16.06.23 - ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು. ಪ್ರವೇಶಿಸಲಾರಿರಿ

ಮೊದಲನೆಯ  ವಾಚನ : ಪೌಲನು  ಕೊರಿಂಥಿಯರಿಗೆ  ಬರೆದ  ಎರಡನೆಯ  ಪತ್ರದಿಂದ  ವಾಚನ 3:15-4:1, 3-6


" ಹೌದು,  ಮೋಶೆ  ಬರೆದುದನ್ನು  ಓದುವಾಗಲೆಲ್ಲಾ  ಅವರ  ಮನಸ್ಸು   ಇಂದಿಗೂ  ಅದೇ  ಮುಸುಕಿನಿಂದ  ಮುಚ್ಚಿದೆ.  ಪ್ರಭುವಿಗೆ  ಅಭಿಮುಖರಾದಾಗ  ಮಾತ್ರ  ಆ  ಮುಸುಕನ್ನು  ತೆಗೆಯಲಾಗುತ್ತದೆ.  ' ಈ  ವಾಕ್ಯದಲ್ಲಿ,  'ಪ್ರಭು'  ಎಂದರೆ  ದೇವರ  ಆತ್ಮವೇ.  ಪ್ರಭುವಿನ  ಆತ್ಮ  ಎಲ್ಲಿದೆಯೋ  ಅಲ್ಲಿ  ವಿಮೋಚನೆಯೂ  ಇದೆ.  ಮುಸುಕು  ತೆರೆದ  ಮುಖವುಳ್ಳ  ನಾವೆಲ್ಲರೂ  ಪ್ರಭುವಿನ ಮಹಿಮೆಯನ್ನು  ಪ್ರತಿಬಿಂಬಿಸುವ  ಕನ್ನಡಿಯಂತೆ  ಇದ್ದೇವೆ.  ಆ  ಪ್ರಭುವಿನಿಂದ  ಹೊರಹೊಮ್ಮುವ   ಮಹಿಮೆ  ನಮ್ಮನ್ನು  ಅಧಿಕಾಧಿಕವಾಗಿ  ಮಾರ್ಪಡಿಸಿ  ಅವರನ್ನೆ  ಹೋಲುವಂತೆ  ಮಾಡುತ್ತದೆ.  ಇದೆಲ್ಲಾ  ದೇವರಾತ್ಮವಾಗೀರುವ  ಪ್ರಭುವಿನ  ಕಾರ್ಯವೇ  ಸರಿ.

ದೇವರ  ಕರುಣೆಯಿಂದ  ಈ  ಸೇವೆಯನ್ನು  ಕೈಗೊಂಡಿರುವ  ನಾವು  ಧೈರ್ಯಗೆಟ್ಟು  ಹಿಂಜರಿಯುವುದಿಲ್ಲ.  ನಾವು  ಪ್ರಚಾರಮಾಡುವ  ಶುಭಸಂದೇಶ  ಕೆಲವರಿಗೆ  ಇನ್ನೂ  ಮುಸುಕಿನ  ಮರೆಯಾಗಿದ್ದರೆ,  ಹಾಗಿರುವುದು  ವಿನಾಶ  ಮಾರ್ಗದಲ್ಲಿರುವವರಿಗೆ  ಮಾತ್ರ.   ಇವರು  ವಿಶ್ವಾಸಿಸುವುದಿಲ್ಲ.  ಏಕೆಂದರೆ,  ಪೃಥ್ವಿಯ  ಮಿಥ್ಯ  ದೈವವು  ಇವರ  ಮನಸ್ಸನ್ನು  ಮಂಕಾಗಿಸಿದೆ;  ದೇವರ  ಪ್ರತಿರೂಪವಾಗಿರುವ  ಕ್ರಿಸ್ತ  ಯೇಸುವಿನ  ಮಹಿಮೆಯನ್ನು  ಸಾರುವ  ಶುಭಸಂದೇಶದ  ಬೆಳಕನ್ನು  ಕಾಣುವಂತೆ  ಇವರನ್ನು  ಕುರುಡಾಗಿಸಿದೆ.  ನಾವು  ನಮ್ಮನ್ನೇ  ಕುರಿತು  ಪ್ರಚಾರ  ಮಾಡುತ್ತಿಲ್ಲ.  ಆದರೆ  ಕ್ರಿಸ್ತ  ಯೇಸುವೇ  ಪ್ರಭುವೆಂದೂ  ಅವರಿಗೋಸ್ಕರ  ನಾವು  ನಿಮ್ಮ  ದಾಸರೆಂದೂ  ಪ್ರಚುರಪಡಿಸುತ್ತಿದ್ದೇವೆ.  " ಕತ್ತಲೆಯಿಂದ   ಬೆಳಕು  ಹೊಳೆಯಲಿ,  " ಎಂದ  ದೇವರೇ,  ತಮ್ಮ  ಜ್ಯೋತಿಯಿಂದ  ನಮ್ಮ  ಅಂತರಂಗವನ್ನು  ಬೆಳಗಿಸಿದ್ದಾರೆ.  ಇದರ  ಪರಿಣಾಮವಾಗಿ  ಕ್ರಿಸ್ತ  ಯೇಸುವಿನ  ಮುಖಮಂಡಲದಲ್ಲಿ  ಪ್ರಜ್ವಲಿಸುತ್ತಿರುವ  ದೇವರ  ಮಹಿಮೆಯ  ದಿವ್ಯಜ್ಞಾನವು  ನಮ್ಮಲ್ಲಿ  ಉದಯಿಸುವಂತಾಗಿದೆ.

- ಪ್ರಭುವಿನ  ವಾಕ್ಯ

ಕೀರ್ತನೆ    85:8-9,10-11,12-13,V.9

ಶ್ಲೋಕ:  ಪ್ರಭುವಿನ  ಮಹಿಮೆ  ನಾಡಿನಲ್ಲಿರುವುದು  ನಿರುತ|

1.  ನಾ ಕೇಳುತ್ತಿರುವೆನುಪ್ರಭು  ಹೇಳುವುದನು|

ತನ್ನ  ಜನರಿಗಾತ  ನುಡಿವುದು  ಶಾಂತಿಯನು||

ಭಯಭತ್ತಿಯುಳ್ಳವರಿಗಾತನ  ರಕ್ಕಣೆ  ಸನ್ನಿಹಿತ|

ಇದರಿಂದಾತನ  ಮಹಿಮೆ  ನಾಡಿನಲ್ಲಿರುವುದು  ನಿರುತ||


2.  ಪ್ರೀತಿಯೂ  ಸತ್ಯವೂ  ಒಂದಾನೊಂದು   ಕೂಡಿರುವುವು|

ನೀತಿಯೂ  ಶಾಂತಿಯೂ  ಒಂದಾನೊಂದು  ಚುಂಬಿಸುವುವು||

ಸತ್ಯತೆಯು  ಹುಟ್ಟುವುದು  ಭೂಮಿಯಿಂದ|

ನೀತಿಯು  ದೃಷ್ಟಿಸುವುದು  ಗಗನದಿಂದ ||

 

3.  ಪ್ರಭು ಕೊಟ್ಟೇತೀರುವನು  ಒಳಿತನು|

ನಮ್ಮ  ನಾಡು  ನೀಡುವುದು  ಬೆಳೆಯನು||

ನಡೆವುದು  ಪ್ರಭುವಿನ  ಮುಂದೆ  ನೀತಿ|

ಮಾಡುವುದು  ಆತನ  ಹೆಜ್ಜೆಗೆ  ಹಾದಿ||

ಘೋಷಣೆ             ಮತ್ತಾಯ 11:25

ಪಿತನೇ,  ಪರಲೋಕ  ಭೂಲೋಕಗಳ  ಒಡೆಯನೆ,  ಜ್ಜಾನಿಗಳಿಗೂ  ಮೇಧಾವಿಗಳಿಗೂ  ಈ  ವಿಷಯಗಳನ್ನು  ಮರೆಮಾಡಿ,  ಮಕ್ಕಳಂತವರಿಗೆ  ನೀವು  ಶ್ರುತಪಡಿಸಿದ್ದೀರಿ ;  ಇದಕ್ಕಾಗಿ  ನಿಮ್ಮನ್ನು  ವಂದಿಸುತ್ತೇನೆ,

ಅಲ್ಲೆಲೂಯ!

ಶುಭಸಂದೇಶ  : ಮತ್ತಾಯನು  ಬರೆದ  ಪವಿತ್ರ  ಶುಭಸಂದೇಶದಿಂದ  ವಾಚನ 5:20-26



ಆ  ಕಾಲದಲ್ಲಿ  ಯೇಸು  ತಮ್ಮ  ಶಿಷ್ಯರಿಗೆ  ಹೇಳಿದ್ದೇನೆಂದರೆ : " ಧರ್ಮಶಾಸ್ತ್ರಿಗಳ  ಹಾಗೂ  ಫರಿಸಾಯರ  ಧರ್ಮನಿಷ್ಠೆಗಿಂತ  ನಿಮ್ಮ  ಧರ್ಮನಿಷ್ಠೆ  ಉತ್ತಮವಾಗದ  ಹೊರತು  ನೀವು  ಸ್ವರ್ಗಸಾಮ್ರಾಜ್ಯವನ್ನು. ಪ್ರವೇಶಿಸಲಾರಿರಿ  ಎಂಬುದು  ನಿಶ್ಚಯ.  ' ನರಹತ್ಯೆ  ಮಾಡುವವನು  ನ್ಯಾಯತೀರ್ಪಿಗೆ  ಗುರಿಯಾಗುವನು'  ಎಂದು  ಪೂರ್ವಿಕರಿಗೆ  ಹೇಳಿದ್ದನ್ನು  ನೀವು  ಕೇಳಿದ್ದೀರಿ.  ಆದರೆ  ನಾನೀಗ  ನಿಮಗೆ  ಹೇಳುತ್ತೇನೆ,  ಕೇಳಿ:

ತನ್ನ  ಸೋದರನ  ಮೇಲೆ  ನಿಷ್ಠಾರಣವಾಗಿ  ಕೋಪಗೊಳ್ಳುವ  ಪ್ರತಿಯೊಬ್ಬನೂ  ನ್ಯಾಯತೀರ್ಪಿಗೆ  ಈಡಾಗುವನು ;  ತನ್ನ  ಸೋದರನನ್ನು  ತುಚ್ಛೀಕರಿಸುವವನು   ನ್ಯಾಯಸಭೆಯ  ವಿಚಾರಣೆಗೆ  ಒಳಗಾಗುವನು ;  'ಮೂರ್ಖ'  ಎಂದು  ಮೂದಲಿಸುವವನು  ನರಕಾಗ್ನಿಗೆ  ಗುರಿಯಾಗುವನು.  ಆದಕಾರಣ,  ಬಲಿಪೀಠದ  ಮುಂದೆ  ದೇವರಿಗೆ  ಕಾಣಿಕೆಯನ್ನು  ಅರ್ಪಿಸಲಿರುವಾಗ,  ನಿನ್ನ  ಸೋದರನಿಗೆ  ನಿನ್ನ  ಮೇಲೆ  ಏನೋ  ಮನಸ್ತಾಪವಿದೆ  ಎಂಬುದು  ನಿನ್ನ  ನೆನಪಿಗೆ  ಬಂದರೆ,  ನಿನ್ನ  ಕಾಣಿಕೆಯನ್ನು  ಆ  ಬಲಿಪೀಠದ  ಮುಂದೆಯೇ  ಇಟ್ಟುಬಿಡು.  ಮೊದಲು  ಹೋಗಿ  ನಿನ್ನ  ಸೋದರನೊಡನೆ  ಸಮಾಧಾನಮಾಡಿಕೊ  ಅನಂತರ  ಬಂದು  ನಿನ್ನ  ಕಾಣಿಕೆಯನ್ನು  ಒಪ್ಪಿಸು.  ನಿನ್ನ  ಎದುರಾಳಿ  ನಿನ್ನನ್ನು  ನ್ಯಾಯಸ್ಥಾನಕ್ಕೆ  ಎಳೆಯುವಾಗ  ಮಾರ್ಗಮಧ್ಯದಲ್ಲೇ  ಅವನೊಡನೆ  ಬೇಗ  ಸಂಧಾನಮಾಡಿಕೊ.  ಇಲ್ಲದಿದ್ದರೆ,  ಅವನು  ನಿನ್ನನ್ನು  ನ್ಯಾಯಧಿಪತಿಗೆ  ಒಪ್ಪಿಸಬಹುದು.  ನ್ಯಾಯಾಧಿಪತಿ  ನಿನ್ನನ್ನು  ಪೋಲೀಸರ  ವಶಕ್ಕೆ  ಬಿಡಬಹುದು.  ಅನಂತರ  ನಿನಗೆ  ಸೆರೆವಾಸ  ಪ್ರಾಪ್ತವಾದೀತು !  ಅಲ್ಲಿಂದ  ನೀನು  ಹೊರಗೆ  ಬರಬೇಕಾದರೆ  ಬಿಡಿಕಾಸನ್ನೂ  ಬಿಡದೆ  ಎಲ್ಲವನ್ನೂ  ತೆರಬೇಕಾಗುವುದು.   ಇದನ್ನು ನೆನಪಿನಲ್ಲಿಡು."

ಪ್ರಭುಕ್ರಿಸ್ತರ  ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...