ಮೊದಲನೇ ವಾಚನ: 1 ಕೊರಿಂಥಿಯರಿಗೆ 15:1-11
ಕೀರ್ತನೆ: 118:1-2, 16-17, 28
ಶ್ಲೋಕ: ಸಲ್ಲಿಸಿ ಪ್ರಭುವಿಗೆ ಧನ್ಯವಾದ, ಆತ ಒಳ್ಳೆಯವ
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ||
ಸಾರಲಿ ಇಸ್ರಯೇಲಿನ ಜನತೆ|
ಆತನ ಪ್ರೀತಿ ಶಾಶ್ವತ ಎಂದೆ||
ಶ್ಲೋಕ
2. ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ|
ವಿಜಯ ಸಾಧನ ಪ್ರಭುವಿನ ಬಲಗೈಯಿಂದ||
ಸಾಯೆನು, ಜೀವದಿಂದಿರುವೆನು ನಾನು|
ಪ್ರಭುವಿನ ಕಾರ್ಯಗಳನು ಸಾರುವೆನು||
ಶ್ಲೋಕ
ಜ್ಯೋತಿಯನು ಬೆಳಗಿದವನು||
ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ||
ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ|
ಉದ್ಧಾರಮಾಡಿದೆ, ನಿನಗೆ ಕೃತಜ್ಞತಾವಂದನೆ||
ಶ್ಲೋಕ
(ಮತ್ತಾಯ 11: 25)
ಅಲ್ಲೆಲೂಯ, ಅಲ್ಲೆಲೂಯ.
ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಮಕ್ಕಳಂತವರಿಗೆ ನೀವು ಶ್ರುತಪಡಿಸಿದ್ದೀರಿ| ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ||
ಅಲ್ಲೆಲೂಯ.
ಶುಭಸಂದೇಶ: ಲೂಕ 7:36-50
ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು. ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು. ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತಿದ್ದಾರೆಂದು ಕೇಳಿ ಒಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಕೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು, ಸುಗಂಧ ತೈಲವನ್ನುಹಚ್ಚಿದಳು. ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, ‘ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು, ಎಂದು ತಿಳಿದುಕೊಳ್ಳುತ್ತಿದ್ದನು’ ಎಂದು ತನ್ನೊಳಗೇ ಅಂದುಕೊಂಡನು. ಅದಕ್ಕೆ ಯೇಸು, “ಸಿಮೋನ್, ನಾನು ನಿನಗೆ ಹೇಳಬೇಕಾದ ವಿಷಯ ಒಂದಿದೆ,” ಎಂದರು. ಸಿಮೋನನು, “ಅದೇನು ಹೇಳಿ ಗುರುವೇ,” ಎಂದನು. ಆಗ ಯೇಸು, “ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು. ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನು ಮನ್ನಾ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ “ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?” ಎಂದು ಕೇಳಿದರು. ಅದಕ್ಕೆ ಸಿಮೋನನು, “ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ,” ಎಂದನು. “ಸರಿಯಾಗಿ ಹೇಳಿದೆ,” ಎಂದರು ಯೇಸು. ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, “ಈಕೆಯನ್ನು ನೋಡಿದೆಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರಸಿರುವಳು. ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುತ್ತಿಡುವುದನ್ನು ನಿಲ್ಲಿಸಿಲ್ಲ; ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು. ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರೂ ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆ ಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ,” ಎಂದರು. ಅನಂತರ ಯೇಸು ಆ ಮಹಿಳೆಗೆ: “ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು. ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, “ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?” ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು. ಯೇಸು ಆಕೆಗೆ, “ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರಮಾಡಿದೆ; ಸಮಾಧಾನದಿಂದ ಹೋಗು,” ಎಂದರು.


No comments:
Post a Comment