ಪ್ರವಾದಿ ಯೆಶಾಯನ ಗ್ರಂಥ 65:17-21
" ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುವೆನು;ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು.ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ;
ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು;
ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು.
ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು,
ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು.
ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು.
ಕೆಲವೇ ದಿನ ಬದುಕುವ ಮಗುವಾಗಲಿ,
ಆಯಸ್ಸು ಮುಗಿಸದ ಮುದುಕನಾಗಲಿ ಇನ್ನು ಅಲ್ಲಿರನು.
ನೂರು ವರ್ಷ ಬಾಳುವವನು 'ಯುವಕ' ಎನಿಸಿಕೊಳ್ಳುವನು;
ನೂರರೊಳಗೆ ಸಾಯುವ ಪಾಪಿಯು 'ಶಾಪಗ್ರಸ್ತ' ಎನಿಸಿಕೊಳ್ಳುವನು.
ಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರು;
ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.
ಪ್ರಭುವಿನ ವಾಕ್ಯ
ಕೀರ್ತನೆ 30: 1, 3-5, 10-12
ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ದರಿಸಿದೆ |*
1. ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ದರಿಸಿದೆ|
ಶತ್ರುಗಳನ್ನು ಕುರಿತು ಹಿಗ್ಗದಂತೆ ಮಾಡಿದೆ||
ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ|
ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ|| ಶ್ಲೋಕ
2. ಭಕ್ತರೇ, ಸಂಕೀರ್ತಿಸಿರಿ ಪ್ರಭುವನು|ಮಾಡಿರಿ ಆತನ ನಾಮಸ್ಮರಣೆಯನು||
ಆತನ ಕೋಪ ಕ್ಷಣಮಾತ್ರ|ಆತನ ಕೃಪೆ ಜೀವನ ಪರಿಯಂತ|| ಶ್ಲೋಕ
3. ಇರುಳು ಬರಲು ಇರಬಹುದು ಅಳಲು|
ನಲಿವು ಉಲಿವುದು ಹಗಲು ಹರಿಯಲು||
ಆಲಿಸು ಪ್ರಭೂ, ಕರುಣಿಸು, ನೆರವಾಗು ಬೇಗ,"|
ಎಂದು ನಾ ನಿನ್ನನ್ನು ಪ್ರಾರ್ಥಿಸಿದಾಗ|| ಶ್ಲೋಕ
4. ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ|
ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ
ಹೇ ಪ್ರಭೂ, ಎನ್ನ ದೇವಾ, ನಿನಗೆನ್ನ ಅನಂತ ಧನ್ಯ ವಂದನೆ|| ಶ್ಲೋಕ
ಯೊವಾನ್ನನು ಬರೆದ ಶುಭಸಂದೇಶ 4:43-54
ಆ ಕಾಲದಲ್ಲಿ ಯೇಸು ಸಮಾರಿಯದಿಂದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು. ಯೇಸು ಗಲಿಲೇಯದ ಕಾನ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು. ಯೇಸು ಅವನಿಗೆ ಸೂಚಕ ಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ," ಎಂದರು. ಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣ ಬಿಡುವ ಮೊದಲೇ ಬನ್ನಿ ಸ್ವಾಮಿ," ಎಂದು ಅಂಗಲಾಚಿದನು. ಆಗ ಯೇಸು, "ಹೋಗು, ನಿನ್ನ ಮಗನು ಬದುಕುತ್ತಾನೆ," ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು. ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, "ನಿಮ್ಮ ಮಗ ಬದುಕಿಕೊಂಡ," ಎಂದು ತಿಳಿಸಿದರು. ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, "ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು," ಎಂದು ಆಳುಗಳು ಉತ್ತರಕೊಟ್ಟರು. 'ನಿನ್ನ ಮಗ ಬದುಕುತ್ತಾನೆ' ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕ ಕಾರ್ಯ ಇದು.
ಪ್ರಭುವಿನ ಶುಭಸಂದೇಶ
No comments:
Post a Comment