ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.06.23 - "ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು"

ಮೊದಲನೇ ವಾಚನ: 2 ಕೊರಿಂಥಿಯರಿಗೆ 6: 1-10

ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ “ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ. ನಮ್ಮ ಸೇವಾಕಾರ್ಯವು ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಯಾವ ತೆರನಾದ ಅಡ್ಡಿಯನ್ನೂ ಒಡ್ಡಲಿಲ್ಲ. ಬದಲಿಗೆ, ಎಲ್ಲ ವಿಷಯಗಳಲ್ಲೂ ದೇವರ ದಾಸರೆಂದು ತೋರಿಸಿಕೊಳ್ಳುತ್ತೇವೆ. ಕಷ್ಟ ಸಂಕಟಗಳಲ್ಲೂ ದುಃಖದುರಿತಗಳಲ್ಲೂ ತಾಳ್ಮೆಯಿಂದ ವರ್ತಿಸಿದ್ದೇವೆ. ಏಟು ಪೆಟ್ಟುಗಳನ್ನು ತಿಂದಿದ್ದೇವೆ, ಸೆರೆಮನೆವಾಸ ಅನುಭವಿಸಿದ್ದೇವೆ, ಕೋಪಕ್ರಾಂತಿಗಳಿಗೆ ಗುರಿಯಾಗಿದ್ದೇವೆ, ಮೈಮುರಿಯೆ ದುಡಿದಿದ್ದೇವೆ, ನಿದ್ದೆಗೆಟ್ಟು ಬಳಲಿದ್ದೇವೆ, ಊಟವಿಲ್ಲದೆ ಸೊರಗಿದ್ದೇವೆ. ನಿರ್ಮಲ ಮನಸ್ಸು, ಸನ್ಮತಿ, ಸಹನೆ, ಸದಯತೆಯಿಂದಲೂ, ಪವಿತ್ರಾತ್ಮ, ನಿಷ್ಕಪಟ ಪ್ರೇಮ, ಸತ್ಯೋಕ್ತಿ, ದೈವಶಕ್ತಿ ಇವುಗಳಿಂದಲೂ ನಾವು ದೇವರ ದಾಸರೆಂದು ತೋರ್ಪಡಿಸುತ್ತೇವೆ. ರಕ್ಷಿಸಲೂ ಎದುರಿಸಲೂ ಧರ್ಮವೆಂಬ ಆಯುಧವನ್ನು ಕೈಯಲ್ಲಿ ಹಿಡಿದಿದ್ದೇವೆ. ಮಾನ-ಅವಮಾನ, ಕೀರ್ತಿ-ಅಪಕೀರ್ತಿ ಎರಡನ್ನೂ ಅನುಭವಿಸುತ್ತಿದ್ದೇವೆ. ಸತ್ಯವಾದಿಗಳು ನಾವಾದರೂ ಮಿಥ್ಯವಾದಿಗಳು ಎಂದೆನಿಸಿಕೊಂಡಿದ್ದೇವೆ. ಪ್ರಖ್ಯಾತರಾಗಿದ್ದರೂ ಖ್ಯಾತಿರಹಿತರಾಗಿದ್ದೇವೆ. ಬದುಕಿದ್ದರೂ ಸತ್ತವರೆನಿಸಿಕೊಂಡಿದ್ದೇವೆ. ಶಿಕ್ಷೆಗೆ ಗುರಿಯಾಗಿದ್ದರೂ ಇನ್ನೂ ಕೊಲೆಗೆ ಈಡಾಗದೆ ಇದ್ದೇವೆ. ದುಃಖಪಡುತ್ತಿದ್ದರೂ ಸದಾ ಸಂತೋಷದಿಂದ ಇದ್ದೇವೆ. ದರಿದ್ರರಾಗಿದ್ದರೂ ಅನೇಕರನ್ನು ಧನವಂತರನ್ನಾಗಿಸುತ್ತಿದ್ದೇವೆ; ನಾವು ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಂತೆ ಇದ್ದೇವೆ.

ಕೀರ್ತನೆ: 98:1-4
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು
ಎಸಗಿಹನಾತನು ಪವಾಡಕಾರ್ಯಗಳನು
ಗಳಿಸಿತಾತನ ಕೈ ಪೂತಭುಜ ಗೆಲುವನು. ಶ್ಲೋಕ

ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿ ವಿಧಾನವನು
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು. ಶ್ಲೋಕ

ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ
ನಮ್ಮ ದೇವ ಸಾಧಿಸಿದ ಜಯಗಳಿಕೆ
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ ಶ್ಲೋಕ

ಶುಭಸಂದೇಶ: ಮತ್ತಾಯ 5: 38-42


ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು" ಎಂಬುದನ್ನು ನೀವು ಕೇಳಿದ್ದೀರಿ. ಆದರೆ ನನ್ನ ಬೋಧೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು. ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು. ಯಾರಾದರೂ ಒಂದು ಕಿಲೊವಿೂಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊವಿೂಟರ್ ಹೋಗು; ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ."

No comments:

Post a Comment