಅವರು ನಿಮಗೆ ಅನುಗ್ರಹಿಸಿದ ಪ್ರೀತಿಯ ಬಗ್ಗೆ ನಮಗೆ ತಿಳಿಸಿದವನು ಸಹ ಆತನೇ.

ಕೀರ್ತನೆ: 52:10, 11

ಶ್ಲೋಕ: ದೇವರ ಸ್ಥಿರ ಪ್ರೀತಿಯನ್ನು ಯುಗಯುಗಾಂತರಕ್ಕೂ ನಂಬಿಕೊಂಡಿರುವೆನು.

ಶುಭಸಂದೇಶ: ಲೂಕ 4:38-44


ಪ್ರಾರ್ಥನಾಮಂದಿರದಿಂದ ಹೊರಟು ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಸಿಮೋನನ ಅತ್ತೆ ವಿಷಮ ಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟು ಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟು ಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧ ವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು. ಅನೇಕರ ಮೈಮೇಲಿದ್ದ ದೆವ್ವಗಳು ಸಹ, "ನೀವು ದೇವರ ಪುತ್ರ", ಎಂದು ಬೊಬ್ಬೆ ಹಾಕುತ್ತಾ ಬಿಟ್ಟು ಹೋದವು. ಇವರೇ "ಕ್ರಿಸ್ತ" ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನ ಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟು ಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು. ಅವರಿಗೆ ಯೇಸು, "ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ," ಎಂದರು. ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರದಲ್ಲಿ ಯೇಸು ಬೋಧಿಸುತ್ತಿದ್ದರು.

03.09.2019 - ""ಸುಮ್ಮನಿರು, ಇವನನ್ನು ಬಿಟ್ಟು ತೊಲಗು,"

ಮೊದಲನೇ ವಾಚನ: 1 ಥೆಸಲೋನಿಯರಿಗೆ 5:1-6, 9-11

ಸಹೋದರರೇ, ಇದೆಲ್ಲ ನಡೆಯಲ್ಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ. ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಬ್ರ್ ಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು. ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ. ಅಂದ ಮೇಲೆ, ಇತರರಂತೆ ನಾವು ನಾದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ. ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ, ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೇ ನಮಗಾಗಿ ಅವರು ಸಾವನ್ನಪ್ಪಿದರು. ಆದುದರಿಂದ ನೀವು ಈಗ ನಡೆದುಕೊಳ್ಳುತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿದರು.

ಕೀರ್ತನೆ: 27:1, 4, 13-14

ಶ್ಲೋಕ: ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು

ಶುಭಸಂದೇಶ: ಲೂಕ 4:31-37


ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್ ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು. ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. ದುಷ್ಟ ದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು. ಅವನು, "ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು," ಎಂದು ಗಟ್ಟಿಯಾಗಿ ಕಿರುಚಿದನು. ಆದರೆ ಯೇಸು ಅವನನ್ನು ಗದರಿಸಿ, "ಸುಮ್ಮನಿರು, ಇವನನ್ನು ಬಿಟ್ಟು ತೊಲಗು," ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೇಡುಕನ್ನೂ ಮಾಡದೆ ಅವನನ್ನು ಬಿಟ್ಟುಹೋಯಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. "ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವಲ್ಲಾ!" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.

02.09.2019 - "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು"

ಮೊದಲನೇ ವಾಚನ: 1 ಥೆಸಲೋನಿಯರಿಗೆ 4:13-18

ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ, ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದೆ ಇತರರಂತೆ ಮೃತರಿಗಾಗಿ ನೀವು ದು:ಖಿಸಬಾರದು. ಯೇಸು ಸತ್ತು ಪುನರುತ್ದಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ? ಹಾಗೆಯೇ, ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣ ಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ. ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಮಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಗಿಂತಲೂ ಮುಂದಿನವರಾಗುವುದಿಲ್ಲ. ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿ ಬಂದಾಗ, ದೇವರ ತುತ್ತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದು ಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದು ಬರುತ್ತಾರೆ. ಆಮೇಲೆ, ಇನ್ನೂ ಬದುಕಿರುವ ನಾವು ಎದ್ದು ಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ.  ಹೀಗೆ ಸರ್ವದಾ ನಾವು ಪ್ರಭುವಿನೊಂದಿಗೆ ಇರುತ್ತೇವೆ. ಆದ್ದರಿಂದ, ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.

ಕೀರ್ತನೆ: 96:1, 3, 4-5, 11-12, 13

ಶ್ಲೋಕ: ಪ್ರಭು ಧರೆಗೆ ನ್ಯಾಯ ತೀರಿಸಲು ಬಂದೇ ಬರುವನು ಖರೆಯಾಗಿ

ಶುಭಸಂದೇಶ: ಲೂಕ 4:16-30


ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾ ಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: "ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ," ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು  ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. "ಇವನು ಜೋಸೆಫನ ಮಗನಲ್ಲವೇ?" ಎಂದು ಮಾತನಾಡಿಕೊಂಡರು. ಆನಂತರ ಯೇಸು ಅವರಿಗೆ, "ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ," ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ, "ಕಫೆರ್ನವುಮಿನಲ್ಲಿ ನೀನು ಎಂಥೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು," ಎಂದು ಹೇಳುವಿರಿ. ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠ ರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನು ಬಿಟ್ಟ ಮಿಕ್ಕ ಯಾರೂ ಗುಣಮುಖರಾಗಲಿಲ್ಲ," ಎಂದು ಹೇಳಿದರು. ಇದನ್ನು ಕೇಳಿ ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು, ಯೇಸುವನ್ನು ಆ ಊರ ಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ. ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

01.09.2019 - "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ"

ಮೊದಲನೇ ವಾಚನ: ಸಿರಾಖ 3:17-18, 20, 28-29


ಮಗನೇ, ಕರ್ತವ್ಯ ನಿರ್ವಹಣೆಯಲ್ಲಿ ವಿನಯದಿಂದ ವರ್ತಿಸುವೆಯಾದರೆ, ದೇವರ ಯ್ಯೋಗ್ಯರಾದವರ ಪ್ರೀತಿಗೆ ನೀನೂ ಪಾತ್ರನಾಗುವೆ. ನೀನು ದೊಡ್ಡವನಾಗೀರುವಷ್ಟು ನಿನ್ನನ್ನೇ ತಗ್ಗಿಸಿಕೊಂಡೆಯಾದರೆ ದೇವರ ಸನ್ನಿಧಿಯಲ್ಲಿ ನಿಮಗೆ ಗಿಟ್ಟುವುದು ಕರುಣೆ, ಅಪೂರ್ವವಾದುದು ದೇವರ ಬಲ ದೀನರಿಂದ ಆತನಿಗೆ ಸಲ್ಲುವುದು ಘನಮಾನ. ಖಂಡನೆಯಿಂದ ಗುಣವಾಗದು ಗರ್ವಿಗೆ ದುಷ್ಟತನದ ಬಳ್ಳಿ ಬೇರೂರಿದೆ ಅವನಲ್ಲೇ,  ವಿವೇಕ ಮನಸ್ಸುಳ್ಳವರು ಪಾಠ ಕಲಿಯುವರು ಸಾಮತಿಗಳಂದ ಲಕ್ಷವಿಟ್ಟು ಕೇಳುವನು ಜ್ಞಾನಿ ಹೆಬ್ಬಯಕೆಯಿಂದ.

ಕೀರ್ತನೆ: 68:4-5, 6-7, 10-11

ಶ್ಲೋಕ: ದೇವಾ ಆಸ್ಥೆಯಿಂದೊದಗಿಸಿದೆ ದೀನದಲಿತರಿಗೆ

ಎರಡನೇ ವಾಚನ: ಹಿಬ್ರಿಯರಿಗೆ 12:18-19, 22-24

ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು. ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ; ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ;  ಅಸಂಖ್ಯಾತ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜ್ಯೇಷ್ಠಪುತ್ರನ ಸಭೆಗೆ; ನೀವು  ಬಂದಿರುವುದು ಸಕಲ ಮಾನವರ ನ್ಯಾಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.

ಶುಭಸಂದೇಶ: ಲೂಕ 14:7-14


ಅಂದು ಸಬ್ಬತ್ ದಿನ. ಯೇಸುಸ್ವಾಮಿ ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲದೆ, ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿ ರೂಪದಲ್ಲಿ ಹೀಗೆಂದರು: "ಮದುವೆಯ ಔತಣಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, "ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು," ಎನ್ನಬಹುದು. ಆಗ ನೀನು ನಾಚಿಕೆಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, "ಗೆಳೆಯಾ, ಮೇಲೆ ಬಾ" ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆ ಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು; ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು," ಎಂದರು. ಆನಂತರ ತಮ್ಮನ್ನು ಊಟಕ್ಕೆ ಆಮಂತ್ರಿಸಿದವನನ್ನು ನೋಡಿ ಯೇಸುಸ್ವಾಮಿ, "ನೀನು ಊಟ ಆಥವಾ ಔತಣವನ್ನು ಏರ್ಪಡಿಸುವಾಗ ನಿನ್ನ ಸ್ನೇಹಹಿತರನ್ನಾಗಲಿ, ಸೋದರರನ್ನಾಗಲಿ ಕರೆಯಬೇಡ. ಏಕೆಂದರೆ, ಅವರು ನಿನ್ನನ್ನು ಪ್ರತಿಯಾಗಿ ಕರೆದು ಮುಯ್ಯಿ ತೀರಿಸಿಬಿಡಬಹುದು. ಆದ್ದರಿಂದ ಔತಣವನ್ನು ಏರ್ಪಡಿಸುವಾಗ ದರಿದ್ರರು, ಅಂಗವಿಕಲರು, ಕುಂಟರು, ಕುರುಡರು ಇಂಥವರನ್ನು ಕರೆ; ಆಗ ನೀನು ಧನ್ಯನಾಗುವೆ. ಏಕೆಂದರೆ, ಅವರು ನಿನಗೆ ಪ್ರತಿಯಾಗಿ ಏನು ಮಾಡಲೂ ಇಲ್ಲದವರು. ಸತ್ಪುರುಷರು ಪುನರುತ್ದಾನ ಹೊಂದುವಾಗ ದೇವರೇ ನಿನಗೆ ಸಲ್ಲಬೇಕಾದುದನ್ನು ಸಲ್ಲಿಸುವರು," ಎಂದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...