ಮೊದಲನೆಯ ವಾಚನ: 2 ಸಮುವೇಲ 24:2,9-17
ಕೀರ್ತನೆ: 32:1-2,5,6-7
ಶ್ಲೋಕ: ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ |
ಯಾರ ಪಾಪ ಪರಿಹಾರವಾಗಿದೆಯೋ|
ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು||
ಯಾರಪರಾಧವನು ಪ್ರಭು ಎಣಿಸಿಲ್ಲವೋ|
ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು||
ಆಗ ನಾನು ನಿವೇದಿಸಿದೆ ನಿನಗೆ ನನ್ನ ಪಾಪವನು|
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು||
ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ ಎಂದೆನು|
ಆಗ ನೀ ಪರಿಹರಿಸಿದೆ ನನ್ನ ಪಾಪ ದೋಷವನು||
ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ ಸಕಾಲದಲಿ|
ಹುಚ್ಚುಹೊಳೆ ಉಕ್ಕಿಬಂದಾಗ ನೀ ಸಿಕ್ಕಲಿಲ್ಲವೆನ್ನದಿರಲಿ||
ನೀನೇ ನನಗೆ ಮರೆಯು, ಆಪತ್ತಿನಲಾಸರೆಯು|
ನನ್ನನ್ನು ಆವರಿಸುವ ಉದ್ದಾರಕ ನಾದವು||
ಘೋಷಣೆ ಕೀರ್ತನೆ 110:7,8
ಅಲ್ಲೆಲೂಯ, ಅಲ್ಲೆಲೂಯ!
ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು | ಯುಗಯುಗಾಂತರಕು ದೃಢವಾಗಿರುವುವು, ಸತ್ಯನೀತಿಗಳು ಅವುಗಳಿಗೆ ಅಡಿಪಾಯವು ||
ಅಲ್ಲೆಲೂಯ!
ಶುಭಸಂದೇಶ: ಮಾರ್ಕ 6:1-6
ಆ ಕಾಲದಲ್ಲಿ ಯೇಸು ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. "ಇದೆಲ್ಲ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ? " ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. ಆಗ ಯೇಸು, " ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು, " ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.
ಮನಸ್ಸಿಗೊಂದಿಷ್ಟು
'ಹಿತ್ತಲ ಗಿಡ ಮದ್ದಲ್ಲ' ಎನ್ನುವುದು ಕನ್ನಡದ ಜನಪ್ರಿಯ ಗಾದೆ. ನಮ್ಮವರೇ ನಮ್ಮ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸದಿದ್ದಾಗ, ಹೊಗಳದಿದ್ದಾಗ ನಾವೂ ಹೀಗೆ ಯೋಚನೆ ಮಾಡುತ್ತೇವೆ. ಕೆಲವೊಮ್ಮೆ ಅದರಲ್ಲಿ ನಮ್ಮ ಸ್ವಾರ್ಥವೂ ಇರುತ್ತದೆ. ಇಂದಿನ ಶುಭ ಸಂದೇಶದಲ್ಲಿನ ಯೇಸುವಿನ ನೋವು ಸಹಜವಾದದ್ದು. ನಾವು ನಮ್ಮ ನಡುವಿನ ಜನರನ್ನು ಬೇರೆ ಬೇರೆ ಹಿನ್ನೆಲೆಯಿಂದ ನೋಡುತ್ತಾ, ನಿಜವಾದ ಸಾಮರ್ಥ್ಯವನ್ನು ನೋಡಲು ಮರೆಯುತ್ತೇವೆ. ಯೇಸುವಿಗೆ ಸ್ವಂತ ಊರಿನಲ್ಲಿ ಆದದ್ದು ಇದೇ. ಬೇರೆ ಬೇರೆ ಪ್ರದೇಶದ ಜನರು ಯೇಸುವಿನ ಮಹಿಮೆಯ ಪ್ರಯೋಜನ ಪಡೆಯುತ್ತಿದ್ದಾಗ, ಸ್ವಂತ ಊರಿನ ಜನರು ಹೆಚ್ಚಿನದನ್ನು ಮಾಡಿಸಿಕೊಳ್ಳಲು ಆಗದೆ ಇರಲು ಕಾರಣ ಅವರ ತಾತ್ಸಾರ ಮನೋಭಾವ.
ಮತ್ತೊಂದು ವಿಷಯ, ಮರಿಯಮ್ಮನವರು ಕನ್ಯೆಯಾಗಿ ಉಳಿಯಲಿಲ್ಲ, ಬೇರೆ ಮಕ್ಕಳಿದ್ದರು ಎಂದು ವಾದಿಸಲು ಕೆಲವು ಪಂಗಡಗಳು ಇಂದಿನ ಶುಭ ಸಂದೇಶವನ್ನು ಉಲ್ಲೇಖಿಸುತ್ತಾರೆ. ಅಂದಿನ ಕಾಲದಲ್ಲಿ 'ಕಸಿನ್ಸ್' ಅಥವಾ ಸೋದರ ಸಂಬಂಧಿಗಳನ್ನು 'ಸೋದರರು' 'ಸೋದರಿಯರು' ಎಂದು ಕರೆಯುವುದು ವಾಡಿಕೆಯಾಗಿತ್ತು.ಇಂದಿಗೂ ಅನೇಕ ಸಂಸ್ಕೃತಿಗಳಲ್ಲಿ ಅದು ಮುಂದುವರಿದಿದೆ. ಆದ್ದರಿಂದ ಇಂದಿನ ಶುಭ ಸಂದೇಶದಲ್ಲಿ ಉಲ್ಲೇಖವಾದವರು ಒಡ ಹುಟ್ಟಿದವರಲ್ಲ. ಇದೇ ನಮ್ಮ ಕಥೋಲಿಕ ಧರ್ಮಸಭೆಯ ನಂಬಿಕೆ ಹಾಗೂ ವಾಸ್ತವ ಕೂಡ.

No comments:
Post a Comment