ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.07.23

ಮೊದಲನೇ ವಾಚನ: ಆದಿಕಾಂಡ 18: 1-15

ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರ ಸ್ವಾಮಿಯ ದರ್ಶನವಾಯಿತು. ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ, ಸ್ವಾವಿೂ, ದಯವಿರಲಿ, ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿ. ನೀರು ತರಿಸಿಕೊಡುತ್ತೇನೆ. ಕಾಲು ತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ. ಸ್ವಲ್ಪ ಆಹಾರ ತರುತ್ತೇನೆ. ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತಿದ್ದೀರಲ್ಲವೆ?” ಎನ್ನಲು ಅವರು “ನೀನು ಹೇಳಿದಂತೆಯೇ ಆಗಲಿ,” ಎಂದರು. ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿ ಆಕೆಗೆ, “ಹಸನಾದ ಮೂರು ಸೇರುಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು,” ಎಂದನು. ಅನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆಮಾಡಿದನು. ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗೂ ಅಟ್ಟಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡಿ ಮುಗಿಸುವವರೆಗೂ ಅವನೇ ಹತ್ತಿರ ನಿಂತು ಉಪಚಾರ ಮಾಡಿದನು. ಬಳಿಕ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಆ ಅತಿಥಿಗಳು ವಿಚಾರಿಸಿದಾಗ, “ಅಲ್ಲಿ ಗುಡಾರದಲ್ಲಿದ್ದಾಳೆ,” ಎಂದು ಉತ್ತರಕೊಟ್ಟನು. ಆಗ ಸರ್ವೇಶ್ವರಸ್ವಾಮಿ, “ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಳಿಗೆ ಮಗನಿರುತ್ತಾನೆ,” ಎಂದರು. ಈ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿದ್ದಿತು. ಅಬ್ರಹಾಮನು ಮತ್ತು ಸಾರಳು ಬಹುವೃದ್ಧರಾಗಿದ್ದರು; ಸಾರಳಿಗೆ ಮುಟ್ಟು ನಿಂತು ಹೋಗಿತ್ತು. ಎಂತಲೇ ಆಕೆ, “ನನ್ನಂಥ ಮುದುಕಿಗೆ ಸಂಭೋಗ ಸಾಧ್ಯವೆ? ನನ್ನ ಯಜಮಾನರೂ ಮುದುಕರಲ್ಲವೆ?” ಎಂದುಕೊಂಡು ನಕ್ಕಳು. ಅಬ್ರಹಾಮನಿಗೆ, ಸರ್ವೇಶ್ವರ “ಸಾರಳು ತಾನು ಮುದುಕಿಯಾದ ಕಾರಣ ಹೆರಲು ಸಾಧ್ಯವೆ’ ಎಂದು ನಕ್ಕಿದ್ದು ಏಕೆ? ಸರ್ವೇಶ್ವರನಿಗೆ ಅಸಾಧ್ಯವಾದುದು ಯಾವುದು? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುತ್ತಾನೆ” ಎಂದು ಹೇಳಿದರು. ಆಗ ಸಾರಳು ಭಯದಿಂದ, “ನಾನು ನಗಲಿಲ್ಲ” ಎಂದು ನಿರಾಕರಿಸಿದಳು. ಸರ್ವೇಶ್ವರ, “ಹಾಗನ್ನಬೇಡಮ್ಮಾ, ನೀನು ನಕ್ಕದ್ದು ನಿಜ,” ಎಂದರು.

ಕೀರ್ತನೆ: 1:46-47, 48-49, 50, 53, 54-55
ಶ್ಲೋಕ: ಮರೆಯಲಿಲ್ಲ ಪ್ರಭು ಕರುಣೆತೋರಲು. 

ಆಗ ಹೀಗೆಂದು ಮರಿಯಳು ಹೊಗಳಿದಳು:
“ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ I
ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ II
ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ I

ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ II
ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ I
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ II
ಆತನಲ್ಲಿ ಭಯಭಕ್ತಿಯುಳ್ಳವರಿಗೆ I

ಆತನ ಪ್ರೀತಿ ತಲತಲಾಂತರದವರೆಗೆ II
ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ I
ಹೊರದೂಡಿರುವನು ಸಿರಿವಂತರನು ಬರೀಗೈಯಲಿ II
ನೆರವಾದನು ತನ್ನ ದಾಸ ಇಸ್ರಯೇಲನಿಗೆ I

ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ II
ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ I
ಅವನ ಸಂತತಿಗೆ, ಯುಗಯುಗಾಂತರದವರೆಗೆ II

ಶುಭಸಂದೇಶ: ಮತ್ತಾಯ 8:5-17

ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು. ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ," ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!" ಅನಂತರ ಯೇಸು ಆ ಶತಾಧಿಪತಿಗೆ, "ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು," ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು. ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. ಯೇಸು ಆಕೆಯ ಕೈ ಮುಟ್ಟಿದುದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು.

No comments:

Post a Comment