ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.08.23 - "ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,"

ಮೊದಲನೇ ವಾಚನ: ಯೆಹೋಶುವ  24:1-13


ಯೆಹೋಶುವನು ಎಲ್ಲ ಇಸ್ರಯೇಲ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ನಾಯಕರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಉಪಸ್ಥಿತರಾದರು. ಯೆಹೋಶುವ ಅವರೆಲ್ಲರನ್ನು  ಉದ್ದೇಶಿಸಿ: "ಅಬ್ರಹಾಮ್, ನಾಹೊರ್ ಎಂಬುವರ ತಂದೆಯಾದ ತೆಹರ ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಿದ್ದರು. ಅನ್ಯ ದೇವತೆಗಳನ್ನು ಪೂಜಿಸುತ್ತಿದ್ದರು. ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆ ತಂದು, ಕಾನಾನ್ ನಾಡಿನಲ್ಲೆಲ್ಲಾ ಸಂಚಾರ ಮಾಡಿಸಿದೆ. ಇಸಾಕನೆಂಬ ಮಗನನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆ. ಇಸಾಕನಿಗೆ ಯಾಕೋಬ್ ಮತ್ತು ಏಸಾವ್ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿದೆ ಏಸಾವನಿಗೆ ಸೇಯೀರ್ ಬೆಟ್ಟವನ್ನು ಸ್ವಂತ ಸೊತ್ತಾಗಿ ದಯಪಾಲಿಸಿದೆ. ಯಕೋಬನಾದರೋ ತನ್ನ ಮಕ್ಕಳ ಸಮೇತ ಈಜಿಪ್ಟ್ ದೇಶಕ್ಕೆ ಹೋದ  ಬಳಿಕ ನಾನು ಮೋಶೆ ಹಾಗೂ ಆರೋನರನ್ನು ಕಳಿಸಿ, ಆ ಈಜಿಪ್ಟಿನಲ್ಲಿ ಅನೇಕ ಅದ್ಬುತ ಕಾರ್ಯಗಳನ್ನು ನಡೆಸಿ, ಆ ಜನರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆ ತಂದೆ. ನಿಮ್ಮ ಪೂರ್ವಜರು ಈಜಿಪ್ಟಿನಿಂದ ಬಿಡುಗಡೆಯಾಗಿ ಕೆಂಪು ಸಮುದ್ರಕ್ಕೆ ಬರುತ್ತಾ ಇರುವಾಗ ಈಜಿಪ್ಟಿನವರ ರಥಾಶ್ವಬಲಗಳ ಸಹಿತ  ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿ ಬಂದರು. ಆಗ ನಮ್ಮ ಪೂರ್ವಜರು ನನಗೆ ಮೊರೆಯಿಟ್ಟರು. ನಾನು ಅವರಿಗೂ ಈಜಿಪ್ಟಿನವರಿಗೂ ಮಧ್ಯೆ ಕಾರ್ಗತ್ತಲೆಯನ್ನು ಉಂಟುಮಾಡಿದೆ. ಇದಲ್ಲದೆ ಈಜಿಪ್ಟಿನವರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆ. ನಾನು ಈಜಿಪ್ಟಿನಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವೇ ಸಾಕ್ಷಿಗಳು. ನೀವು ದೀರ್ಘಕಾಲ ಮರುಭೂಮಿಯಲ್ಲಿದ್ದಿರಿ. ಆನಂತರ ನಿಮ್ಮನ್ನು ಜೋರ್ಡಾನಿನ ಆಚೆ ಅಮೋರಿಯರ ನಾಡಿಗೆ ಕರೆತಂದೆ. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈ ವಶ ಮಾಡಿದೆ. ನೀವು ಅವರ ನಾಡನ್ನು ಸ್ವತಂತ್ರಿಸಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ನಾಶ ಮಾಡಿದೆ. ಆಮೇಲೆ ಮೊವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ  ಬಾಲಾಕನು ಇಸ್ರಯೇಲರಾದ ನಿಮ್ಮ ವಿರುದ್ಧ ಯುದ್ಧ ಮಾಡಲು ಎದ್ದ. ನಿಮ್ಮನ್ನು ಶಪಿಸಲು ಬೆಯೋರನ ಮಗ ಬಿಳಾಮನಿಗೆ ಕರೆ ಕಳುಹಿಸಿದ. ಆದರೆ ನಾನು ಆ ಬಿಳಾಮನಿಗೆ ಸಮ್ಮತಿ ಕೊಡಲಿಲ್ಲವಾದ್ದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆ. ನೀವು ಜೋರ್ಡಾನನ್ನು ದಾಟಿ ಜೆರಿಕೋವಿಗೆ ಬಂದಿರಿ. ಆಗ ಜೆರಿಕೋವಿನವರು, ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷ್ಟಿಯರು, ಹಿವ್ವಿಯರು ಹಾಗೂ ಯೆಬೂಸಿಯರು ಇವರೆಲ್ಲರೂ ನಿಮಗೆ ವಿರುದ್ಧ ಯುದ್ಧಕ್ಕೆ ಬಂದರು. ನಾನು ಅವರೆಲ್ಲರನ್ನು ನಿಮ್ಮ ಕೈವಶ ಮಾಡಿದೆ. ಇದಲ್ಲದೆ ಕಣಜದ ಹುಳುಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆ. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿಬಿಲ್ಲುಗಳಿಂದ ಆದುದಲ್ಲ. ನೀವು ಕೃಷಿಮಾಡದ, ಬೆಳೆ ತುಂಬಿದ ಭೂಮಿಯನ್ನು ನಿಮಗೆ ಕೊಟ್ಟೆ. ನೀವು ಕಟ್ಟದ ನಗರಗಳಲ್ಲಿ ವಾಸಮಾಡುತ್ತಿದ್ದೀರಿ. ನೀವು ನೆಟ್ಟು ಬೆಳಸದ ದ್ರಾಕ್ಷಿ ಹಾಗೂ ಎಣ್ಣೆಮರಗಳ ತೋಟಗಳನ್ನು ಅನುಭವಿಸುತ್ತಿದ್ದೀರಿ."

ಕೀರ್ತನೆ: 136:1-3, 16-18, 21-22, 24
ಶ್ಲೋಕ: ಪ್ರಭುವಿನ ಪ್ರೀತಿ ಶಾಶ್ವತ

ಒಳ್ಳೆಯವನಾದ ಪ್ರಭುವಿಗೆ ಧನ್ಯವಾದ
ದೇವಾಧಿದೇವನಿಗೆ ಧನ್ಯವಾದ
ಮಹೋನ್ನತ ಪ್ರಭುವಿಗೆ ಧನ್ಯವಾದ
ಆತನ ಪ್ರೀತಿ ಶಾಶ್ವತ

ತನ್ನ ಪ್ರಜೆಯನು ಅರಣ್ಯ ಮಾರ್ಗವಾಗಿ ಕರೆತಂದವನಿಗೆ ಧನ್ಯವಾದ
ಬಲವಂತ ರಾಜರನು ಉರುಳಿಸಿದಾತನಿಗೆ ಧನ್ಯವಾದ
ಪ್ರಖ್ಯಾತ ರಾಜರನು ಸಂಹರಿಸಿದಾತನಿಗೆ ಧನ್ಯವಾದ
ಅವರ ನಾಡನು ಇಸ್ರಯೇಲರಿಗೆ ಕೊಟ್ಟಾತನಿಗೆ ಧನ್ಯವಾದ

ಅದನ್ನು ದಾಸರಾದ ನಮಗೆ ಸೊತ್ತಾಗಿ ನೀಡಿದಾತನಿಗೆ ಧನ್ಯವಾದ
ಶತ್ರು ಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ ಧನ್ಯವಾದ

ಶುಭಸಂದೇಶ: ಮತ್ತಾಯ 19:3-12


ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, "ಯಾವುದಾದರು ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡು ಹೆಣ್ಣಾಗಿ ಉಂಟು ಮಾಡಿದರು ಎಂದೂ, ಈ ಕಾರಣದಿಂದಲೇ ಗಂಡನು ತಂದೆ ತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು ಎಂದೂ ಹೇಳಿದ್ದಾರೆಂಬುದಾಗಿ ನೀವು  ಪವಿತ್ರಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ," ಎಂದರು. "ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?" ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. "ನಿಮ್ಮ ಹೆಂಡತಿಯನ್ನು ನೀವು ಬಿಟ್ಟು ಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ: ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ." ಶಿಷ್ಯರು ಆಗ, "ಸತಿ ಪತಿಯರ ಸಂಬಂಧ ಈ  ರೀತಿ ಇರುವುದಾದರೆ, ಮದುವೆ ಮಾಡಿಕೊಳ್ಳದಿರುವುದೇ ಲೇಸು," ಎಂದರು. ಅದಕ್ಕೆ ಯೇಸು, "ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ: ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ; ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,"ಎಂದರು.

No comments:

Post a Comment