ಮೊದಲನೆಯ ವಾಚನ: ಯಾಜಕಕಾಂಡದಿಂದ ಇಂದಿನ ವಾಚನ 19:1-2,11-18
ಇಸ್ರಯೇಲ್ ಸಮಾಜದವರಿಗೆ ಹೀಗೆ ಆಜ್ಞಾಪಿಸುವಂತೆ ಸರ್ವೇಶ್ವರಸ್ವಾಮಿ ಮೋಶೆಗೆ ಹೇಳಿದರು: "ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. ಕಳಬೇಡ, ಹುಸಿಯ ನುಡಿಯಲುಬೇಡ; ಒಬ್ಬರನ್ನೊಬ್ಬರು ಮೋಸಗೊಳಿಸುವುದುಬೇಡ. ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡ, ನಾನೇ ಸರ್ವೇಶ್ವರ. ಮತ್ತೊಬ್ಬನನ್ನು ಬಲಾತ್ಕರಿಸಬೇಡ; ಅವನ ಸೊತ್ತನ್ನು ಅಪಹರಿಸಬೇಡ. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ. ಕಿವುಡರನ್ನು ದೂಷಿಸಬೇಡ; ಕುರುಡರು ನಡೆಯುವ ದಾರಿಯಲ್ಲಿ ಎಡರು ಕಲ್ಲನ್ನು ಇಡಬೇಡ. ನಿನ್ನ ದೇವರಲ್ಲಿ ಭಯಭಕ್ತಿಯಿರಲಿ, ನಾನೇ ಸರ್ವೇಶ್ವರ. ವ್ಯಾಜತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡ. ಬಡವನ ಬಡತನವನ್ನಾಗಲಿ, ದೊಡ್ಡವನ ಘನತೆಯನ್ನಾಗಲಿ ಲಕ್ಷ್ಯ ಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು. ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡ; ಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲ ಹಿಡಿಯಬೇಡ. ನಾನೇ ಸರ್ವೇಶ್ವರ. ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡ. ನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡ, ಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು. ನಾನೇ ಸರ್ವೇಶ್ವರ.
ಕೀರ್ತನೆ 19:7,8,9,14 ಯೊವಾನ್ನ 6:53
ಶ್ಲೋಕ: ಸ್ವಾಮಿ ಸರ್ವೇಶ್ವರಾ, ನಿಮ್ಮ ಮಾತುಗಳೇ ಆತ್ಮ ಮತ್ತು ಜೀವವಾಗಿವೆ ||
ಪ್ರಭುವಿನ ಆಜ್ಞೆ ಪರಿಪೂರ್ಣ; ಜೀವನಕದು ನವಚೇತನ |
ನಂಬಲರ್ಹ; ಪ್ರಭುವಿನ ಶಾಸನ ಮುಗ್ದರಿಗದು ಸುಜ್ಞಾನ||
ಪ್ರಭುವಿನ ನಿಯಮ ನೀತಿಬದ್ದ|
ಮನಸ್ಸಿಗದು ಒಸಗೆ ಪ್ರಭುವಿನ ಕಟ್ಟಳೆ ಪರಿಶುದ್ದ; ಕಣ್ಣಿಗದು ದೀವಿಗೆ||
ಪ್ರಭುವಿನ ಭೀತಿ ಪವಿತ್ರ ; ಎಂದೆಂದಿಗೂ ಶಾಶ್ವತ|
ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ||
ನಿನಗೊಪ್ಪಿಗೆಯಾಗಲಿ ನನ್ನ ಬಾಯ ಮಾತು, ಹೃದಯಧ್ಯಾನ|
ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ||
ಘೋಷಣೆ: ಯೆಜೆ 18:31
ನಿತ್ಯ ಸೌಭಾಗ್ಯದ ಅರಸರಾದ ಪ್ರಭು ಯೇಸುವೇ, ನಿಮಗೆ ಸ್ತುತಿಯಾಗಲಿ !
ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ, ನೀವು ಮಾಡುತ್ತಾ ಬಂದಿರುವ ಅಪರಾಧಗಳನ್ನೆಲ್ಲಾ ನಿಮ್ಮಿಂದ ತೊಲಗಿಸಿ ಬಿಟ್ಟು | ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನಮಾಡಿಕೊಳ್ಳಿ ||
ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 25:31-46
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದು. ಕುರುಬನು ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, 'ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇ, ಬನ್ನಿ. ಲೋಕಾದಿಯಿಂದ ನಿಮಗಾಗಿ ಸಿದ್ದಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆಂದರೆ, ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ; ಅಪರಿಚಿತನಾಗಿದ್ದೆ, ನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಟ್ಟಿರಿ. ರೋಗದಿಂದಿದ್ದೆ, ನನ್ನನ್ನು ಆರೈಕೆ ಮಾಡಿದಿರಿ. ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಿದಿರಿ, ' ಎಂದು ಹೇಳುವನು. ಅದಕ್ಕೆ ಆ ಸಜ್ಜನರು, 'ಸ್ವಾಮಿ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು? ಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯ ಕೊಟ್ಟೆವು? ಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವು? ತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು? 'ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ 'ಈ ನನ್ನ ಸೋದರರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿ, ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ, ' ಎನ್ನುವನು. ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, 'ಶಾಪಗ್ರಸ್ತರೇ, ನನ್ನಿಂದ ತೊಲಗಿರಿ. ಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆ, ನೀವು ನನಗೆ ಆಹಾರ ಕೊಡಲಿಲ್ಲ; ಬಾಯಾರಿದ್ದೆ, ಕುಡಿಯಲು ಕೊಡಲಿಲ್ಲ; ಅಪರಿಚಿತನಾಗಿದ್ದೆ ನನಗೆ ಆಶ್ರಯ ನೀಡಲಿಲ್ಲ ; ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ , ನೀವು ನನ್ನನ್ನು ಸಂಧಿಸಲಿಲ್ಲ, 'ಎಂದು ಹೇಳುವನು. ಅದಕ್ಕೆ ಅವರು ಕೂಡ, 'ಸ್ವಾಮಿ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು. ಅದನ್ನು ಕಂಡು ನಿಮಗೆ ಉಪಚಾರಮಾಡದೆ ಹೋದೆವು? ' ಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, 'ಇವರಲ್ಲಿ ಒಬ್ಬನಿಗೆ, ಅವನೆಷ್ಟೇ ಕನಿಷ್ಟನಾಗಿರಲಿ, ನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ, ,' ಎನ್ನುವನು. ಹೀಗೆ ಈ ದುರ್ಜನರು ನಿತ್ಯಶಿಕ್ಷೆಗೂ, ಆ ಸಜ್ಜನರು ನಿತ್ಯಜೀವಕ್ಕೂ ಹೋಗುವರು
Please send gospel readdings
ReplyDelete