05.09.2019 - "ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,"

ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:9-14


ಸಹೋದರರೇ, ಹೀಗಿರುವುದರಿಂದ ಈ ವಿಷಯವನ್ನು ನಾವು ಕೇಳಿದ ದಿನದಿಂದಲೂ ನಿಮಗಾಗಿ ಸದಾ ಪ್ರಾರ್ಥಿಸುತ್ತಲೇ ಇದ್ದೇವೆ. ನೀವು ಪರಿಪೂರ್ಣ ವಿವೇಕದಿಂದಲೂ ಆಧ್ಯಾತ್ಮಿಕ ಜ್ಞಾನದಿಂದಲೂ ದೇವರ ಚಿತ್ತವನ್ನು ಸಂಪೂರ್ಣವಾಗಿ ಅರಿಯಬೇಕೆಂಬುದೇ ನಮ್ಮ ಕೋರಿಕೆ. ಆಗ ಎಲ್ಲ ವಿಷಯಗಳಲ್ಲಿಯೂ ಪ್ರಭು ಯೇಸು ಮೆಚ್ಚುವ ರೀತಿಯಲ್ಲಿ ನೀವು ಜೀವಿಸುವಿರಿ.  ನಾನಾ ತರಹದ ಸತ್ಕಾರ್ಯಗಳನ್ನು ಕೈಗೊಳ್ಳುವಿರಿ. ಸತ್ಫಲವನ್ನೀಯುವ ದೈವಜ್ಞಾನದಲ್ಲಿ ವೃದ್ಧಿಹೊಂದುವಿರಿ. ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಿಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮೋಚನೆ ಲಭಿಸಿದೆ.

ಕೀರ್ತನೆ: 98:2-3, 3-4, 5-6

ಶ್ಲೋಕ: ಪ್ರಕಟಿಸಿಹನಾ ಪ್ರಭು ಮುಕ್ತಿವಿಧಾನವನು

ಶುಭಸಂದೇಶ: ಲೂಕ 5:1-11


ಒಮ್ಮೆ ಯೇಸುಸ್ವಾಮಿ ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. ಬೋಧನೆ ಮುಗಿದದ್ದೇ ಸಿಮೋನನಿಗೆ, "ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಹಿಸಿ, ಮೀನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ," ಎಂದರು. ಅದಕ್ಕೆ ಸಿಮೋನನು "ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆಕೊಟ್ಟು ಬಲೆಗಳನ್ನು ಹಾಕುತ್ತೇವೆ," ಎಂದನು. ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದು ಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಬಿಸಿದವು. ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, "ಸ್ವಾಮೀ, ನಾನು ಪಾಪಾತ್ಮ; ನನ್ನಿಂದ ದೂರವಿರಿ!" ಎಂದನು. ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, "ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ," ಎಂದರು. ಆ ಬೆಸ್ತರು ದೋಣಿಯನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನೂ ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...