ಯೋಬನ ಗ್ರಂಥದಿಂದ ಇಂದಿನ ವಾಚನ 1: 6-22
ಒಮ್ಮೆ ಸ್ವರ್ಗನಿವಾಸಿಗಳು ಸರ್ವೇಶ್ವರಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದರು. ಸೈತಾನನೂ ಅಲ್ಲಿಗೆ ಬಂದನು. ಸರ್ವೇಶ್ವರ ಸೈತಾನನನ್ನು ನೋಡಿ, “ಎಲ್ಲಿಂದ ಬಂದೆ?” ಎಂದು ಕೇಳಿದರು. ಅದಕ್ಕೆ ಅವನು, “ಭೂಲೋಕದಲ್ಲಿ ಗಸ್ತು ತಿರುಗಿ ಬಂದಿದ್ದೇನೆ” ಎಂದನು. ಆಗ ಸರ್ವೇಶ್ವರ, “ನನ್ನ ದಾಸ ಯೋಬನನ್ನು ಗಮನಿಸಿದೆಯಾ? ಆತನು ದೋಷ ರಹಿತ, ಸತ್ಯವಂತ, ದೇವರಲ್ಲಿ ಭಯಭಕ್ತಿಯುಳ್ಳವನು, ಕೆಟ್ಟದ್ದನ್ನು ತೊರೆದು ಬಾಳುವವನು. ಆತನಿಗೆ ಸರಿಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಗನು,” ಎಂದು ಹೇಳಿದರು. ಅದಕ್ಕೆ ಸೈತಾನನು ಹೀಗೆಂದನು: “ಲಾಭವಿಲ್ಲದೆ ಯೋಬನು ನಿಮ್ಮಲ್ಲಿ ಭಯಭಕ್ತಿ ಇಟ್ಟಿದ್ದಾನೆಯೇ? ನೀವು ಆತನಿಗೂ ಆತನ ಎಲ್ಲ ಆಸ್ತಿಪಾಸ್ತಿಗೂ ಬೇಲಿ ಹಾಕಿ ಭದ್ರಪಡಿಸಿದ್ದೀರಲ್ಲವೇ? ಆತನು ಕೈ ಹಾಕಿದ ಕೆಲಸ ಸಫಲವಾಗುವಂತೆ ಮಾಡಿದ್ದೀರಲ್ಲವೆ? ಎಂದೇ ಆತನ ಸಿರಿ ಸಂಪತ್ತು ಈ ನಾಡಿನಲ್ಲಿ ಬೆಳೆಯುತ್ತಾ ಬಂದಿದೆ. ಆದರೆ ನೀವು ಕೈಹಾಕಿ ಆತನ ಸೊತ್ತನ್ನೆಲ್ಲಾ ಅಳಿಸಿಬಿಡಿ. ಆಗ ಆತನು ನಿಮ್ಮನ್ನು ಮುಖಾಮುಖಿಯಾಗಿ ನಿಂದಿಸುತ್ತಾನೋ ಇಲ್ಲವೋ ಎಂದು ನೋಡುವಿರಂತೆ!” ಎಂದನು. ಸರ್ವೇಶ್ವರ ಸೈತಾನನಿಗೆ, “ನೋಡು, ಆತನ ಆಸ್ತಿಪಾಸ್ತಿಯೆಲ್ಲ ನಿನ್ನ ಕೈವಶಕ್ಕೆ ಬಿಟ್ಟಿದ್ದೇನೆ. ಆತನ ಮೈಮೇಲೆ ಮಾತ್ರ ಕೈಹಾಕಬೇಡ”, ಎಂದು ಅಪ್ಪಣೆಕೊಟ್ಟರು. ಕೂಡಲೆ ಸೈತಾನನು ಸರ್ವೇಶ್ವರಸ್ವಾಮಿಯ ಸನ್ನಿಧಾನದಿಂದ ಹೊರಟುಹೋದನು. ಇದಾದ ಬಳಿಕ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯಣ್ಣನ ಮನೆಯಲ್ಲಿ ಔತಣ ಮಾಡುತ್ತಿದ್ದರು. ಆಗ ದೇವದೂತನೊಬ್ಬನು ಯೋಬನ ಬಳಿಗೆ ಬಂದು, “ನಿಮ್ಮ ಎತ್ತುಗಳು ಉಳುತ್ತಾ ಇದ್ದವು; ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು. ಅಷ್ಟರಲ್ಲಿ, ಶೆಬದವರು ಬಂದು, ಮೇಲೆ ಬಿದ್ದು, ಅವುಗಳನ್ನು ಹೊಡೆದುಕೊಂಡು ಹೋದರು. ಕೂಲಿಯಾಳುಗಳನ್ನೂ ಕತ್ತಿಯಿಂದ ಕೊಂದುಹಾಕಿದರು. ನಾನೊಬ್ಬನೇ ತಲೆ ತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿ ಬಂದೆ," ಎಂದನು. ಅವನು ಮಾತಾಡಿ ಮುಗಿಸುವಷ್ಟರಲ್ಲೇ ಮತ್ತೊಬ್ಬನು ಬಂದು, "ದೇವರು ಆಕಾಶದಿಂದ ಬೆಂಕಿ ಸುರಿಸಿದರು. ಅದು ಕುರಿಗಳನ್ನೂ ಕೂಲಿಯಾಳುಗಳನ್ನೂ ಸುಟ್ಟು ಭಸ್ಮಮಾಡಿತು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ಮುಟ್ಟಿಸಲು ಓಡಿಬಂದೆ," ಎಂದನು. ಅಷ್ಟರಲ್ಲಿ ಇನ್ನೊಬ್ಬನು ಬಂದು "ಕಸ್ಥೀಯರು ಮೂರು ಗುಂಪುಗಳಾಗಿ ಬಂದು, ಮೇಲೆ ಬಿದ್ದು, ಒಂಟೆಗಳನ್ನು ಹೊಡೆದುಕೊಂಡು ಹೋದರು. ಅಲ್ಲದೆ ಆ ಕೂಲಿಯಾಳುಗಳನ್ನು ಕತ್ತಿಯಿಂದ ಸಂಹರಿಸಿದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಓಡಿಬಂದೆ," ಎಂದನು. ಅವನು ವರದಿ ಮಾಡುತ್ತಿದ್ದಾಗಲೇ ಬೇರೊಬ್ಬನು ಬಂದು, "ನಿಮ್ಮ ಪುತ್ರಪುತ್ರಿಯರು ಹಿರಿಯಣ್ಣನ ಮನೆಯಲ್ಲಿ ಔತಣದಲ್ಲಿದ್ದರು. ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು. ಯುವಕ ಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ತಂದಿದ್ದೇನೆ," ಎಂದು ತಿಳಿಸಿದನು. ಆಗ ಯೋಬನು ಎದ್ದು ನಿಂತು, ದುಃಖವನ್ನು ತಾಳಲಾರದೆ ತನ್ನ ಮೇಲಂಗಿಯನ್ನು ಹರಿದುಬಿಟ್ಟ. ತಲೆಯನ್ನು ಬೋಳಿಸಿಕೊಂಡ. ನೆಲದ ಮೇಲೆ ಬಿದ್ದು, ದೇವರಿಗೆ ಸಾಷ್ಟಾಂಗವೆರಗಿ: ಬರಿಗೈಯಲಿ ಬಂದೆ ನಾನು ತಾಯ ಗರ್ಭದಿಂದ ಬರಿಗೈಯಲಿ ಹಿಂತಿರುಗುವೆ
ನಾನು ಇಲ್ಲಿಂದ.
ಸರ್ವೇಶ್ವರ ಕೊಟ್ಟ
ಸರ್ವೇಶ್ವರ
ತೆಗೆದುಕೊಂಡ.
ಆತನ ನಾಮಕ್ಕೆ
ಸ್ತುತಿಸ್ತೋತ್ರ!
ಎಂದನು.
ಈ ಎಲ್ಲ ವಿಪತ್ತು ಬಂದೊದಗಿದರೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪು ಹೊರಿಸಲಿಲ್ಲ.
ಕೀರ್ತನೆ 17: 1-3, 6-7. v. 6
ಶ್ಲೋಕ: ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ.
1. ಲಕ್ಷ್ಯವಿಡು, ಓ ಪ್ರಭೂ, ಎನ್ನ ನ್ಯಾಯವಾದ ಮೊರೆಗೆ|
ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ||
ಶ್ಲೋಕ
2. ನ್ಯಾಯ ತೀರ್ಪು ಬರಲಿ ಎನಗೆ, ನಿನ್ನಿಂದಲೇ|
ನೀತಿಗನುಸಾರ ನೋಡುವಾತ, ನೀನಲ್ಲವೇ?||
ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು|
ನಾ ದೋಷರಹಿತ, ಮಾತಿನಲಿ ತಪ್ಪದವ, ಎಂದಾಗ ತೀರ್ಮಾನಿಸು||
ಶ್ಲೋಕ
3. ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ|
ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ||
ಶರಣರನು ಶತ್ರುವಿನಿಂದ ಸಂರಕ್ಷಸುವಾತ ನೀನಯ್ಯಾ|
ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ||
ಶ್ಲೋಕ
ಘೋಷಣೆ
(1,ಸ.ವೇ. 3: 9, ಯೊವಾನ್ನ, 6: 68)
ಅಲ್ಲೆಲೂಯ, ಅಲ್ಲೆಲೂಯ.
ಸರ್ವೇಶ್ವರಾ, ಅಪ್ಪಣೆಯಾಗಲಿ ; ತಮ್ಮ ದಾಸ ಕಾದಿದ್ದಾನೆ| ನಿತ್ಯ ಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ||
ಅಲ್ಲೆಲೂಯ.
ಶುಭಸಂದೇಶ: ಲೂಕ 9:46-50
ಒಮ್ಮೆ, ತಮ್ಮಲ್ಲಿ ಅತಿ ಶ್ರೇಷ್ಟನು ಯಾರೆಂಬ ವಾದ ಶಿಷ್ಯರಲ್ಲಿ ಎದ್ದಿತು. ಅವರ ಮನಸ್ಸಿನ ಆಲೋಚನೆಗಳನ್ನು ಅರಿತ ಯೇಸು, ಒಂದಿ ಚಿಕ್ಕ ಮಗುವನ್ನು ತಂದು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು, "ಯಾವನು ನನ್ನ ಹೆಸರಿನಲ್ಲಿ ಈ ಮಗುವನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನೇ ಸ್ವೀಕರಿಸುತ್ತಾನೆ; ಯಾವನು ನನ್ನನ್ನು ಸ್ವೀಕರಿಸುತ್ತಾನೋ ಅವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ. ನಿಮ್ಮೆಲ್ಲರಲ್ಲಿ ಅತ್ಯಲ್ಪನಾದವನೇ ಅತ್ಯುತ್ತಮನು," ಎಂದರು. ಆಗ ಯೊವಾನ್ನನು ಯೇಸುವಿಗೆ, "ಗುರುವೇ, ಯಾವನೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲದ ಕಾರಣ ಅವನನ್ನು ತಡೆದೆವು," ಎಂದನು ಅದಕ್ಕೆ ಯೇಸು, "ಅವನನ್ನು ತಡೆಯಬೇಡಿ, ನಿಮ್ಮ ವಿರೋಧಿ ಅಲ್ಲದವನು ನಿಮ್ಮ ಪರವಾಧಿ," ಎಂದು ಉತ್ತರಕೊಟ್ಟರು.
.png)

No comments:
Post a Comment