ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.04.2019 - "ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! "

ಮೊದಲನೇ ವಾಚನ: ಯೆಶಾಯ 50:4-9


ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನ್ನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ, ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ, ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ, ನನಗೆ ಪ್ರತಿಕಕ್ಷಿ ಯಾರೇ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ಇಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.

ಕೀರ್ತನೆ: 69:8-10, 21-22, 31, 33-34
ಶ್ಲೋಕ: ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ.

ಶುಭಸಂದೇಶ: ಮತ್ತಾಯ 26:14-25

ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. "ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?" ಎಂದು ಅವರನ್ನು ವಿಚಾರಿಸಿದನು ಅವರೋ, ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?" ಎಂದು ಕೇಳಿದರು. ಅದಕ್ಕೆ ಅವರು, "ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, "ನನ್ನ ಕಾಲ ಸಮೀಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ', ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವರಿಗೆ ತಿಳಿಸಿರಿ," ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, "ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ," ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, "ಸ್ವಾಮೀ, ನಾನೋ? ನಾನೋ?" ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ಧಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!" ಎಂದರು. ಗುರುದ್ರೋಹಿಯಾದ ಯೂದನು ಆಗ, "ಗುರುವೇ, ಅವನು ನಾನಲ್ಲ ತಾನೇ?" ಎಂದನು. ಅದಕ್ಕೆ ಯೇಸು, "ಅದು ನಿನ್ನ ಬಾಯಿಂದಲೇ ಬಂದಿದೆ," ಎಂದರು.

ಮನಸಿಗೊಂದಿಷ್ಟು : ಜೂದಾಸ್ ಯೇಸುವನ್ನು  ಹಿಡಿದುಕೊಟ್ಟಾಗ ಅವನಿಗೆ ನಿಜಕ್ಕೂ ಯೇಸುವನ್ನು ಕೊಲ್ಲಿಸಬೇಕೆಂಬ ಇಚ್ಛೆಯಿತ್ತೇ ಎಂಬುದು ಬೈಬಲ್ ಪಂಡಿತರ ಪ್ರಶ್ನೆ. ತಮ್ಮನ್ನು ಸೈನಿಕರು, ಯೆಹೂದ್ಯರು ಬಂಧಿಸಲು ಬಂದಾಗಲಾದರೂ ಯೇಸು ಸಿಡಿದೇಳಬಹುದು, ಕ್ರಾಂತಿಯಾಗಬಹುದು,  ತಮಗೊಬ್ಬ ರಾಜ ಸಿಗಬಹುದು ಎಂಬ ಆಸೆ ಅವನದಾಗಿತ್ತು. ಯೇಸುವನ್ನು ಆ ಯಹೂದ್ಯರು ಕೊಲ್ಲುತ್ತಾರೆ ಎಂದಾಗ ನೊಂದುಕೊಂಡ, ತನ್ನ ಕಾರ್ಯದ ಬಗ್ಗೆ ದು:ಖಿತನಾದ, ಸತ್ತ.  ದೇವರ ಚಿತ್ತಕ್ಕಿಂತ  ನಾವು ನೆನೆಸಿಕೊಂಡಂತೆ ಆಗಬೇಕೆಂಬ ನಮ್ಮ ಅಂತರಂಗದ ಪ್ರತಿಬಿಂಬವಿದು. ದೇವರ ಚಿತ್ತವನ್ನು ಅಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ. ನಿರಾಶರಾಗಲಾರೆವು.

ಪ್ರಶ್ನೆ :   ದಿನಕ್ಕೆಷ್ಟು ಬಾರಿ ಜೂದಾಸನಂತೆ ಯೇಸುವಿಗೆ ದ್ರೋಹ ಬಗೆಯುತ್ತಿದ್ದೇವೆ?

16.04.2019 - "ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ''

ಮೊದಲನೇ ವಾಚನ: ಯೆಶಾಯ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ  ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ; ಮಾಡಿದನು ನನ್ನ ನುಡಿಯನ್ನು ಹರಿಯವಾದ ಖಡ್ಗವನ್ನಾಗಿ, ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ, ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ," ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ, ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು, ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು. ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ, ನನ್ನ ಶಕ್ತಿಸಾಮರ್ಥಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: "ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ."

ಕೀರ್ತನೆ: 71:1-2, 3-4, 5-6, 15, 17
ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಶುಭಸಂದೇಶ: ಯೊವಾನ್ನ 13:21-23, 36-38

ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು," ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು," ಎಂದು ಸನ್ನೆ ಮಾಡಿದನು. ಆಗ ಆ ಶಿಷ್ಯನು, ಯೇಸುವಿನ ಮಗ್ಗಲಿಗೆ ಸರಿದು, "ಅಂತವನು ಯಾರು ಪ್ರಭೂ?" ಎಂದು ಕೇಳಿದನು. ಯೇಸು, "ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ," ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು ಯೂದನು ಅದನ್ನು ತೆಗೆದುಕೊಂಡಿದ್ದೇ ತಡ, ಸೈತಾನನು ಹೊಕ್ಕನು. ಆಗ ಯೇಸು, "ನೀನು ಮಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು," ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, "ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ," ಎಂದೋ, "ಬಡವರಿಗೆ ಏನಾದರು ಕೊಡು' ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದ ಮೇಲೆ ಯೇಸುಸ್ವಾಮಿ ಹೀಗೆಂ ದರು: "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೆ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ. ಆಮೇಲೆ ನೀವು ನನ್ನನ್ನು ಹುಡುಕುವಿರಿ, "ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ' ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ  ಹೇಳುತ್ತೇನೆ" ಎಂದರು. ಆಗ ಸಿಮೋನ ಪೇತ್ರನು, ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?" ಎಂದು ಕೇಳಿದನು. "ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಆನಂತರ ಬರುವೆ," ಎಂದು ಯೇಸು ಉತ್ತರಕೊಡಲು ಪೇತ್ರನು, "ಈಗಲೇ ನಿಮ್ಮ ಹಿಂದೆ ಬರಲು ಏಕಾಗದು?  ಪ್ರಭು, ನಿಮಗಾಗಿ ಪ್ರಾಣವನ್ನು ಕೊಡಲು ಸಿದ್ದನಿದ್ದೇನೆ," ಎಂದನು. ಆಗ ಯೇಸು, "ನನಗಾಗಿ‌ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗೂವುದಿಲ್ಲ," ಎಂದು ನುಡಿದರು.

ಮನಸಿಗೊಂದಿಷ್ಟು : ತಮ್ಮನ್ನು ಹಿಡಿದು ಕೊಡುವವನು ಯಾರು ಎಂದು ತಿಳಿದಿದ್ದರೂ ಯೇಸು ತೋರಿದ ಪ್ರೀತಿ, ಸಹನೆಯನ್ನು ವರ್ಣಿಸಲು ಸಾಧ್ಯವಿಲ್ಲ. ನಮ್ಮ ನಡುವಿನ ಜನರನ್ನು ಸುಲಭದಲ್ಲಿ ಹೀಯಾಳಿಸುವ ನಾವು ಇದರಿಂದ ಕಲಿಯಬಹುದಾದ ಪಾಠ ದೊಡ್ಡದು. ಇನ್ನೂ ನಾವು ಯೇಸುವಿನ ಆಪ್ತರು ಎನಿಸಿಕೊಂಡರೂ ಅಂದು ಪೇತ್ರ ಮಾಡಿದಂತೆ ನಮ್ಮ ನಡೆ ನುಡಿಗಳಿಂದ ಅವರನ್ನು ನಿರಾಕರಿಸುತ್ತಲೇ ಬಂದೆದ್ದೇವೆ. ಇತ್ತ ಪೇತ್ರ ಮನ ಪಶ್ಚಾತ್ತಪ ಪಟ್ಟು ಪ್ರೇಷಿತನಾಗಿ ಅಮರನಾದರೇ, ಜೂದ ಪಶ್ಚಾತ್ತಾಪ ಪಟ್ಟುಕೊಂಡರೂ ಸಕ್ರೀಯನಾಗಲಿಲ್ಲ.

ಪ್ರಶ್ನೆ : ನಮ್ಮ ಪಶ್ಚಾತ್ತಾಪ ಪೇತ್ರನಂತದ್ದೋ? ಜೂದನಂತದ್ದೋ 

15.04.2019 - 'ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,"

ಮೊದಲನೇ ವಾಚನ: ಯೆಶಾಯ 42:1-7

ಇಗೋ, ನನ್ನ ದಾಸನು! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು, ನನಗೆ ಪರಮ ಪ್ರಿಯನು, ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನ್ನು, ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ ಜಜ್ಜಿದ ದಂಟನು, ನಂದಿಸುವುದಿಲ್ಲ ಆತ ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ದರ್ಮವನು.ಎಡವಿ ಬೀಳನವನು, ಎದೆಗುಂದನವನು, ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ- ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು. ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದುದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು: ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನ್ನು, ಕರೆದಿಹೆನು ನನ್ನನ್ನು ಸದ್ಧರ್ಮ ಸಾಧನೆಗಾಗಿ, ಇತ್ತಿರುವೆನು ನಿನ್ನನ್ನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನ್ನು ರಾಷ್ಪ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ, ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

ಕೀರ್ತನೆ: 27:1, 2, 3, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ

ಶುಭಸಂದೇಶ: ಯೊವಾನ್ನ 12:1-11


ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು.  ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ. ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಓರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. ಯೇಸುವನ್ನು  ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, "ಈ ಸುಗಂಧ ತೈಲವನ್ನು ಮುನ್ನೂರು ದಿನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?" ಎಂದನು. ಬಡವರ ಹಿತ ಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, "ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ," ಎಂದರು. ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡ ಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು. ಲಾಸರನ ನಿಮಿತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮಖ್ಯ ಯಾಜಕರು ಆಲೋಚಿಸಿದರು.

14.04.2018 - 'ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ'

ಮೊದಲನೇ ವಾಚನ: ಯೆಶಾಯ 50:4-7

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮೀ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು, ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ, ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭಂಗಪಡಲಾರೆನಂದು ಗೊತ್ತು ನನಗೆ. 

ಕೀರ್ತನೆ: 22:8-9, 17-18, 19-20, 23-24

ಶ್ಲೋಕ: ದೇವಾ, ಓ ಎನ್ನ ದೇವಾ, ಏಕೆನ್ನ ಕೈ ಬಿಟ್ಟೆ?

ಎರಡನೇ ವಾಚನ: ಫಿಲಿಪ್ಪಿಯರಿಗೆ 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನ್ನೇ ಬರಿದು ಮಾಡಿಕೊಂಡು, ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲ್ಲಿ ಕಾಣಿಸಿಕೊಂಡು, ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು, ವಿಧೇಯನಾಗಿ ನಡೆದುಕೊಂಡು, ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು, ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂಮಿವಾಸಿಗಳು, ಪಾತಾಳ ಜೀವರಾಶಿಗಳು. "ಕ್ರಿಸ್ತ ಯೇಸುವೇ ಪ್ರಭು" ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಲೂಕ 22:14-23:56

ನಿಶ್ಚಿತ ಸಮಯ ಬಂದಾಗ ಯೇಸುಸ್ವಾಮಿ ಶಿಷ್ಯರ ಸಮೇತ ಊಟಕ್ಕೆ ಕುಳಿತರು. ಆಗ ಅವರು ಶಿಷ್ಯರಿಗೆ, ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರುನೋಡುತ್ತಿದ್ದೇನೆ. ದೇವರ ಸಾಮ್ರಾಜ್ಯದಲ್ಲಿ ಇದು ಪೂರ್ಣ ಅರ್ಥವನ್ನು ಪಡೆಯುವ ತನಕ ನಾನಿದನ್ನು ಇನ್ನು ಭುಜಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ," ಎಂದರು. ಆನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, "ಇದನ್ನು ತೆಗೆದುಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ; ದೇವರ ಸಾಮ್ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂದು ನಿಮಗೆ ಹೇಳುತ್ತೇನೆ,"ಎಂದರು. ಬಳಿಕ ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ನನ್ನ ಸ್ಮರಣೆಗಾಗಿ ಇದನ್ನು ಮಾಡಿರಿ," ಎಂದರು. ಅಂತೆಯೇ, ಊಟವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು "ಈ ಪಾತ್ರೆಯು ನಿಮಗಾಗಿ ಸುರಿಸಲಾಗುವ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ". "ಆದರೆ ಇಗೋ, ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. ನರಪುತ್ರನೇನೋ ದೈವೇಚ್ಛೆಯ ಪ್ರಕಾರ ಹೊರಟು ಹೋಗುತ್ತಾನೆ; ಆದರೆ ಆತನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ!"ಎಂದರು.

ಇದನ್ನು ಕೇಳಿದ ಶಿಷ್ಯರು ಇಂತಹ ದುಷ್ಕ್ರತ್ಯ ಮಾಡುವವನು ತಮ್ಮಲ್ಲಿ ಯಾರಿರಬಹುದೆಂದು ಒಬ್ಬರನ್ನೊಬ್ಬರು ವಿಚಾರಿಸತೊಡಗಿದರು. ತಮ್ಮಲ್ಲಿ ಅತಿ ಶ್ರೇಷ್ಠನು ಯಾರು ಎಂಬ ವಾದವಿವಾದವು ಶಿಷ್ಯರಲ್ಲಿ ಎದ್ದಿತು. ಆಗ ಯೇಸುಸ್ವಾಮಿ, "ಲೌಕಿಕ ಜನರು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆ; ಅಧಿಕಾರ ನಡೆಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು. ಈ ಇಬ್ಬರಲ್ಲಿ ದೊಡ್ಡವನು ಯಾರು - ಊಟ ಮಾಡುವವನೋ? ಊಟ ಬಡಿಸುವವನೋ? ಖಂಡಿತವಾಗಿ ಊಟಮಾಡುವವನು. ಆದರೂ ಊಟ ಬಡಿಸುವ ಊಳಿಗದವನಂತೆ ನಾನು ನಿಮ್ಮ ನಡುವೆ ಇದ್ದೇನೆ. ನನ್ನ ಶೋಧನೆ - ವೇದನೆಗಳಲ್ಲಿ ನನ್ನನ್ನು ಬಿಟ್ಟಗಲದೆ ಇದ್ದವರು ನೀವು. ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನು ನಿಮಗೆ ವಹಿಸುತ್ತೇನೆ. ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ಸಿಮೋನನೇ, ಸಿಮೋನನೇ,  ಕೇಳು: ಗೋದಿಯನ್ನು ತೂರುವಂತೆ ಸೈತಾನನು ನಿಮ್ಮೆಲ್ಲರನ್ನೂ ಶೋದಿಸಲು ಅಪ್ಪಣೆ ಕೇಳಿಕೊಂಡಿದ್ದಾನೆ. ಆದರೆ, ನಾನು ನಿನ್ನ ವಿಶ್ವಾಸವು ಕುಂದದಂತೆ ನಿನಗಾಗಿ ಪ್ರಾರ್ಥನೆ ಮಾಡಿದ್ದೇನೆ. ನೀನು ಪರಿವರ್ತನೆ ಹೊಂದಿದ ನಂತರ ನಿನ್ನ ಸಹೋದರರನ್ನು ದೃಢಪಡಿಸು," ಎಂದರು. ಅದಕ್ಕೆ ಪೇತ್ರನು, "ಗುರುದೇವಾ, ನಿಮ್ಮ ಸಂಗಡ ಸೆರೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ದನಿದ್ದೇನೆ," ಎಂದನು. ಆಗ ಯೇಸು, "ಪೇತ್ರನೇ, ಇಂದು ಕೋಳಿಕೂಗುವ ಮೊದಲೇ ನನ್ನನ್ನು ಅರಿಯೆನೆಂದು ನೀನು ಮೂರು ಬಾರಿ ಬೊಂಕುವೆ, ಇದು ಖಂಡಿತ," ಎಂದರು. ಬಳಿಕ ಯೇಸುಸ್ವಾಮಿ, "ನಾನು ನಿಮ್ಮನ್ನು ಬುತ್ತಿ, ಜೋಳಿಗೆ, ಜೋಡು ಒಂದೂ ಇಲ್ಲದೆ ಕಳಿಸಿದಾಗ ನಿಮಗೇನಾದರೂ ಕೊರತೆ ಆಯಿತೆ?" ಎಂದು ಶಿಷ್ಯರನ್ನು ಕೇಳಿದರು.  ಅದಕ್ಕೆ ಅವರು "ಇಲ್ಲ" ಎಂದು ಉತ್ತರ ಕೊಟ್ಟರು. "ಆದರೆ ಈಗ ಬುತ್ತಿಯಿರುವವನು ಅದನ್ನು ತೆಗೆದುಕೊಳ್ಳಲಿ; ಜೋಳಿಗೆಯಿರುವವನು ಹಾಗೆಯೇ ಮಾಡಲಿ; ಮತ್ತು ಕತ್ತಿಯಿಲ್ಲದವನು  ತನ್ನ ಹೊದಿಕೆಯನ್ನು ಮಾರಿ ಒಂದನ್ನು ಕೊಂಡುಕೊಳ್ಳಲಿ. ಏಕೆಂದರೆ, "ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು, ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯ ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ," ಎಂದರು. "ಗುರುವೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ," ಎಂದು ಶಿಷ್ಯರು ಹೇಳಲು ಯೇಸು, "ಅಷ್ಟುಸಾಕು" ಎಂದರು.

ಮನಸಿಗೊಂದಿಷ್ಟು : ಯೇಸುಕ್ರಿಸ್ತರು ಜೆರುಸಲೇಮನ್ನು ಪ್ರವೇಶಿಸಿದ ಘಟನೆ ಮೈನವಿರೇಳಿಸುವಂಥದ್ದು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಯೇಸುವಿಗೆ ಕೊಟ್ಟ ಸ್ವಾಗತ ಐತಿಹಾಸಿಕ.

ಯೇಸು ಬದುಕಿದ್ದ ಸುಮಾರು 160 ವರ್ಷಗಳ ಹಿಂದೆ ತಮ್ಮ ವೈರಿಗಳನ್ನು ಬಗ್ಗು ಬಡಿದ ಸೈಮನ್ ಮೆಕಾಭಿಯಸ್ ಎಂಬ ಸೈನ್ಯಾಧಿಕಾರಿಗೆ ಇದೇ ರೀತಿಯ ಸ್ವಾಗತವನ್ನು ಜನ ಜೆರುಸಲೇಮಿನಲ್ಲಿ ಕೊಟ್ಟಿದ್ದರು. ಯೇಸು ಸಹಾ ತಮ್ಮನ್ನು ಕಷ್ಟಗಳಿಂದ ಬಿಡಿಸುವ ಅದೇ ರೀತಿಯ ಕ್ರಾಂತಿಕಾರಿ ರಾಜ ಎಂಬ ಬಲವಾದ ನಂಬಿಕೆಯಿಂದಲೇ, ಒಬ್ಬ ರಾಜನಿಗೆ ಕೊಡುವ ಸ್ವಾಗತವನ್ನು ಗೌರವವನ್ನು ಯೇಸುವಿಗೆ ನೀಡುತ್ತಾರೆ. ಆದರೆ ಯೇಸುವಿನ ಆಶಯವೇ ಬೇರೆಯಾಗಿತ್ತು ಯೇಸು ಒಂದು ಕತ್ತೆಯ ಮೇಲೆ ಶಾಂತಿದೂತನಾಗಿ ಪ್ರವೇಶಿಸುತ್ತಾರೆ.

ಅಂದಿನ ಸಮಾಜದಲ್ಲಿ ಕತ್ತೆಗೆ ಮಹತ್ವದ ಸ್ಥಾನವಿತ್ತು. ಯುದ್ಧಕ್ಕೆ ಹೊರಟ ರಾಜ ಕುದುರೆಯ ಮೇಲೂ, ಶಾಂತಿಯನ್ನು ಸಾರುವ ರಾಜ ಕತ್ತೆಯ ಮೇಲೆ ಕೂತು ಸಾಗುವ ಪದ್ಧತಿಯಿತ್ತು. ಜನ ಅಂದು ಸಂಭ್ರಮಿಸಿದರೂ, ಕೆಲವೇ ದಿನಗಳ ಅಂತರದಲ್ಲಿ ಯೇಸು ನಿಸ್ಸಹಾಯಕರಾಗಿ ಪಿಲಾತನ ಎದುರು ನಿಂತಿರುವುದನ್ನು ಕಂಡು ಅವರ  ನಿರೀಕ್ಷೆಗೆ ಪೆಟ್ಟು ಬಿತ್ತು.

ಇಂದು ಗರಿಗಳನ್ನು ಹಿಡಿದು ಸ್ತುತಿಗೀತೆ ಹಾಡುತ್ತಿರುವ ನಾವು ಯೇಸುವಿನಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ? ರಾಜನಂತೆ ಪ್ರವೇಶಿಸಿ, ತಮ್ಮ ಇಚ್ಛೆಯಂತೆ ಸಾಮಾನ್ಯ ಅಪರಾಧಿಯಾಗಿ ಶಿಲುಬೆಯಲ್ಲಿ ಪ್ರಾಣ ಬಿಟ್ಟ ಯೇಸು ಕೊನೆಗೆ ಮರಣ ಜಯಿಸಿ ಜಯಶೀಲರಾದರು. ಪವಿತ್ರ ವಾರದ ತಿರುಳಿರುವುದೇ ಯೇಸುವಿನ ಈ ಜಯದಲ್ಲಿ. ಯೇಸುವಿನ ಆ ಜಯ ನಮ್ಮದಾಗಬೇಕಾದರೆ, ನಾವು ಶಿಲುಬೆಯಿಂದ ವಿಮುಖರಾಗುವಂತಿಲ್ಲ ಪರರ ನೋವಿಗೆ ಸ್ಪಂದಿಸುವ, ಕಾರ್ಯಮುಖರಾಗುವ ಕ್ರಿಯೆಯೂ ಅಂತಹ ಒಂದು ಶಿಲುಬೆ.

ಜಿ.ಕೆ. ಚೆಸ್ಟರ‍್ಟನ್ ಎಂಬ ಲೇಖಕರ ಕವಿತೆಯೊಂದರಲ್ಲಿ ಕತ್ತೆಯೊಂದರ ಸ್ವಗತವಿದೆ. ತನ್ನ ಹೀನ ಬದುಕಿನ ಬಗ್ಗೆ ದು:ಖದಿಂದ ಮಾತಾಡುತ್ತಾ, ಕೊನೆಯಲ್ಲಿ ತನಗೂ ಒಂದು ಒಳ್ಳೆಯ ದಿನ ಬಂದಿತ್ತು, ಆ ದಿನದಂದು ಮೇರು ವ್ಯಕ್ತಿತ್ವದಿಂದಾಗಿ ತನಗೂ ಗರಿಗಳ, ಜಯಘೋಷದ ಸ್ವಾಗತ ಸಿಕ್ಕಿತ್ತು ಎಂಬ ಯೇಸುವಿನ ಜೆರುಸಲೇಮ್ ಪ್ರವೇಶದ ಉಲ್ಲೇಖದೊಂದಿಗೆ ಆ ಕತ್ತೆ ತನ್ನ ನೋವನ್ನು ಮರೆಯುತ್ತದೆ. ನೊಂದ-ಬೆಂದ, ಅನ್ಯಾಯಕ್ಕೊಳ್ಳಗಾಗಿ ನರಳುತ್ತಿರುವ ಜನರಿಗೆ ಆ ಕತ್ತೆಯ ಸ್ವಗತ ಸ್ಪೂರ್ತಿಯಾಗಲಿ. 

ಯೇಸುವನ್ನು ನಮ್ಮ ಮನದಲ್ಲಿ ಹೊತ್ತು ನಡೆದರೆ, ಒಳ್ಳೆಯ ದಿನಗಳು ಮತ್ತೆ ಬಂದೇ ಬರುತ್ತದೆ ಎಂಬ ಭರವಸೆಯೇ ಆ ಸ್ಪೂರ್ತಿ.

13.04.2019 - "ಇಡೀ ರಾಷ್ಟ್ರವೇ ನಿರ್ನಾಮವಾಗುವುದಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತ"

ಮೊದಲನೇ ವಾಚನ: ಯೆಜೆಕಿಯೇಲ 37:21-28

ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು: "ನರಪುತ್ರನೇ, ಇದನ್ನೂ ಅವರಿಗೆ ನುಡಿ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ ಇಸ್ರಯೇಲರ ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು;  ಭಿನ್ನ ರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳುವರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದು ದೇವ ದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು. ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವರು. ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊಂದಿಗೆ ಶಾಂತಿ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿ ಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು, ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ಮೀಸಲು ಮಾಡಿಕೊಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು.

ಯೆರೆಮೀಯ: 31:10, 11, 12, 13

ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ, ಅವರನ್ನು ಕೂಡಿಸಿ ಕಾಪಾಡುವೆನೆಂದು ಪ್ರಕಟಿಸಿರಿ

ಶುಭಸಂದೇಶ: ಯೊವಾನ್ನ 11:45-57

ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು. ಮುಖ್ಯ ಯಾಜಕರೂ ಫರಿಸಾಯರೂ "ನ್ಯಾಯಸಭೆ"ಯನ್ನು ಕರೆದರು. "ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕ ಕಾರ್ಯಗಳನ್ನು ಮಾಡುತ್ತಾನಲ್ಲಾ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನು ನೆಲಸಮ ಮಾಡುವರು," ಎಂದು ವಾದಿಸಿದರು. ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು, "ಇಡೀ ರಾಷ್ಟ್ರವೇ ನಿರ್ನಾಮವಾಗುವುದಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ," ಎಂದು ನುಡಿದನು. ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರದಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣ ತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ ಚದುರಿ ಹೋಗಿದ್ದ ದೇವ ಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ. ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು. ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಾಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ಧೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು. ಯೇಸುವನ್ನು ನೋಡಬೇಕೆಂಬ ಆಶೆ ಅವರಿಗಿತ್ತು. "ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?" ಎಂದು ಮಹಾದೇವಾಲಯದಲ್ಲಿ ತಮ್ಮ ತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯ ಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

ಮನಸಿಗೊಂದಿಷ್ಟು :  ಯೇಸುವಿನ ಇರುವಿಕೆ ಬೋಧನೆ, ಸಾಧನೆ  ಎಲ್ಲವೂ ಆ ಯಾಜಕರು, ಫರಿಸಾಯರಿಗೆ ಇರಿಸುಮುರಿಸು ತಂದಿಟ್ಟಿತು . ಅವರ ಅಧಿಕಾರ , ಸೌಕರ್ಯ, ಚಿಂತನೆಗಳಿಗೆ ಅಡಚಣೆ ಎಂಬಂತೆ ಅವರಿಗೆ ತೋರಿತು. ನಮ್ಮ ಜೀವನದಲ್ಲೂ ಯೇಸುವಿನ ಆದರ್ಶ, ಆಶಯಗಳು ನಮ್ಮ ಪಾಪಮಯ ಜೀವನ , ನಮ್ಮ ಲೌಕಿಕತೆಯೊಂದಿಗೆ ಸಂಘರ್ಷಕ್ಕೆ  ದಾರಿ ಮಾಡಿಕೊಡುತ್ತದೆ. ಅಲ್ಲಿ ಗೆಲ್ಲಬೇಕಾದುದು ಯೇಸುವೇ. ಆ ಫರಿಸಾಯರಂತೆ ನಾವೂ ಯೇಸುವನ್ನು ದೂರ ಮಾಡಲು ಪ್ರಯತ್ನಿಸದಿರೋಣ.

ಪ್ರಶ್ನೆ : ನಮ್ಮ ಬಾಳಿನಲ್ಲಿ ಯೇಸುವೋ? ನಮ್ಮದೇ ಲೌಕೀಕ ದಾರಿಯೋ?

12.04.2019 - ಹಲವರಿಗೆ ಯೇಸುವಿನ್ನಲ್ಲಿ ವಿಶ್ವಾಸ ಹುಟ್ಟಿತು

ಮೊದಲನೇ ವಾಚನ: ಯೆರೆಮೀಯ  20:10-13

ಸುತ್ತಮುತ್ತಲು ದಿಗಿಲೆಂದರೆ ದಿಗಿಲು! 'ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವು ಹೇಳುವೆವು' ಎಂದು ಗುಸುಗುಟ್ಟುತ್ತಿರುವರು ಬಹು ಜನರು. "ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವು" ಎನ್ನುತ್ತಿರುವ ನನ್ನಾಪ್ತ ಮಿತ್ರರೆಲ್ಲರು. "ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿ ತೀರಿಸಿಕೊಳ್ಳುವೆವು.' ಎಂದುಕೊಳ್ಳುತ್ತಿದ್ದರು. ತಮ್ಮ ತಮ್ಮೊಳಗೆ. ಆದರೆ ನನ್ನ ಸಂಗಡ ಇರುವವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅಪಮಾನಕ್ಕೆ ಗುರಿಯಾಗುವರು ಎಂದಿಗೂ ಮರಿಯಲಾಗದಂತೆ. ಸರ್ವಶಕ್ತರಾದ ಸರ್ವೇಶ್ವರ, ನೀವು ಸತ್ಪುರುಷರನ್ನು ಪರಿಶೋಧಿಸುವವರು ಅಂತರಿಂದ್ರೀಯಗಳನ್ನೂ ಅಂತರಾಳವನ್ನೂ ವಿಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ. ಸರ್ವೇಶ್ವರನನ್ನು ಸ್ತುತಿಸಿರಿ. ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವನ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.

ಕೀರ್ತನೆ: 18:2-3, 3-4, 5-6, 7
ಶ್ಲೋಕ: ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ ನನ್ನ  ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.

ಶುಭಸಂದೇಶ: ಯೊವಾನ್ನ 10:31-42


ಆಗ ಯೆಹೂದ್ಯರು ಯೆಸುವಿನತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು. ಅದಕ್ಕೆ ಯೇಸು, "ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?" ಎಂದರು. ಅದಕ್ಕೆ ಯೆಹೂದ್ಯರು, "ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದ್ದೀಯೇ," ಎಂದು ಉತ್ತರಕೊಟ್ಟರು. ಆಗ ಯೇಸು, " ನೀವು ದೇವರುಗಳು" ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ? ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ. ಇಂತಿರುವಲ್ಲಿ, ಪಿತನೇ ಪ್ರತಿಷ್ಠಸಿ ಕಳುಹಿಸಿಕೊಟ್ಟವನಾದ ನಾನು, "ದೇವರ ಪುತ್ರನಾಗಿದ್ದೇನೆ" ಎಂದು ಹೇಳಿಕೊಂಡದ್ದಕ್ಕೆ, "ಇವನು ದೇವದೂಷಣೆ ಮಾಡಿದ್ದಾನೆ" ಎನ್ನುತ್ತೀರಲ್ಲಾ? ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ. ನಾನು ಹಾಗೆ ಮಾಡಿದ್ದೇ ಆದರೆ,  ನನ್ನನ್ನು ನಂಬದೆ ಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು. ಹಾಗೂ ಮನದಟ್ಟಾಗುವುದು," ಎಂದರು. ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು. ಬಳಿಕ ಯೇಸುಸ್ವಾಮಿ ಜೋರ್ಡಾನ್ ನದಿಯನ್ನು ದಾಟಿ ಯೊವಾನ್ನನು ಮೊತ್ತ ಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು.  ಹಲವರು ಅವರ ಬಳಿಗೆ ಬರತೊಡಗಿದರು. "ಯೊವಾನ್ನನು ಒಂದು ಸೂಚಕ ಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ" ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ಹಲವರಿಗೆ ಯೇಸುವಿನ್ನಲ್ಲಿ ವಿಶ್ವಾಸ ಹುಟ್ಟಿತು.

11.04.2019 - "ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು"

ಮೊದಲನೇ ವಾಚನ: ಆದಿಕಾಂಡ 17:3-9


ಅಬ್ರಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ದೇವರು ಅವನಿಗೆ, "ನಾನು ನಿನಗೆ ವಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಪ್ರಗಳಿಗೆ ಮೂಲಪುರುಷನಾಗುವೆ. ಇನ್ನ ಮುಂದೆ ನಿನಗೆ "ಅಬ್ರಾಮ" ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಪ್ರಗಳಿಗೆ  ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ "ಅಬ್ರಹಾಮ" ಎಂಬ ಹೆಸರಿರುವುದು. ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಪ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ರೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರ ಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ. ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ." ಇದಲ್ಲದೆ ದೇವರು ಅಬ್ರಾಹಾಮನಿಗೆ ಹೀಗೆಂದು ಹೇಳಿದರು: "ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರೂ ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು."

ಕೀರ್ತನೆ: 105:4-5, 6-7, 8-9 

ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಶುಭಸಂದೇಶ: 8:51-59

ಯೇಸುಸ್ವಾಮಿ ಯೆಹೂದ್ಯರಿಗೆ: "ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯ ಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ," ಎಂದರು. "ನೀನು ದೆವ್ವ ಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, "ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು," ಎಂದು ಹೇಳುತ್ತಿರುವೆ; ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಟನೋ? ಆತನೂ ಸಾವಿಗೀಡಾದನು, ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?" ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. ಯೇಸು ಪ್ರತ್ಯುತ್ತರವಾಗಿ, "ನನ್ನ ಘನತೆ ಗೌರವವನ್ನು ನಾನೇ ಸಾರ ಹೋರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆ ಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ "ಅವರು ನಮ್ಮ ದೇವರು ಎಂದು ನೀವು ಹೇಳಿಕೊಳ್ಳುತ್ತೀರಿ. ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ" ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ.  ಅವರ ಮಾತನ್ನು ನಾನು ಪಾಲಿಸುತ್ತೇನೆ. ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವೆನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು," ಎಂದು ಉತ್ತರಕೊಟ್ಟರು. ಯೆಹೂದ್ಯರು, "ನಿನಗಿನ್ನೂ ಐವತ್ತು ವರ್ಷವಾಗಿಲ್ಲ;. ನೀನು ಅಬ್ರಹಾಮನನ್ನು ನೋಡಿದ್ದೀಯಾ?" ಎಂದರು. ಯೇಸು ಅವರಿಗೆ, ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ," ಎಂದು ಮರುನುಡಿದರು. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟು ಹೋದರು.

ಮನಸಿಗೊಂದಿಷ್ಟು  : ಯಹೂದ್ಯರು ಇಲ್ಲಿ ಯೇಸುವಿನ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ. ದೇವರೇ ಅವರೊಡನಿದ್ದರೂ , ಪ್ರವಾದಿಗಳ, ಧರ್ಮಶಾಸ್ತ್ರಗಳ  ಬಗ್ಗೆ ಆಳವಾದ ಜ್ಞಾನವಿದ್ದರೂ ಅವರ ಮನಸುಗಳು ಕಲ್ಲಾಗಿದ್ದವು, ಮುಚ್ಚಿಹೋಗಿದ್ದವು. ನಾವೂ ಸಹಾ ಅದೇ ಅಪಾಯವನ್ನು ಎದುರಿಸುತ್ತಿದ್ದೇವೆ . ಕ್ರಿಸ್ತ ಸದಾ ನಮ್ಮ ಜೊತೆ ಇರಲು ಬಯಸಿದರೂ ನಾವು ದೂರ ದೂರ ಸಾಗುತ್ತೇವೆ. "ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು" ಎಂದು ದೇವರು ಅಬ್ರಹಾಮನಿಗೆ ಹೇಳಿದ ಮಾತು ನಮ್ಮನ್ನು ಸದಾ ಎಚ್ಚರಿಸುತ್ತಿರಲಿ 

ಪ್ರಶ್ನೆ : ಕ್ರಿಸ್ತನೇ ದೇವರು ಎಂಬ ಅನುಮಾನವಿಲ್ಲದ ವಿಶ್ವಾಸ ನಮ್ಮಲ್ಲಿದೆಯೇ?