16.07.2019 - "ಕೋರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ!"


 ಮೊದಲನೇ ವಾಚನ: ವಿಮೋಚನಾಕಾಂಡ 2:1-15


ಲೇವಿಯ ವಂಶಸ್ಥನಾದ ಒಬ್ಬನು ಲೇವಿಯ ಕುಲದ ಕನ್ಯೆಯನ್ನು ಮದುವೆಯಾದನು. ಆಕೆ ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆತ್ತಳು. ಅದು ಅತಿ ಚೆಲುವಾದ ಕೂಸೆಂದು ತಿಳಿದು ಮೂರು ತಿಂಗಳು ಬಚ್ಚಿಟ್ಟಿದಳು. ಆದರೆ ಹೆಚ್ಚು ಕಾಲ ಮರೆಮಾಡಲಾಗಲಿಲ್ಲ. ಎಂತಲೇ ಆಕೆ ಅಪಿನ ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಜೇಡಿಮಣ್ಣನ್ನೂ ರಾಳವನ್ನೂ ಅದಕ್ಕೆ ಮೆತ್ತಿ, ಮಗುವನ್ನು ಅದರಲ್ಲಿ ಮಲಗಿಸಿ, ನೈಲ್ ನದಿಯ ಅಂಚಿನಲಿದ್ದ ಜಂಬು ಹುಲ್ಲಿನ ನಡುವೆ ಇಟ್ಟಳು. ಮಗುವಿಗೆ ಏನಾಗುವುದೋ ಎಂದು ತಿಳಿದುಕೊಳ್ಳುವುದಕ್ಕಾಗಿ ಮಗುವಿನ ಅಕ್ಕ ಸ್ವಲ್ಪ ದೂರದಲ್ಲಿ ನಿಂತು ಕೊಂಡಳು. ಅಷ್ಟರಲ್ಲಿ ಫರೋಹನ ಪುತ್ರಿ ಸ್ನಾನಕ್ಕಾಗಿ ನದಿಯ ಬಳಿಗೆ ಬಂದಳು. ಆಕೆಯ ಗೆಳತಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಜಂಬು ಹುಲ್ಲಿನ ನಡುವೆ ಪೆಟ್ಟಿಗೆಯೊಂದನ್ನು ಕಂಡಳು. ದಾಸಿಯೊಬ್ಬಳನ್ನು ಕಳಿಸಿ ಅದನ್ನು ತರಿಸಿದಳು. ಪೆಟ್ಟಿಗೆಯನ್ನು ತೆರೆದು ನೋಡುವಾಗ ಏನಾಶ್ಚರ್ಯ! ಅದರಲ್ಲಿ ಅಳುವ ಕೂಸು! ಆಕೆಗೆ ಅದರ ಮೇಲೆ ಕನಿಕರ ಹುಟ್ಟಿತು. "ಇದು ಹಿಬ್ರಿಯರ ಮಕ್ಕಳಲ್ಲಿ ಒಂದಾಗಿರಬೇಕು," ಎಂದುಕೊಂಡಳು. ಮಗುವಿನ ಅಕ್ಕ ಬಂದು,  "ನಿಮ್ಮ ಪರವಾಗಿ ಕೂಸನ್ನು  ಸಾಕಲು ಹಿಬ್ರಿಯ ಮಹಿಳೆಯರಲ್ಲಿ ಒಬ್ಬ ದಾದಿಯನ್ನು ನಾನು ಕರೆದುಕೊಂಡು ಬರಬಹುದೇ?" ಎಂದು ಫರೋಹನ ಪುತ್ರಿಯನ್ನು ವಿಚಾರಿಸಿದಳು. "ಹೌದು, ಹಾಗೆಯೇ ಮಾಡು," ಎಂದಳು ಫರೋಹನ ಪುತ್ರಿ, ಹುಡುಗಿ ಹೋಗಿ ಕೂಸಿನ ತಾಯಿಯನ್ನೇ ಕರೆದು ತಂದಳು. ಅವಳಿಗೆ ರಾಜಪುತ್ರಿ, "ನೀನು ಮಗುವನ್ನು ತೆಗೆದುಕೊಂಡು ಹೋಗಿ ನನ್ನ ಪರವಾಗಿ ಸಾಕು ನಾನೇ ನಿನಗೆ ಸಂಬಳವನ್ನು ಕೊಡುತ್ತೇನೆ," ಎಂದಳು. ಅಂತೆಯೇ ಮಹಿಳೆ ಕೂಸನ್ನು ತೆಗೆದುಕೊಂಡು ಹೋಗಿ ಸಾಕಿದಳು. ಹುಡುಗನು ಬೆಳೆದಾಗ ಅವನನ್ನು ಫರೋಹನ ಪುತ್ರಿಯ ಬಳಿಗೆ ಕರೆದುಕೊಂಡು ಬಂದಳು. ಅವನು ಆಕೆಗೆ ಮಗನಾದನು. "ನೀರಿನಿಂದ ನಾನು ಇವನನ್ನು ಎತ್ತಿದೆ" ಎಂದು ಹೇಳಿ ಅಕೆ ಅವನಿಗೆ " ಮೋಶೆ ಎಂದು ಹೆಸರಿಟ್ಟಳು. ಮೋಶೆ ದೊಡ್ಡವನಾದ ಮೇಲೆ ಸ್ವಜನರಾದ ಹಿಬ್ರಿಯರ ಬಳಿಗೆ ಹೋಗಿ ಅವರು ಮಾಡುತ್ತಿದ್ದ ಬಿಟ್ಟಿ ಕೆಲಸಗಳನ್ನು ನೋಡುತ್ತಿದ್ದನು. ಒಮ್ಮೆ ಒಬ್ಬ ಈಜಿಪ್ಟಿನವನು ತನ್ನ ದೇಶೀಯನಾದ ಹಿಬ್ರಿಯನನ್ನು ಹೊಡೆಯುವುದನ್ನು ಕಂಡನು. ಅತ್ತಿತ್ತ ನೋಡಿ, ಯಾರೂ ಇಲ್ಲವೆಂದು ತಿಳಿದು, ಈಜಿಪ್ಟನನ್ನು ಹೊಡೆದು ಹಾಕಿ ಅವನ ಶವವನ್ನು ಮರಳಿನಲ್ಲಿ ಮುಚ್ಚಿಬಿಟ್ಟನು. ಮಾರನೆಯ ದಿನ ಕೂಡ ಮೋಶೆ ಹೊರಗೆ ಹೋಗಿ ನೋಡಿದನು. ಸಾರಿ ಇಬ್ಬರು ಹಿಬ್ರಿಯರೇ ಜಗಳವಾಡುತ್ತಿದ್ದರು ತಪ್ಪಿತಸ್ಥನಿಗೆ, "ಏನಯ್ಯಾ, ಸ್ವಕುಲದವರನ್ನೇ ಹೊಡಿಯುತ್ತಿರುವೆ ಏಕೆ?" ಎಂದು ಕೇಳಿದನು. ಅದಕ್ಕೆ ಅವನು, "ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿ ಹಾಗೂ ನ್ಯಾಯಾಧಿಪತಿಯನ್ನಾಗಿ ನೇಮಿಸಿರುವರು ಯಾರು? ಈಜಿಪ್ಟಿನವನನ್ನು ಕೊಂದುಹಾಕಿದಂತೆ ನನ್ನನ್ನು ಕೊಂದು ಹಾಕಬೇಕೆಂದಿರುವೆಯಾ?" ಎಂದನು. ಮಾತನ್ನು ಕೇಳಿದ್ದೇ ಮೋಶೆ, "ನಾನು ಮಾಡಿದ ಕಾರ್ಯ ಬಯಲಾಗಿಬಿಟ್ಟಿತಲ್ಲಾ!" ಎಂದು ಅಂಜಿದನು. ನಡೆದ ಸಂಗತಿ ಫರೋಹನಿಗೆ ಮುಟ್ಟಿತು. ಅವನು ಮೋಶೆಯನ್ನು ಕೊಲ್ಲಿಸಬೇಕೆಂದು ಆಲೋಚಿಸುತ್ತಿದ್ದನು. ಆದುದರಿಂದ ಮೋಶೆ ಫರೋಹನ ಬಳಿಯಿಂದ ಪಲಾಯನ ಗೈದು ಮಿದ್ಯಾನ್ ನಾಡನ್ನು ಸೇರಿದನು.

ಕೀರ್ತನೆ: 69:3, 14, 30-31, 33-34

ಶ್ಲೋಕ: ಬಡ ಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು.

ಶುಭಸಂದೇಶ: ಮತ್ತಾಯ 11:20-24

ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಬುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಪಟ್ಟಣಗಳ ಜನರೇ ಪಾಪಕ್ಕೆ ವಿಮಖರಾಗಲಿಲ್ಲ. ಆದ್ದರಿಂದ ಪಟ್ಟಣಗಳನ್ನು ಯೇಸು ಖಂಡಿಸಿ: "ಕೋರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಬುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಬಳಿದುಕೊಂಡು, ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಮೇಲಾಗಿರುವುದೆಂದು ಒತ್ತಿ ಹೇಳುತ್ತೇನೆ. ಎಲೈ ಕಫೆರ್ನವುಮ್ ಪಟ್ಟಣವೇ,.ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ಮಾಡಿದ ಅದ್ಬತ ಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ, ಅದು ಇಂದಿನವರೆಗೂ ಅಳಿಯದೆ ಉಳಿಯುತ್ತಿತ್ತು. ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ." ಎಂದರು.

15.07.2019 - "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ"

ಮೊದಲನೇ ವಾಚನ: ವಿಮೋಚನಾಕಾಂಡ , 22


ಹೊಸ ರಾಜನೊಬ್ಬನು ಈಜಿಪ್ಟ್ ದೇಶದ ಆಳ್ವಿಕೆಗೆ ಬಂದನು. ಅವನಿಗೆ ಜೋಸೆಫನ ವಿಷಯ ತಿಳಿದಿರಲಿಲ್ಲ. ಅವನು ತನ್ನ ಜನರಿಗೆ, "ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ, ಅಧೀನದಲ್ಲಿರಿಸಲು ಕಷ್ಟ ಸಾಧ್ಯ. ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ನಾಡನ್ನು ಬಿಟ್ಟು ಪಲಾಯನಗೈಯಬಹುದು. ಆದುದರಿಂದ ಅವರು ವೃದ್ಧಿಯಾಗದಂತೆ ನಾವು ಉಪಾಯ ಹೂಡಬೇಕು," ಎಂದು ಎಚ್ಚರಿಸಿದನು. ಅದರಂತೆಯೇ ಅವನ ಜನರು ಇಸ್ರಯೇಲರಿಗೆ ಕಿರುಕುಳ ಕೊಡಲು ತೊಡಗಿದರು. ಪುಕ್ಕಟೆಯಾಗಿ ಕೆಲಸ ಮಾಡಿಸಿಕೊಂಡರು. ಬಿಟ್ಟೀ ಕೆಲಸ ಮಾಡಿಸುವ ಅಧಿಕಾರಿಗಳನ್ನು ನೇಮಿಸಿ ಫರೋಹನಿಗೆ "ಪಿತೋಮ್" ಮತ್ತು "ರಾಮ್ಸೇಸ್" ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು. ಈಜಿಪ್ಟನರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚು ಹರಡಿಕೊಳ್ಳುತ್ತಿದ್ದರು. ಆದ್ದರಿಂದ ಇಸ್ರಯೇಲರ ಬಗ್ಗೆ ಈಜಿಪ್ಟರು ಸಹಿಸಲಾರದಷ್ಟು ಹೆದರಿಕೆಯುಳ್ಳವರಾದರು. ಇಸ್ರಯೇಲರಿಂದ ಕ್ರೂರತನದಿಂದ ಸೇವೆ ಮಾಡಿಸಿಕೊಂಡರು. ಮಣ್ಣು ಅಗೆಯುವ ಕೆಲಸದಲ್ಲೂ ಇಟ್ಟಿಗೆ ಸುಡುವ ಕೆಲಸದಲ್ಲೂ ವ್ಯವಸಾಯದ  ಮತ್ತಿತರ ಕೆಲಸಕಾರ್ಯಗಳಲ್ಲೂ ಕಠಿಣವಾಗಿ ಅವರಿಂದ ದುಡಿಸಿಕೊಂಡರು. ಅವರು ಮಾಡಿಸಿಕೊಳ್ಳುತ್ತಿದ್ದ ಪ್ರತಿಯೊಂದು ಕೆಲಸವು ಜೀವನವೇ ಬೇಡವೆನ್ನುವಷ್ಟು ಕಠೋರವಾಗಿ ಇರುತ್ತಿತ್ತು. ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, "ಹಿಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು," ಎಂದು ಆಜ್ಞೆ ಮಾಡಿದನು.

ಕೀರ್ತನೆ: 124:1-3, 4-6, 7-8

ಶ್ಲೋಕ: ನಮಗುದ್ಧಾರ ಪ್ರಭುವಿನ ನಾಮದಲ್ಲಿ

ಶುಭಸಂದೇಶ: ಮತ್ತಾಯ: 10:34-11:1

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು. "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ ಛೇದಿಸುವ ಖಡ್ಗವನ್ನು ತರಲು ಬಂದೆನು. ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ಧ ಮಗಳಿಗೂ, ಅತ್ತೆಗೆ ವಿರುದ್ಧ ಸೊಸೆಗೂ ಭೇದ ಹುಟ್ಟಿಸಲು ಬಂದೆನು; ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು. ನನ್ನನ್ನು ಪ್ರೀತಿಸುವುದಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅಥವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನ ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. ನಿಮ್ಮನ್ನು ಸ್ವಾಗತಿಸುವವನು  ನನ್ನನ್ನು ಸ್ವಾಗತಿಸುತ್ತಾನೆ. ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳಿಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ." ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.

14.07.2019 - "ದಯೆ ತೋರಿದವನೇ ನೆರೆಯವನು,"

ಮೊದಲನೇ ವಾಚನ: ಧರ್ಮೋಪದೇಶಕಾಂಡ  30:10-14

ಮೋಶೆಯು ಇಸ್ರಯೇಲರನ್ನು ಕುರಿತು ಹೀಗೆಂದನು. "ನೀವು ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ವಿಧೇಯರಾಗಿ ಈ ಧರ್ಮಶಾಸ್ತ್ರದ ಆಜ್ಞಾವಿಧಿಗಳನ್ನು ಅನುಸರಿಸಿ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಅವರ ಕಡೆಗೆ ತಿರುಗಿಕೊಳ್ಳುವಿರಿ. ಅವರು ನಿಮ್ಮ ಪಿತೃಗಳ ವಿಷಯದಲ್ಲಿ ಸಂತೋಷಪಟ್ಟ ಹಾಗೆಯೇ ನಿಮ್ಮ ವಿಷಯದಲ್ಲೂ ಮತ್ತೆ ಸಂತೋಷಪಟ್ಟು ನಿಮಗೆ ಒಳಿತನ್ನುಂಟು ಮಾಡುವರು. ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶ ನಿಮಗೆ ಗ್ರಹಿಸುವುದಕ್ಕೆ ಕಷ್ಟವಾದುದಲ್ಲ. ಸಾಧಿಸುವುದಕ್ಕೆ ಅಸಾಧ್ಯವಾದುದ್ದೂ ಅಲ್ಲ. ಇದು ಮೇಲಣ ಲೋಕದಲ್ಲಿರುವ ಮಾತಲ್ಲ. "ನಿಮಗಾಗಿ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ಧಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು" ಎಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ. ಇದು ಸಮೂದ್ರದ ಆಚೆ ಇರುವ ಮಾತಲ್ಲ; "ನಿಮಗಾಗಿ  ಸಮೂದ್ರವನ್ನು ದಾಟಿ ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳೂತ್ತಿದ್ದೆವು" ಎಂದುಕೊಳ್ಳುವುದಕ್ಕೆ ಆಸ್ಪದವೇನೂ ಇಲ್ಲ. ಅನುಸರಿಸುವುದಕ್ಕೆ ಸಾಧ್ಯವಾಗುವಂತೆ ಈ ವಾಕ್ಯ ನಿಮಗೆ ಸಮೀಪದಲ್ಲಿದೆ; ಇದು ನಿಮ್ಮ ಬಾಯಲ್ಲೇ ಇದೆ; ಹೃದಯದಲ್ಲೇ ಇದೆ.

ಕೀರ್ತನೆ: 69: 14, 17, 30-31, 33-34, 36, 37

ಶ್ಲೋಕ: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು.

ಎರಡನೇ ವಾಚನ: ಕೊಲೊಸ್ಸೆಯರಿಗೆ 1:15-20

ಅದೃಶ್ಯ ದೇವನ ಅದೃಶ್ಯ ರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ ಅಧಿಪತ್ಯವಾಗಿರಲಿ, ಅದುದೆಲ್ಲವೂ ಅತನಲಿ.  ಆತನಿಂದ ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲ್ಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿ ಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.

ಶುಭಸಂದೇಶ: ಲೂಕ

ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ "ಬೋಧಕರೇ, ಅಮರ ಜೀವ ನನಗೆ  ಪ್ರಾಪ್ತಿಯಾಗಬೇಕಾದರೆ ನಾನು ಮಾಡಬೇಕಾದುದು ಏನು?" ಎಂದು ಕೇಳಿದನು. ಅದಕ್ಕೆ ಯೇಸು, "ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?" ಎಂದು ಮರು ಪ್ರಶ್ನೆ ಹಾಕಿದರು. ಅವನು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು" ಎಂದಿದೆ," ಎಂದು ಉತ್ತರ ಕೊಟ್ಟನು. ಯೇಸು, "ಸರಿಯಾಗಿ ಉತ್ತರ ಕೊಟ್ಟೆ. ಅದರಂತೆ ಮಾಡು. ನಿನಗೆ ಅಮರ ಜೀವ ಲಭಿಸುವುದು," ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, "ನನ್ನ ನೆರೆಯವರು ಯಾರು?" ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಯೇಸು ಅವನಿಗೆ ಹೀಗೆಂದು ವಿವರಿಸಿದರು. "ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ, ದರೋಡೆಗಾರರು ಅವನನ್ನು ಸುಲಿಗೆಮಾಡಿ, ಹೊಡೆದು ಬಡಿದು, ಅರೆ ಜೀವ ಮಾಡಿ, ಅಲ್ಲೇ ಬಿಟ್ಟುಹೋದರು.

ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಿಸಿಕೊಂಡು ಹೋದ . ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ, ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕ ಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, "ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ," ಎಂದ. ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?" ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, "ದಯೆ ತೋರಿದವನೇ ನೆರೆಯವನು," ಎಂದನು. ಆಗ ಯೇಸು, "ಹೋಗು, ನೀನು ಹಾಗೆಯೇ ಮಾಡು," ಎಂದು ಹೇಳಿದರು.



13.07.2019 - "ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ"

ಮೊದಲನೇ ವಾಚನ: ಆದಿಕಾಂಡ  49:29-33; 50:15-25


ಯಕೋಬನು ತನ್ನ ಮಗಳಿಗೆ ಕೊಟ್ಟ ಆಜ್ಞೆ ಇದು; "ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿ ಮಾಡಬೇಕು. ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಬೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು. ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿಯಾಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಹೊಲದ ಸಮೇತ ಹಿತ್ತಿಯರಿಂದ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ," ಎಂದನು. ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದ ನಂತರ ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು ಮೃತರಾದ ಪಿತೃಗಳ ಬಳಿಗೆ ಸೇರಿದನು. ತಂದೆ ಸತ್ತ ಬಳಿಕ ಜೋಸೆಫನ ಅಣ್ಣತಮ್ಮಂದಿರು, "ಜೋಸೆಫನು ಬಹುಶಃ ನಮ್ಮನ್ನು ದ್ವೇಷಿಸಿಯಾನು! ನಾವು ಅವನಿಗೆ ಮಾಡಿದ ಎಲ್ಲ ಹಾನಿಗೆ ಪ್ರತಿಯಾಗಿ ಶಿಕ್ಷಿಸಿಯಾನು," ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದುದರಿಂದ ಜೋಸೆಫನಿಗೆ ಹೀಗೆಂದು ಹೇಳಿಕಳಿಸಿದರು; ನಿನ್ನ ತಂದೆ ಸಾಯುವುದಕ್ಕೆ ಮುಂಚೆ ನಮಗೆ ಅಪ್ಪಣೆಮಾಡಿದ್ದೇನೆಂದರೆ "ನೀವು ಜೋಸೆಫನಿಗೆ - ನಿನ್ನ ಅಣ್ಣಂದಿರಾದ ನಾವು ನಿನಗೆ ಹಾನಿಮಾಡಿದ್ದೇನೋ ನಿಜ; ಆದರೂ ನಮ್ಮ ಅಪರಾದವನ್ನು, ಪಾಪವನ್ನು ಕ್ಷಮಿಸು - ಎಂದು ಕೇಳಿಕೊಳ್ಳಬೇಕು." ಅವರು ಹೀಗೆ ವಿಧಿಸಿದ್ದರಿಂದ ನಾವು ಮಾಡಿದ ಅಪರಾದವನ್ನು ಈಗ ನೀನು ಕ್ಷಮಿಸಬೇಕೆಂದು," ಬೇಡಿಕೊಳ್ಳುತ್ತಿದ್ದೇವೆ." ಈ ಮಾತುಗಳನ್ನು ಕೇಳಿ ಜೋಸೆಫನು ಕಣ್ಣೀರು ಸುರಿಸಿದನು. ಇದೂ ಅಲ್ಲದೆ, ಅಣ್ಣಂದಿರು ತಾವೇ ಬಂದು ಅವನಿಗೆ ಅಡ್ಡಬಿದ್ದರು. "ಇಗೋನಾವು ನಿನಗೆ ಗುಲಾಮರು," ಎಂದು ಹೇಳಿದರು. ಆದರೆ ಜೋಸೆಫನು ಅವರಿಗೆ, "ಹೆದರಬೇಡಿ; ನಾನು ದೇವರ ಸ್ಥಾನದಲ್ಲಿ ಇಲ್ಲ; ನೀವೇನೋ ನನಗೆ ಹಾನಿಮಾಡಬೇಕೆಂದು ಎಣಿಸಿದಿರಿ. ಆದರೆ ದೇವರು ಒಳಿತಾಗಬೇಕೆಂದು ಸಂಕಲ್ಪಿಸಿದರು; ಇದರಿಂದ ಅನೇಕ ಜನರ ಪ್ರಾಣ ಉಳಿಯುವಂತೆ ಮಾಡಿದರು. ಇಂದಿಗೂ ಈ ಕಾರ್ಯ ನಡೆಯುತ್ತಿದೆ. ಆದುದರಿಂದ ನೀವು ಸ್ವಲ್ಪವೂ ಸಂಕೋಚಪಡಬೇಕಾಗಿಲ್ಲ. ನಾನು ನಿಮ್ಮನ್ನೂ ನಿಮಗೆ ಸೇರಿದ ಎಲ್ಲರನ್ನೂ ಪೋಷಿಸುತ್ತೇನೆ," ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತನಾಡಿದನು. ಜೋಸೆಫನೂ ಅವನ ತಂದೆಯ ಕುಟುಂಬದವರೂ ಈಜಿಪ್ಟಿನಲ್ಲಿ ವಾಸಮಾಡುತ್ತಾ ಬಂದರು. ಜೋಸೆಫನು ನೂರಹತ್ತು ವರ್ಷ ಬದುಕಿದ್ದನು; ಎಫ್ರಯಿಮನ ಮಕ್ಕಳ ಮೊಮ್ಮಕ್ಕಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಜೋಸೆಫನು ಅವರನ್ನೂ ತನ್ನ ಮಡಿಲಿಗೆ ಬರಮಾಡಿಕೊಂಡನು. ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, "ನನ್ನ ಮರಣಕಾಲವು ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಲು ಬರುವರು; ತಾವು ಅಬ್ರಹಾಮ್, ಇಸಾಕ್, ಯಕೋಬರಿಗೆ ಕೊಡುವುದಾಗಿ ವಾಗ್ದಾನಮಾಡಿರುವ ನಾಡಿಗೆ ನೀವು ಹೋಗಿ ಸೇರುವಂತೆ ಮಾಡುವರು," ಎಂದು ಹೇಳಿದನು. ಇದೂ ಅಲ್ಲದೆ ಜೋಸೆಫನು ಇ ಇಸ್ರಯೇಲನ ಮಕ್ಕಳಿಗೆ, "ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಕಾಪಾದಲು ಬರುವರು; ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು  ಹೋಗಬೇಕು," ಎಂದು ಹೇಳಿ, "ಹಾಗೆಯೇ ಮಾಡುತ್ತೇವೆ," ಎಂಬುದಾಗಿ ಅವರಿಂದ ಪ್ರಮಾಣ ಮಾಡಿಸಿದನು.

ಕೀರ್ತನೆ: 105:1-2, 3-4, 5-7

ಶ್ಲೋಕ: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು

ಶುಭಸಂದೇಶ: ಮತ್ತಾಯ  10:24-33

ಯೇಸುಸ್ವಾಮಿ ಶಿಷ್ಯರಿಗೆ ಕೊಟ್ಟ ಆದೇಶ ಇದು: "ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ. ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ "ಬೆಲ್ಜಬೂಲ್" ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು? ಜನರಿಗೆ ಭಯಪಡಬೇಡಿ ಮುಚ್ಚುಮರೆ ಆಗಿರುವುದೆಲ್ಲ ಬಟ್ಟ ಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು. ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರಪಡಿಸಿರಿ. ಕಿವಿಮಾತಾಗಿ ಕೇಳಿದ್ದನ್ನು ಮನೆಮಾಳಿಗೆಯ ಮೇಲೆ ನಿಂತು ಸಾರಿರಿ. ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲ್ಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ. ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ. ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು. ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ  ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ.

12.07.2019 - "ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ"

ಮೊದಲನೇ ವಾಚನ: ಆದಿಕಾಂಡ 46:1-7, 28-30

ಯಕೋಬನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು ಪ್ರಯಾಣಮಾಡಿ ಬೇರ್ಷೆಬಕ್ಕೆ ಬಂದನು. ಅಲ್ಲಿ ತನ್ನ ತಂದೆ ಇಸಾಕನ ದೇವರಿಗೆ ಬಲಿದಾನಗಳನ್ನು ಅರ್ಪಿಸಿದನು. ಆ ರಾತ್ರಿ ದೇವರು ಯಕೋಬನಿಗೆ ದರ್ಶನವಿತ್ತು, "ಯಕೋಬನೇ, ಯಕೋಬನೇ," ಎಂದು ಕರೆಯಲು, ಅವನು "ಇಗೋ, ಸಿದ್ಧನಿದ್ದೇನೆ," ಎಂದನು. ಆಗ ದೇವರು, "ನಾನೇ ದೇವರು,  ನಿನ್ನ ತಂದೆ ಆರಾಧಿಸುವ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ;  ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು; ನಾನೇ ನಿನ್ನೊಂದಿಗೆ ಈಜಿಪ್ಟಿಗೆ ಬರುವೆನು. ಅಲ್ಲಿಂದ ನಿನ್ನನ್ನು ನಿಶ್ಚಯವಾಗಿ ವಾಪಸ್ಸು ಕರೆದುಕೊಂಡು ಬರುವೆನು. ನೀನು ಸಾಯುವ ಕಾಲದಲ್ಲಿ ಜೋಸೆಫನು ಹಾಜರಿದ್ದು ನಿನ್ನ ಕಣ್ಣುಗಳನ್ನು ಮುಚ್ಚುವನು," ಎಂದರು. ಬಳಿಕ ಯಕೋಬನು ಬೇರ್ಷೆಬದಿಂದ ಪ್ರಯಾಣ ಮಾಡಿದನು. ಯಕೋಬನ ಮಕ್ಕಳು ತಮ್ಮ ತಂದೆಯಾದ ಯಕೋಬನನ್ನು ಮತ್ತು ತಮ್ಮ ಮಡದಿ ಮಕ್ಕಳನ್ನು ಫರೋಹನು ಕಳಿಸಿದ್ದ ಬಂಡಿಗಳಲ್ಲಿ ಕೂರಿಸಿಕೊಂಡು ಹೊರಟರು. ಕಾನಾನ್ ನಾಡಿನಲ್ಲಿ ತಾವು ಸಂಪಾದಿಸಿದ್ದ ಆಸ್ತಿಪಾಸ್ತಿಯನ್ನೂ ದನಕೊರಿಗಳನ್ನೂ ತೆಗೆದುಕೊಂಡು ಈಜಿಪ್ಟ್ ದೇಶವನ್ನು ತಲುಪಿದರು. ಹೀಗೆ ಯಕೋಬನು ತನ್ನ ಗಂಡುಹೆಣ್ಣುಮಕ್ಕಳನ್ನೂ ಮೊಮ್ಮಕ್ಕಳನ್ನೂ ತನ್ನ ಕುಟುಂಬದವರೆಲ್ಲರನ್ನೂ ತನ್ನ ಸಂಗಡವೇ ಕರೆದುಕೊಂಡು ಈಜಿಪ್ಟಿಗೆ ಬಂದನು. ಗೋಷೆನ್ ಪ್ರಾಂತ್ಯದಲ್ಲಿ ಜೋಸೆಫ್ ತನ್ನನ್ನು ಬೇಟಿಯಾಗಬೇಕೆಂದು ತಿಳಿಸಲು ಯಕೋಬನು  ಯಹೂದನನ್ನು ಮುಂದಾಗಿ ಜೋಸೆಫನ ಬಳಿಗೆ ಕಳಿಸಿದನು. ಅವರೆಲ್ಲರು ಗೋಷೆನ್ ಪ್ರಾಂತ್ಯವನ್ನು ಬಂದು ಸೇರಿದರು. ಜೋಸೆಫನು ರಥವನ್ನೇರಿ ತನ್ನ ತಂದೆ ಯಕೋಬನನ್ನು ಬೇಟಿಯಾಗಲು ಗೋಷೆನಿಗೆ ಬಂದನು. ತಂದೆಯನ್ನು ಕಂಡೊಡನೆ ಅವರ ಕೊರಳನ್ನು ಅಪ್ಪಿಕೊಂಡು ಬಹಳ ಹೊತ್ತು ಅತ್ತನು. ಯಕೋಬನು ಜೋಸೆಫನಿಗೆ, "ಇನ್ನು ನಾನು ಸಂತೃಪ್ತಿಯಾಗಿ ಸಾಯುವೆನು ನೀನು ಇನ್ನೂ ಬದುಕಿರುವೆಯೆಂದು ಕೇಳಿದ್ದಾಯಿತು; ನಿನ್ನ ಮುಖವನ್ನು ಕಣ್ಣಾರೆ ನೋಡಿದ್ಧಾಯಿತು," ಎಂದನು.

ಕೀರ್ತನೆ: 37:3-4, 18-19, 27-28, 39-40

ಶ್ಲೋಕ: ಸಜ್ಜನರ ಜೀವೋದ್ಧಾರ ಪ್ರಭುವಿನಿಂದ

ಶುಭಸಂದೇಶ: ಮತ್ತಾಯ  10:16-23


ಯೇಸುಸ್ವಾಮಿ ಶಿಷ್ಯರ ನಿಯೋಗವನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶ ಇದು: ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ ಆದುದರಿಂದ ಸರ್ಪಗಳಂತೆ ಸೂಕ್ಷ್ಮ ಬುದ್ಧಿಯುಳ್ಳವರೂ ಪಾರಿವಾಳಗಳಂತೆ ಸರಳ ಜೀವಿಗಳೂ ಆಗಿರಿ. ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಂದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ  ನೀವು ನನಗೆ ಸಾಕ್ಷಿಗಳಾಗುವಿರಿ. ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು. ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. ಸಹೋದರನು ಸಹೋದರನನ್ನೇ, ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು. ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆ ಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ, ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.

11.07.2019 - "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ

ಮೊದಲನೇ ವಾಚನ: ಆದಿಕಾಂಡ 44 :18-21, 23-29; 45:1-5

ಆಗ ಯೆಹೂದನು ಹತ್ತಿರಕ್ಕೆ ಬಂದು, "ನನ್ನೊಡೆಯಾ, ತಮ್ಮ ಸೇವಕನಾದ ನಾನು ಒಂದು ಮಾತನ್ನು ಅರಿಕೆ ಮಾಡಿಕೊಳ್ಳುತ್ತೇನೆ. ನನ್ನ ಮೇಲೆ ಸಿಟ್ಟು ಮಾಡಬೇಡಿ; ತಾವು ಫರೋಹನಿಗೆ ಸಮಾನರು. ಒಡೆಯರಾದ ತಾವು ಸೇವಕರಾದ ನಮ್ಮನ್ನು, "ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾರೋ?" ಎಂದು ಕೇಳಿದಿರಿ. ನಾವು 'ತಂದೆ ಇದ್ದಾರೆ ಅವರು ಮುದುಕ; ಮುಪ್ಪಿನಲ್ಲಿ ಅವರಿಗೆ ಹುಟ್ಟಿದ ಒಬ್ಬ ಚಿಕ್ಕ ಹುಡುಗ ಇದ್ದಾನೆ. ಅವನ ಒಡಹುಟ್ಟಿದವನು ಸತ್ತುಹೋದ. ಅವನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲಿ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಅಪಾರ ಪ್ರೀತಿ,' ಎಂದು ಹೇಳಿದೆವು. ಅದಕ್ಕೆ ತಾವು ಸೇವಕರಾದ ನಮಗೆ, 'ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರೆದು ತನ್ನಿ," ಎಂದು ಅಪ್ಪಣೆ ಕೊಟ್ಟಿರಿ. ಅದಕ್ಕೆ ತಾವು, "ನಿಮ್ಮ ತಮ್ಮನು ಬಾರದಿದ್ದರೆ ನೀವು ಮತ್ತೊಮ್ಮೆ ನನ್ನ ಮುಖವನ್ನು ನೋಡ ಕೂಡದು," ಎಂದು ಆಜ್ಞೆ ಕೊಟ್ಟಿರಿ. ತಮ್ಮ ಸೇವಕರಾದ ನಾವು ನಮ್ಮ ತಂದೆಯ ಬಳಿಗೆ ಹೋದಾಗ ಒಡೆಯರ ಮಾತನ್ನು ತಿಳಿಸಿದೆವು. ನಮ್ಮ ತಂದೆ, "ನೀವು ಇನ್ನೊಮ್ಮೆ ಹೋಗಿ ಧಾನ್ಯ ಕೊಂಡು ಕೊಂಡು ಬನ್ನಿ" ಎಂದಾಗ, ನಾವು, ಹೋಗಲಾಗದು, ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು. ತಮ್ಮನು ನಮ್ಮ ಸಂಗಡ ಬಂದರೆ ಮತ್ತೆ ಹೋಗುತ್ತೇವೆ" ಎಂದು ಹೇಳಿದೆವು. ಅದಕ್ಕೆ ತಮ್ಮ ಸೇವಕರಾದ ನಮ್ಮ ತಂದೆ, "ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಮಕ್ಕಳು ಹುಟ್ಟಿದರೆಂಬುದು ನಿಮಗೆ ತಿಳಿಯದ ವಿಷಯ. ಅವರಲ್ಲಿ ಒಬ್ಬನು ನನ್ನನ್ನು ಬಿಟ್ಟು ಹೊರಟು ಹೋದ: ಅವನು ನಿಸ್ಸಂದೇಹವಾಗಿ ಕಾಡು ಮೃಗದಿಂದ ಸೀಳಿ ಹಾಕಲ್ಪಟ್ಟಿರಬೇಕು ಎಂದು ತಿಳಿದುಕೊಂಡೆ; ಅಂದಿನಿಂದ ಅವನನ್ನು ನಾನು ಕಂಡಿಲ್ಲ. ಈಗ ಇವನನ್ನು ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಏನಾದರು ಆಪತ್ತು ಒದಗಿದರೆ, ಈ ನೆರೆ ಕೂದಲಿನ ಮುದುಕ  ಸಂಕಟದಿಂದ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ' ಎಂದರು. ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆ ಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. "ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ," ಎಂದು ಬಾಯ್ತೆರೆದು ಹೇಳಿದ. ಜೋಸೆಫನು ಅಣ್ಣ ತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಯಾರೂ ಹತ್ತಿರ ಇರಲಿಲ್ಲ. ಅವನು ಗಟ್ಟಿಯಾಗಿ ಅತ್ತದ್ದು ಈಜಿಪ್ಟಿನವರಿಗೆ ಕೇಳಿಸಿತು; ಫರೋಹನ ಮನೆಯವರಿಗೂ ಆ ಸುದ್ದಿ ಮುಟ್ಟಿತು. ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, "ನಾನೇ ಜೋಸೆಫ್! ನನ್ನ ತಂದೆ ಇನ್ನೂ ಇದ್ದಾರೋ?" ಎಂದು ಕೇಳಿದ. ಅವರು ತತ್ತರಗೊಂಡು ಉತ್ತರಿಸಲಾರದೆ ಹೋದರು. ಜೋಸೆಫನು, "ಹತ್ತಿರಕ್ಕೆ ಬನ್ನಿ" ಎನ್ನಲು, ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ, "ಈಜಿಪ್ಟ್ ದೇಶಕ್ಕೆ ಹೋಗಲಿ" ಎಂದು ನೀವು ಮಾರಿ ಬಿಟ್ಟ ನಿಮ್ಮ ತಮ್ಮ ಜೋಸೆಫ್ ನಾನೇ. ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ವ್ಯಸನ ಪಡಬೇಡಿ, ನಿಮ್ಮನ್ನೇ ನಿಂದಿಸಿಕೊಳ್ಳಬೇಡಿ. ಏಕೆಂದರೆ ಜೀವ ರಕ್ಷಣೆಗಾಗಿಯೇ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಇಲ್ಲಿಗೆ ಕಳುಹಿಸಿದರು," ಎಂದನು.

ಕೀರ್ತನೆ: 105:16-17, 18-19, 20-21

ಶ್ಲೋಕ: ಧ್ಯಾನಿಸಿ ನೀವು ಪ್ರಭುವಿನ ಪವಾಡಗಳನು

ಶುಭಸಂದೇಶ: ಮತ್ತಾಯ  10:7-15


ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, "ಸ್ವರ್ಗ ಸಾಮ್ರಾಜ್ಯವು ಸಮೀಪಿಸಿದೆ" ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಟ ರೋಗಿಗಳನ್ನು ಸ್ವಸ್ಥ ಮಾಡಿರಿ, ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ,ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡು ಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ,  ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ಧೂಳನ್ನೂ ಝಾಡಿಸಿಬಿಡಿ. ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.

10.07.2019 - 'ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ' ಎಂದು ಬೋಧನೆ ಮಾಡಿರಿ.

ಮೊದಲನೇ ವಾಚನ:  ಆದಿಕಾಂಡ - 41:55-57, 42:5-7, 17-24


ಕ್ರಮೇಣ ಈಜಿಪ್ಟಿಗೂ ಬರ ಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟರು. ಆಗ ಅವನು ಅವರಿಗೆ, "ಹೋಗಿ ಜೋಸೆಫನ ಬಳಿಗೆ, ಅವನು ಹೇಳಿದಂತೆ ಮಾಡಿ," ಎಂದು ಉತ್ತರಕೊಟ್ಟನು. ಬರವು ದೇಶದಲ್ಲೆಲ್ಲ ಹರಡಿಕೊಂಡಾಗ ಜೋಸೆಫನು ಕಣಜಗಳನ್ನೆಲ್ಲ ತೆಗೆಸಿ, ಈಜಿಪ್ಟರಿಗೆ ಧಾನ್ಯವನ್ನು ಮಾರಿಸಿದನು. ಈಜಿಪ್ಟ್ ದೇಶದಲ್ಲಿ ಬರವು ಬಹು ಘೋರವಾಗಿತ್ತು. ಅಂತೆಯೇ ಲೋಕದಲ್ಲೆಲ್ಲಾ ಬರವು ಭಯಂಕರವಾಗಿತ್ತು. ಎಲ್ಲ ದೇಶದವರು ಜೋಸೆಫನಿಂದ ಧಾನ್ಯ ಕೊಂಡುಕೊಳ್ಳಲು ಈಜಿಪ್ಟಿಗೆ ಬರುತ್ತಿದ್ದರು. ಕಾನಾನ್ ನಾಡಿನಲ್ಲೂ ಬರವಿತ್ತು. ಧಾನ್ಯ ಕೊಂಡುಕೊಳ್ಳಲು ಅಲ್ಲಿಂದ ಈಜಿಪ್ಟಿಗೆ ಬಂದವರಲ್ಲಿ ಯಕೋಬನ (ಇಸ್ರಯೇಲನ) ಮಕ್ಕಳೂ ಇದ್ದರು. ಆಗ ಈಜಿಪ್ಟ್ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದವನು ಹಾಗೂ ಜನರಿಗೆ ದವಸಧಾನ್ಯ ಮಾರಾಟ ಮಾಡಿಸುತ್ತಿದ್ದವನು ಜೋಸೆಫನೇ, ಇಂತಿರಲು ಅವನ ಅಣ್ಣಂದಿರು ಬಂದು ಅವನ ಮಂದೆ ನೆಲದವರೆಗೂ ಬಾಗಿ ನಮಸ್ಕರಿಸಿದರು. ಜೋಸೆಫನು ಅವರನ್ನು ನೋಡಿದ ಕೂಡಲೆ ಗುರುತುಹಿಡಿದನು. ಆದರೂ ಅವರ ಪರಿಚಯ ಇಲ್ಲದವನಂತೆ ಬಿರುನುಡಿಯಿಂದ, "ನೀವು ಎಲ್ಲಿಯವರು?" ಎಂದು ಕೇಳಿದನು. ಅವರು, "ನಾವು ಧಾನ್ಯ ಕೊಂಡುಕೊಳ್ಳುವುದಕ್ಕಾಗಿ ಕಾನಾನ್ ನಾಡಿನಿಂದ ಬಂದವರು," ಎಂದು ಹೇಳಿದರು. ಅವರೆಲ್ಲರನ್ನು ಮೂರು ದಿನಗಳವರೆಗೆ ಕಾವಲಿನಲ್ಲಿ ಇರಿಸಿದನು. ಮೂರನೆಯ ದಿನ ಜೋಸೆಫನು ಅವರನ್ನು ಕರೆಸಿ, "ನಾನು ದೇವರಲ್ಲಿ ಭಯಭಕ್ತಿಯುಳ್ಳವನು; ನಿಮಗೆ ಜೀವದ ಮೇಲೆ ಆಶೆಯಿದ್ದರೆ ನಾನು ಹೇಳಿದಂತೆ ಮಾಡಿ; ನೀವು ಸತ್ಯವಂತರಾದರೆ ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿಡುತ್ತೇನೆ. ಮಿಕ್ಕವರು ಕ್ಷಾಮದಿಂದ ಬಳಲುತ್ತಿರುವ ನಿಮ್ಮ ನಿಮ್ಮ ಕುಟುಂಬಗಳಿಗೆ ಅಗತ್ಯವಾದ ಧಾನ್ಯಗಳನ್ನು ತೆಗೆದುಕೊಂಡು ಹೋಗಿ.  ಆದರೆ, ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರೆದುಕೊಂಡು ಬರಬೇಕು. ಕರೆದುಕೊಂಡು ಬಂದರೆ, ನಿಮ್ಮ ಮಾತು ಸತ್ಯವೆಂದು ತಿಳಿದುಕೊಳ್ಳುತ್ತೇನೆ. ಆಗ ನೀವು ಸಾಯದೆ ಉಳಿಯುವಿರಿ," ಎಂದನು. ಅವರು ಹಾಗೆಯೇ ಮಾಡಲು ಒಪ್ಪಿಕೊಂಡರು. ಆಗ ಅವರು ತಮ್ಮತಮ್ಮೊಳಗೆ, "ನಾವು ನಮ್ಮ ತಮ್ಮನಿಗೆ ಮಾಡಿದ ದ್ರೋಹಕ್ಕೆ ತಕ್ಕ ದಂಡನೆಯನ್ನು ಅನುಭವಿಸುತ್ತಿದ್ದೇವೆ. ಅವನು ನಮ್ಮನ್ನು ಕಳಕಳಿಯಂದ ಬೇಡಿಕೊಂಡ. ಅವನ ಪ್ರಾಣ ಸಂಕಟವನ್ನು ತಿಳಿದೂ ನಾವು ಅವನ ಮೊರೆಗೆ ಕಿವಿಗೊಡಲಿಲ್ಲ.  ಆದ್ದರಿಂದಲೆ ಈ ಸಂಕಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ," ಎಂದು ಮಾತನಾಡಿಕೊಂಡರು. ಅಂತೆಯೇ ರೂಬೇನನು, "ಆ ಹುಡುಗನಿಗೆ ಯಾವ ಕೇಡನ್ನು ಮಾಡಬೇಡಿ" ಎಂದು ನಾನು ಹೇಳಲಿಲ್ಲವೆ? ನೀವು ಕೇಳದೆ ಹೋದಿರಿ. ಅವನ ರಕ್ತ ಈಗ ನಮ್ಮಿಂದ ಪ್ರಾಯಶ್ಚಿತ್ತ ಕೇಳುತ್ತಿದೆ," ಎಂದ. ಜೋಸೆಫನು ಒಬ್ಬ ಅನುವಾದಕನ ಮುಖಾಂತರ ಅವರ ಸಂಗಡ ಮಾತನಾಡುತ್ತಿದ್ದುದರಿಂದ ಅವನಿಗೆ ತಮ್ಮ ಮಾತು ಗೊತ್ತಾಗುತ್ತಿದೆ ಎಂದು ಅವರು ನೆನಸಲಿಲ್ಲ. ಜೋಸೆಫನಾದರೋ ಅವರ ಬಳಿಯಿಂದ ಮರೆಯಾಗಿ ಹೋಗಿ ಕಣ್ಣೀರು ಸುರಿಸಿದ. ತರುವಾಯ ಅವರ ಬಳಿಗೆ ಬಂದು, ಸಂಭಾಷಣೆ ಮುಂದುವರಿಸಿ, ಸಿಮೆಯೋನನನ್ನು ಆರಿಸಿ, ಅವರ ಕಣ್ಣೆದುರಿನಲ್ಲೇ ಬೇಡಿಹಾಕಿಸಿದ.

ಕೀರ್ತನೆ: 33:2-3, 10-11, 18-10

ಶ್ಲೋಕ: ನಮ್ಮ ಮೇಲಿರಲಿ ಪ್ರಭು ನಿನ್ನಚಲ ಪ್ರೀತಿ

ಶುಭಸಂದೇಶ: ಮತ್ತಾಯ 10:1-7

ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು: ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಆಂದ್ರೇಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ; ಫಿಲಿಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಆಲ್ಫಾಯನ ಮಗ ಯಕೋಬ ಮತ್ತು ತದ್ಧಾಯ; ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ. ಆ ಹನ್ನೆರಡು ಮಂದಿ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು:  "ಪರಕೀಯರತ್ತ ಹೋಗಲೇ ಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, "ಸ್ವರ್ಗಸಾಮ್ರಾಜ್ಯವು  ಸಮೀಪಿಸಿದೆ" ಎಂದು ಬೋಧನೆಮಾಡಿರಿ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...