ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.04.25 - “ನನ್ನನ್ನು ಗುಣಪಡಿಸಿದವನು ಯೇಸುವೇ"

ಮೊದಲನೇ ವಾಚನ:ಯೆಜೆಕಿಯೇಲ : 47: 1-9, 12


ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ವಿೂಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು. ಅವನು ಪುನಃ ಐನೂರು ವಿೂಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ವಿೂಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು. ಅವನು ಮತ್ತೆ ಅಳೆದು ಐನೂರು ವಿೂಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು. ಆಗ ಅವನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ?” ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು. ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”

ಕೀರ್ತನೆ: 46:1-2, 4-5, 7-8
ಶ್ಲೋಕ: ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು, ಯಕೋಬ ಕುಲದೇವರು ನಮಗಾಶ್ರಯ ದುರ್ಗವು.  

ದೇವರೆಮಗೆ ಆಶ್ರಯ ದುರ್ಗ I
ಸಂಕಟದಲಿ ಸಿದ್ಧ ಸಹಾಯಕ II
ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲಿಲ್ಲ I
ಪೊಡವಿ ಕಂಪಿಸಿದರು ನಮಗೇನು ಭಯವಿಲ್ಲ II

ನದಿಯೊಂದು ಆನಂದಗೊಳಿಸುವುದು ದೇವನಗರವನು I
ಪುನೀತಗೊಳಿಸುವುದು ಪರಾತ್ಪರನ ನಿವಾಸವನು II
ದೇವನಿರುವನಾ ನಗರ ಮಧ್ಯೆ, ಅಳಿವಿಲ್ಲ ಅದಕೆ I
ಉದಯಕಾಲದಲೆ ದೇವ ಬರುವನು ಅದರ ಸಹಾಯಕೆ II

ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I
ಯಕೋಬ ಕುಲದೇವರು ನಮಗಾಶ್ರಯ ದುರ್ಗವು II
ಪ್ರಭುವಿನ ಕಾರ್ಯಗಳ ನೋಡಬನ್ನಿ I
ಇಳೆಯೊಳಗೆಸಗಿದ ಪವಾಡಗಳನು ನೋಡಿ II

ಶುಭಸ೦ದೇಶ: ಯೊವಾನ್ನ 5: 1-3, 5-16


ಆ ಕಾಲದಲ್ಲಿ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿ, ‘ಕುರಿಬಾಗಿಲು’ ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ‘ಬೆತ್ಸಥ’ ಎಂದು ಕರೆಯುತ್ತಾರೆ. ಕುರುಡರು, ಕುಂಟರು, ಪಾಶ್ರ್ವವಾಯು ಪೀಡಿತರು ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, “ನಿನಗೆ ಗುಣಹೊಂದಲು ಮನಸ್ಸಿದೆಯೇ?” ಎಂದು ಕೇಳಿದರು. “ಸ್ವಾವಿೂ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೇ ಬೇರೆ ಯಾರಾದರೂ ಇಳಿದು ಬಿಡುತ್ತಾರೆ,” ಎಂದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, “ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ,” ಎಂದರು. ಆ ಕ್ಷಣವೇ ಅವನು ಗುಣಹೊಂದಿ, ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು. ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, “ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ಧ,” ಎಂದು ಹೇಳಿದರು. ಅದಕ್ಕೆ ಅವನು: “ನನ್ನನ್ನು ಗುಣಪಡಿಸಿದವರೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದರು,” ಎಂದು ಉತ್ತರಕೊಟ್ಟನು. ಅಧಿಕಾರಿಗಳು, “ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?” ಎಂದು ಪ್ರಶ್ನಿಸಿದರು. ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿ ಬಿಟ್ಟಿದ್ದರು. ಅನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, “ನೋಡು, ನೀನು ಗುಣಹೊಂದಿರುವೆ; ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು,” ಎಂದರು. ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, “ನನ್ನನ್ನು ಗುಣಪಡಿಸಿದವನು ಯೇಸುವೇ,” ಎಂದು ತಿಳಿಸಿದನು. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳಕೊಡಲು ತೊಡಗಿದರು.

31.03.25 - ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ

ಮೊದಲನೇ ವಾಚನಯೆಶಾಯ 65:17-21

"ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುವೆನುಆಗಮೊದಲಿದ್ದುದ್ದು ಜ್ಞಾಪಕದಲ್ಲಿರದುಅದು ಯಾರ ನೆನಪಿಗೂ ಬಾರದುನಾನು ಮಾಡುವ ಸೃಷ್ಟಿಯಕಾರ್ಯದಲ್ಲೇ ಸಂತೋಷಿಸಿಎಂದೆಂದಿಗೂ ಆನಂದಿಸಿರಿಹೌದುನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನುಅದರ ಜನರನ್ನು ಹರ್ಷಭರಿತನ್ನಾಗಿಸುವೆನುನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನುಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನುಇನ್ನು ಅಲ್ಲಿ ಅಳುವಾಗಲಿಆಕ್ರೋಶವಾಗಲಿ ಕೇಳಿಬರದುಕೆಲವೇ ದಿನ ಬದುಕುವ ಮಗುವಾಗಲಿಆಯುಸ್ಸು ಮುಗಿಯದ ಮುದುಕನಾಗಲಿ ಇನ್ನು ಅಲ್ಲಿರನುನೂರು ವರ್ಷ ಬಾಳುವವನ್ನು ಯುವಕ ಎನಿಸಿಕೊಳ್ಳುವನುನೂರರೊಳಗೆ ಸಾಯುವ ಪಾಪಿಯು "ಶಾಪಗ್ರಸ್ತಎನಿಸಿಕೊಳ್ಳುವನುಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರುತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.

ಕೀರ್ತನೆ30:2, 4, 5-6, 11-12, 13

ಶ್ಲೋಕನಿನಗೆನ್ನ ವಂದನೆ ಪ್ರಭೂನನ್ನನ್ನುದ್ಧರಿಸಿದೆ

ಶುಭಸಂದೇಶಯೊವಾನ್ನ 4:43-54
ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಸಮಾರಿಯಾದಿಂದ ಗಲಿಲೇಯಕ್ಕೆ ಹೊರಟರುಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದರುಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರುಏಕೆಂದರೆಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ಧನ್ನೆಲ್ಲಾ ನೋಡಿದ್ದರುಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರುಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತುಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿಅವರ ಬಳಿಗೆ ಬಂದುಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನುಯೇಸು ಅವನಿಗೆ "ಸೂಚಕಕಾರ್ಯಗಳನ್ನು ಅದ್ಬುತಗಳನ್ನು ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ," ಎಂದರುಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮೀ," ಎಂದು ಅಂಗಲಾಚಿದನುಆಗ ಯೇಸು, "ಹೋಗು ನಿನ್ನ ಮಗನು ಬದುಕುತ್ತಾನೆ,"  ಎಂದು ಹೇಳಿದರುಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು ಅವನು ಅರ್ಧ ದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, "ನಿಮ್ಮ ಮಗ ಬದುಕಿಕೊಂಡ," ಎಂದು ತಿಳಿಸಿದರುಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, "ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು." ಎಂದು ಆಳುಗಳು ಉತ್ತರಕೊಟ್ಟರು. "ನಿನ್ನ ಮಗ ಬದುಕುತ್ತಾನೆಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತುಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರುಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದುಮಾಡಿದ ಎರಡನೆಯ ಸೂಚಕ ಕಾರ್ಯ ಇದು.

ಮನಸಿಗೊಂದಿಷ್ಟು : ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ತನ್ನ ಪ್ರತಿಷ್ಠೆ ಮರೆತು ಯೇಸುವಿನ ಬಳಿ ಬರುತ್ತಾನೆ.  ಯೇಸು ಅವನ ವಿಶ್ವಾಸವನ್ನು ಪರೀಕ್ಷಿಸಿದರೂ ಅದರಲ್ಲಿ ಗೆದ್ದು ತನ್ನ ಮಗನನ್ನು ಗುಣಪಡಿಸಿಕೊಳ್ಳುತ್ತಾನೆ. ಅದರಲ್ಲೂ ಮಗ ಬದುಕುತ್ತಾನೆ ಎಂಬ ಯೇಸುವಿನ ಮಾತಲ್ಲಿ ವಿಶ್ವಾಸವಿಟ್ಟು ಹೊರಡುತ್ತಾನೆ. ನಮ್ಮ ಪ್ರತಿಷ್ಠೆ, ಅಡಚಣೆಗಳನ್ನು ಬದಿಗೊತ್ತಿ ವಿಶ್ವಾಸವಿಟ್ಟಾಗ ಹಾಗೂ ಯೇಸುವಿನ ಮಾತಲ್ಲಿ ಅಚಲ ವಿಶ್ವಾಸವಿಟ್ಟಾಗ ನಮ್ಮಲ್ಲೂ ಅದ್ಭುತಗಳು ಆಗುತ್ತವೆ.

ಪ್ರಶ್ನೆ :  ನಮ್ಮ ಮನಸು  ಯೇಸುವಿನ ಸ್ವಗ್ರಾಮ. ಅಲ್ಲಿ ಅವರಿಗೆ ಸಂಪೂರ್ಣ ಗೌರವವಿದೆಯೇ?

30.03.25 - "ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ"

ಮೊದಲನೇ ವಾಚನ: ಯೆಹೋಶುವ 5:9,10-12
ರ್ವೇಶ್ವರಸ್ವಾಮಿ ಯೆಹೋಶುವನಿಗೆ, "ನಾನು ಈಜಿಪ್ಟಿನ ಕಳಂಕವನ್ನುಈದಿನ ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆ," ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿಡಲಾಗಿದೆ. ಇಸ್ರಯೇಲರು ಗಿಲ್ಗಾಲಿನಲ್ಲಿ ತಂಗಿದ್ದಾಗ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆ ಜೆರಿಕೋವಿನ ಬಯಲಿನಲ್ಲಿ ಪಾಸ್ಕಹಬ್ಬವನ್ನಾಚರಿಸಿದರು.  ಮಾರನೆಯ ದಿನದಂದು ಕಾನಾನಿನ ಧಾನ್ಯವನ್ನು ಊಟಕ್ಕೆ ಬಳಸಲು ತೊಡಗಿದರು. ಹುಳಿಯಿಲ್ಲದ ರೊಟ್ಟಿಗಳನ್ನು ಮತ್ತು ಸುಟ್ಟ ತೆನೆಗಳನ್ನು ತಿನ್ನತೊಡಗಿದರು. ಆ ನಾಡಿನ ಹುಟ್ಟುವಳಿಯನ್ನು ಊಟಮಾಡಿದ ಮರುದಿನವೇ ಮನ್ನವು ನಿಂತುಹೋಯಿತು, ಅದು ಅವರಿಗೆ ಮತ್ತೆ ಸಿಕ್ಕಲೇ ಇಲ್ಲ. ಇಸ್ರಯೇಲರು ಆ ವರ್ಷವೆಲ್ಲ ಕಾನಾನ್ ನಾಡಿನ ಉತ್ಪನ್ನವನ್ನೇ ಅನುಭವಿಸಿದರು.

ಕೀರ್ತನೆ: 34:2-3, 4-5, 6-7
ಶ್ಲೋಕ: ಸವಿದು ನೋಡು ಪ್ರಭುವಿನ ಮಾಧುರ್ಯವನ್ನು

ಎರಡನೇ ವಾಚನ: 2 ಕೊರಿಂಥಿಯರಿಗೆ  5:17-21

ಹೋದರರೇ, ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮತಳೆದಿದೆ. ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನ ಪಡಿಸಿಕೊಂಡಿದ್ದಾರೆ. ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ. ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ. ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.

ಶುಭಸಂದೇಶ: ಲೂಕ 15:1-3, 11-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸಂಕದವರು ಪಾಪಿಗಳು ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ;  ಅವರೊಡನೆ ಊಟ ಮಾಡುತ್ತಾನೆ." ಎಂದು ಗೊಣಗಿದರು.ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು ಅವರಲ್ಲಿ ಕಿರಿಯವನು "ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು," ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚ್ಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆ ಬಿಟ್ಟು ಹೋದ. ದೂರ ದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೊಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳು ಮಾಡಿಕೊಂಡ ಮೇಲೆ ಆ ದೇಶಾದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೆಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ," ಎಂದುಕೊಡ. 
ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿ ಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ; ನಿಮ್ಮ ಮಗನೆನಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ" ಎಂದ. ತಂದೆಯಾದರೋ ಆಳುಗಳನ್ನು ಕರೆದು, ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ.; ಕೊಬ್ಬಿದ ಕರುವನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ, ಏಕೆಂದರೆ, ಈ ನನ್ನ ಮಗ ಸತ್ತು ಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,' ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
                              ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. "ಮನೆಯಲ್ಲೇನು ವಿಶೇಷ?' ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. "ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿದ ಕರುವನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ," ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, "ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದು  ಈ ನಿಮ್ಮ ಮಗ ಬಂದುದ್ದೇ ಕೊಬ್ಬಿಸಿದ ಕರುವನ್ನು ಕೊಯ್ಯಿಸಿದ್ಧೀರಿ!' ಎಂದು ವಾದಿಸಿದ. ಆಗ ತಂದೆ ಅವನಿಗೆ, 'ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ; ಈಗ ಸಿಕ್ಕಿದ್ಧಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ" ಎಂದನು."

ಮನಸಿಗೊಂದಿಷ್ಟು ಆಗ ತಾನೆ ಅಬ್ರಹಾಂ ಲಿಂಕನ್ ತಮ್ಮದೇ ದೇಶದ ಮೇಲೆ ಯುದ್ಧ ಸಾರಿದ್ದ ದಕ್ಷಿಣ ಪ್ರಾಂತ್ಯದ ಜನರ ಮೇಲೆ ಗೆಲುವು ಸಾಧಿಸಿದ್ದರು. ಸೋತು ಮತ್ತೆ ದೇಶಕ್ಕೆ ಮರಳಿದ ಆ ಜನರನ್ನು ಏನು ಮಾಡುತ್ತೀರಿ ಎಂದು ಕೇಳಲಾಯಿತು. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬಹುದು ಎಂಬ ಉತ್ತರದ ನಿರೀಕ್ಷೆಯಲ್ಲಿದ್ದವರಿಗೆ ಅಬ್ರಹಾಂ ಲಿಂಕನ್ " ಅವರು ನಮ್ಮಿಂದ ದೂರ ಹೋಗೆ ಇಲ್ಲವೆಂಬಂತೆ ಬರ ಮಾಡಿಕೊಳ್ಳುತೇನೆ" ಎನ್ನುತ್ತಾರೆ.

ಓ ಆತ್ಮಗಳೇ ಈಗೇಕೆ ಚದುರಿ ಹೋಗಿವಿರೇ
ಬೆದರಿ ದಿಕ್ಕೆಟ್ಟ ಕುರಿ ಮಂದೆಯಂತೆ
ಮೂರ್ಖ ಮನಗಳೇ ಈಗೇಕೆ ದೂರಾಗುವಿರೇ
ನೈಜ ಆಳ ಆ ದೇವನ ಪ್ರೀತಿಯಿಂದಲೇ 

ಪ್ರಶ್ನೆ ಓ ಪಾಪದ ಮನವೇ ಮರಳಿ 
            ಬರುವುದೆಂದು ಮತ್ತೆ ದೇವನ ಬಳಿಗೆ?

29.03.25 - "ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು"

ಮೊದಲನೇ ವಾಚನ: ಹೊಶೇಯ: 6: 1-6

ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು. ಮೂರನೆಯ ದಿನದಲ್ಲಿ ಅವರು ನಮ್ಮನ್ನು ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. ನಿರಂತರವಾಗಿ ಹುಡುಕಿ ಅವರನ್ನು ಕಂಡುಕೊಳ್ಳೋಣ; ಸರ್ವೇಶ್ವರಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ ಸೂರ್ಯೋದಯದಂತೆ ನಿಶ್ಚಯ. ಭೂಮಿಯನ್ನು ತಣಿಸುವ ಮುಂಗಾರು ಹಿಂಗಾರು ಮಳೆಗಳಂತೆ ಅವರು ನಮ್ಮ ಬಳಿಗೆ ಬಂದೇ ಬರುವರು. ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ. ಖಂಡ ತುಂಡವಾದ ತೀರ್ಪುನೀಡುವ, ಕತ್ತಿಯಂತೆ ಹರಿತವಾಗಿ ಮಾತನಾಡುವ ನನ್ನ ಪ್ರವಾದಿಗಳನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ. ನನ್ನ ನ್ಯಾಯ ದಂಡನೆ ಮಿಂಚಿನಂತೆ ಹೊರಡುವುದು. ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ; ನನಗೆ ಬೇಕಾದುದು ದೈವಜ್ಞಾನ, ದಹನಬಲಿ ದಾನವಲ್ಲ.

ಕೀರ್ತನೆ: 51: 1-3 16-19
ಶ್ಲೋಕ: ನನಗೆ ಬೇಕಾದುದು ಕರುಣೆ, ಬಲಿಯರ್ಪಣೆಯಲ್ಲ

ಕೃಪಾಳು, ದೇವಾ, ಕರುಣಿಸೆನ್ನನು I
ಕರುಣಾನಿಧಿ, ಅಳಿಸೆನ್ನ ದೋಷವನು II

ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು I
ದೋಷಪರಿಹರಿಸಿ ಶುದ್ಧಗೊಳಿಸೆನ್ನನು II

ಬಲಿಯರ್ಪಣೆಯಲಿ ನಿನಗೊಲವಿಲ್ಲ I
ದಹನ ಬಲಿಯಿತ್ತರು ನಿನಗೆ ಬೇಕಿಲ್ಲ II

ಮುರಿದ ಮನವೇ ದೇವನೊಲಿವ ಯಜ್ಞವು I
ನೊಂದು ಬೆಂದ ಮನವನಾತ ಒಲ್ಲೆಯೆನನು II

ಸಿಯೋನಿಗೆ ದೇವಾ, ಶುಭವನು ಕರುಣಿಸು I
ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು II

ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು I
ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು II

ಶುಭಸ೦ದೇಶ: ಲೂಕ: 18: 9-14


ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ. “ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ. “ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕ ವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.

ಮನಸ್ಸಿಗೊಂದಿಷ್ಟು :  ಇಂದಿನ ಶುಭಸಂದೇಶದಲ್ಲಿ ಇಬ್ಬರ ಪ್ರಾರ್ಥನೆ ಇದೆ.  ಚಿಂತಕರೊಬ್ಬರು ಹೇಳುವಂತೆ ಫರಿಸಾಯ ಪ್ರಾರ್ಥಿಸಲಿಲ್ಲ, ಬದಲಿಗೆ ತಾನೆಷ್ಟು ಒಳ್ಳೆಯವನೆಂದು ದೇವರಿಗೆ  ವರದಿ ಮಾಡಿದನಷ್ಟೆ. ಸುಂಕ ವಸೂಲಿಯವನು ದೇವರ ಮುಂದೆ ತನ್ನನ್ನೇ ತಗ್ಗಿಸಿಕೊಂಡ, ದೇವರಿಗೆ ಅದೇ  ಮೆಚ್ಚುಗೆಯಾಯಿತು

ಜಂಭದ ಮನಸ್ಸಿಗೆ ಪ್ರಾರ್ಥನೆ ಕಷ್ಟವಂತೆ. ನಾವು ನಮ್ಮ ಒಳ್ಳೆಯತನವನ್ನು ಹೋಲಿಸಿಕೊಳ್ಳಬೇಕಾದರೆ, ಅದು ಇತರ ಮನುಷ್ಯರೊಂದಿಗೆ ಅಲ್ಲ ದೇವರ ಒಳ್ಳೆಯತನದೊಂದಿಗೆ ಎನ್ನುವ ಮಾತಿದೆ. ದೇವರ ಒಳ್ಳೆಯತನದ ಅಗಾಧತೆ ನಮ್ಮ ಗುರಿಯಾಗಲಿ.  ವಿನಯ ನಮ್ಮ ಪ್ರಾರ್ಥನೆಯ ಗರಿಯಾಗಲಿ - ಜೀವವಾಕ್ಯ 

28.03.25 - “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,”

ಮೊದಲನೇ ವಾಚನ: ಹೊಶೇಯ: 14: 1-9


ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 81: 6-7, 8-10, 13, 16
ಶ್ಲೋಕ: ಈಜಿಪ್ಟಿನಿಂದ ಕರೆತಂದ ಸ್ವಾಮಿ ದೇವನು ನಾನು, ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ.

ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು:/
“ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು
ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು //
“ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು / 

ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು /
ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು,//
“ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ /
ಹಾಗೆ ಮಾಡಿದರೆ ಇಸ್ರಯೇಲರೆ, ಹಿತ ನಿಮಗೆ, // 

“ಇರಬಾರದು ಅನ್ಯದೇವತೆಗಳು ನಿಮ್ಮಲಿ /
ಪರದೇವತೆಗಳ ಪೂಜೆ ಕೂಡದು ನಿಮ್ಮಲಿ,//
“ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು / 
ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ /

ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, //
“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು /
ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” // 

ಶುಭಸ೦ದೇಶ:  ಮಾರ್ಕ: 12: 28-34

ಈ ತರ್ಕವನ್ನು ಕೇಳುತ್ತಿದ ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಧರ್ಮಶಾಸ್ತ್ರೀ ಯೇಸುವಿನ ಮಾತನ್ನು ಒಪ್ಪುವುದು, ಯೇಸು ಅವನನ್ನು ಮೆಚ್ಚುವುದನ್ನು ಕಾಣುತ್ತೇವೆ. ಯೇಸು ವಿನಾಕಾರಣ ಯಾರನ್ನೂ ಖಂಡಿಸುತ್ತಿರಲಿಲ್ಲ ಎಂಬುದರ ಮೇಲೆ ಮಾರ್ಕರು  ಬೆಳಕು ಚೆಲ್ಲುತ್ತಾರೆ.  

ಯೇಸು ನೀಡಿದ ಎರಡೂ ಆಜ್ಞೆಗಳು ಈಗಾಗಲೇ ಹಳೆಯ ಒಡಂಬಡಿಕೆಯಲ್ಲಿ ಚರ್ಚೆಯಾಗಿದೆ. ಆದರೆ ಯೇಸು ದೈವ ಪ್ರೀತಿ ಹಾಗು ಪರ ಪ್ರೀತಿಗೆ  ಸಮನಾದ ಮಹತ್ವ ನೀಡುತ್ತಾರೆ. ದೈವ ಶಾಸ್ತ್ರದ ಕಟ್ಟಲೆ ನಿಯಮಗಳನ್ನು ಪಾಲಿಸುವುದೇನೋ ಸರಿ. ಆದರೆ ಅವು ಪ್ರೀತಿಗಿಂತ ಹೆಚ್ಚು ಮಹತ್ವ ಪಡೆಯುವ ಅಪಾಯವೇ ಹೆಚ್ಚು . 

ಜೆರಿಕೋ ಮಾರ್ಗದಲ್ಲಿ ಗಾಯಗೊಂಡ ಪ್ರಯಾಣಿಕನನ್ನು ಆರೈಕೆ ಮಾಡದೆ ಹೋದ ಯಾಜಕ ಹಾಗು ಲೇವಿ ಈ ವಿಷಯದಲ್ಲಿ ಉದಾಹರಣೆ. ಅವರಲ್ಲಿ ಪ್ರೀತಿ ಕರುಣೆಗಿಂತ ವಿಧಿ, ನಿಯಮದ ಕರ್ತವ್ಯವೇ ಹೆಚ್ಚು ಮಹತ್ವ ಪಡೆಯಿತು. 

ಈ ನಿಟ್ಟಿನಲ್ಲಿ ಯೇಸು ಹೇಳಿದ ಈ ಎರಡು ಆಜ್ಞೆಗಳೇ  ನಮ್ಮ ದಾರಿ ದೀಪವಾಗಬೇಕು

27.03.25 - “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,”

ಮೊದಲನೇ ವಾಚನ: ಯೆರೆಮೀಯ: 7: 23-28


ನಾನು ಕೊಟ್ಟ ಒಂದು ಕಟ್ಟಳೆಯೆಂದರೆ ಇದು - ನನ್ನ ಮಾತಿಗೆ ಕಿವಿಗೊಡಿ, ನಾನು ನಿಮ್ಮ ದೇವರಾಗಿರುತ್ತೇನೆ, ನೀವು ನನ್ನ ಪ್ರಜೆಯಾಗಿರಿ. ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೆ ನಡೆಯಿರಿ. ಆದರೆ ಅವರು ಕೇಳಲಿಲ್ಲ. ಕಿವಿಗೊಡಲಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ಅನುಸರಿಸಿದರು. ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆದುಕೊಂಡರು. ಮುಂದೆ ಸಾಗದೆ ಹಿಂದಿರುಗಿಯೇ ಹೋದರು. ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಹೊರಟದಿನ ಮೊದಲುಗೊಂಡು ಈ ದಿನದವರೆಗೂ ನನ್ನ ದಾಸರಾದ ಎಲ್ಲ ಪ್ರವಾದಿಗಳನ್ನು ನಿಮ್ಮವರ ಬಳಿಗೆ ಕಳಿಸುತ್ತಾ ಬಂದು ಇದ್ದೇನೆ. ದಿನದಿನವೂ ತಡಮಾಡದೆ ಕಳಿಸಿದ್ದೇನೆ. ನಿಮ್ಮವರಾದರೋ ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲಿಲ್ಲ. ನನ್ನ ಆಜ್ಞೆಗೆ ಮಣಿಯಲಿಲ್ಲ. ತಮ್ಮ ಪೂರ್ವಜರಿಗಿಂತಲೂ ಕೆಟ್ಟವರಾಗಿ ನಡೆದುಕೊಂಡರು.” “ಯೆರೆವಿೂಯನೇ, ನೀನು ಈ ಮಾತುಗಳನ್ನು ಅವರಿಗೆ ಹೇಳಿದರೂ ಅವರು ಕಿವಿಗೊಡುವುದಿಲ್ಲ, ಕರೆದರೂ ಅವರು ಓಗೊಡುವುದಿಲ್ಲ. ಆದಕರಣ ನೀನು ಅವರಿಗೆ – ‘ತನ್ನ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡದ, ದಂಡಿಸಿದರೂ ತಿದ್ದುಕೊಳ್ಳದ ಜನಾಂಗ ಇದುವೇ; ಸತ್ಯವೆಂಬುದು ಅಳಿದುಹೋಗಿದೆ, ಇದರ ಬಾಯಿಂದ ಕಡಿದು ಹೋಗಿದೆ’ ಎಂದು ಹೇಳು.”

ಕೀರ್ತನೆ: 95:1-2, 6-7, 8-9

ಶ್ಲೋಕ: ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ, ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ.

ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ I
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ II

ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ I
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ II

ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II

ಆತನೆಮ್ಮ ದೇವರು, ನಾವು ಆತನ ಕೈಮಂದೆ I
ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ II

ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ I
ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ I

ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ II
ನೋಡಿದರಾದರೂ ನನ್ನ ಮಹತ್ಕಾರ್ಯಗಳನು I
ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು II

ಶುಭಸ೦ದೇಶ: ಲೂಕ 11:14-23

ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟು ಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಸ್ವರ್ಗದಿಂದ ಒಂದು ಅದ್ಭುತ ಕಾರ್ಯವನ್ನು ಮಾಡಿ ತೋರಿಸುವಂತೆ ಕೇಳಿದರು. ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ. “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ. “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. ಒಂದು ಅದೆಷ್ಟೇ ಒಳ್ಳೆಯ ಕಾರ್ಯ ಮಾಡಿದರೂ, ಮಾಡಲು ಪ್ರಯತ್ನಿಸಿದರೂ ಕಾಲೆಳೆಯುವ ಜನರಿದ್ದೇ ಇರುತ್ತಾರೆ. ಯೇಸು ದೆವ್ವ ಹಿಡಿದವನನ್ನು ಗುಣಪಡಿಸಿದರೂ ಅದಕ್ಕೊಂದು ಕೊಂಕು ಮಾತು ಬಂತು. ದಿಟ್ಟವಾಗಿ ಉತ್ತರಿಸಿದ ಯೇಸುವಿನಂತೆ ನಮ್ಮ ಕಾರ್ಯದ ಒಳಿತಿನ ಬಗ್ಗೆ ನಾವು ಸ್ಪಷ್ಟವಾಗಿರಬೇಕಷ್ಟೇ 

ಇನ್ನೊಂದು ನಮ್ಮ ಕ್ರೈಸ್ತ ಜೀವನದಲ್ಲಿ ನಾವು ತಟಸ್ಥರಾಗುವಂತಿಲ್ಲ. ನಾವು ಕ್ರಿಸ್ತನ ಪರ ಅಥವಾ ಕ್ರಿಸ್ತನ ವಿರುದ್ಧ, ಅಷ್ಟೇ ನಮ್ಮ ಆಯ್ಕೆ . ಕ್ರಿಸ್ತ ಕಲಿಸಿದ ಆಶಯಗಳ ಪರ ಅಥವಾ ವಿರುದ್ಧವಷ್ಟೇ ನಾವು ತೆಗೆದುಕೊಳ್ಳಬೇಕಾದ ನಿಲುವು. ಸ್ಪಷ್ಟತೆಗಾಗಿ ಪ್ರಾರ್ಥಿಸೋಣ - ಜೀವವಾಕ್ಯ 

26.03.25 - "ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮ"

ಮೊದಲನೇ ವಾಚನ: ಧರ್ಮೋಪದೇಶಕಾ೦ಡ: 4: 1, 5-9

ಮೋಶೆ ಜನರಿಗೆ ಹೀಗೆ೦ದನು: 
“ಇಸ್ರಯೇಲರೇ, ಕೇಳಿ: ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು. “ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು; ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, ‘ಈ ದೊಡ್ಡ ಜನಾಂಗ ಎಂಥಾ ಜ್ಞಾನವಿವೇಕವುಳ್ಳ ಜನಾಂಗ’, ಎಂದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸವಿೂಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸವಿೂಪವಾಗಿರುತ್ತಾರೆ? ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆಯಾವ ಜನಾಂಗಕ್ಕೆ ಉಂಟು? “ಹೀಗಿರುವಲ್ಲಿ, ನೀವು ಬಹಳ ಜಾಗರೂಕತೆಯಿಂದಿರಿ; ನಿಮ್ಮ ಕಣ್ಣುಗಳಿಂದಲೇ ನೋಡಿದ ಘಟನೆಗಳನ್ನು ಎಷ್ಟು ಮಾತ್ರಕ್ಕೂ ಮರೆಯದಿರಿ; ಜೀವಮಾನಪರ್ಯಂತ ಇವುಗಳನ್ನು ನೆನಪಿನಲ್ಲಿ ಇಡಿ; ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಿ.

ಕೀರ್ತನೆ: 147: 12-13, 15-16, 19-20

ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು

ಜೆರುಸಲೇಮೇ, ಕೀರ್ತಿಸು ಪ್ರಭುವನು I
ಸಿಯೋನೇ, ಸ್ತುತಿಸು ನಿನ್ನ ದೇವರನು II

ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು I
ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು II

ಕಳಿಸುವನು ಧರೆಗೆ ತನ್ನ ಆಣತಿ I
ಸಿದ್ಧಿಯಾಗುವುದದು ಬಲು ಶೀಘ್ರದಿ II

ಸುರಿಸುವನು ಹಿಮವನು ಉಣ್ಣೆಯಂತೆ I
ಹರಡುವನು ಇಬ್ಬನಿಯನು ಬೂದಿಯಂತೆ II

ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ I
ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ II

ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ I
ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ I

ಶುಭಸ೦ದೇಶ: ಮತ್ತಾಯ: 5: 17:19



ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ವಿೂರುವವನು, ವಿೂರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.

25.03.25 - “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,”

ಮಂಗಳವಾರ್ತೆಯ ಮಹೋತ್ಸವ




ಮೊದಲನೇ ವಾಚನ: ಯೆಶಾಯ 7:10-14; 8:10

ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು. ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು. ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು. ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ, ದೇವನಿರುವನು ನಮ್ಮೊಡನೆ.”

ಕೀರ್ತನೆ: 40:7, 8-9, 10, 11
ಶ್ಲೋಕ: ನಾನೋಗೊಡುತ ಇಂತೆಂದೆ: ’ಇಗೋ ನಾನೇ ಬರುತ್ತಿರುವೆ’

ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ I
ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ I
ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ II

ನಾನೋಗೊಡುತ ಇಂತೆಂದೆ : “ಇಗೋ ನಾನೇ ಬರುತ್ತಿರುವೆ I
ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? II
ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I

ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II
ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ I
ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ II

ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು I
ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು I
ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು II

ಎರಡನೇ ವಾಚನ: ಹಿಬ್ರಿಯರಿಗೆ 10:4-10

ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು. ಸರ್ವಾಂಗ ಹೋಮಗಳೂ ಪಾಪ ಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು. ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.” ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪ ಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ. ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದು ಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.

ಶುಭಸಂದೇಶ: ಲೂಕ 1:26-38


ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು. ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು. ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಮನಸ್ಸಿಗೊಂದಿಷ್ಟು : ದೂತನು ಮಾತೆ ಮರಿಯ ಬಳಿಗೆ ಬಂದು ಶುಭವಾರ್ತೆಯನ್ನು ತಿಳಿಸಿದಾಗ, ಮೊದಲಿಗೆ ಮರಿಯ ತಬ್ಬಿಬ್ಬಾಗುತ್ತಾರೆ, ಆಶ್ಚರ್ಯಪಡುತ್ತಾರೆ ನಂತರ ಸಂಪೂರ್ಣವಾಗಿ ಒಪ್ಪಿಸಿಕೊಂಡು ದೈವಚಿತ್ತಕ್ಕೆ ತಲೆ ಬಾಗುತ್ತಾರೆ. ದೇವರಿಗೆ ಎಲ್ಲವು ಸಾಧ್ಯ ಎಂಬ ಮರಿಯಳ ವಿಶ್ವಾಸ ಲೋಕ ರಕ್ಷಣಾ ಕಾರ್ಯಕ್ಕೆ ಮುನ್ನುಡಿಯಾಯಿತು. ಬಾಳಿನ ಕಷ್ಟದ ಸಮಯದಲ್ಲಿ ನಾವು ತಬ್ಬಿಬ್ಬಾಗುತ್ತೇವೆ, ಗೊಂದಲಗೊಳ್ಳುತ್ತೇವೆ, ಭಯಪಡುತ್ತೇವೆ. ಆದರೆ ದೇವರಿಗೆ ನಮ್ಮ ಬಾಳನ್ನು ಸಮರ್ಪಿಸಿದಾಗ ದೇವರ ಕಾರ್ಯಗಳು ನಮ್ಮಲ್ಲಿ ಕೈಗೂಡುವುದನ್ನು ಕಾಣುತ್ತೇವೆ, ಅನುಭವಿಸುತ್ತೇವೆ.

ಪ್ರಶ್ನೆ : ಮಾತೆ ಮರಿಯಳ ವಿನಯ ವಿಧೇಯತೆ ನಮ್ಮ ಬಾಳಿಗೆಷ್ಟು ಪ್ರಸ್ತುತ?

24.03.25 - "ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು"

ಮೊದಲನೇ ವಾಚನ: 2 ಅರಸುಗಳು: 5:1-15


ಸಿರಿಯಾದ ರಾಜನಿಗೆ ನಾಮಾನ್ ಎಂಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಖಾಂತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದರು. ಆದ್ದರಿಂದ ರಾಜನು ಇವನನ್ನು ಮಹಾಪುರುಷನೆಂದೂ ಸನ್ಮಾನ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮ ಶಾಲಿಯಾದ ಇವನು ಭೀಕರ ಚರ್ಮರೋಗದಿಂದ ನರಳುತ್ತಿದ್ದನು. ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾಂತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದರು. ಆಕೆ ನಾಮಾನನ ಹೆಂಡತಿಗೆ ದಾಸಿಯಾದಳು. ಒಂದು ದಿನ ಆಕೆ ತನ್ನ ಯಜಮಾನಿಗೆ, “ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿಂದ ಗುಣಪಡಿಸುತ್ತಿದ್ದರು,” ಎಂದು ಹೇಳಿದಳು. ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು. ಅವನು, “ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ,” ಎಂದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರುಸಾವಿರ ಬಂಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಸಮಾರಿಯಕ್ಕೆ ಹೋದನು; ತಂದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕ ನಾಮಾನನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೊಳ್ಳಿ,” ಎಂಬುದಾಗಿ ಬರೆದಿತ್ತು. ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಡು, ತನ್ನ ಪರಿವಾರದವರಿಗೆ, “ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿಂದ ನಾನು ವಾಸಿಮಾಡಬೇಕಂತೆ! ಇದು ಎಂಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮಥ್ರ್ಯವುಂಟೇ? ಇವನು ನನ್ನೊಡನೆ ಯುದ್ಧಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ,” ಎಂದು ಹೇಳಿದನು. ಇಸ್ರಯೇಲರ ಅರಸನು ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೈವ ಪುರುಷ ಎಲೀಷನು ಕೇಳಿದನು. ದೂತರ ಮುಖಾಂತರ ಅವನಿಗೆ, “ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯೇಲರಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ಗೊತ್ತಾಗಲಿ,” ಎಂದು ಹೇಳಿ ಕಳುಹಿಸಿದನು. ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು. ಎಲೀಷನು ಅವನಿಗೆ, “ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ದೇಹ ಮೊದಲಿದ್ದಂತಾಗುವುದು; ನೀನು ಶುದ್ಧನಾಗುವೆ,” ಎಂದು ಹೇಳಿಕಳುಹಿಸಿದನು. ನಾಮಾನನು ಇದನ್ನು ಕೇಳಿ ಕೋಪಗೊಂಡನು. “ಇದೇನು! ಇವನು ಖಂಡಿತವಾಗಿ ಹೊರಗೆಬಂದು ನಿಂತು, ತನ್ನ ದೇವರಾದ ಸರ್ವೇಶ್ವರನ ಹೆಸರು ಹೇಳಿ, ನನ್ನ ಚರ್ಮದ ಮೇಲೆ ಕೈಯಾಡಿಸಿ, ರೋಗ ವಾಸಿಮಾಡುವನೆಂದು ನೆನಸಿದೆ. ದಮಸ್ಕದ ಅಬಾನಾ ಹಾಗು ಪರ್ಪರ್ ಎಂಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿಂತ ಉತ್ತಮವಾಗಿವೆಯಲ್ಲವೇ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ? ಎಂದು ಹೇಳಿ, ಬಹಳ ಸಿಟ್ಟಿನಿಂದ ಹೊರಟುಹೋದನು. ಆಗ ಅವನ ಸೇವಕರು ಹತ್ತಿರ ಬಂದು, “ಯಜಮಾನರೇ, ಪ್ರವಾದಿ ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೆ? ಹಾಗಾದರೆ ‘ಸ್ನಾನಮಾಡಿ, ಶುದ್ಧರಾಗುವಿರಿ’ ಎಂದು ಹೇಳಿದರೆ ಏಕೆ ಅದರಂತೆ ಮಾಡಬಾರದು?” ಎಂದರು. ಅವನು ಅಂತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಅನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. “ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು,” ಎಂದು ಹೇಳಿದನು.

ಕೀರ್ತನೆ: 42:1-2, 43:3-4

ಶ್ಲೋಕ:  ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ, ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ.

ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I
ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II

ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ I
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? II

ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನ್ನು ನನ್ನ ನಡೆಸಲಿಕ್ಕೆ I
ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕೆ II

ಬರುವೆನಾಗ ನಿನ್ನ ಬಲಿಪೀಠದ ಬಳಿಗೆ I
ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ I
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ II

ಶುಭಸ೦ದೇಶ: ಲೂಕ: 4:24-30


ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,” ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಯೇಸುವನ್ನು ತಮ್ಮ ಸ್ವಂತ ಜನರೇ ಗುಡ್ಡದಿಂದ ತಳ್ಳಲು ಬಯಸುತ್ತಾರೆ. ಕಾರಣ, ಯೇಸು ನಿಷ್ಠುರವಾಗಿ ಮಾತನಾಡಿದರು ಎಂಬುದು. ನ್ಯಾಯದ ಪರವಾಗಿ ಮಾತನಾಡುವವರು ಅನುಭವಿಸಲು ಸಿದ್ಧವಾಗಿರಬೇಕಾದ ಸ್ಥಿತಿ ಇದು. ವ್ಯಕ್ತಿ ಪ್ರಭಾವಿಯಾಗಿದ್ದೂ ಅವನಿಂದ ತಮಗೆ ಸಹಾಯವಾಗುತ್ತಿದ್ದರೆ ಅಥವಾ ಸಹಾಯದ ಸಮಯ ಬರಬಹುದೆಂದರೇ , ಅವನೆಷ್ಟೇ ಅನ್ಯಾಯ ಮಾಡುತ್ತಿದ್ದರೂ ಜನ ಅವನನ್ನು ಖಂಡಿಸುವುದಿಲ್ಲ.  ಆದರೆ ಯೇಸು ಅನ್ಯಾಯವನ್ನು ಎಂದೂ ಸಹಿಸಿಕೊಳ್ಳಲಿಲ್ಲ, ಖಂಡಿಸದೆ ಬಿಡಲಿಲ್ಲ.

ಖಂಡಿಸಲು ಸಾಧ್ಯವಾಗದಿದ್ದರೂ ಸರಿ, ಅನ್ಯಾಯವನ್ನು ಬೆಂಬಲಿಸದಿರೋಣ, ಅದೆಷ್ಟೇ ವ್ಯಯಕ್ತಿಕವಾಗಿ ಪ್ರಯೋಜನಕಾರಿಯಾಗಿದ್ದರೂ....
 

23.03.25 - " ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ"

ಮೊದಲನೇ ವಾಚನ: ವಿಮೋಚನಾಕಾಂಡ 3:1-8, 13-15

ಮೋಶೆ ಮಿದ್ಯಾನರ ಪೂಜಾರಿಯೂ ತನ್ನ ಮಾವನೂ ಆದ ಇತ್ರೋನನ ಮಂದೆಯನ್ನು ಮೇಯಿಸುತ್ತಿದ್ದನು. ಒಮ್ಮೆ ಆ ಮಂದೆಯನ್ನು ಕಾಡಿನ ಹಿಂಬಾಗಕ್ಕೆ ನಡೆಸಿಕೊಂಡು  'ಹೋರೇಬ್' ಎಂಬ ದೇವರ ಬೆಟ್ಟಕ್ಕೆ ಬಂದನು. ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೊಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು. ಆಗ ಮೋಶೆ, "ಇದೇನು ಆಶ್ಚರ್ಯ! ಪೊದೆ ಸುಟ್ಟುಹೋಗದೆ ಇರುವುದಕ್ಕೆ ಕಾರಣವೇನು? ನಾನು ಹತ್ತಿರ ಹೋಗಿ ತಿಳಿದುಕೊಳ್ಳುತ್ತೇನೆ" ಎಂದುಕೊಂಡನು. ಅದನ್ನು ನೋಡಲು ಅವನು ಮುಂದಕ್ಕೆ ಬರುವುದನ್ನು ಸರ್ವೇಶ್ವರಸ್ವಾಮಿ ಕಂಡರು. ಪೊದೆಯೊಳಗಿಂದ, "ಮೋಶೆ, ಮೋಶೆ," ಎಂದು ದೇವರು ಕರೆದರು. ಅದಕ್ಕವನು, ಇಗೋ, ಇದ್ದೇನೆ," ಎಂದು ಉತ್ತರಕೊಟ್ಟನು. ದೇವರು ಅವನಿಗೆ "ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರಭೂಮಿ," ಎಂದು ಹೇಳಿದರು. ಅದೂ ಅಲ್ಲದೆ, "ನಾನು ನಿನ್ನ ತಂದೆಯ ದೇವರು, ಇಸಾಕನ  ದೇವರು ಯಕೋಬನ ದೇವರು," ಎಂದರು. ಆಗ ಮೋಶೆ ದೇವರನ್ನು ದಿಟ್ಟಿಸಿ ನೋಡಲು ಭಯಪಟ್ಟು ಮುಖವನ್ನು ಮುಚ್ಚಿಕೊಂಡನು. ಆಗ ಸರ್ವೇಶ್ವರ, " ಈಜಿಪ್ಟ್ ನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ. ಆದಕಾರಣ ಅವರನ್ನು ಈಜಿಪ್ಟಿನವರ ಕೈಯಿಂದ ಬಿಡಿಸುವುದಕ್ಕೂ ಮತ್ತು ಆ ದೇಶದಿಂದ ಹೊರತಂದು ಹಾಲೂ ಜೇನೂ ಹರಿಯುವ ಸವಿಸ್ತಾರವಾದ ಒಳ್ಳೆಯ ನಾಡಿಗೆ, ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ, ಎಂದರು. ಮೋಶೆ ದೇವರಿಗೆ, "ನಾನು ಇಸ್ರಯೇಲರ ಬಳಿಗೆ ಹೋಗಿ, 'ನಿಮ್ಮ ಪೂರ್ವಜರ ದೇವರು ನನ್ನನ್ನು ನಿಮ್ಮ ಬಳಿಗೆ ಕಳಿಸಿದ್ದಾರೆ," ಎಂದು ಹೇಳಿದಾಗ ಅವರು ಒಂದು ವೇಳೆ, "ಆತನ ಹೆಸರೇನು?" ಎಂದು ನನ್ನನ್ನು ಕೇಳಿದರೆ ನಾನೇನು ಉತ್ತರ ಕೊಡಬೇಕು?" ಎಂದು ಕೇಳಿದನು. ಆಗ ದೇವರು ಹೀಗೆಂದರು. "ಇರುವವನಾಗಿ ಇರುವವನು ನಾನೇ; ನೀನು ಇಸ್ರಯೇಲರಿಗೆ 'ತಾನಾಗಿ ಇರುವವನು,’ ನನ್ನನ್ನ ನಿಮ್ಮ ಬಳಿಗೆ ಕಳಿಸಿದ್ದಾನೆ ಎಂದು ಹೇಳು," ದೇವರು ಮೋಶೆಗೆ ಮತ್ತೆ ಇಂತೆಂದರು: "ನೀನು ಇಸ್ರಯೇಲರಿಗೆ, "ನಿಮ್ಮ ಪೂರ್ವಜರಾದ ಅಬ್ರಹಾಮ , ಇಸಾಕ ಹಾಗು ಯಕೋಬರ ದೇವರಾಗಿರುವ ಸರ್ವೇಶ್ವರ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ" ಎಂದು ಹೇಳು. ಇದು ಸದಾಕಾಲಕ್ಕೂ ನನ್ನ ಹೆಸರು. ಈ ಹೆಸರಿನಿಂದಲೇ ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕು."

ಕೀರ್ತನೆ: 103:1-4, 6-8, 11
ಶ್ಲೋಕ: ಪ್ರಭು ಸಹನಶೀಲನು, ಪ್ರೀತಿಮಯನು.

ಎರಡನೇ ವಾಚನ: 1 ಕೊರಿಂಥಿಯರಿಗೆ : 10:1-6, 10-12

ಪ್ರಿಯ ಸಹೋದರರೇ, ನಮ್ಮ ಪೂರ್ವಜರಿಗೆ ಸಂಭವಿಸಿದವುಗಳತ್ತ ನಿಮ್ಮ ಗಮನವನ್ನು ಸೆಳೆಯಬೇಕೆಂದಿದ್ದೇನೆ ಅವರೆಲ್ಲರೂ ಮೋಡದ ನೆರಳಿನಲ್ಲಿಯೇ ನಡೆದರು. ಎಲ್ಲರೂ ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು. ಹೀಗೆ ಅವರು ಮೋಡದಲ್ಲಿಯೂ ಸಮುದ್ರದಲ್ಲಿಯೂ ಸ್ನಾನದೀಕ್ಷೆಯನ್ನು ಪಡೆದು ಮೋಶೆಗೆ ಶಿಷ್ಯರಾದರು. ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು; ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಆ ಬಂಡೆ. ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲಿ ಮಡಿದು ಮಣ್ಣುಪಾಲಾದರು. ಈ ಘಟಣೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು. ಅವರಲ್ಲಿ ಕೆಲವರು ಗೊಣಗುಟ್ಟಿದರು ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವು ಅವರಂತೆ ಗೊಣಗುಟ್ಟವರಾಗಬೇಡಿ. ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು. ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು.

ಶುಭಸಂದೇಶ: ಲೂಕ 13:1-9




























ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು, "ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ,? ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆ ಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ, ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸುತ್ತಿರೋ? ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ," ಎಂದರು. ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: " ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. ತೋಟಗಾರನನ್ನು ಕರೆದು, "ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ‌ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ  ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?" ಎಂದು ಹೇಳಿದ. ಅದಕ್ಕೆ ತೋಟಗಾರನು, "ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿತೆಗೆದು ಗೊಬ್ಬರ ಹಾಕುತ್ತೇನೆ, ಮುಂದಿನ ವರ್ಷ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ," ಎಂದನು,"

ಮನಸಿಗೊಂದಿಷ್ಟು : ದೇವರು ನಮಗೆ ನೀಡಿರುವ,  ವಿಸ್ತರಿಸಿರುವ ಅನುಗ್ರಹ ಹಾಗೂ ಕೃಪೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಂಜುರ ಮರಕ್ಕೆ ಸಿಕ್ಕ ಎಚ್ಚರಿಕೆ ನಮಗೂ ಸಿಗುತ್ತದೆ. ದೇವರ ಅನುಗ್ರಹ, ಪ್ರೀತಿಯ ಸಾರವನ್ನು  ಉಪಯೋಗಿಸಿಕೊಳ್ಳದೆ, ಉಪಯೋಗಿಸಿಯೂ ಫಲ ಕೊಡದೆ ಹೋದರೆ ನಮ್ಮ ಜೀವನ ವ್ಯರ್ಥವೇ ಸರಿ. ಈ ಲೋಕದ ಲೆಕ್ಕಚಾರದಲ್ಲಿ ನಾವು ಸ್ಥಿರವಾಗಿ ನಿಂತಿರುವೆವು ಎಂದು ಬೆನ್ನು ತಟ್ಟಿಕೊಳ್ಳದೆ ದೇವರ ಎದುರಿನಲ್ಲಿ ನಾವೆಷ್ಟು ಯೋಗ್ಯರು ಎಂಬುದನ್ನು ಯೋಚಿಸೋಣ. ಇಳ್ಳಿ ಮತ್ತೊಂದು ಸಂದೇಶವೂ ಇದೆ. ಜೀವನದಲ್ಲಿ ಕಷ್ಟ ಪಡುವವರು ದೇವರಿಂದ ಶಿಕ್ಷೆ ಪಡುತ್ತಿದ್ದಾರೆ ನಾವು ಭಾಗ್ಯವಂತರು ಎಂದು ಬೆನ್ನು ತಟ್ಟಿಕೊಳ್ಳಬೇಡಿ ಎಂಬ ಸಂದೇಶವನ್ನು ಸಹ ಯೇಸು ಸ್ವಾಮಿ ಸ್ಪಷ್ಟವಾಗಿ ನೀಡುತ್ತಿದ್ದಾರೆ.

ಪ್ರಶ್ನೆ : ದೇವರ ಪ್ರೀತಿ ಅನುಗ್ರಹ ನಮ್ಮಲ್ಲಿ ಎಷ್ಟು ಫಲ ನೀಡಿದೆ ?



 ತಪಸ್ಸು ಕಾಲದಲ್ಲಿನ ಇಲ್ಲಿಯವರೆಗಿನ ಪ್ರಶ್ನೆಗಳು 


 -   ತಪಸ್ಸು ಕಾಲದಲ್ಲಿ ನಮ್ಮ ಅಧ್ಯಾತ್ಮಿಕ ಗುರಿಗಳೇನು?

 -  ಶಿಲುಬೆ ಹೊತ್ತು ಹಿಂಬಾಲಿಸಲು ಸಿದ್ಧವಿದ್ದೇವೆಯೇ

 -  ದೇವರ ಮುಂದೆ ನಾವು ತೋರಬಹುದಾದ ಆಸ್ತಿಗಳಾವುವು

 -  ನಮಗೆ  ದೈವೀಕ ವೈದ್ಯನ ಅವಶ್ಯಕತೆಯಿದೆ ಎಂಬ ಅರಿವು ನಮಗಿದೆಯೇ?

 -  ನಾವಿಂದು ಯಾವುದೆಲ್ಲವುಗಳಿಂದ ಜೀವಿಸುತ್ತಿದ್ದೇವೆ?

 -  ನಮ್ಮ ಜೀವನದಲ್ಲಿ ಹಸಿದವರಿಗೆ ನಾವಾಗೇ ಹೋಗಿ ಊಟವಿತ್ತ ಉದಾಹರಣೆಗಳೆಷ್ಟು

 -  ನಮ್ಮ ಪ್ರಾರ್ಥನೆಯಲ್ಲಿ ನಿರರ್ಥಕ ಪದಗಳೆಷ್ಟುಸ್ವಾರ್ಥ ಬೇಡಿಕೆಗಳೆಷ್ಟು?

 -  ನಮ್ಮ ಹೃದಯವೂ ನೆನೆವೆ ನಗರದಂತಾಗಲು ಸಾಧ್ಯವಿಲ್ಲವೇ?

 -  ನಮಗಾಗಿ ನಾವು ಏನು ಅಪೇಕ್ಷಿಸುತ್ತೇವೆಯೋ ಅದನ್ನು ಇತರರಿಗೂ ಬಯಸುತ್ತಿದ್ದೇವೆಯೇ?

 -  ನಾವು ಮತ್ತೊಬ್ಬರನ್ನು ತುಚ್ಛೀಕರಿಸಿದ ಸಂದರ್ಭಗಳ ಲೆಕ್ಕ ನಮ್ಮಲ್ಲಿದೆಯೇ?   

-ನಾವು ಯೇಸುವಿಗೆ ಸ್ವಂತ ಜನರಾಗಿದ್ದೇವೆಯೇ ಅಥವಾ ಇನ್ನೂ ಅನ್ಯರಾಗೇ ಉಳಿದಿದ್ದೇವೆಯೇ?

-ಯೇಸುವಿನ ಈ ರೂಪಾಂತರದ ಘಟನೆ ನಮ್ಮೊಳಗಿನ ರೂಪಾಂತರಕ್ಕೆ ಸ್ಪೂರ್ತಿಯಾಗಬಲ್ಲದೇ?

                           -ದಾಸನಾಗಿರು’ ಎಂಬ ಯೇಸುವಿನ ವಾಕ್ಯಕ್ಕೆ ನಾವೆಷ್ಟು ಬದ್ಧ?  

- ನಮ್ಮ ಬದುಕಿನ ಅಡಿಪಾಯ ಯಾವುದುದೈವ ನಂಬಿಕೆಯೇಲೌಕಿಕ ಗಳಿಕೆಯೇ?


- ದೇವರಿಂದ ನಮ್ಮ ಲೌಕೀಕ ಜೀವನ ಎಷ್ಟು ದೂರಾ ಸಾಗಿದೆ?





 :: 

22.03.25 - ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು

ಮೊದಲನೆಯ ವಾಚನ : ಮೀಕ 7:14-15, 18-20


ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ. ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.

ಕೀರ್ತನೆ: 103:1-4, 9-12, 21

ಶ್ಲೋಕ : ಪ್ರಭು ದಯಾಳು, ಕೃಪಾಪೂರ್ಣನು I ಸಹನಶೀಲನು, ಪ್ರೀತಿಮಯನು II

ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ನನ್ನ ಅಂತರಂಗವೇ, ಭಜಿಸು ಆತನನು I
ನೆನೆ ಆತನ ಪರಮಪಾವನ ನಾಮವನು II

ಭಜಿಸು ನನ್ನ ಮನವೇ, ಭಜಿಸು ಪ್ರಭುವನು I

ಮರೆಯದಿರು ಆತನ ಉಪಕಾರಗಳೊಂದನು II
ಮನ್ನಿಸುವನಾತ ನನ್ನ ದೋಷಗಳನು I
ವಾಸಿಮಾಡುವನು ನನ್ನ ರೋಗಗಳನು II

ಉಳಿಸುವನು ಪಾತಾಳದ ಕೂಪದಿಂದ ನನ್ನನು I
ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು II
ಆತನು ಸದಾ ತಪ್ಪು ಹುಡುಕುವವನಲ್ಲ I
ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ I|

ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ I
ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ II
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ I
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ II

ಪಡುವಣದಿಂದ ಮೂಡಣವೆಷ್ಟೋ ದೂರ I
ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ II

ಶುಭಸಂದೇಶ : ಲೂಕ  15:1-3, 11-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು. ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು, ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲುಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟು ದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ. ತಂದೆಯಾದರೋ ಆಳುಗಳನ್ನು ಕರೆದು, 'ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. ‘ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ. “ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ. ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ; ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೆ?’ ಎಂದನು.”

ಮನಸ್ಸಿಗೊಂದಿಷ್ಟು : ರಾಜನ ಮಗನೊಬ್ಬ ತನ್ನ ತಂದೆಯನ್ನು, ಅರಮನೆಯನ್ನು ಬಿಟ್ಟು ದೂರ ಹೋಗಿದ್ದ. ಒಂದಷ್ಟು ದಿನಗಳ ಬಳಿಕ ಮತ್ತೆ ಮನೆಗೆ ಹಿಂತಿರುಗಬೇಕು ಎನಿಸುತ್ತದೆ. ಆದರೆ ತಂದೆಯನ್ನು ಎದುರಿಸಲು ನಾಚಿಕೆಯಾಗಿ ಹಿಂಜರಿಯುತ್ತಾನೆ. ಇದನ್ನು ತಿಳಿದುಕೊಂಡ ರಾಜ ತನ್ನ ದೂತನ ಮೂಲಕ ಹೇಳಿ ಕಳುಹಿಸುತ್ತಾನೆ.  "ಅರ್ಧ ದಾರಿ ಅವನು ಬರಲಿ, ನಾನು ಇನ್ನೂ ಅರ್ಧ ದಾರಿ ಹೋಗಿ ಬರ ಮಾಡಿಕೊಳ್ಳುತ್ತೇನೆ. 

ದೇವರು ನಾವು ನಮ್ಮ ಪಾಪಗಳನ್ನು ಬಿಟ್ಟು ಹಿಂದಿರುಗುವಾಗ ಮತ್ತೆ ಒಪ್ಪಿಕೊಳ್ಳಲು ಸದಾ ಸಿದ್ಧರಿದ್ದಾರೆ. ನಾವು ಮನಸ್ಸು ಮಾಡಬೇಕಷ್ಟೆ. 

"ಕರುಣೆ ದುಂದುಗಾರ ಮಗನಿಗೆ ಮತ್ತೆ ಅವಕಾಶ ನೀಡಿತು. ಕೃಪೆ ಅವನ ಮರುಳುವಿಕೆಗೆ ಔತಣ ಏರ್ಪಡಿಸಿತು" ಎನ್ನುತ್ತಾರೆ ಮ್ಯಾಕ್ಸ್ ಲೂಸುಡೋ.  ಆ ಅಗಾಧ ಕೃಪೆಗೆ ಧನ್ಯರಾಗೋಣ