ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.09.23 - ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,”

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 20:7-9


ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ. ನನ್ನ ಮಾತೆಲ್ಲ ಅರಚಾಟ ‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ. ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ. ‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು, ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆ ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ. ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ.

ಕೀರ್ತನೆ: 63:2, 3-4, 5-6, 8-9

ಕೀರ್ತನೆ                 63:1-8

ಶ್ಲೋಕ:  ದೇವಾ,  ನಿನಗಾಗಿ  ಎನ್ನ  ಮನ  ಕಾದಿದೆ |

1.  ದೇವಾ,  ನೀಯೆನ್ನ  ದೇವ,  ನಿನಗಾಗಿ  ನಾ  ಕಾದಿರುವೆ|
ನಿರ್ಜಲ  ಮರುಭೂಮಿಯಲ್ಲಿ  ನೀರಿಗಾಗಿ  ಹಾತೊರೆವಂತೆ|
ನಿನಗೋಸ್ಕರ  ಎನ್ನ  ತನು  ಸೊರಗಿದೆ,  ಮನ  ಬಾಯಾರಿದೆ||

2.  ನಿನ್ನ  ಮಂದಿರದಲಿ  ನನಗಾದ  ದರ್ಶನದಲಿ|
ನಿನ್ನ  ಶಕ್ತಿ  ಪ್ರತಿಭೆಯನ್ನು  ಕಂಡಿರುವೆನಲ್ಲಿ||
ಪ್ರಾಣಕ್ಕಿಂತಲೂ  ಮಿಗಿಲಾದುದು  ನಿನ್ನಚಲ  ಪ್ರೀತಿ|
ಎಡೆಬಿಡದೆ  ಮಾಳ್ವದು  ನನ್ನೀ  ತುಟಿ  ನಿನ್ನ  ಸ್ತುತಿ||

3.  ನಿನ್ನ  ಸ್ತುತಿಸುವೆ  ಜೀವಮಾನ  ಪರಿಯಂತ|
ಕೈಮುಗಿವೆ  ನಿನ್ನ  ನಾಮದ  ಸ್ಮರಣಾರ್ಥ||
ಮೃಷ್ಟಾನ್ನ  ತಿಂದಂತೆ  ಎನ್ನ  ಮನ  ಸಂತೃಪ್ತ|
ಸಂಭ್ರಮದಿಂದ  ನಿನ್ನ  ಹೊಗಳುವುದು ಬಾಯ್ತುಂಬ||

4.  ನನಗೆ  ನೀನು  ನಿರಂತರದ  ಸಹಾಯಕ|
ನಿನ್ನ  ರೆಕ್ಕೆಗಳಡಿ  ನಾ  ಸುಖಿ  ಗಾಯಕ||
ನನ್ನಾತ್ಮ  ನಿನಗಾತುಕೊಂಡಿದೆ|
ನಿನ್ನ  ಬಲಗೈ  ನನಗಿಂಬಾಗಿದೆ||

ಎರಡನೇ ವಾಚನ: ರೋಮನರಿಗೆ 12:1-2


ಸಹೋದರರೇ, ದೇವರ ಅಪಾರ ಕೃಪೆಯನ್ನು ನಿಮ್ಮ ನೆನಪಿಗೆ ತಂದು ನಾನು ಬೇಡಿಕೊಳ್ಳುವುದೇನೆಂದರೆ: ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವವಾದ ಬಲಿಯಾಗಿ ಸಮರ್ಪಿಸಿಕೊಳ್ಳಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ. 2ಇಹಲೋಕದ ಆಚಾರವಿಚಾರಗಳಿಗೆ ಮಾರುಹೋಗಬೇಡಿ. ಬದಲಿಗೆ, ಮಾನಸಾಂತರಗೊಂಡು ನೂತನ ಜೀವಿಗಳಾಗಿ ಬಾಳಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಉನ್ನತವಾದುದು, ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.

ಶುಭಸಂದೇಶ: ಮತ್ತಾಯ 16:21-27


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾಪ್ರಮುಖರಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು.  ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, “ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ,” ಎಂದು ಪ್ರತಿಭಟಿಸಿದನು. ಆದರೆ ಯೇಸು ಪೇತ್ರನತ್ತ ತಿರುಗಿ, “ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ,” ಎಂದರು. ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.  ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?  ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.

No comments:

Post a Comment