ಮೊದಲನೇ ವಾಚನ: 1 ಥೆಸಲೋನಿಯರಿಗೆ 5:1-6, 9-11
ಸಹೋದರರೇ, ಇದೆಲ್ಲ ನಡೆಯಲ್ಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ. ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಬ್ರ್ ಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು. ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ. ಅಂದ ಮೇಲೆ, ಇತರರಂತೆ ನಾವು ನಾದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ. ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ, ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೇ ನಮಗಾಗಿ ಅವರು ಸಾವನ್ನಪ್ಪಿದರು. ಆದುದರಿಂದ ನೀವು ಈಗ ನಡೆದುಕೊಳ್ಳುತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿದರು.
ಕೀರ್ತನೆ: 27:1, 4, 13-14
ಶ್ಲೋಕ: ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು
ಶುಭಸಂದೇಶ: ಲೂಕ 4:31-37
ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್ ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು. ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. ದುಷ್ಟ ದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು. ಅವನು, "ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು," ಎಂದು ಗಟ್ಟಿಯಾಗಿ ಕಿರುಚಿದನು. ಆದರೆ ಯೇಸು ಅವನನ್ನು ಗದರಿಸಿ, "ಸುಮ್ಮನಿರು, ಇವನನ್ನು ಬಿಟ್ಟು ತೊಲಗು," ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೇಡುಕನ್ನೂ ಮಾಡದೆ ಅವನನ್ನು ಬಿಟ್ಟುಹೋಯಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. "ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವಲ್ಲಾ!" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.
No comments:
Post a Comment