ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:1-8
ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗೂ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಸಹೋದರರಿಗೆ ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾದ ಪೌಲನು ಮತ್ತು ಸಹೋದರ ತಿಮೊಥೇಯನು ಬರೆಯುವ ಪತ್ರ. ನಮ್ಮ ತಂದೆಯಾದ ದೇವರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮ್ಮಲ್ಲಿರಲಿ. ನೀವು ಪ್ರಭು ಯೇಸುಕ್ರಿಸ್ತರಲ್ಲಿ ಇಟ್ಟಿರುವ ವಿಶ್ವಾಸ ಹಾಗು ದೇವಜನರಲ್ಲಿ ನೀವು ಇರಿಸಿರುವ ಪ್ರೀತಿ ಇವುಗಳ ಬಗ್ಗೆ ನಾವು ಕೇಳಿದ್ದೇವೆ. ಇದಕ್ಕಾಗಿ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಲ್ಲಿ ಪ್ರಾರ್ಥಿಸುವಾಗಲೆಲ್ಲ ನಿಮಗಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಸತ್ಯ ವಾಕ್ಯದ, ಅಂದರೆ ಶುಭಸಂದೇಶದ ಮೂಲಕ ನೀವು ಕೇಳಿ ತಿಳಿದಂಥ ಹಾಗೂ ನಿರೀಕ್ಷಿಸುವಂಥ ಸೌಭಾಗ್ಯವನ್ನು ನೀವು ತಿಳಿದ ದಿನದಿಂದಲೂ ನಿಮ್ಮಲ್ಲಿ ಶುಭಸಂದೇಶವು ಹೇಗೆ ಫಲಭರಿತವಾಗುತ್ತಿದೆಯೋ ಹಾಗೆ ಈ ಶುಭಸಂದೇಶವು ಜಗತ್ತಿನ ಎಲ್ಲೆಡೆಯೂ ಹಬ್ಬಿ ಹರಡುತ್ತಲಿದೆ. ಈ ಶುಭಸಂದೇಶವನ್ನು ಕ್ರಿಸ್ತ ಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ. ಪವಿತ್ರಾತ್ಮ ಅವರು ನಿಮಗೆ ಅನುಗ್ರಹಿಸಿದ ಪ್ರೀತಿಯ ಬಗ್ಗೆ ನಮಗೆ ತಿಳಿಸಿದವನು ಸಹ ಆತನೇ.
ಕೀರ್ತನೆ: 52:10, 11
ಶ್ಲೋಕ: ದೇವರ ಸ್ಥಿರ ಪ್ರೀತಿಯನ್ನು ಯುಗಯುಗಾಂತರಕ್ಕೂ ನಂಬಿಕೊಂಡಿರುವೆನು.
ಶುಭಸಂದೇಶ: ಲೂಕ 4:38-44
ಪ್ರಾರ್ಥನಾಮಂದಿರದಿಂದ ಹೊರಟು ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಸಿಮೋನನ ಅತ್ತೆ ವಿಷಮ ಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟು ಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟು ಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧ ವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು. ಅನೇಕರ ಮೈಮೇಲಿದ್ದ ದೆವ್ವಗಳು ಸಹ, "ನೀವು ದೇವರ ಪುತ್ರ", ಎಂದು ಬೊಬ್ಬೆ ಹಾಕುತ್ತಾ ಬಿಟ್ಟು ಹೋದವು. ಇವರೇ "ಕ್ರಿಸ್ತ" ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನ ಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟು ಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು. ಅವರಿಗೆ ಯೇಸು, "ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ," ಎಂದರು. ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರದಲ್ಲಿ ಯೇಸು ಬೋಧಿಸುತ್ತಿದ್ದರು.
No comments:
Post a Comment