ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.08.23 - "ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು"

ಮೊದಲನೇ ವಾಚನ: ರೂತ 1:1, 3-6, 14-16, 22


ಇಸ್ರಯೇಲ್ ನಾಡಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದಾಗ, ಒಮ್ಮೆ ಕಠಿಣವಾದ ಬರಗಾಲವು ತಲೆದೋರಿತು. ಈ ಕಾರಣ ಜುದೇಯ ಪ್ರಾಂತ್ಯದ ಬೆತ್ಲೆಹೇಮ್ ಎಂಬ ಊರಿನವನಾದ ಎಲಿಮಲೆಕ್ ಎಂಬುವವನು ತನ್ನ ಪತ್ನಿ ಮತ್ತು ಪುತ್ರರಿಬ್ಬರನ್ನು ಕರೆದುಕೊಂಡು ಮೋವಾಬ್ ಎಂಬ ನಾಡಿಗೆ ವಲಸೆ ಹೋದನು. ಇವರು ಮೋವಾಬ್ ನಾಡಿನಲ್ಲಿ ವಾಸಿಸುತ್ತಿದ್ದಾಗ ಎಲಿಮಲೆಕನು ಮರಣ ಹೊಂದಿದನು. ವಿಧವೆಯಾದ ನವೊಮಿಇಬ್ಬರು ಗಂಡು ಮಕ್ಕಳೊಡನೆ ಅಲ್ಲೇ ಉಳಿದಳು. ಹುಡುಗರು ಇಬ್ಬರೂ, ಮೋವಾಬ್ಯ ಹುಡುಗಿಯರನ್ನು ವಿವಾಹವಾದರು. ಒಬ್ಬಳ ಹೆಸರು ಒರ್ಫಾ ಮತ್ತು ಇನ್ನೊಬ್ಬಳು ರೂತ್. ಅವರು ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ವಾಸಮಾಡಿದ ನಂತರ, ಪುತ್ರರಾದ ಮಹ್ಲೋನ್ ಮತ್ತು ಕಿಲ್ಯೋನ್ ಸಹ ತೀರಿಹೋದರು. ಹೀಗೆ ನವೊಮಿ ತನ್ನ ಪತಿಯನ್ನೂ ಇಬ್ಬರು ಪುತ್ರರನ್ನೂ ಕಳೆದುಕೊಂಡು ಒಬ್ಬಂಟಿಗಳಾದಳು. ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ತನ್ನ ನಾಡಿನಲ್ಲಿ ಒಳ್ಳೆಯ ಮಳೆ ಬೆಳೆಗಳಾಗಿವೆ ಎಂಬ ಸಮಾಚಾರ ಮೋವಾಬ್ ನಾಡಿನಲ್ಲಿದ್ದ ನವೊಮಿಗೆ ತಿಳಿದುಬಂತು. ಒರ್ಫಾ ಅತ್ತೆಗೆ ಮುತ್ತಿಟ್ಟು ತನ್ನ ಮನೆಗೆ ಹಿಂದಿರುಗಿ ಹೋದಳು. ರೂತಳು ಮಾತ್ರ ಅತ್ತೆಯನ್ನು ಬಿಟ್ಟುಹೋಗಲಿಲ್ಲ. ಆಗ ನವೊಮಿ ರೂತಳಿಗೆ: "ನೋಡು, ನಿನ್ನ ಓರಗಿತ್ತಿಯ ತನ್ನ ಜನಾಂಗದವರ ಬಳಿಗೂ ತನ್ನ ಕುಲದೇವರ ಬಳಿಗೂ ಹಿಂದಿರುಗಿ ಹೋಗಿದ್ದಾಳೆ. ನೀನೂ ಅವಳಂತೆಯೇ ಹೋಗಿಬಿಡು," ಎಂದು ಒತ್ತಾಯಪಡಿಸಿದಳು. ಅದಕ್ಕೆ ರೂತಳು; "ನಿಮ್ಮನ್ನು ಬಿಟ್ಟು ಹೋಗುವಂತೆ ಒತ್ತಾಯಪಡಿಸಬೇಡಿ. ನೀವು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುತ್ತೇನೆ. ನೀವು ಎಲ್ಲಿ ವಾಸಿಸಿದರೂ ನಾನೂ ಅಲ್ಲೇ ವಾಸಿಸುತ್ತೇನೆ." ಎಂದಳು. ಹೀಗೆ ನವೊಮಿ ತನ್ನ ಮೋವಾಬ್ಯ ಸೊಸೆಯಾದ ರೂತಳ ಸಂಗಡ ಬೆತ್ಲೆಹೇಮಿಗೆ ಬಂದಳು. ಆಗ ಜವೆಗೋದಿಯ ಸುಗ್ಗಿ ಪ್ರಾರಂಭವಾಗಿತ್ತು.

ಕೀರ್ತನೆ: 146:5-6, 6-7, 8-9, 9-10
ಶ್ಲೋಕ: ಎನ್ನ ಮನವೇ, ವಂದಿಸು ಪ್ರಭುವನು

ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು
ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು
ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೇ
ಕೊಟ್ಟ ವಾಗ್ಧಾನಗಳನು ತಪ್ಪದೆ ನೆರವೇರಿಸುವವ ಆತನೆ

ದೊರಕಿಸುವನು ನ್ಯಾಯ ದಲಿತರಿಗೆ
ಓದಗಿಸುವನು ಆಹಾರ ಹಸಿದವರಿಗೆ
ನೀಡುವನು ಬಿಡುಗಡೆ ಬಂಧಿತರಿಗೆ

ಕಣ್ಣನ್ನೀಯುವನು ಪ್ರಭು ಕುರಡರಿಗೆ
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ
ರಕ್ಷಿಸುವನು ಪ್ರಭು ಪರದೇಶಿಗಳನು
ಆದರಿಸುವನು ಅನಾಥರನು, ವಿಧವೆಯರನು

ಆತನ ಒಲವಿರುವುದು ಸಾದು ಸಜ್ಜನರಿಗೆ
ನಿರ್ಮೂಲಮಾಡುವನು ದುರ್ಜನರ ಮಾರ್ಗವನು
ಪ್ರಭುವೇ ಅರಸನು ಸದಾಕಾಲಕು
ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು

ಶುಭಸಂದೇಶ: ಮತ್ತಾಯ 22:34-40


ಯೇಸುಸ್ವಾಮಿ ಸದ್ದುಕಾಯರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು.  ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು: "ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?" ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ  ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು." ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ, ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, "ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು." ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ," ಎಂದರು.

No comments:

Post a Comment