25.06.22 - “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,”

ಮೊದಲನೇ ವಾಚನ: 2 ಅರಸುಗಳು 25:1-12

ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು. ಘೋರಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು. ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು. ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿಹೋಗಿದ್ದರು. ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು. ಇವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು. ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ, ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು. ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು. ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತುಗೋಡೆಗಳನ್ನೆಲ್ಲ ಕೆಡವಿದರು. ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು. ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟುಹೋದನು.

ಕೀರ್ತನೆ: 137:1-2, 3, 4-5, 6

ಶ್ಲೋಕ: ಜೆರುಸಲೇಮನು ನಾ ಸ್ಮರಣೆಮಾಡದಿದ್ದಲಿ, ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ

ಶುಭಸಂದೇಶ: ಮತ್ತಾಯ 8:1-4


ಯೇಸುಸ್ವಾಮಿ ಬೆಟ್ಟದಿಂದ ಇಳಿದುಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, “ಸ್ವಾಮೀ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿದನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು.

24.06.22 - "ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು"

ಮೊದಲನೇ ವಾಚನ: ಯೆಜೆಕಿಯೇಲ 34:11-16

ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು. ಮಂದೆಯ ಕುರುಬನು ಸುತ್ತಮುತ್ತಲು ಚದುರಿಹೋದ ತನ್ನ ಕುರಿಗಳನ್ನು ಹುಡುಕುವ ಹಾಗೆ ನಾನು ನನ್ನ ಕುರಿಗಳನ್ನು ಹುಡುಕುವೆನು; ಕಾರ್ಮುಗಿಲಿನ ದುರ್ದಿನದಲ್ಲಿ ಚೆಲ್ಲಾಪಿಲ್ಲಿಯಾದ ಅವುಗಳನ್ನು ಎಲ್ಲ ಸ್ಥಳಗಳಿಂದ ಬಿಡಿಸಿ, ಜನಾಂಗಗಳ ವಶದಿಂದ ತಪ್ಪಿಸಿ, ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡಿ ಇಸ್ರಯೇಲಿನ ಬೆಟ್ಟಗಳಲ್ಲೂ, ತೊರೆಗಳ ಬಳಿಯಲ್ಲೂ ನಾಡಿನ ಎಲ್ಲಹಕ್ಕೆಗಳಲ್ಲೂ ಮೇಯಿಸುವೆನು; ಅವುಗಳಿಗೆ ಒಳ್ಳೆಯ ಮೇವನ್ನು ಮೇಯಿಸುವೆನು; ಅವುಗಳ ಹುಲ್ಲುಗಾವಲು ಇಸ್ರಯೇಲಿನ ಎತ್ತರವಾದ ಬೆಟ್ಟಗಳಲ್ಲಿರುವುದು; ಅಲ್ಲಿ ಒಳ್ಳೆಯ ತೆವರಿನಲ್ಲಿ ಮಲಗುವುವು;  ಇಸ್ರಯೇಲಿನ ಬೆಟ್ಟಗಳಲ್ಲಿ ಹಸಿಹುಲ್ಲನ್ನು ಮೇಯುವುವು. ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಸರ್ವೇಶ್ವರನಾದ ದೇವರ ನುಡಿ. "ತಪ್ಪಿಸಿಕೊಂಡಿದ್ದನ್ನು ಹುಡುಕುವೆನು, ದಾರಿತಪ್ಪಿದ್ದನ್ನು ಮಂದೆಗೆ ಸೇರಿಸುವೆನು, ದುರ್ಬಲವಾದುದನ್ನು ಬಲಗೊಳಿಸುವೆನು, ಮುರಿದ ಅಂಗವನ್ನು ಕಟ್ಟುವೆನು; ಬಲಿತ ಕೊಬ್ಬಿದ ಕುರಿಗಳನ್ನಾದರೋ ದ್ವಂಸಮಾಡುವೆನು; ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ತಿನ್ನಿಸುವೆನು.

ಕೀರ್ತನೆ: 23:1-3, 4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ಎನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?

ಎರಡನೇ ವಾಚನ: ರೋಮನರಿಗೆ 5:5-11

ಸಹೋದರರೇ, ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ  ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ  ನಾವಿನ್ನೂ  ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ. ಕ್ರಿಸ್ತಯೇಸುವಿನ  ರಕ್ತಧಾರೆಯಿಂದ ನಾವೀಗ ದೇವರೊಡನೆ ಸತ್ಸಂಬಂಧದಲ್ಲಿದ್ದೇವೆ. ಹೀಗಿರಲಾಗಿ, ಬರಲಿರುವ ದೈವಕೋಪಾಗ್ನಿಯಿಂದ ಯೇಸುಕ್ರಿಸ್ತರ ಮುಖಾಂತರವೇ ಪಾರಾಗುತ್ತೇವೆ ಎಂಬುದು ಮತ್ತಷ್ಟು ನಿಶ್ಚಯವಲ್ಲವೆ? ನಾವು ದೇವರಿಗೆ ಶತ್ರುಗಳಾಗಿದ್ದರೂ ಅವರು ತಮ್ಮ ಮಗನ ಮರಣದ ಮೂಲಕ ನಮ್ಮನ್ನು ತಮ್ಮೊಡನೆ ಸಂಧಾನಗೊಳಿಸಿ ಮಿತ್ರರನ್ನಾಗಿ ಮಾಡಿಕೊಂಡರು. ನಾವೀಗ ದೇವರ ಮಿತ್ರರಾಗಿರುವುದರಿಂದ, ಕ್ರಿಸ್ತಯೇಸುವಿನ ಜೀವದ ಮೂಲಕ ಉದ್ದಾರ ಹೊಂದುತ್ತೇವೆ ಎಂಬುದು ಮತ್ತಷ್ಟು ಖಚಿತವಲ್ಲವೆ? ಅಷ್ಟೆ ಅಲ್ಲದೆ, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರು ನಮ್ಮನ್ನು ಮಿತ್ರರನ್ನಾಗಿಸಿರುವುದರಿಂದ ಅವರ ಮೂಲಕವೇ ನಾವು ದೇವರಲ್ಲಿ ಹೆಮ್ಮೆಪಡುತ್ತೇವೆ.

ಶುಭಸಂದೇಶ: ಲೂಕ  15:3-7


ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳಿವೆಯೆನ್ನೋಣ.  ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ, ಅಲ್ಲವೇ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ  ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

23.06.22 - "ಈ ಮಗು ಮುಂದೆ ಎಂಥವನಾಗುವನೋ!"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ : “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಇಂತೆಂದುಕೊಂಡೆ ನಾನಾಗ : ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮರ್ಥ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ : “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವ ಜನಾಂಗಗಳಿಗೆ.

ಕೀರ್ತನೆ: 139:1-3, 13-15
ಶ್ಲೋಕ: ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ

ಭು, ಪರಿಶೋಧಿಸಿರುವೆ ನೀ ನನ್ನನು I
ಅರಿತುಕೊಂಡಿರುವೆ ಅಂತರಂಗವನು II
ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ I
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ II

ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ I
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ II
ನನ್ನ ಅಂತರಂಗವನು ಉಂಟುಮಾಡಿದಾತ ನೀನು I
ತಾಯಗರ್ಭದಲೆ ನನ್ನ ರೂಪಿಸಿದಾತ ನೀನು II

ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ I
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ I
ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ II
ನನ್ನ ಅಸ್ಥಿಪಂಜರವನು ರೂಪಿಸುವಾಗ I

ತಾಯಗರ್ಭದೊಳು ಅಚ್ಚರದಿ ರಚಿಸುವಾಗ I
ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ I
ಮರೆಯಾಗಿರಲಿಲ್ಲ ನಾನು ನಿನಗಾಗ II

ಎರಡನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:22-26

ಪೌಲನು ಉಪದೇಶ ಮಾಡುತ್ತಾ ಹೀಗೆಂದನು: "ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದರು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು. “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ, ಮತ್ತು ದೇವರಲ್ಲಿ ಭಯಭಕ್ತಿ ಉಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ."

ಶುಭಸಂದೇಶ: ಲೂಕ  1:57-66, 80


ದಿನ ತುಂಬಿದಾಗ ಎಲಿಜಬೇತಳು ಗಂಡುಮಗುವಿಗೆ ಜನ್ಮವಿತ್ತಳು. ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು. ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು. ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು. ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ,” ಎಂದು ಹೇಳಿ, “ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು. ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನ’ ಎಂದು ಬರೆದನು. ಎಲ್ಲರೂ ಬೆರಗಾದರು. ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು. ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಈ ಮಗುವಿನ ಮೇಲಿತ್ತು. ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು

22.06.22 - ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು

ಮೊದಲನೆಯ ವಾಚನ: 2 ಅರಸರು 22:8-13, 23:1-3


ಪ್ರಧಾನಯಾಜಕ ಹಿಲ್ಕೀಯನು ಲೇಖಕ ಶಾಫಾನನಿಗೆ, " ಸರ್ವೇಶ್ವರನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ " ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು; ಶಾಫಾನನು ಓದಿದನು. ಅನಂತರ ಅವನು ಅರಸನ ಬಳಿಗೆ ಹೋಗಿ, " ನಿಮ್ಮ ಸೇವಕರು ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ದೇವಾಲಯದ ಕೆಲಸವನ್ನು ಮಾಡಿಸುವ ಮೇಸ್ತ್ರಿಗಳಿಗೆ ಒಪ್ಪಿಸಿದರು; ಇದಲ್ಲದೆ ಯಾಜಕ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟಿದ್ದಾನೆ, " ಎಂದು ಹೇಳಿ ಅದನ್ನು ಅರಸನ ಮುಂದೆ ಓದಿದನು. ಅರಸನು ಧರ್ಮೋಪದೇಶ ಗ್ರಂಥವಾಕ್ಯಗಳನ್ನು ಕೇಳಿದಾಗ ದು:ಖಾವೇಶದಿಂದ ಬಟ್ಟೆಗಳನ್ನು ಹರಿದುಕೊಂಡು, ಯಾಜಕ ಹಿಲ್ಕೀಯನು, ಶಾಫಾನನ ಮಗ ಅಹೀಕಾಮ್, ಮೀಕಾಯನ ಮಗ ಅಕ್ಬೋರ್, ಲೇಖಕ ಶಾಫಾನ್ ಹಾಗು ತನ್ನ ಹಸ್ತಕನಾದ ಅಸಾಯ ಎಂಬುವವರಿಗೆ, " ನಮ್ಮ ಪೂರ್ವಜರು ನಮಗೆ ಸಿಕ್ಕಿರುವ ಈ ಗ್ರಂಥ ವಾಕ್ಯಗಳಿಗೆ ಕಿವಿಗೊಡದೆ ಹಾಗು ಅವುಗಳನ್ನು ಕೈಗೊಳ್ಳದೆ ಹೋದುದರಿಂದ ಸರ್ವೇಶ್ವರನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ, ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ, ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ, " ಎಂದು ಆಜ್ಞಾಪಿಸಿದನು. ಅನಂತರ ಅರಸನು ದೂತರ ಮುಖಾಂತರ ಜೆರುಸಲೇಮಿನ ಮತ್ತು ಜುದೇಯ ಪ್ರಾಂತ್ಯದ ಬೇರೆ ಎಲ್ಲಾ ಯೆಹೂದ್ಯರನ್ನೂ ಯಾಜಕರನ್ನೂ ಪ್ರವಾದಿಗಳನ್ನೂ ಕರೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋದನು. ಚಿಕ್ಕವರೂ ದೊಡ್ಡವರೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಸರ್ವೇಶ್ವರನ ಆಲಯದಲ್ಲಿ ಸಿಕ್ಕಿದ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿದನು. ಕಂಬದ ಬಳಿಯಲ್ಲಿ ನಿಂತು ತಾನು ಸರ್ವೇಶ್ವರನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞಾನಿಯಮವಿಧಿಗಳನ್ನು ಪೂರ್ಣಮನಸ್ಸಿನಿಂದಲೂ. ಪೂರ್ಮಪ್ರಾಣದಿಂದಲೂ ಕೈಕೊಳ್ಳುವುದಾಗಿಯೂ ಮತ್ತು ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಸರ್ವೇಶ್ವರನಿಗೆ ಪ್ರಮಾಣಮಾಡಿದನು. ಎಲ್ಲಾ ಜನರೂ ಹಾಗೆಯೇ ಪ್ರಮಾಣಮಾಡಿದರು.

ಕೀರ್ತನೆ: 119:33-34, 35, 36, 37, 40
ಶ್ಲೋಕ: ನಿನ್ನ ನಿಬಂಧನೆಯನು, ಪ್ರಭೂ, ಕಲಿಸೆನಗೆ.

ನಿನ್ನ ನಿಬಂಧನೆಯನು, ಪ್ರಭೂ, ಕಲಿಸೆನಗೆ|
ಅದರಂತೆಯೇ ನಡೆಯುವೆನು ಕಡೆಯವರೆಗೆ||
ನೀಡೆನಗೆ ನಿನ್ನ ಶಾಸ್ತ್ರದ ಅರಿವನು|
ಪೂರ್ಣ ಮನದಿಂದ ಆಚರಿಸುವೆನದನು||

ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ|
ಪಡೆಯುವೆ ಹರ್ಷಾನಂದವನು ಅದರಲಿ||
ತಿರುಗಿಸೆನ್ನ ಮನವ ನಿನ್ನ ಕಟ್ಟಳೆಯ ಕಡೆ|
ಲಾಭಲೋಭದತ್ತ ಅದು ಸರಿಯದಂತೆ ತಡೆ|

ವ್ಯರ್ಥವಾದವುಗಳು ನಾಟದಿರಲಿ ಕಣ್ಗೆ|
ಚೇತನ ನೀಡು ನಿನ್ನ ಮಾರ್ಗದಲಿ ನನಗೆ||
ನಿನ್ನ ನಿಬಂಧನೆಗಳ ಅಭಿಮಾನಿಯು ನಾನು|
ನೀತಿಗನುಸಾರ ಚೇತನಗೊಳಿಸೆನ್ನ ನೀನು||

ಶುಭಸಂದೇಶ: ಮತ್ತಾಯ 7:15-20



ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತು ತಿನ್ನುವ ತೋಳುಗಳು. ಅವರ ವರ್ತನೆಯಿಂದ ನೀವು ಅವರನ್ನು ಗುರುತುಹಚ್ಚುವಿರಿ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಒಳ್ಳೆಯ ಮರ ಕೆಟ್ಟ ಹಣ್ಣನ್ನು ಕೊಡಲಾರದು, ಹಾಗೆಯೇ ಕೆಟ್ಟ ಮರ ಒಳ್ಳೆಯ ಹಣ್ಣನ್ನು ಕೊಡಲಾರದು. ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು ಬೆಂಕಿಯಲ್ಲಿ ಹಾಕಲಾಗುವುದು. ಆದ್ದರಿಂದ ಸುಳ್ಳು ಪ್ರವಾದಿಗಳನ್ನು ಅವರ ನಡತೆಯಿಂದ ಗುರುತುಹಚ್ಚುವಿರಿ."

21.06.22 - “ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು"

ಮೊದಲನೇ ವಾಚನ: 2 ಅರಸುಗಳು 19:9-11, 14-21, 31-35, 36

ಸುಡಾನಿನ ರಾಜ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ಸುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸನಾದ ಹಿಜ್ಕೀಯನಿಗೆ, “ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು. ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು, ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ?  ಹಿಜ್ಕೀಯನು, ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರ ಸ್ವಾಮಿಯ ಮುಂದೆ ತೆರೆದಿಟ್ಟು, ಹೀಗೆಂದು ಪ್ರಾರ್ಥನೆ ಮಾಡಿದನು: “ಇಸ್ರಯೇಲಿನ ದೇವರೇ, ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟುಮಾಡಿದವರು ನೀವೇ. ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ: ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕಾಗಿ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ. ಸರ್ವೇಶ್ವರಾ, ಅಸ್ಸೀರಿಯದ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ. ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು. ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ದೇವರು ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಈ ಅಸ್ಸೀರಿಯನ ಕೈಯಿಂದ ಬಿಡಿಸಿರಿ.” ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ:” ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ: ‘ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು; ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು. ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು; ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು. ಸರ್ವೇಶ್ವರಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು. “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ. ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಕಾಲಿಡನು. ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ". ಅದೇ ರೀತಿಯಲ್ಲಿ ಸರ್ವೇಶ್ವರಸ್ವಾಮಿಯ ದೂತನು ಹೊರಟುಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡುಮಾಡಿದನು; ಅಸ್ಸೀರಿಯರು ಬೆಳಿಗ್ಗೆ ಎದ್ದು ನೋಡುವಾಗ ಪಾಳೆಯ ತುಂಬ ಹೆಣಗಳು ಇದ್ದವು. ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು. ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲೆ ವಾಸಿಸಿದನು.

ಕೀರ್ತನೆ: 48:2-4, 10-11
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು

ಸರ್ವ ಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ|
ದೇವನಖರದಲ್ಲಿ ಆತನ ಪವಿತ್ರ ಪರ್ವತ||
ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ|
ಆನಂದದಾಯಕ ರಾಜಾಧಿರಾಜನ ಆ ನಗರ||

ಅದರ ಕೋಟೆಕೊತ್ತಲಗಳ ನಡುವೆ ದೇವನು|
ತಾನೇ ಸುಭದ್ರ ದುರ್ಗವೆಂದು ತೋರಿಹನು||

ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು|
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು||
ನಿನ್ನ ನಾಮದಂತೆ ನಿನ್ನಾ ಹೊಗಳಿಕೆ|
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ ||

ಘೋಷಣೆ ಯೊವಾನ್ನ 17:17
ಅಲ್ಲೆಲೂಯ, ಅಲ್ಲೆಲೂಯ!

ಪಿತನೇ, ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ.
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 7:6, 12-14

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಪವಿತ್ರವಾದುದನ್ನು ನಾಯಿಗಳಿಗೆ ಹಾಕಬೇಡಿ - ಅವು ನಿಮ್ಮ ಮೇಲೆ ತಿರುಗಿಬಿದ್ದು ನಿಮ್ಮನ್ನು ಸೀಳಿಬಿಟ್ಟಾವು; ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿ - ಅವು ಆ ಮುತ್ತುಗಳನ್ನು ಕಾಲಿನಿಂದ ತುಳಿದು ಹಾಕಿಯಾವು.” “ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ, ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ.” “ಕಿರಿದಾದ ಬಾಗಿಲಿನಿಂದಲೇ ಒಳಕ್ಕೆ ಹೋಗಿರಿ. ಏಕೆಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅದನ್ನು ಹಿಡಿಯುವವರು ಅನೇಕರು. ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು.”


20.06.22 - "ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು"

ಮೊದಲನೇ ವಾಚನ: 2 ಅರಸುಗಳು 17:5-8, 13-15, 18

ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಸಮಾರಿಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆಹಾಕಿದನು. ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು. ಇಸ್ರಯೇಲರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ: ಹೇಗೆಂದರೆ, ಅವರು ತಮ್ಮನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರತಂದ ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿ ಅನ್ಯದೇವತೆಗಳನ್ನು ಪೂಜಿಸಿದರು. ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಜನಾಂಗಗಳ ಮತ್ತು ಇಸ್ರಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು. ದರ್ಶಿನಿಗಳೆನಿಸಿಕೊಂಡ ತಮ್ಮ ಪ್ರವಾದಿಗಳ ಮುಖಾಂತರ ಇಸ್ರಯೇಲ ಯೆಹೂದ್ಯರಿಗೆ, “ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೂ ನನ್ನ ದಾಸರಾದ ಪ್ರವಾದಿಗಳ ಮುಖಾಂತರ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾವಿಧಿನಿಯಮಗಳನ್ನು ಕೈಕೊಂಡು ನಡೆಯಿರಿ,” ಎಂದು ಖಂಡಿತವಾಗಿ ಹೇಳಿದರು. ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು. ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದ್ದರೂ ಕೇಳದೆ ಆ ಜನಾಂಗಗಳನ್ನೇ ಅನುಸರಿಸಿದರು.  ಈ ಪ್ರಕಾರ ನಡೆದುದರಿಂದ ಸರ್ವೇಶ್ವರ ಅವರ ಮೇಲೆ ಕಡುಕೋಪಗೊಂಡು ಯೆಹೂದಕುಲದವರ ಹೊರತು, ಉಳಿದ ಎಲ್ಲಾ ಕುಲಗಳವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು.

ಕೀರ್ತನೆ: 60:3, 4-5, 12-13

ಶ್ಲೋಕ: ಪ್ರಭೂ, ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು

ಶುಭಸಂದೇಶ: ಮತ್ತಾಯ 7:1-5

ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ, “ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ; ಆಗ ದೇವರು ನಿಮ್ಮ ಬಗ್ಗೆ ತೀರ್ಪುಕೊಡುವುದಿಲ್ಲ. ನೀವು ಇತರರ ಬಗ್ಗೆ ಕೊಡುವ ತೀರ್ಪಿಗೆ ಅನುಗುಣವಾಗಿಯೇ ದೇವರು ನಿಮಗೂ ತೀರ್ಪುಕೊಡುವರು. ಇತರರಿಗೆ ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದುಕೊಡುವರು. ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ನೀನು ಗಮನಿಸುವುದೇಕೆ? ನಿನ್ನ ಕಣ್ಣಿನಲ್ಲಿ ಒಂದು ದಿಮ್ಮಿಯೇ ಇರುವಾಗ, ‘ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದುಬಿಡುತ್ತೇನೆ,’ ಎಂದು ನಿನ್ನ ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದುಹಾಕು. ಅನಂತರ ನಿನ್ನ ಸೋದರನ ಕಣ್ಣಿನಿಂದ ಅಣುವನ್ನು ತೆಗೆಯಲು ನಿನ್ನ ಕಣ್ಣು ನಿಚ್ಚಳವಾಗಿ ಕಾಣಿಸುವುದು.” ಎಂದು ಹೇಳಿದರು.

19.06.22 - ಸ್ವರ್ಗದತ್ತ ಕಣ್ಣೆತ್ತಿ ನೋಡಿ ದೇವರಿಗೆ ಸ್ತೋತ್ರ ಸಲ್ಲಿಸಿದರು.

ಮೊದಲನೆಯ  ವಾಚನ : ಆದಿಕಾಂಡದಿಂದ  14:18-20

ಸಾಲೇಮಿನ  ಅರಸನೂ  ಪರಾತ್ಪರ  ದೇವರ  ಯಾಜಕನೂ  ಆಗಿದ್ದ  ಮೆಲ್ಕಿಸದೇಕನು  ಸಹ  ಅಲ್ಲಿಗೆ  ಬಂದು  ರೊಟ್ಟಿಯನ್ನು  ದ್ರಾಕ್ಷರಸವನ್ನೂ  ಅರ್ಪಿಸಿ  ಅಬ್ರಹಾಮನಿಗೆ  ಇಂತೆಂದು  ಆಶೀರ್ವಾದ  ಮಾಡಿದನು: ಭೂಮ್ಯಾಕಾಶಗಳನ್ನು  ಉಂಟುಮಾಡಿದ  ಪರಾತ್ಪರ  ದೇವರ  ಆಶೀರ್ವಾದ  ಅಬ್ರಾಹಮನಿಗಿರಲಿನಿನ್ನ  ಶತ್ರುಗಳನ್ನು  ನಿನ್ನ  ಕೈವಶಮಾಡಿದ    ಪರಾತ್ಪರ  ದೇವರಿಗೆ  ಸ್ತೋತ್ರವಾಗಲಿ"  ಅಬ್ರಾಮನು  ತಾನು  ಗೆದ್ದು  ತಂದಿದ್ದ  ಎಲ್ಲ  ವಸ್ತುಗಳಲ್ಲಿ ಹತ್ತನೆಯ  ಒಂದು  ಭಾಗವನ್ನು  ಮೆಲ್ಕಿಸದೇಕನಿಗೆ  ಕೊಟ್ಟನು.

- ಪ್ರಭುವಿನ  ವಾಕ್ಯ

ಕೀರ್ತನೆ : 10:1-4

ಶ್ಲೋಕ:  ಮೆಲ್ಕಿಸದೇಕ್  ಪರಂಪರೆಯ  ಯಾಜಕ  ನೀ  ನಿರುತ.

1.  ನುಡಿದಿಹನು  ಇಂತೆಂದು  ಪ್ರಭು  ನನ್ನೊಡೆಯನಿಗೆ|

ಆಸೀನನಾಗಿರು  ನೀನು  ನನ್ನ  ಬಲಗಡೆಗೆ|

ಹಗೆಗಳನು  ನಿನಗೆ  ಕಾಲ್ಮಣೆಯಾಗಿಸುವವರೆಗೆ||

 

2.  ಸಿಯೋನಿನ  ಹೊರಗು  ವಿಸ್ತರಿಸುವನು|

ಪ್ರಭು  ನಿನ್ನ  ರಾಜ್ಯದಾಳಿಕೆಯನು||

ನಿನ್ನ  ವೈರಿ  ವಿರೋಧಿಗಳ  ನಟ್ಟನಡುವೆಯೇ|

ದೊರೆತನ  ಮಾಡುವೆ  ನೀನು||

 

3.  ಸೇನೆಯನು  ನೀ  ಅಣಿಗೊಳಿಸುವ  ದಿನದೊಳು|

ಸೇರಿಕೊಳ್ವರು  ತಾವಾಗಿಯೇ  ಪ್ರಜೆಗಳು||

ಶುಭ್ರವಸ್ತ್ರಧರಿಸಿ  ನಿನ್ನ  ಯುವಕ  ಯೋಧರು|

ಉದಯಕಾಲದಿಬ್ಬನಿಯಂತೆ  ಇಳಿದು  ಬರುವರು||

ಎರಡನೆಯ  ವಾಚನ : 1ಕೊರಿಂಥಿಯ 11:23-36

ಸಹೋದರರೇನಿಮಗೆ  ಮಾಡಿದ  ಉಪದೇಶವನ್ನು  ನಾನು  ಪ್ರಭುವಿನಿಂದಲೇ  ಪಡೆದೆನು.  ಅದೇನೆಂದರೆಪ್ರಭುಯೇಸುತಮ್ಮನ್ನು  ಹಿಡಿದುಕೊಡಲಾದ    ರಾತ್ರಿರೊಟ್ಟಿಯನ್ನು  ತೆಗೆದುಕೊಂಡು  ದೇವರಿಗೆ  ಕೃತಜ್ಞತಾಸ್ತೋತ್ರವನ್ನು  ಸಲ್ಲಿಸಿಅದನ್ನು  ಮುರಿದು,  " ಇದು  ನಿಮಗಾಗಿ  ಒಪ್ಪಿಸಲಾಗುವ  ನನ್ನ  ಶರೀರಇದನ್ನು  ನನ್ನ  ಸ್ಮರಣೆಗಾಗಿ  ಮಾಡಿ, " ಎಂದರು.  ಅಂತೆಯೇ  ಭೋಜನದ  ಕೊನೆಯಲ್ಲಿ  ಪಾನಪಾತ್ರೆಯನ್ನು  ತೆಗೆದುಕೊಂಡು,  "   ಪಾತ್ರೆ  ನನ್ನ  ರಕ್ತದಿಂದ  ಮುದ್ರಿತವಾದ  ಹೊಸ  ಒಡಂಬಡಿಕೆಇದನ್ನು  ನೀವು  ಪಾನಮಾಡುವಾಗಲೆಲ್ಲಾ  ನನ್ನ  ಸ್ಮರಣೆಗಾಗಿ  ಮಾಡಿರಿ, " ಎಂದರು.  ಎಂದೇನೀವು    ರೊಟ್ಟಿಯನ್ನು  ಭುಜಿಸಿ  ಪಾತ್ರೆಯಿಂದ  ಪಾನಮಾಡುವಾಗಲೆಲ್ಲಾ  ಪ್ರಭು  ಬರುವ  ತನಕ  ಅವರ  ಮರಣವನ್ನು  ಸಾರುತ್ತೀರಿ.

 - ಪ್ರಭುವಿನ  ವಾಕ್ಯ

ಘೋಷಣೆ   : ಯೊವಾನ್ನ 6:51

 ಅಲ್ಲೆಲೂಯ, ಅಲ್ಲೆಲೂಯ! ನಾನೇ  ಸ್ವರ್ಗದಿಂದ  ಇಳಿದುಬಂದ  ಜೀವಂತ  ರೊಟ್ಟಿ  ರೊಟ್ಟಿಯನ್ನು  ತಿಂದವನು  ಚಿರಕಾಲ  ಬಾಳುತ್ತಾನೆ. ಅಲ್ಲೆಲೂಯ!

ಶುಭಸಂದೇಶ  ವಾಚನ : ಲೂಕ 9:11-17

ತಮ್ಮನ್ನು  ಹಿಂಬಾಲಿಸುತ್ತಿದ್ದ  ಜನಸಮೂಹವನ್ನು  ಯೇಸು  ಸ್ವಾಗತಿಸಿದೇವರ  ಸಾಮ್ರಾಜ್ಯದ  ವಿಷಯವಾಗಿ  ಹೇಳಿ  ಅಗತ್ಯವಿದ್ದವರಿಗೆ  ಆರೋಗ್ಯದಾನ  ಮಾಡಿದರು.  ಅಷ್ಟರಲ್ಲಿ  ಸಾಯಂಕಾಲವಾಗುತ್ತಾ  ಬಂದಿತು.  ಹನ್ನೆರಡು  ಮಂದಿ  ಪ್ರೇಷಿತರು  ಯೇಸುವಿನ  ಬಳಿಗೆ  ಬಂದು,  " ಇದು  ನಿರ್ಜನಪ್ರದೇಶಜನರನ್ನು  ಕಳುಹಿಸಿಬಿಡಿ.  ಅವರು  ಸಮೀಪದ  ಊರುಕೇರಿಗಳಿಗೂ  ಹೋಗಿ  ಊಟವಸತಿಯನ್ನು  ಒದಗಿಸಿಕೊಳ್ಳಲಿ, ಎಂದರು.  ಅದಕ್ಕೆ  ಯೇಸು,  " ನೀವೇ  ಅವರಿಗೆ  ಊಟಕ್ಕೆ  ಏನಾದರೂ  ಕೊಡಿ, " ಎಂದರು.  ಅವರು,  " ನಮ್ಮಲ್ಲಿರುವುದು  ಐದು  ರೊಟ್ಟಿ  ಮತ್ತು  ಎರಡು  ಮೀನು  ಮಾತ್ರನಾವು  ಹೋಗಿ  ಇವರೆಲ್ಲರಿಗೆ  ಬೇಕಾಗುವಷ್ಟು  ಊಟ  ಕೊಂಡುಕೊಂಡು  ಬರಬೇಕೇ? " ಎಂದರು.  ಏಕೆಂದರೆ  ಅಲ್ಲಿ  ಗಂಡಸರೇ  ಸುಮಾರು  ಐದು  ಸಾವಿರ  ಮಂದಿ ಇದ್ದರು.  ಆಗ  ಯೇಸು  ಶಿಷ್ಯರಿಗೆ, " ಇವರನ್ನು  ಐವತ್ತು  ಐವತ್ತರಂತೆ  ಪಂಕ್ತಿಯಾಗಿ  ಕೂರಿಸಿರಿ, " ಎಂದು  ಹೇಳಲು  ಅವರು  ಹಾಗೆಯೇ  ಎಲ್ಲರನ್ನು  ಕುಳ್ಳರಿಸಿದರು.  ಅನಂತರ  ಯೇಸು    ಐದು  ರೊಟ್ಟಿಗಳನ್ನೂ  ಎರಡು  ಮೀನುಗಳನ್ನೂ  ತೆಗೆದುಕೊಂಡು  ಸ್ವರ್ಗದತ್ತ  ಕಣ್ಣೆತ್ತಿ  ನೋಡಿ  ದೇವರಿಗೆ  ಸ್ತೋತ್ರ  ಸಲ್ಲಿಸಿದರು.  ತರುವಾಯ  ಅವುಗಳನ್ನು  ಮುರಿದು  ಜನಸಮೂಹಕ್ಕೆ  ಬಡಿಸುವಂತೆ  ಶಿಷ್ಯರಿಗೆ  ಕೊಟ್ಟರು.  ಎಲ್ಲರೂ   ಹೊಟ್ಟೆತುಂಬ  ತಿಂದು  ಸಂತೃಪ್ತರಾದರು.  ಇನ್ನು  ಉಳಿದಿದ್ದ  ತುಂಡುಗಳನ್ನು  ಒಟ್ಟುಗೂಡಿಸಿದಾಗ  ಅವು  ಹನ್ನೆರಡು  ಬುಟ್ಟಿತುಂಬ  ಆದವು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...